Vijayapura | ಇಬ್ಬರು ಮಕ್ಕಳ ಮೃತದೇಹ ಬಾವಿಯಲ್ಲಿ ಪತ್ತೆ; ತಂದೆ ನಾಪತ್ತೆ, ದೂರು ದಾಖಲು
ಸಾಂದರ್ಭಿಕ ಚಿತ್ರ | PC : Image by jeswin on Magnific
ವಿಜಯಪುರ : ಬಾವಿಯಲ್ಲಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದು, ತಂದೆ ಸಾಬಣ್ಣ ಬರಗಿ ನಾಪತ್ತೆಯಾಗಿರುವ ಘಟನೆ ನಿಡಗುಂದಿ ತಾಲ್ಲೂಕಿನ ಮುದ್ದಾಪುರ ಗ್ರಾಮದ ನಡೆದಿದೆ.
ಮುದ್ದಾಪುರ ಗ್ರಾಮದ ರಕ್ಷಿತಾ ಸಾಬಣ್ಣ ಬರಗಿ (15 ), ಸಾಕ್ಷಿ ಸಾಬಣ್ಣ ಬರಗಿ (10) ಮೃತಪಟ್ಟಿದ್ದಾರೆ. ಮೃತರ ತಂದೆ ಸಾಬಣ್ಣ ಬರಗಿ (40) ನಾಪತ್ತೆಯಾಗಿದ್ದಾರೆ.
ಲಕ್ಷ್ಮೀಬಾಯಿ ಹಾಗೂ ಸಾಬಣ್ಣ ದಂಪತಿ ಮದುವೆಯಾಗಿ ಸುಮಾರು 13 ವರ್ಷಗಳಾಗಿದ್ದು, ಇವರಿಗೆ ಒಟ್ಟು ಐದು ಜನ ಮಕ್ಕಳಿದ್ದಾರೆ.
ವರಮಹಾಲಕ್ಷ್ಮಿ ಪೂಜೆಯ ನಿಮಿತ್ತ ಲಕ್ಷ್ಮೀಬಾಯಿ ಅವರು, ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಅಣ್ಣನ ಮನೆಗೆ ತೆರಳಿದ್ದರು. ಇನ್ನೊಬ್ಬ ಮಗ ಕೋಲಾರದಲ್ಲಿ ಅಜ್ಜ-ಅಜ್ಜಿಯ ಜೊತೆಗಿದ್ದ. ತಮ್ಮ 8 ಎಕರೆ ಜಮೀನಿನ ತೋಟದ ಮನೆಯಲ್ಲಿ ಗಂಡ ಸಾಬಣ್ಣ ಹಾಗೂ ಇಬ್ಬರು ಮಕ್ಕಳು ಉಳಿದುಕೊಂಡಿದ್ದರು ಎನ್ನಲಾಗಿದೆ.
ಲಕ್ಷ್ಮೀಬಾಯಿ ಅವರು ಮನೆಗೆ ಹಿಂತಿರುಗಿದಾಗ ಗಂಡ ಮತ್ತು ಇಬ್ಬರು ಮಕ್ಕಳು ಕಂಡುಬರಲಿಲ್ಲ. ಸಂಜೆ 4:30 ರಿಂದ 5:00 ಗಂಟೆಯ ಸುಮಾರಿಗೆ ಜಮೀನಿನ ಬಾವಿಯ ಬಳಿ ಗಂಡ ಸಾಬಣ್ಣನ ಬಟ್ಟೆಗಳು ಬಿದ್ದಿರುವುದು ಕಂಡುಬಂದಿದೆ. ಇದರಿಂದ ಆತಂಕಗೊಂಡು ಸಂಬಂಧಿಕರಿಗೆ ಕರೆ ಮಾಡಿ ಹುಡುಕಾಟ ಆರಂಭಿಸಿದ್ದಾರೆ.
ರಾತ್ರಿ ವೇಳೆಗೆ ಬಾವಿಯಲ್ಲಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಬಾವಿಯ ನೀರನ್ನು ಖಾಲಿ ಮಾಡಿಸಿ ಪರಿಶೀಲಿಸಿದರೂ ಗಂಡ ಸಾಬಣ್ಣನ ಸುಳಿವು ಸಿಕ್ಕಿಲ್ಲ. ಬಾವಿಯ ದಡದಲ್ಲಿ ಆತನ ಬಟ್ಟೆಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ
ʼಇಬ್ಬರು ಮಕ್ಕಳ ಮೃತದೇಹಗಳನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಕ್ಕಳ ಸಾವಿನ ಬಗ್ಗೆ ತಾಯಿ ಲಕ್ಷ್ಮೀಬಾಯಿ ಅವರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ. ನಾಪತ್ತೆಯಾಗಿರುವ ಸಾಬಣ್ಣ ಎಲ್ಲಿಗೆ ತೆರಳಿದ್ದಾನೆ ಎಂಬುದರ ಕುರಿತು ಪೊಲೀಸ್ ಇಲಾಖೆಯಿಂದ ಶೋಧ ಕಾರ್ಯ ತೀವ್ರಗೊಳಿಸಲಾಗಿದೆʼ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ ನೀಡಿದರು.