×
Ad

ವಿಜಯನಗರ | 77ನೇ ಗಣರಾಜ್ಯೋತ್ಸವ : ಜೈ ಭೀಮ್ ವೃತ್ತದಲ್ಲಿ ಸಂವಿಧಾನ ಪೀಠಿಕೆ ವಾಚನ

Update: 2026-01-28 00:39 IST

ವಿಜಯನಗರ (ಹೊಸಪೇಟೆ): ನಗರದ ಜೈ ಭೀಮ್ ವೃತ್ತದಲ್ಲಿ 77ನೇ ಗಣರಾಜ್ಯೋತ್ಸವದ ಅಂಗವಾಗಿ ವಿಜಯನಗರ ಜಿಲ್ಲೆಯ ವಿವಿಧ ಪ್ರಗತಿಪರ ಹಾಗೂ ಸಂವಿಧಾನ ಪರ ಸಂಘಟನೆಗಳ ವತಿಯಿಂದ ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಸಂಚಾಲಕರಾದ ಸೋಮಶೇಖರ್ ಬಣ್ಣದಮನೆ, “ದೇಶದ ಕೆಲ ರಾಜಕಾರಣಿಗಳು ಅಸಮಾನತೆಯಿಂದ ಕೂಡಿದ ಮನುವಾದವನ್ನು ಮತ್ತೆ ಆಡಳಿತಕ್ಕೆ ತರುವ ಮಾತುಗಳನ್ನಾಡುತ್ತಿರುವ ಈ ಸಂದರ್ಭದಲ್ಲಿ, ಈ ದೇಶದ ಶೇಕಡ 95ರಷ್ಟು ಮೂಲ ನಿವಾಸಿಗಳು ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಉಳಿಸಿಕೊಳ್ಳುವ ಸಂಕಲ್ಪ ಹೊಂದಿದ್ದಾರೆ. ಸಂವಿಧಾನ ಎಷ್ಟು ದಿನ ಗಟ್ಟಿಯಾಗಿರುತ್ತದೆಯೋ ಅಷ್ಟು ದಿನ ಅದು ನಮ್ಮನ್ನು ರಕ್ಷಿಸುತ್ತದೆ” ಎಂದು ಹೇಳಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿ ಜಿ-ರಾಮ್-ಜಿ ಎಂಬ ಹೊಸ ನಾಮಕರಣ ಮಾಡುವ ಮೂಲಕ ಯೋಜನೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಹೆಸರು ಬದಲಿಸುವುದರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ 90ಕ್ಕೂ ಹೆಚ್ಚು ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ವಾಸಿಸುತ್ತಿದ್ದು, ಈ ವರ್ಗಗಳನ್ನು ಮತ್ತಷ್ಟು ಬಡವರನ್ನಾಗಿಸುವ ಉದ್ದೇಶದಿಂದ ಇಂತಹ ನೀತಿಗಳನ್ನು ತರಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರಗಳು ಆರ್ಥಿಕ ಸಂಕಷ್ಟದಲ್ಲಿರುವಾಗ ಶೇಕಡ 30ರಷ್ಟು ಹಣವನ್ನು ಕೇಂದ್ರ ಸರ್ಕಾರ ಎಲ್ಲಿಂದ ತರುತ್ತದೆ ಎಂದು ಪ್ರಶ್ನಿಸಿದರು. ತಳ ಸಮುದಾಯಗಳು ಶಿಕ್ಷಣ ಹಾಗೂ ಆರ್ಥಿಕವಾಗಿ ಮುಂದೆ ಬರುತ್ತಿರುವುದನ್ನು ಮನುವಾದಿ ಶಕ್ತಿಗಳು ಸಹಿಸಿಕೊಳ್ಳಲಾಗದೆ, ಗ್ರಾಮೀಣ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯಬೇಕು ಎಂಬ ದುರುದ್ದೇಶದಿಂದ ಈ ಬಿಲ್‌ಗಳನ್ನು ತಂದಿರುವುದು ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಎಸ್‌ಐಆರ್ ಬಿಲ್ ಮೂಲಕ ದಲಿತ, ಅಲ್ಪಸಂಖ್ಯಾತ ಹಾಗೂ ಇತರ ತಳ ಸಮುದಾಯಗಳ ಮತದಾನದ ಹಕ್ಕು ಕಸಿದುಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು. ಈ ದುರ್ನಡತೆಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯನಗರ ಜಿಲ್ಲಾ ಬಾಬಾ ಸಾಹೇಬ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಟಿ. ವಾಸುದೇವ್ ಮಾತನಾಡಿ, ಜನರಲ್ಲಿ ಸಂವಿಧಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಅಗತ್ಯ. ತಳ ಸಮುದಾಯಗಳನ್ನು ಮೌಢ್ಯ ಹಾಗೂ ಕಂದಾಚಾರಗಳಿಂದ ಹೊರತರುವ ಕೆಲಸವನ್ನು ನಮ್ಮ ಸಂಘಟನೆ ನಿರಂತರವಾಗಿ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯ ವತಿಯಿಂದ ಎಸ್‌ಐಆರ್ ಕುರಿತು ಜಾಗೃತಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಸಮುತಾಳ್, ಡಾ.ಸಂದೀಪ್, ಸಣ್ಣ ಮಾರಪ್ಪ, ಶಿವಕುಮಾರ್, ಕುಮಾರಿ ದಿವ್ಯ, ಜಯಣ್ಣ ಪಟ್ಟಿ, ಜೆ.ಸಿ. ಈರಣ್ಣ, ರಮೇಶ್, ರಾಮಚಂದ್ರ ಬಾಬು, ಸಜಾದ ಖಾನ್, ಇಂತಿಯಾಜ್, ಗಿರೀಶ್ ಕುಮಾರ್, ಮಹಾಂತೇಶ್, ಮಾರುತಿ ಕಾಂಬ್ಳೆ, ವಿಶಾಲ್ ಮ್ಯಾಸರ್, ಓಬಳೇಶ್, ಹನುಮೇಶ್, ಚಂದ್ರಮೋಹನ್, ಹನುಮಂತ, ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News