ಸ್ಕೈರೂಟ್ ಉದ್ಯಮಿಯ ಯಶೋಗಾಥೆ; ಗಣಿತದಲ್ಲಿ 51 ಅಂಕದ ಬಳಿಕ ಐಐಟಿ, ಇಸ್ರೋ ಮತ್ತು ರಾಕೆಟ್‌ ಗಳ ಲೋಕ!

Update: 2026-07-19 20:10 IST

Photo Credit : indiatoday.in

ಇಬ್ಬರು ಮಾಜಿ ಇಸ್ರೋ ಇಂಜಿನಿಯರ್‌ ಗಳ ನಡುವಿನ ಕಲ್ಪನೆಯಾಗಿ ಪ್ರಾರಂಭವಾದದ್ದು ಈಗ ಸುಮಾರು 1000 ಸಿಬ್ಬಂದಿಯನ್ನು ನೇಮಿಸಿಕೊಂಡಿರುವ ಸಂಸ್ಥೆಯಾಗಿ ಬೆಳೆದಿದೆ.

ಗಣಿತದಲ್ಲಿ 51 ಅಂಕಗಳನ್ನು ಗಳಿಸುವುದು ರಾಕೆಟ್ ವಿಜ್ಞಾನಿಯ ಸಾಮಾನ್ಯ ಆರಂಭವಾಗಿರುವುದಿಲ್ಲ. ಆದರೂ ಪವನ್ ಕುಮಾರ್ ಚಂದನ ಅವರ ಕಥೆ ಆರಂಭವಾಗುವುದೇ ಹಾಗೆ! ಇಂದು ಅವರು ನಿರ್ಮಿಸಿದ 'ವಿಕ್ರಮ್-1' ಬಾಹ್ಯಾಕಾಶವನ್ನು ತಲುಪಿದ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ಆಗುವ ಮೂಲಕ ಇತಿಹಾಸ ನಿರ್ಮಿಸಿದೆ.

'ವಿಕ್ರಮ್-1' ಹಿಂದೆ ಚಂದನ ಅವರು ಸಹ-ಸ್ಥಾಪಿಸಿದ ಸ್ಟಾರ್ಟ್‌ಅಪ್ ಸ್ಕೈರೂಟ್ ಏರೋಸ್ಪೇಸ್ ಇದೆ. ಭಾರತದ ಅತಿದೊಡ್ಡ ಖಾಸಗಿ ರಾಕೆಟ್ ಉತ್ಪಾದನಾ ಸೌಲಭ್ಯದ ಸಹ-ಸಂಸ್ಥಾಪಕ ಮತ್ತು ಸಿಇಒ ಆಗುವ ಹಾಗೂ ದೇಶದ ಮೊದಲ ಖಾಸಗಿಯಾಗಿ ನಿರ್ಮಿಸಿದ ರಾಕೆಟ್‌ ನ ಉಡಾವಣೆಗೆ ನೆರವಾಗುವ ಕೆಲವು ವರ್ಷಗಳ ಮೊದಲು, ಚಂದನ ಶೈಕ್ಷಣಿಕ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿದ್ದ ವಿದ್ಯಾರ್ಥಿಯಾಗಿದ್ದರು.

ಅವರು ಗಣಿತದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಯಾಗಿರಲಿಲ್ಲ. ಆದರೆ ಅಂಕಗಳಲ್ಲಿ ಅಡಗಿದ್ದ ಕೊರತೆಯನ್ನು ಕುತೂಹಲ, ಪರಿಶ್ರಮ ಮತ್ತು ಯಂತ್ರಗಳ ಮೇಲಿನ ಆಕರ್ಷಣೆಯಿಂದ ಸರಿದೂಗಿಸಿದರು. 2018ರ ಜೂನ್‌ ನಲ್ಲಿ ಚಂದನ ಮತ್ತು ಸಹ-ಸಂಸ್ಥಾಪಕರಾದ ಇಸ್ರೋ ಎಂಜಿನಿಯರ್ ಹಾಗೂ ಐಐಟಿ ಬಾಂಬೆ ಪದವೀಧರ ಭರತ್ ಡಾಕಾ ಅವರು ಹೈದರಾಬಾದ್‌ ನಲ್ಲಿ ಸ್ಕೈರೂಟ್ ಏರೋಸ್ಪೇಸ್ ಸ್ಥಾಪಿಸಿದರು.

ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಚಂದನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರು. ಲಕ್ಷಾಂತರ ಇತರ ಭಾರತೀಯ ವಿದ್ಯಾರ್ಥಿಗಳಂತೆ, ಆರಂಭದ ವರ್ಷಗಳಲ್ಲಿ ಅವರು ಹೆಚ್ಚಿನ ಸಮಯವನ್ನು ಯಂತ್ರಗಳು ಮತ್ತು ತಂತ್ರಜ್ಞಾನವನ್ನು ಅನ್ವೇಷಿಸುವುದರಲ್ಲಿ ಕಳೆದರು. ಕಷ್ಟದ ಸಂದರ್ಭದಲ್ಲೂ ಅವರ ತಂದೆಯ ಪ್ರೋತ್ಸಾಹ ಕುಂದಲಿಲ್ಲ. ಶಿಕ್ಷಣದಲ್ಲಿ ಸಮಸ್ಯೆ ಉಂಟುಮಾಡುತ್ತಿದ್ದ ವಿಷಯಗಳೇ ಕ್ರಮೇಣ ಅವರ ಆಸಕ್ತಿಯ ಕ್ಷೇತ್ರಗಳಾದವು. ಗಣಿತ ಮತ್ತು ವಿಜ್ಞಾನ ಅವರ ಭವಿಷ್ಯದ ವೃತ್ತಿಜೀವನದ ಅಡಿಪಾಯವಾದವು.

ಎರಡು ದಶಕಗಳ ಹಿಂದೆ ಚಂದನ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿ ಐಐಟಿ ಖರಗ್‌ ಪುರ ಸೇರಿದರು. ಅನೇಕ ವಿದ್ಯಾರ್ಥಿಗಳಿಗೆ ಈ ಸಾಧನೆಯೇ ಸಾಕಾಗುತ್ತಿತ್ತು. ಆದರೆ ಚಂದನ ಅವರಿಗೆ ಇದು ಆರಂಭ ಮಾತ್ರವಾಗಿತ್ತು. ಅನೇಕ ಇಂಜಿನಿಯರಿಂಗ್ ಪದವೀಧರರು ತಂತ್ರಜ್ಞಾನ ವಲಯದಲ್ಲಿ ಲಾಭದಾಯಕ ವೃತ್ತಿಜೀವನ ಅನುಸರಿಸುತ್ತಿದ್ದರೂ, ಅವರ ಗಮನ ಬಾಹ್ಯಾಕಾಶ ಮತ್ತು ರಾಕೆಟ್‌ಗಳ ಮೇಲೆ ಕೇಂದ್ರೀಕೃತವಾಗಿತ್ತು. ಇದೇ ಆಸಕ್ತಿ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಕರೆದೊಯ್ಯಿತು. ಐಐಟಿ ಖರಗ್‌ಪುರ ಕ್ಯಾಂಪಸ್‌ ನಿಂದಲೇ ಅವರು ಇಸ್ರೋ ಸೇರಿದ್ದರು.

ಈ ಉದ್ಯೋಗದಲ್ಲಿ ಖಾಸಗಿ ಸಂಸ್ಥೆಗಳು ನೀಡುವಂತಹ ವೇತನ ಸಿಗಲಿಲ್ಲ. ಆದರೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ಇಸ್ರೋದಲ್ಲಿ ಚಂದನ GSLV Mk III ಯೋಜನೆಯಲ್ಲಿ ಕೆಲಸ ಮಾಡಿದರು. ಈ ಕೆಲಸಕ್ಕಾಗಿ ಆಂತರಿಕವಾಗಿ ನೀಡುವ ಇನೋವೇಶನ್ ಪ್ರಶಸ್ತಿಯನ್ನೂ ಪಡೆದಿದ್ದರು. ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಆರು ವರ್ಷಗಳ ಕಾಲ ರಾಕೆಟ್ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಅನುಭವ ಗಳಿಸಿದರು.

ಅದೇ ಸಂದರ್ಭದಲ್ಲಿ ಭಾರತದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯು ವೇಗವಾಗಿ ವಿಸ್ತಾರಗೊಳ್ಳುತ್ತಿತ್ತು. ಆಗಲೇ ಸಾಂಪ್ರದಾಯಿಕ ಸರ್ಕಾರಿ ಸಂಸ್ಥೆಗಳ ಹೊರತಾಗಿ ರಾಕೆಟ್ ಅಭಿವೃದ್ಧಿಪಡಿಸುವ ಯೋಜನೆ ಅವರಿಗೆ ಹೊಳೆದಿತ್ತು. 2023ರಲ್ಲಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, "ಈಗ ಎರಡು ವರ್ಷಗಳಿಂದ ಖಾಸಗಿ ಕ್ಷೇತ್ರ ಬಾಹ್ಯಾಕಾಶ ವಲಯದಲ್ಲಿ ತೊಡಗಿಸಿಕೊಂಡಿದೆ. ಮುಂದಿನ 10 ವರ್ಷಗಳಲ್ಲಿ ನಮಗೆ ಉತ್ತಮ ಅವಕಾಶವಿದೆ" ಎಂದು ಹೇಳಿದ್ದರು.

ಆದರೆ ಖಾಸಗಿ ಬಾಹ್ಯಾಕಾಶ ಕಂಪನಿ ಆರಂಭಿಸುವುದು ಸುಲಭದ ಪ್ರಸ್ತಾಪವಾಗಿರಲಿಲ್ಲ. ಹಣಕಾಸು ದೊಡ್ಡ ಸವಾಲಾಗಿತ್ತು. ಹೂಡಿಕೆದಾರರಿಗೆ ಆಸಕ್ತಿ ಇರಲಿಲ್ಲ. ಚಂದನ ಅವರಿಗೆ ಮೊದಲ ಬೆಂಬಲ ನೀಡಿದ್ದು ಫ್ಲಿಪ್‌ಕಾರ್ಟ್‌ನ ಸಹ-ಸಂಸ್ಥಾಪಕ ಹಾಗೂ ಐಐಟಿ ಖರಗ್‌ಪುರದ ಹಳೆ ವಿದ್ಯಾರ್ಥಿ ಬಿನ್ನಿ ಬನ್ಸಾಲ್. ಅವರು 1.5 ದಶಲಕ್ಷ ಡಾಲರ್ ಹೂಡಿಕೆ ಮಾಡಿದರು. ಆದರೆ ಕೋವಿಡ್ ಕಂಪೆನಿಯ ಬೆಳವಣಿಗೆಗೆ ಅಡ್ಡಿಯಾಯಿತು. ಆ ಸಂದರ್ಭದಲ್ಲಿ ಗ್ರೀನ್ಕೋ ಹಣಕಾಸಿನ ಬೆಂಬಲ ನೀಡಿತು.

2020ರ ಜುಲೈನಲ್ಲಿ ಸ್ಕೈರೂಟ್ ರಾಕೆಟ್ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದ ಮೊದಲ ಖಾಸಗಿ ಭಾರತೀಯ ಕಂಪೆನಿಯಾಯಿತು. 'ರಾಮನ್-1' ಎಂದು ಹೆಸರಿಸಲಾದ ಎಂಜಿನ್ ಯುವ ಸ್ಟಾರ್ಟ್‌ಅಪ್‌ಗೆ ಮಹತ್ವದ ಹೆಜ್ಜೆಯಾಯಿತು. ಮುಂದಿನ ವರ್ಷ ಭಾರತ ಸರ್ಕಾರ ಬಾಹ್ಯಾಕಾಶ ವಲಯವನ್ನು ಖಾಸಗಿ ಭಾಗವಹಿಸುವಿಕೆಗೆ ತೆರೆದ ಬಳಿಕ, ಸ್ಕೈರೂಟ್ ಇಸ್ರೋ ಜತೆಗೆ ಒಪ್ಪಂದ ಮಾಡಿಕೊಂಡು 51 ದಶಲಕ್ಷ ಡಾಲರ್ ಸಂಗ್ರಹಿಸಿತು. ಅವರಿಗೆ ಯಶಸ್ಸು ಹಣಕಾಸಿನ ಮೌಲ್ಯಮಾಪನವಾಗಿರಲಿಲ್ಲ. 2022ರ ನವೆಂಬರ್‌ನಲ್ಲಿ 'ವಿಕ್ರಮ್-ಎಸ್' ಉಡಾವಣೆ ಮೂಲಕ ಅವರು ಬಯಸಿದ್ದ ಯಶಸ್ಸು ದೊರೆಯಿತು. ಇದು ಸಬ್-ಆರ್ಬಿಟಲ್ ರಾಕೆಟ್ ಆಗಿತ್ತು.

ಇಬ್ಬರು ಮಾಜಿ ಇಸ್ರೋ ಇಂಜಿನಿಯರ್‌ ಗಳ ನಡುವಿನ ಕಲ್ಪನೆಯಾಗಿ ಪ್ರಾರಂಭವಾದದ್ದು ಈಗ ಸುಮಾರು 1000 ಸಿಬ್ಬಂದಿಯನ್ನು ನೇಮಿಸಿಕೊಂಡಿರುವ ಸಂಸ್ಥೆಯಾಗಿ ಬೆಳೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News