ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರಕಾರ ರೈತರ ಸಾಲವನ್ನೂ ಮನ್ನಾ ಮಾಡಲಿ : ಎಂ.ಬಿ.ಪಾಟೀಲ್ ಆಗ್ರಹ
ವಿಜಯಪುರ : ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಈ ಹಿಂದೆ ಯುಪಿಎ ಅವಧಿಯಲ್ಲಿ ಡಾ.ಮನಮೋಹನ್ ಸಿಂಗ್ ಅವರ ಸರಕಾರ ಮಾಡಿದ್ದ ಮಾದರಿಯಲ್ಲೇ ಪ್ರಸ್ತುತ ಕೇಂದ್ರ ಸರಕಾರವು ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಒತ್ತಾಯಿಸಿದರು
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಅಂಬಾನಿ, ಅದಾನಿಯಂತಹ ದೊಡ್ಡ ಉದ್ಯಮಿಗಳ ಸಾಲವನ್ನು ಮಾತ್ರ ಮನ್ನಾ ಮಾಡಿದ್ದಾರೆ. ಆದರೆ, ಬಿಜೆಪಿಯ ಕೆಲವು ನಾಯಕರು ಅದನ್ನು 'ಸಾಲಮನ್ನಾ ಅಲ್ಲ, ರೈಟ್ ಆಫ್ ಎಂದು ಸಮರ್ಥಿಸಿಕೊಳ್ಳುತ್ತಾರೆ. ಕೇಂದ್ರ ಸರಕಾರ ಇದೇ ರೈಟ್ ಆಫ್ ಅನ್ನು ಅನ್ನದಾತರ ಸಾಲಕ್ಕೂ ಅನ್ವಯಿಸಿ, ರೈತರ ಸಾಲ ಮನ್ನಾ ಮಾಡಲಿ ಎಂದು ಸವಾಲು ಹಾಕಿದರು.
ಕೇಂದ್ರ ಸರಕಾರ ಬರಗಾಲದ ವಿಷಯದಲ್ಲಿ ರಾಜ್ಯದೊಂದಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಮಳೆ ಆಧಾರಿತ ಕೃಷಿ ಶೇ.100 ರಷ್ಟು ಹಾನಿಯಾಗಿದೆ. ಹತ್ತಿ, ಕಬ್ಬು, ತೊಗರಿ, ಸೂರ್ಯಕಾಂತಿ ಸೇರಿದಂತೆ ಬಹುತೇಕ ಬೆಳೆಗಳು ನಾಶವಾಗಿವೆ. ಎಲ್ಲಿ ಭೀಕರ ಪರಿಸ್ಥಿತಿ ಉಂಟಾಗಿದೆಯೋ ಅಲ್ಲಿ ಕೇಂದ್ರ ಸರಕಾರ ತಕ್ಷಣವೇ ನೆರವಿಗೆ ಧಾವಿಸಬೇಕು ಹಾಗೂ ಬರ ಪರಿಹಾರದ ಮಾರ್ಗಸೂಚಿಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರಕ್ಕೆ ಕೇವಲ ವೋಟ್ ಚೋರಿ ಹಾಗೂ ವಾಷಿಂಗ್ ಮಷೀನ್ ತಂತ್ರ ಮಾತ್ರ ಗೊತ್ತಿದೆ. ಉಳುವವನೇ ಹೊಲದೊಡೆಯ ಎಂಬಂತಹ ಯಾವುದೇ ಜನಪರ ಯೋಜನೆಗಳನ್ನು ಅವರು ರೂಪಿಸಿಲ್ಲ. ಆದರೆ, ಈಗ ಬಿಜೆಪಿಯ ರಿವರ್ಸ್ ಸೈಕಲ್ ಆರಂಭವಾಗಿದೆ. ಜೆನ್-ಜಿ ಹೋರಾಟಗಳ ಮೂಲಕ ಅವರ ಕರಾಳ ಮುಖ ಜಗತ್ತಿಗೆ ತಿಳಿಯುತ್ತಿದೆ. ಯಾರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೋ, ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡು ಹೊಗಳುವ ಸಂಸ್ಕೃತಿ ಬಿಜೆಪಿಯದ್ದಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಟೀಕಿಸಿದರು.