ಕೊಟ್ಟೂರು (ವಿಜಯನಗರ): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಟ್ಟೂರು ತಾಲೂಕು ಶಾಖೆಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಅನುಪಮ ಸೇವೆ ಸಲ್ಲಿಸಿದ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ರಾಜ್ಯ ಸಂಘದಿಂದ ನೀಡಲಾಗುವ ಸೇವಾ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಅರ್ಜಿ ಆಹ್ವಾನಿಸಿರುವ ಕುರಿತು ತಾಲೂಕು ಅಧ್ಯಕ್ಷ ಯೋಗೀಶ್ವರ ದಿನ್ನೆ ಮಾಹಿತಿ ನೀಡಿದರು.

ನೌಕರರು ತೋರಿದ ಪ್ರಾಮಾಣಿಕ ಸೇವೆ ಹಾಗೂ ಕರ್ತವ್ಯನಿಷ್ಠೆ, ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ತೋರುವ ಸ್ಪಂದನೆ, ಇದುವರೆಗೆ ಸಲ್ಲಿಸಿರುವ ನಿಸ್ವಾರ್ಥ ಸೇವೆ ಹಾಗೂ ಸಾಧನೆ, ಸಮಯಪಾಲನೆ ಸೇರಿದಂತೆ ವಿವಿಧ ಅಂಶಗಳನ್ನು ಸೇವಾ ಪ್ರಶಸ್ತಿಗೆ ಮಾನದಂಡಗಳಾಗಿ ಪರಿಗಣಿಸಲಾಗುತ್ತದೆ. ಅಲ್ಲದೇ ದುರ್ಬಲ ವರ್ಗಗಳ ಬಗ್ಗೆ ತೋರಿದ ಮಾನವೀಯ ಕಾಳಜಿ, ಸಹೋದ್ಯೋಗಿಗಳೊಂದಿಗೆ ಉತ್ತಮ ಸಮನ್ವಯ, ತಂಡದ ಮನೋಭಾವ ಹಾಗೂ ಇಲಾಖೆ ಮತ್ತು ಸರ್ಕಾರದ ಸೇವಾ ಗೌರವ ಹೆಚ್ಚಿಸುವಲ್ಲಿ ನೀಡಿರುವ ಕೊಡುಗೆಯನ್ನೂ ಪರಿಗಣಿಸಲಾಗುತ್ತದೆ ಎಂದು ರಾಜ್ಯ ಸಂಘದ ಪ್ರಕಟಣೆ ತಿಳಿಸಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪ್ರತಿ ವರ್ಷ 200 ರೂ. ಸದಸ್ಯತ್ವ ಶುಲ್ಕ ಪಾವತಿಸುತ್ತಿರುವ ರಾಜ್ಯ ಸರ್ಕಾರದ ಗ್ರೂಪ್ ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ವೃಂದದ ಖಾಯಂ ನೌಕರರು ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳಲು ಅರ್ಹರಾಗಿರುತ್ತಾರೆ. ಪ್ರಶಸ್ತಿಗಾಗಿ ನೌಕರರು ಸ್ವತಃ ಅರ್ಜಿ ಸಲ್ಲಿಸುವಂತಿಲ್ಲ. ಇಲಾಖಾ ಮುಖ್ಯಸ್ಥರು, ಮೇಲಧಿಕಾರಿಗಳು, ಸಹೋದ್ಯೋಗಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮತ್ತು ತಾಲೂಕು ಶಾಖೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅರ್ಹ ನೌಕರರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದಾಗಿದೆ.

ನೇರವಾಗಿ ಸಲ್ಲಿಸುವ ಯಾವುದೇ ಅರ್ಜಿ ಅಥವಾ ಪ್ರಸ್ತಾವನೆಯನ್ನು ಸ್ವೀಕರಿಸಲಾಗುವುದಿಲ್ಲ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸೂಚಿಸಿರುವ POWERMEDIA INFO ಲಿಂಕ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನಾಮನಿರ್ದೇಶನದಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆ ಹಾಗೂ ಸಾಧನೆಗಳ ವಿವರಗಳಿಗೆ ಆದ್ಯತೆ ನೀಡಬೇಕು. ಅಗತ್ಯವಿರುವ ಪೂರಕ ಮಾಹಿತಿ, ದಾಖಲೆಗಳು ಹಾಗೂ ಇತ್ತೀಚಿನ ಭಾವಚಿತ್ರವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅಪೂರ್ಣ ನಾಮನಿರ್ದೇಶನಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ಅಕ್ಟೋಬರ್ 15, 2026 ಕೊನೆಯ ದಿನವಾಗಿದೆ.

ಕೊಟ್ಟೂರು ತಾಲೂಕಿನಲ್ಲಿ ಪ್ರಶಸ್ತಿಗೆ ಅರ್ಹರಾಗಿರುವ ಅಧಿಕಾರಿ ಅಥವಾ ಸಿಬ್ಬಂದಿಯ ಮಾಹಿತಿಯನ್ನು ಸಂಘದ ಎಲ್ಲ ಪದಾಧಿಕಾರಿಗಳು ನಾಮನಿರ್ದೇಶನ ಮಾಡುವಂತೆ ಅಧ್ಯಕ್ಷ ಯೋಗೀಶ್ವರ ದಿನ್ನೆ ಸಭೆಯಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಖಜಾಂಚಿ ವೀರೇಶ ತುಪ್ಪದ, ರಾಜ್ಯ ಪರಿಷತ್ ಸದಸ್ಯ ಎಸ್.ಎಂ. ಗುರುಬಸವರಾಜ, ಕಾರ್ಯದರ್ಶಿ ರಮೇಶ, ಸಾಂಸ್ಕೃತಿಕ ಕಾರ್ಯದರ್ಶಿ ಕೆ. ಹೇಮಚಂದ್ರ, ಉಪಾಧ್ಯಕ್ಷ ಬಿ.ಟಿ. ಮಂಜುನಾಥ, ಸಂಘಟನಾ ಕಾರ್ಯದರ್ಶಿ ಎಸ್. ಚನ್ನೇಶ, ಆಂತರಿಕ ಲೆಕ್ಕಪರಿಶೋಧಕ ರವಿಕುಮಾರ, ನಾಮನಿರ್ದೇಶಿತ ಸದಸ್ಯರಾದ ಎ. ಮಲ್ಲಿಕಾರ್ಜುನ ಹಾಗೂ ಗೀತಾ (ಆರೋಗ್ಯ ಇಲಾಖೆ) ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor