Vijayanagara | 30,623 ಮತದಾರರಿಗೆ ನೋಟಿಸ್; ಸೆ.23ರವರೆಗೆ ಆಕ್ಷೇಪಣೆಗೆ ಅವಕಾಶ
ವಿಜಯನಗರ (ಹೊಸಪೇಟೆ), ಆ.24: ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ–2026ರ ಪ್ರಕ್ರಿಯೆ ಮುಂದುವರಿದಿದ್ದು, ಮತದಾರರ ಪಟ್ಟಿಯಲ್ಲಿನ ಅಸಂಗತತೆ ಹಾಗೂ ಮ್ಯಾಪಿಂಗ್ ಆಗದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 30,623 ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.24ರಂದು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 9,94,157 ಮತದಾರರಿದ್ದು, ಈ ಪೈಕಿ 9,722 ಮತದಾರರನ್ನು ಅಸಂಗತತೆ ವಿಭಾಗದಲ್ಲಿ ಹಾಗೂ 10,901 ಮತದಾರರನ್ನು ಮ್ಯಾಪಿಂಗ್ ಆಗದ ವಿಭಾಗದಲ್ಲಿ ಗುರುತಿಸಲಾಗಿದೆ. ಒಟ್ಟಾರೆ 30,623 ಪ್ರಕರಣಗಳಿಗೆ ನೋಟಿಸ್ ಜಾರಿಗೊಳಿಸಲಾಗುತ್ತಿದೆ ಎಂದರು.
ಕ್ಷೇತ್ರವಾರು ಹಡಗಲಿ ಕ್ಷೇತ್ರದಲ್ಲಿ 8,474, ಹಗರಿಬೊಮ್ಮನಹಳ್ಳಿ 10,205, ವಿಜಯನಗರ 2,436, ಕೂಡ್ಲಿಗಿ 1,821 ಹಾಗೂ ಹರಪನಹಳ್ಳಿ ಕ್ಷೇತ್ರದಲ್ಲಿ 7,687 ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ಈ ಪ್ರಕರಣಗಳನ್ನು ನೇರವಾಗಿ ಮತದಾರರ ಹೆಸರು ಅಳಿಸಲಾಗಿದೆ ಎಂದು ಪರಿಗಣಿಸಬಾರದು. ನೋಟಿಸ್ ನೀಡಿ ಅಗತ್ಯ ದಾಖಲೆಗಳೊಂದಿಗೆ ಪರಿಶೀಲನೆ ನಡೆಸಬೇಕಾದ ಪ್ರಕರಣಗಳಾಗಿವೆ ಎಂದು ಸ್ಪಷ್ಟಪಡಿಸಿದರು.
ಕರಡು ಮತದಾರರ ಪಟ್ಟಿಯನ್ನು ಸೆ.23ರವರೆಗೆ ಸಾರ್ವಜನಿಕರು ಪರಿಶೀಲಿಸಬಹುದಾಗಿದೆ. ಈ ಅವಧಿಯಲ್ಲಿ ಮತದಾರರು ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ಪರಿಶೀಲಿಸಿ, ತಿದ್ದುಪಡಿ ಅಥವಾ ಆಕ್ಷೇಪಣೆಗಳಿದ್ದರೆ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ನೋಟಿಸ್ ಪಡೆದವರು ಅಗತ್ಯ ದಾಖಲೆಗಳೊಂದಿಗೆ ಎಇಆರ್‌ಒ ಮುಂದೆ ಹಾಜರಾಗಬೇಕು. ಪರಿಶೀಲನೆ ಬಳಿಕ ಎಇಆರ್‌ಒ ಅವರು ಸ್ಪೀಕಿಂಗ್ ಆರ್ಡರ್ ಮೂಲಕ ಹೆಸರು ಪಟ್ಟಿಯಲ್ಲಿ ಉಳಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಬಯಸುವವರು ಫಾರಂ–6 ಸಲ್ಲಿಸಬಹುದು. ಆಧಾರ್ ಕಾರ್ಡ್ ಅನ್ನು ಕೇವಲ ಗುರುತಿನ ದಾಖಲೆಯಾಗಿ ಪರಿಗಣಿಸಲಾಗುತ್ತದೆ ಎಂದರು.
ಜಿಲ್ಲೆಯ ಒಟ್ಟು 9,94,157 ಮತದಾರರಲ್ಲಿ 4,99,999 ಪುರುಷರು, 4,94,952 ಮಹಿಳೆಯರು, 106 ತೃತೀಯ ಲಿಂಗಿಗಳು ಹಾಗೂ 353 ಸೇವಾ ಮತದಾರರು ಇದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮತದಾರರು ಕರಡು ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ಲೋಪ ಅಥವಾ ತಿದ್ದುಪಡಿ ಅಗತ್ಯವಿದ್ದಲ್ಲಿ ಸೆ.23ರೊಳಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು. ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿಗಾಗಿ ವಿಜಯನಗರ ಜಿಲ್ಲಾಡಳಿತದ ಅಧಿಕೃತ ಜಾಲತಾಣವನ್ನು ಸಂಪರ್ಕಿಸಬಹುದು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಉಪಸ್ಥಿತರಿದ್ದರು.