Vijayanagara | ತುಂಗಭದ್ರಾ ಹಿನ್ನೀರಿನಲ್ಲಿ ಮೂವರು ಯುವಕರು ನೀರುಪಾಲು: ಓರ್ವನ ಮೃತದೇಹ ಪತ್ತೆ
ವಿಜಯನಗರ : ಮೀನು ಹಿಡಿಯಲು ತುಂಗಭದ್ರಾ ನದಿಯ ಹಿನ್ನೀರಿಗೆ ತೆರಳಿದ್ದ ಮೂವರು ಯುವಕರು ನೀರುಪಾಲಾಗಿ ನಾಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದಲ್ಲಿ ನಡೆದಿದೆ. ನೀರುಪಾಲಾದವರ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ನೀರುಪಾಲಾದವರ ಪೈಕಿ ಯಮನಪ್ಪ (20) ಎಂಬವರು ಮೃತದೇಹ ಪತ್ತೆಯಾಗಿದೆ. ಇನ್ನಿಬ್ಬರಾದ ರಾಜ (22) ಹಾಗೂ ಅಜ್ಜಪ್ಪ(26) ಎಂಬವರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ.
ಇವರು ಮೂವರು ಮಂಗಳವಾರ ಮಧ್ಯಾಹ್ನ ಮೀನು ಹಿಡಿಯಲೆಂದು ತುಂಗಭದ್ರಾ ನದಿಯ ಹಿನ್ನೀರಿಗೆ ತೆರಳಿದ್ದರು. ಸಂಜೆ ಕಳೆದರೂ ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಹಗರಿಬೊಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಆರಂಭಿಸಿದರು. ಘಟನೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ SDRF ತಂಡವನ್ನೂ ಸ್ಥಳಕ್ಕೆ ಕರೆಸಲಾಗಿದೆ. ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಶೋಧ ಮುಂದುವರಿಸಿದರು.
ಈ ವೇಳೆ ಯಮನಪ್ಪರ ಮೃತದೇಹ ಪತ್ತೆಯಾಗಿದೆ. ಪೊಲೀಸರು ಹಾಗೂ ಸ್ಥಳೀಯರು ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಘಟನೆಗೆ ಸಂಬಂಧಿಸಿದಂತೆ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.