ಕೂಡ್ಲಿಗಿಯನ್ನು ಬರಪೀಡಿತ ತಾಲೂಕು ಘೋಷಿಸಲು ಕಿಸಾನ್ ಸಭಾ ಪ್ರತಿಭಟನೆ
ವಿಜಯನಗರ/ಕೂಡ್ಲಿಗಿ: ತಾಲೂಕಿನನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ಸಾಲಮನ್ನಾ, ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಸಮಿತಿ ವತಿಯಿಂದ ಕೂಡ್ಲಿಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಮಹಾತ್ಮ ಗಾಂಧೀಜಿ ಹುತಾತ್ಮರ ಸ್ಮಾರಕದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮುಖ್ಯರಸ್ತೆಯ ಮೂಲಕ ತಾಲೂಕು ಕಚೇರಿಗೆ ತಲುಪಿತು. ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಸಿಪಿಐ ಮುಖಂಡ ಹೆಚ್. ವೀರಣ್ಣ, ತಾಲೂಕಿನ ರೈತರು ತೀವ್ರ ಸಂಕಷ್ಟದಲ್ಲಿದ್ದು ಸರ್ಕಾರ ಕೂಡಲೇ ಕೂಡ್ಲಿಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಲ್ಲಾ ಬ್ಯಾಂಕುಗಳ ರೈತರ ಸಾಲವನ್ನು ಮನ್ನಾ ಮಾಡಿ ಬಡ್ಡಿರಹಿತ ಸಾಲ ನೀಡಬೇಕು. 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತ್ವರಿತಗೊಳಿಸಬೇಕು. ಜಲಜೀವನ್ ಮಿಷನ್ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ, ಕಳಪೆ ಕಾಮಗಾರಿ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡು ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗೋಶಾಲೆ ಹಾಗೂ ಮೇವು ಸಂಗ್ರಹ ಕೇಂದ್ರ ಆರಂಭಿಸಬೇಕು. ಬಾಕಿ ಇರುವ ಪಿಂಚಣಿ ಮತ್ತು ಪಡಿತರವನ್ನು ತಕ್ಷಣ ವಿತರಿಸಬೇಕು. ವಸತಿ ನಿವೇಶನ, ಜಂಗಮ ಸೋವೇನಹಳ್ಳಿಯ 48 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಹಾಗೂ ಅಕ್ರಮ-ಸಕ್ರಮ ಅರ್ಜಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಕೆ. ಉಮಾಪತಿ, ರಮೇಶ್ ಗೌಡ, ರಘು, ಕರಿಯಪ್ಪ ಸೇರಿದಂತೆ ಕಿಸಾನ್ ಸಭಾ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.