ವಿಜಯಪುರ : ಕೆಲವು ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 1,607 ಮತದಾರರ ಬಗ್ಗೆ ಸಾಮೂಹಿಕವಾಗಿ ಆಕ್ಷೇಪಣೆ ಸಲ್ಲಿಸಿ, ನಂತರ ಅದನ್ನು ಹಿಂದಕ್ಕೆ ಪಡೆಯಲಾಗಿದೆ. ಆಕ್ಷೇಪಣೆ ಹಿಂಪಡೆಯುವಾಗ ನೀಡಿದ ಪತ್ರದಲ್ಲಿ ಅವರು ತಾವು ಭಾರತೀಯ ಜನತಾ ಪಕ್ಷದವರು ಎಂಬುದನ್ನು ಸ್ವತಃ ಉಲ್ಲೇಖಿಸಿದ್ದಾರೆ. ನಾನು ಅವರ ಮೇಲೆ ಸುಮ್ಮನೆ ಆರೋಪ ಮಾಡುತ್ತಿಲ್ಲ, ಅವರೇ ಖುದ್ದಾಗಿ ಸಹಿ ಮಾಡಿ ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಕಳೆದ ಸೆ‌. 22ರಂದು 5 ಸಾವಿರಕ್ಕೂ ಹೆಚ್ಚು ಹಾಗೂ 23ರಂದು 8 ಸಾವಿರಕ್ಕೂ ಹೆಚ್ಚು ಸೇರಿ ಒಟ್ಟು 14 ಸಾವಿರ ಆಕ್ಷೇಪಣೆಗಳನ್ನು ಸಲ್ಲಿಸಿ, ನಂತರ ಹಿಂಪಡೆಯಲಾಗಿದೆ. ನನ್ನ ಮಾಹಿತಿ ಪ್ರಕಾರ ಆಕ್ಷೇಪಣೆ ಸಲ್ಲಿಸಿರುವ ರಾಜಕುಮಾರ ಬಿರಾದಾರ ಹಾಗೂ ಸಚಿನ್ ಅವರು ವಿಜಯಪುರ ನಗರ ಶಾಸಕರ ಕಾರ್ಯಾಲಯದ ಸಿಬ್ಬಂದಿಯಾಗಿದ್ದಾರೆ. ಇನ್ನುಳಿದಂತೆ ಪ್ರೇಮಾನಂದ ಬಿರಾದಾರ ಹಾಗೂ ಚಂದ್ರಶೇಖರ ಕವಟಗಿ ಕೂಡ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದರು.

ಈ ರೀತಿ ತಪ್ಪು ಮಾಹಿತಿ ನೀಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದೇನೆ. ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುವುದು ಅತ್ಯಂತ ಹೀನ ಕೃತ್ಯ ಎಂದರು.

ಕೇಂದ್ರದ ಬಿಜೆಪಿ ಸರಕಾರವು ಚುನಾವಣಾ ಆಯೋಗವನ್ನು ದುರಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದೆ. ಉದ್ದೇಶಪೂರ್ವಕವಾಗಿ ಲಕ್ಷಾಂತರ ಮತಗಳನ್ನು ಡಿಲೀಟ್ ಮಾಡಲಾಗಿದೆ. ಹೀಗಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು. ಈ ಅಕ್ರಮಗಳ ಕುರಿತು ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ರಫೀಕ ಟಪಾಲ್, ಅಬ್ದುಲ್ ರಝಾಕ್ ಹೊರ್ತಿ, ದಿನೇಶ್ ಹಳ್ಳಿ, ಜಮೀರ ಭಕ್ಷಿ, ಸಿದ್ದು ಗೌಡನವರ, ಈರಣ್ಣ ಬಿರಾದಾರ ಸೇರಿದಂತೆ ಮುಂತಾದವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor