Vijayapura | ಜೀವಂತ ಮತದಾರರನ್ನು ಮೃತರೆಂದು ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ
ವಿಜಯಪುರ : ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೀವಂತ ಮತದಾರರನ್ನು ಮೃತಪಟ್ಟಿದ್ದಾರೆ ಎಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ನಕಲಿ ಮರಣ ಪ್ರಮಾಣಪತ್ರಗಳನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರು.
ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಲೆಟರ್ ಹೆಡ್ ನಲ್ಲಿ ಕೆಲವು ಮತದಾರರು ಮೃತ ಪಟ್ಟಿದ್ದಾರೆಂದು ಉಲ್ಲೇಖಿಸಿ ದಾಖಲೆಗಳನ್ನು ಸಲ್ಲಿಸಲಾಗಿದ್ದು, ಅವುಗಳ ಆಧಾರದ ಮೇಲೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ನಡೆದಿದೆ ಎಂದು ಅಬ್ದುಲ್ ಹಮೀದ್ ಮುಶ್ರೀಫ್ ಆರೋಪಿಸಿದರು.
ಎಂಟು ಮತದಾರರು ಮೃತಪಟ್ಟಿದ್ದಾರೆಂದು ಪಟ್ಟಿ ಸಲ್ಲಿಸಲಾಗಿದ್ದು, ಏಳು ಮಂದಿಗೆ ಸಂಬಂಧಿಸಿದ ಮರಣ ಪ್ರಮಾಣಪತ್ರಗಳ ಪ್ರತಿಗಳನ್ನು ಕೂಡ ನೀಡಲಾಗಿದೆ. ಆದರೆ ಕಾಂಗ್ರೆಸ್‌ನ ಬಿಎಲ್‌ಎ-2ಗಳು ಸ್ಥಳೀಯವಾಗಿ ಪರಿಶೀಲಿಸಿದಾಗ, ಆ ಏಳು ಮತದಾರರು ಜೀವಂತವಾಗಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.
ಮರಣ ಪ್ರಮಾಣಪತ್ರಗಳು ನೈಜವಾಗಿವೆಯೇ, ಅವುಗಳನ್ನು ಯಾವ ದಾಖಲೆಗಳ ಆಧಾರದ ಮೇಲೆ ನೀಡಲಾಗಿದೆ ಹಾಗೂ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಫಾರಂ-7 ಮೂಲಕ ಮತದಾರರ ಹೆಸರು ತೆಗೆದುಹಾಕುವ ಸಂದರ್ಭದಲ್ಲಿ ಸೂಕ್ತ ದಾಖಲೆ ಹಾಗೂ ಪುರಾವೆಗಳನ್ನು ಸಲ್ಲಿಸುವ ಜವಾಬ್ದಾರಿ ಅರ್ಜಿದಾರರ ಮೇಲಿದ್ದು, ತಪ್ಪು ಘೋಷಣೆ ನೀಡುವುದು ಕಾನೂನು ಬದ್ಧವಾಗಿ ಶಿಕ್ಷಾರ್ಹವಾಗಬಹುದು. ಹೀಗಾಗಿ ಸಲ್ಲಿಸಲಾದ ಮರಣ ಪ್ರಮಾಣಪತ್ರಗಳು ಹಾಗೂ ಇತರ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ತಪ್ಪು ದಾಖಲೆ ಅಥವಾ ಸುಳ್ಳು ಮಾಹಿತಿ ಬಳಕೆ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಚುನಾವಣಾ ಕಾನೂನು ಹಾಗೂ ಅನ್ವಯವಾಗುವ ಇತರ ಕಾನೂನುಗಳಡಿ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಇರಫಾನ್ ಶೇಖ್, ಅಬ್ದುಲ್ ರಜಾಕ್ ಹೊರ್ತಿ, ವೈಜನಾಥ ಕರ್ಪೂರ ಮಠ, ಶಬ್ಬೀರ್ ಅಹ್ಮದ್ ಜಹಾಗೀರದಾರ್, ಶಕೀಲ್ ಬಾಗಮಾರೆ, ಆಜಾದ್ ಪಟೇಲ್, ಚಾಂದಸಾಬ್ ಗಡಗಲಾವ, ಆಫ್ತಾಬ್ ಖಾದ್ರಿ, ಇದ್ರಿಸ್ ಬಕ್ಷಿ, ಫಯಾಜ್ ಕಲಾದಗಿ, ಮನ್ಸೂರ್ ಇನಾಮದಾರ್, ಎಸ್.ಎಂ. ಪಾಟೀಲ ಗಣಿಹಾರ, ಅಬ್ದುಲ್ ಪೀರಾ ಜಮಖಂಡಿ, ಎಂ.ಸಿ. ಮುಲ್ಲಾ, ಮೈನೊದ್ದೀನ್ ಬೀಳಗಿ, ಡಾ. ಮಹ್ಮದ್ ರಫೀಕ್ ಗುರಿಕಾರ, ಡಾ. ಶರಣ ಪ್ರಕಾಶ ಚೌರ, ಅಫಜಲ್ ಜಾನವೇರ, ವಸೀವುಜ್ಜಮಾ ಹತ್ತರಕಿಹಾಳ, ಸಂತೋಷ ಶಹಾಪುರ, ಮಿಲಿಂದ ಚಂಚಲಕರ, ಶರಣಪ್ಪ ಯಕ್ಕುಂಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
1046 ಮತದಾರರು ಮೃತ!
ನಗರ ಕ್ಷೇತ್ರದ 198 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸುಮಾರು 1,046 ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಮೃತಪಟ್ಟಿದ್ದಾರೆ ಎಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದರು.