×
Ad

ವಿಜಯಪುರದಲ್ಲಿ ಸಿನಿಮೀಯ ಶೈಲಿಯಲ್ಲಿ ದರೋಡೆ; ಪಿಸ್ತೂಲ್ ತೋರಿಸಿ ಚಿನ್ನದಂಗಡಿ ಲೂಟಿ

Update: 2026-01-26 20:02 IST

ವಿಜಯಪುರ: ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಕಂಟ್ರಿ ಪಿಸ್ತೂಲ್ ತೋರಿಸಿ ಸಿನಿಮೀಯ ಶೈಲಿಯಲ್ಲಿ ಚಿನ್ನದ ಅಂಗಡಿ ದರೋಡೆ ಮಾಡಿರುವ ಘಟನೆ ಸೋಮವಾರ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ.

ಸೋಮವಾರ 3 ಗಂಟೆಗೆ ಹಲಸಂಗಿ ಗ್ರಾಮದ ಮಹಾರೋದ್ರ ಕಾಂಚಾಗಾರ ಎಂಬವರಿಗೆ ಸೇರಿದ ಚಿನ್ನದ ಅಂಗಡಿಗೆ ಬಂದ ಇಬ್ಬರು ಮುಸುಕುಧಾರಿಗಳು ಅಂಗಡಿಯಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ದೋಚಿ ಪರಾರಿಯಾಗಿದ್ದಾರೆ. ಸಿನಿಮೀಯ ರೀತಿಯಲ್ಲಿ ಹೆಲ್ಮೆಟ್, ಜಾಕೆಟ್ ಹಾಗೂ ಕೈಗೆ ಗ್ಲೌಸ್ ಧರಿಸಿಕೊಂಡು ಬೈಕ್‌ ನಲ್ಲಿ ಬಂದು ಅಂಗಡಿಗೆ ನುಗ್ಗಿದ ದರೋಡೆಕೋರರು ಪಿಸ್ತೂಲ್ ತೋರಿಸಿ, ಅಂಗಡಿಯಲ್ಲಿದ್ದ ಸುಮಾರು 205 ಗ್ರಾಂ ಬಂಗಾರದ ಆಭರಣ ಮತ್ತು 1ಕೆಜಿ ಬೆಳ್ಳಿಯನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ದರೋಡೆ ಸಂದರ್ಭ ಅಂಗಡಿಯ ಬಳಿ ವೃದ್ಧೆಯೊಬ್ಬರು ಬಂದಿದ್ದಾರೆ. ಈ ವೇಳೆ ಮುಸುಕುಧಾರಿಗಳು ಅವರತ್ತ ಕಂಟ್ರಿ ಪಿಸ್ತೂಲ್ ಗುರಿ ಹಿಡಿದು ಹೆದರಿಸಿ ಕಳಿಸಿದ್ದಾರೆ. ಸ್ಥಳದಲ್ಲಿ ಭೀತಿ ಸೃಷ್ಟಿಸಲು ದರೋಡೆಕೋರರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಆತ್ಮಲಿಂಗ ಹೂಗಾರ ಎಂಬ ಯುವಕನ ಬಲಗಾಲಿಗೆ ಗುಂಡು ತಗುಲಿದ್ದು, ಆತನನ್ನು ಕೂಡಲೇ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಕಟ್ಟಿಮನಿ ಹಾಗೂ ಇನ್ಸ್ಪೆಕ್ಟರ್ ಪರಶುರಾಮ ಮನಗೂಳಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಈ ಕುರಿತು ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಮುಸುಕುದಾರಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತಂಡಗಳನ್ನು ರಚಿಸಲಾಗಿದ್ದು, ಗಡಿ ಭಾಗಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ದರೋಡೆಕೋರರನ್ನು ಹಿಡಿಯಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬೈಕ್‌ ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಹಲಸಂಗಿ ಗ್ರಾಮದ ಮಹಾರೋದ್ರ ಕಾಂಚಾಗಾರ ಎಂಬವರಿಗೆ ಸೇರಿದ ಚಿನ್ನದಂಗಡಿಗೆ ನುಗ್ಗಿ 205 ಗ್ರಾಂ ಬಂಗಾರದ ಆಭರಣ ಮತ್ತು 1ಕೆಜಿ ಬೆಳ್ಳಿಯನ್ನು ದೋಚಿ ಪರಾರಿಯಾಗಿದ್ದಾರೆ. ಇದೇ ವೇಳೆಯಲ್ಲಿ ಪಕ್ಕದ ಮೊಬೈಲ್ ಅಂಗಡಿ ಬಳಿ ಅನಿಲ್ ಬಸಣ್ಣ ಗಲಗಲಿ ಎಂಬವರು ದರೋಡೆ ಮಾಡುತ್ತಿರುವ ಕೃತ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನ್ನು ನೋಡಿ, ಅವರ ಕಡೆಗೆ ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಪಕ್ಕದಲ್ಲೇ ಇದ್ದ 18 ವರ್ಷದ ಯುವಕನ ಕಾಲಿಗೆ ಗುಂಡು ತಗುಲಿದೆ. ಯುವಕನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News