Vijayapura | ಹಿಂದೂ ಸಮಾವೇಶದಲ್ಲಿ ಸಂವಿಧಾನ, ಅಂಬೇಡ್ಕರ್, ರಾಷ್ಟ್ರಧ್ವಜಕ್ಕೆ ಅವಮಾನ: ಡಿವಿಪಿ ಆರೋಪ
ವಿಜಯಪುರ: ವಿಜಯಪುರದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಸಂವಿಧಾನ, ಅಂಬೇಡ್ಕರ್, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದು, ಕೂಡಲೇ ಜಿಲ್ಲಾಡಳಿತವು ಆ ಸಂಘಟಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಒತ್ತಾಯಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಜಲನಗರದ ಬಿಡಿಎ ಮೈದಾನದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಧರ್ಮ ಜಾಗರಣ ಪ್ರಾಂತ ಸದಸ್ಯ ಹಣಮಂತ ಮಳಲಿ ಅವರು ಭಾರತವೆಂದರೆ ಕೇವಲ ಸಂವಿಧಾನ, ಅಂಬೇಡ್ಕರ್, ರಾಷ್ಟ್ರಧ್ವಜ ಅಲ್ಲ ಎಂದು ಹೇಳಿ, ನಮ್ಮ ದೇಶದ ಶ್ರೇಷ್ಠ ಸಂವಿಧಾನಕ್ಕೆ, ಅಂಬೇಡ್ಕರ್, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರ ಮೇಲೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಂವಿಧಾನಕ್ಕೆ, ಅಂಬೇಡ್ಕರ್, ರಾಷ್ಟ್ರಧ್ವಜ ಅಪಮಾನ ಮಾಡುವುದು ಹಿಂದೂ ಸಮಾವೇಶವೇ ಎಂದು ಅವರು ಪ್ರಶ್ನಿಸಿದರು.
ಹಿಂದೂ ಸಮಾವೇಶ ಅಂದರೆ ಹಿಂದೂಗಳ ಹಿನ್ನೆಲೆ, ಅವರ ಉಗಮದ ಬಗ್ಗೆ ಹೇಳಿ. ಅದನ್ನು ಬಿಟ್ಟು, ಸಂವಿಧಾನ, ರಾಷ್ಟ್ರಧ್ವಜ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ, ಹಿಂದೂ ಸಮಾಜ ನಿರ್ಮಾಣ ಮಾಡಲು ಹೊರಟಿದ್ದಾರೆ. ದೇಶದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕು ಸಂವಿಧಾನ ನೀಡಿದೆ. ಜನರಿಗೆ ಒಳ್ಳೆಯ ಸಂದೇಶ ನೀಡುವುದನ್ನು ಬಿಟ್ಟು ಸಮಾಜದಲ್ಲಿ ಒಡಕು ಮಾಡುವ ಕೆಲಸ ಮಾಡಬೇಡಿ ಎಂದರು.
ಇಂದು ಹಿಂದೂ ಸಮಾವೇಶ ಹೆಸರಲ್ಲಿ ಸುಳ್ಳನ್ನೇ ಅಫೀಮ್ ರೀತಿ ಹೇಳಿ, ಸಮಾಜದಲ್ಲಿ ಜಗಳ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಜನರಿಗೆ ನೀವು ಏನು ಮಾಡಲು ಹೊರಟಿದ್ದೀರಿ ಎನ್ನುವುದನ್ನು ನೇರವಾಗಿ ಹೇಳಿ. ಇಷ್ಟವಾದರೆ ನಿಮ್ಮ ಜತೆ ಬರುತ್ತಾರೆ. ಇಲ್ಲದಿದ್ದರೆ ಬಿಡುತ್ತಾರೆ. ಅದನ್ನು ಬಿಟ್ಟು ಸುಳ್ಳು ಹುಟ್ಟು ಹಾಕಿ ಹೇಳಿಬೇಡಿ. ಕೂಡಲೇ ನೀವು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇವರ ಮೇಲೆ ಕಾನೂನ ಕ್ರಮ ಜರುಗಿಸಬೇಕು. ಇನ್ನೂ ನಗರದಲ್ಲಿ ಮೂರು ಕಡೆ ಸಮಾವೇಶ ಮಾಡಲು ಹೊರಟಿದ್ದಾರೆ. ಅಲ್ಲಿ ಇದೇ ತರಹ ಮಾತುಗಳು ಬಂದರೆ ನಾವು ಕಾರ್ಯಕ್ರಮಕ್ಕೆ ಅಡ್ಡಿ ಪಡೆಸುತ್ತೇವೆ. ನೀವು ಕ್ಷೇಮೆ ಕೇಳಿ ಮುಂದಿನ ಕಾರ್ಯಕ್ರಮ ಆಯೋಜನೆ ಮಾಡದಿದ್ದರೆ ನಾವು ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ವಿರೇಶ ತೆಗ್ಗಿನಮನಿ ಸೇರಿದಂತೆ ಮುಂತಾದವರು ಇದ್ದರು.