ವಿಜಯಪುರ ವಿಮಾನ ನಿಲ್ದಾಣ : ಮೂರು ತಿಂಗಳಲ್ಲಿ ವಿಮಾನ ಹಾರಾಟದ ನಿರೀಕ್ಷೆ

ಸಚಿವ ಎಂ.ಬಿ.ಪಾಟೀಲ್‌ ಅವರ ಶ್ರಮಕ್ಕೆ ಸಿಕ್ಕ ಫಲ: ಎಸ್.ಎಂ.ಪಾಟೀಲ್‌ ಗಣಿಹಾರ

Update: 2026-07-31 21:12 IST

ವಿಜಯಪುರ : ಅರ್ಧಕ್ಕೆ ನಿಲ್ಲುವ ಭೀತಿಯಲ್ಲಿದ್ದ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ಮರುಜೀವ ನೀಡಿ, ಶೀಘ್ರವೇ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ.ಪಾಟೀಲ್‌ರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್‌ ಗಣಿಹಾರ ತಿಳಿಸಿದರು.

ಶುಕ್ರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ತಾಂತ್ರಿಕ ಹಾಗೂ ಕಾನೂನು ಸಂಕಷ್ಟಕ್ಕೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಯೋಜನೆಗೆ ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕಿದೆ. ಮುಂದಿನ ಮೂರೇ ತಿಂಗಳಲ್ಲಿ ವಿಮಾನ ಹಾರಾಟ ಆರಂಭವಾಗುವ ಆಶಾವಾದ ಮೂಡಿದೆ ಎಂದು ಗಣಿಹಾರ ಹೇಳಿದರು.

ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸಚಿವರಾಗಿದ್ದಾಗ ಯೋಜನೆಯ ರೂಪುರೇಷೆ ಸಿದ್ಧವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಿದ್ದರು. ಬಳಿಕ ದಶಕಗಳ ಕಾಲ ಯೋಜನೆ ನೆನೆಗುದಿಗೆ ಬಿತ್ತು. ನಂತರದ ದಿನಗಳಲ್ಲಿ ಸಂಸದ ರಮೇಶ ಜಿಗಜಿಣಗಿ ಹಾಗೂ ಗೋವಿಂದ ಕಾರಜೋಳ ಅವರ ಪ್ರಯತ್ನದಿಂದ ಮತ್ತೆ ಭೂಮಿ ಪೂಜೆಯಾಯಿತಾದರೂ, ಆರಂಭಿಕ ತಾಂತ್ರಿಕ ಎಡವಟ್ಟುಗಳಿಂದಾಗಿ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳ ತಲುಪಿತು. ಆಗ ಸಚಿವ ಎಂ.ಬಿ.ಪಾಟೀಲರು ವಿಶೇಷ ಆಸಕ್ತಿ ವಹಿಸಿ ನ್ಯಾಯಾಂಗ ಹೋರಾಟ ನಡೆಸಿದ್ದರಿಂದ ಬೃಹತ್ ಸಂಕಷ್ಟದಿಂದ ಯೋಜನೆ ಪಾರಾಯಿತು. ಇಲ್ಲದಿದ್ದರೆ ಈ ಯೋಜನೆ ಅಪೂರ್ಣವಾಗಿ ಉಳಿಯುತ್ತಿತ್ತು ಎಂದರು.

ಆರಂಭದಲ್ಲಿ ಸಣ್ಣ ಮಟ್ಟದ ವಿಮಾನ ನಿಲ್ದಾಣಕ್ಕೆ ಯೋಜಿಸಲಾಗಿತ್ತು. ಆದರೆ ಸಚಿವರ ದೂರದೃಷ್ಟಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ಇದನ್ನು ಮೇಲ್ದರ್ಜೆಗೇರಿಸಲಾಗಿದೆ. ಶೀಘ್ರದಲ್ಲೇ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಯ ಮಹಾನಿರ್ದೇಶಕರು ನಿಲ್ದಾಣದ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸಲಿದ್ದಾರೆ. ವಿಮಾನ ನಿಲ್ದಾಣ ಕಾರ್ಯಾರಂಭದಿಂದ ವಿಜಯಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಕೃಷಿ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಆರ್ಥಿಕ ಕ್ಷೇತ್ರಗಳಿಗೆ ಹೊಸ ವೇಗ ಸಿಗಲಿದೆ ಎಂದರು

ಈ ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ಲಂಬು, ಫಯಾಜ್ ಕಲಾದಗಿ, ವಸಂತ ಹೊನಮೋಡೆ,ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News