ಹಿಪ್ಪರಗಿ ಕಾರು ಸ್ಫೋಟ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ ಬಂಧನ

Update: 2026-08-19 14:04 IST

​ಜಮಖಂಡಿ: ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜುಲೈ 25ರ ರಾತ್ರಿ ನಡೆದಿದ್ದ ಕಾರು ಸ್ಫೋಟ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಿದ್ಧಾರ್ಥ್ ಗೋಯಲ್ ತಿಳಿಸಿದ್ದಾರೆ.

​ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಣಕಾಸಿನ ವ್ಯವಹಾರ ಹಾಗೂ ಜಮೀನು ವಿವಾದದ ಹಿನ್ನೆಲೆಯಲ್ಲಿ ಬಾರ್ ಮಾಲೀಕ ಹನಮಂತ ಅಥಣಿ ಅವರಿಗೆ ಬೆದರಿಕೆ ಹಾಕುವ ಮತ್ತು ಕೊಲೆ ಮಾಡುವ ಉದ್ದೇಶದಿಂದ ಕಾರಿನಲ್ಲಿ ಸ್ಫೋಟಕವಿಟ್ಟು ಸ್ಫೋಟಿಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು.

​ಬಂಧಿತರನ್ನು ಶಿವಾನಂದ ಜಲ್ಲಿ, ರೇವಣಪ್ಪ ಜಲ್ಲಿ, ಮಹದೇವ ಸಂಗಾಪೂರ ಹಾಗೂ ಮಲ್ಲಿಕಾರ್ಜುನ ಭದ್ರಪನವರ ಎಂದು ಗುರುತಿಸಲಾಗಿದೆ. ಸ್ಫೋಟಕ ವಸ್ತು ಪೂರೈಸಿದ ಆರೋಪ ಎದುರಿಸುತ್ತಿರುವ ಗಜಾನನ ಸಂಗಾಪುರ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದರು.

​ತನಿಖೆಗೆ ನಾಲ್ಕು ತಂಡಗಳು

ಪ್ರಕರಣದ ತನಿಖೆಗಾಗಿ ಎಎಸ್‌ಪಿ ಜಗದೀಶ, ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ್ ಹಾಗೂ ಸಿಪಿಐ ಮಲ್ಲಪ್ಪ ಮಡ್ಡಿ ಅವರ ಮಾರ್ಗದರ್ಶನದಲ್ಲಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಪಿಎಸ್‌ಐಗಳಾದ ಗಂಗಾಧರ ಪೂಜೇರಿ, ಶಿವಾನಂದ ಶಿರಗಣ್ಣವರ, ನಿತೀನ ಕುಮಾರ, ಅಪ್ಪಣ್ಣ ಐಗಳಿ ಹಾಗೂ ಎಸ್‌ಒಸಿ ತಂಡದ ಶ್ರೀಧರ ಮಗದುಮ ನೇತೃತ್ವದ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ ಎಂದರು.

​ತನಿಖೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ.

ಸಹಕರಿಸಿದವರ ವಿರುದ್ಧವೂ ಕ್ರಮ‌

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವವರು ಹಾಗೂ ಆರೋಪಿಗಳಿಗೆ ನೆರವು ನೀಡಿದವರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದರು.

​ಈ ಸಂದರ್ಭದಲ್ಲಿ ಇತರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News