ವಿಜಯನಗರ | ಎಪ್ರಿಲ್ ತಿಂಗಳ ಕೂಲಿ ಇನ್ನೂ ಪಾವತಿಯಾಗಿಲ್ಲ; ನರೇಗಾ ಕಾರ್ಮಿಕರಿಂದ ಆರೋಪ
ಹೊಸಪೇಟೆ /ವಿಜಯನಗರ : ಜಿಲ್ಲೆಯ ಹೊಸಪೇಟೆ ತಾಲೂಕು ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಪ್ರಿಲ್ ತಿಂಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿದ ಸುಮಾರು 300 ಕಾರ್ಮಿಕರಿಗೆ ಇದುವರೆಗೂ ಕೂಲಿ ಪಾವತಿಯಾಗಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಇದರ ನಡುವೆ, ಇಂದು ಬೆಳಿಗ್ಗೆ ಸುಮಾರು 450 ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದು, ಅವರ ಎಂಎಂಎಸ್ ಫೋಟೋ ತೆಗೆಯಲು ಒಬ್ಬರೇ ಸಿಬ್ಬಂದಿ ಆಗಮಿಸಿದ್ದಾರೆ. ಇದರಿಂದಾಗಿ ನೂರಾರು ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ.
ಕಾರ್ಮಿಕರು ಬೆಳಿಗ್ಗೆ 7 ಗಂಟೆಗೇ ಕೆಲಸದ ಸ್ಥಳಕ್ಕೆ ತಲುಪಲು ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಬಂದಿದ್ದಾರೆ. ಆದರೆ, ಇಷ್ಟೊಂದು ಸಂಖ್ಯೆಯ ಕಾರ್ಮಿಕರ ಫೋಟೋ ತೆಗೆಯಲು ಒಬ್ಬರೇ ಸಿಬ್ಬಂದಿ ಬಂದಿರುವುದರಿಂದ ಕೆಲಸದ ಪ್ರಕ್ರಿಯೆಯಲ್ಲಿ ವಿಳಂಬವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲಸದ ಸ್ಥಳದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದರೂ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಇಲ್ಲ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೂರಾರು ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದರೂ ಅವರ ಸಮಸ್ಯೆಗಳನ್ನು ಆಲಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ಕಾರ್ಮಿಕರ ಆರೋಪವಾಗಿದೆ.
ಒಂದೆಡೆ ಎಪ್ರಿಲ್ ತಿಂಗಳಲ್ಲಿ ಮಾಡಿದ ಕೆಲಸದ ಕೂಲಿ ಇನ್ನೂ ಪಾವತಿಯಾಗಿಲ್ಲ. ಮತ್ತೊಂದೆಡೆ, ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟೊಂದು ಸಂಖ್ಯೆಯ ಕಾರ್ಮಿಕರ ಎಂಎಂಎಸ್ ಫೋಟೋ ತೆಗೆಯಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸದಿರುವುದರಿಂದಲೂ ಸಮಸ್ಯೆ ಎದುರಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಾಕಿ ಇರುವ ಕೂಲಿಯನ್ನು ಪಾವತಿಸಬೇಕು, ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿಯನ್ನು ನಿಯೋಜಿಸಬೇಕು ಹಾಗೂ ಕೆಲಸದ ಸ್ಥಳದಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಈಡಿಗ ಸಮುದಾಯದ ಯರಿಸ್ವಾಮಿ ನಾಯಕ, ಹರಿಜನ ಸಮುದಾಯದ ದೊಡ್ಡಯ್ಯ ಮತ್ತು ಮಲ್ಲ, ಕುರುಬ ಸಮುದಾಯದ ದೊಡ್ಡಯ್ಯ, ಅಗಸ ಸಮುದಾಯದ ಚಿದಾನಂದ, ಕಪಗಲ್ ಕೊಮಾರಪ್ಪ ಸೇರಿದಂತೆ ವಿವಿಧ ಮೇಟಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.