×
Ad

ವಿಜಯಪುರ | ಲೋಣಿ ಬಿ.ಕೆ. ಗ್ರಾಮದಲ್ಲಿ ದೇವಾಲಯದ ಬೀಗ ಒಡೆದು ಬಂಗಾರ, ಹುಂಡಿ ಹಣ ಕಳ್ಳತನ

Update: 2026-01-30 13:55 IST

ಇಂಡಿ: ಲೋಣಿ ಬಿ.ಕೆ. ಗ್ರಾಮದಲ್ಲಿರುವ ಗತ್ತರಗಿ ಭಾಗಮ್ಮನ ದೇವಸ್ಥಾನದಲ್ಲಿ ನಿನ್ನೆ ತಡರಾತ್ರಿ ಕಳ್ಳರು ದೇವಸ್ಥಾನದ ಬೀಗ ಒಡೆದು ದೇವಿಯ ಕೊರಳಿನ ಬಂಗಾರ ಹಾಗೂ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.

ಬೆಳಿಗ್ಗೆ ಪೂಜೆಗಾಗಿ ದೇವಸ್ಥಾನಕ್ಕೆ ಆಗಮಿಸಿದ ಪೂಜಾರಿ ಸುರೇಶ್ ಕೋಳಿ ಈ ಘಟನೆ ಗಮನಿಸಿ ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಬಳಿಕ ಝಳಕಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಡಚಣ ಮತ್ತು ಇಂಡಿ ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳಖದೀಮರ ಅಟ್ಟಹಾಸಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ಷ್ಮ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯತ್ ವತಿಯಿಂದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದರ ಜೊತೆಗೆ, ರಾತ್ರಿ ಗಸ್ತಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಹಗಲು-ರಾತ್ರಿ ಎನ್ನದೆ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದು, ಈಗಾಗಲೇ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿದ್ದರೂ ಯಾವುದೇ ಪ್ರಕರಣದಲ್ಲಿಯೂ ಸುಳಿವು ಸಿಕ್ಕಿಲ್ಲದಿರುವುದು ಶೋಚನೀಯವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸರ್ಕಾರ ವಿಶೇಷ ರಹಸ್ಯ ತಂಡವನ್ನು ನೇಮಕ ಮಾಡಿ ಕಳ್ಳತನ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಲೋಣಿ ಬಿ.ಕೆ. ಗ್ರಾಮದ ಮುಖಂಡ ರಮೇಶ್ ಜಿತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News