ಸಿಂದಗಿ: ಹೊತ್ತಿ ಉರಿದ ಕಾರು; ಇಬ್ಬರು ಪ್ರಾಣಾಪಾಯದಿಂದ ಪಾರು
ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದ ಹಳೆ ಬಜಾರ್‌ನಲ್ಲಿ ಕಿಯಾ ಕಾರೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ನಡೆದಿದೆ.
ಕಾರಿನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎನ್ನಲಾಗಿದ್ದು, ವಾಹನದಲ್ಲಿದ್ದ ಇಬ್ಬರು ಪ್ರಯಾಣಿಕರು ಸಮಯಪ್ರಜ್ಞೆ ಮೆರೆದು ತಕ್ಷಣವೇ ಹೊರಗೆ ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಉರಿದು ಬೂದಿಯಾಗಿದೆ. ಕಾರಿನ ಮಾಲೀಕರ ಹೆಸರು ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಸಿಂದಗಿ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.