Vijayapura | ಪೆಟ್ರೋಲ್ ಬಂಕ್‌ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಗಂಭೀರ, ಆರೋಪಿ ಪರಾರಿ
ವಿಜಯಪುರ : ಜಿಲ್ಲೆಯ ಕೊಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದ ಪೆಟ್ರೋಲ್ ಬಂಕ್‌ನಲ್ಲಿ ನಡೆದ ಮಾತಿನ ಚಕಮಕಿಯ ವಿಕೋಪದಿಂದಾಗಿ, ಪೆಟ್ರೋಲ್ ಬಂಕ್ ಮಾಲೀಕನೊಬ್ಬ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ಹಾರಿಸಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಘಟನೆಯಲ್ಲಿ ಸುಖದೇವ್ ಚಲವಾದಿ (30) ಗಂಭೀರವಾಗಿ ಗಾಯಗೊಂಡಿದ್ದು, ಅವರ ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಎರಡು ಗುಂಡುಗಳು ತಗುಲಿವೆ. ತೀವ್ರ ನರಳಾಟದಲ್ಲಿದ್ದ ಅವರನ್ನು ಕೂಡಲೇ ವಿಜಯಪುರದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ದಾಳಿ ನಡೆದ ಸಂದರ್ಭದಲ್ಲಿ ಗಾಯಾಳು ಸುಖದೇವ್ ಜತೆಗೆ ಅವರ ಸ್ನೇಹಿತ ರಾಜು ಚಲವಾದಿ (40) ಕೂಡ ಸ್ಥಳದಲ್ಲಿದ್ದರು.
ಘಟನೆಯ ವಿವರ: ಸುಖದೇವ್ ಚಲವಾದಿ ಹಾಗೂ ಅವರ ಸ್ನೇಹಿತ ರಾಜು ಅವರು ಮಟ್ಟಿಹಾಳ ಗ್ರಾಮದ ಪೆಟ್ರೋಲ್ ಬಂಕ್‌ಗೆ ತೆರಳಿದ್ದ ವೇಳೆ, ಅಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಸಂಗಪ್ಪ ಪೂಜಾರಿ (48) ಹಾಗೂ ಇವರ ನಡುವೆ ಯಾವುದೋ ವಿಚಾರಕ್ಕೆ ಜಗಳ ಸಂಭವಿಸಿದೆ ಎನ್ನಲಾಗಿದೆ. ಮಾತು ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ಬಂಕ್ ಮಾಲೀಕ, ತಾನು ಹೊಂದಿದ್ದ ಪರವಾನಗಿ ರಿವಾಲ್ವರ್‌ನಿಂದ ಹಠಾತ್ ಗುಂಡು ಹಾರಿಸಿದ್ದಾನೆ. ಪೂರ್ವಭಾವಿ ವೈಷಮ್ಯದ ಹಿನ್ನೆಲೆಯಲ್ಲಿಯೇ ಈ ಮಾರಣಾಂತಿಕ ದಾಳಿ ನಡೆದಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದ ತಕ್ಷಣವೇ ಆರೋಪಿ ಸಂಗಪ್ಪ ಪೂಜಾರಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಕೂಡಲೇ ಕೊಲ್ಹಾರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.