ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿಯೇ ಹಲವು ಲೋಪ ದೋಷ: ತನಿಖಾ ತಂಡದ ವರದಿ
Photo: careers360.com
ಬೆಂಗಳೂರು : ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿಯೇ ಹಲವು ಲೋಪ ದೋಷಗಳಿದ್ದವು. ನಿಯಮಗಳ ಪ್ರಕಾರ 30 ದಿನಗಳ ಕಾಲಾವಕಾಶಕ್ಕೆ ಬದಲಿಗೆ 22 ದಿನಗಳ ಮಾತ್ರ ಅವಕಾಶ ನೀಡಿತ್ತು. ಅಲ್ಪಾವಧಿ ಟೆಂಡರ್ ಕರೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳು ಕಂಡುಬಂದಿರುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡವು ಬಯಲು ಮಾಡಿದೆ.
ಅಲ್ಲದೇ ಸ್ಟ್ರಕ್ಚರಲ್ ವಿನ್ಯಾಸ ಮತ್ತು ಮಂಜೂರಾದ ಅಂದಾಜು ಪಟ್ಟಿಯಲ್ಲಿನ ಲೋಪದೋಷಗಳು ಮತ್ತು ಪರಿಗಣಿಸದಿರುವ ಅಂಶಗಳ ಪ್ರಕಾರ ಪರಿಷ್ಕೃತ ಅಂದಾಜಿನಂತೆ 130 ಕೋಟಿ ರೂ. ಹೆಚ್ಚುವರಿಯಾಗಿರುವುದನ್ನೂ ಪತ್ತೆ ಮಾಡಿದೆ.
454.94 ಕೋಟಿ ರೂ. ವೆಚ್ಚದ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ವಿಳಂಬ ಹಾಗೂ ಕಳಪೆ ಕಾಮಗಾರಿ ಕುರಿತು ದೂರುಗಳು ಬಂದಿದ್ದವು. ಇದರ ಪರಿಶೀಲನೆಗೆ ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿಯು ಸ್ಥಳ ಪರಿಶೀಲನೆಯನ್ನು ಸಹ ನಡೆಸಿತ್ತು. ಇದರ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡದ ವರದಿಯು ಸರಕಾರಕ್ಕೆ ಸಲ್ಲಿಕೆಯಾಗಿರುವುದು ಮುನ್ನೆಲೆಗೆ ಬಂದಿದೆ.
ಲೋಕೋಪಯೋಗಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡವು ನೀಡಿದ್ದ ವರದಿಯ ಪ್ರತಿಯು "The-file.in"ಗೆ ಲಭ್ಯವಾಗಿದೆ.
ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿಗೆ ಎಂಸಿಐ, ಎನ್‌ಎಂಸಿ ನಿಯಮಗಳ ಪ್ರಕಾರ ಅವಶ್ಯವಿರುವ ಎಲ್ಲಾ ಕಾಂಪೋನೆಂಟ್‌ಗಳನ್ನು ಅಳವಡಿಸಿಕೊಂಡು ತಯಾರಿಸಿದೆ. ಕಾಮಗಾರಿಯನ್ನು ನಿರ್ವಹಿಸುವ ಸಮಯದಲ್ಲಿ ಎಂಸಿಐ ಮತ್ತು ಎನ್‌ಎಂಸಿ ಮಾನದಂಡಗಳ ಪ್ರಕಾರ ಹಾಗೂ ಉಪಯೋಗಿ ಇಲಾಖೆಯ ಕೋರಿಕೆಯಂತೆ ಹೆಚ್ಚುವರಿಯಾಗಿ ಒಟ್ಟಾರೆ 6,400 ಚ.ಮೀ. ಕಟ್ಟಡ ನಿರ್ಮಾಣವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಇಂಜಿನಿಯರ್ ಅವರು ತನಿಖಾ ಸಮಿತಿಗೆ ಒದಗಿಸಿದ್ದ ದಾಖಲೆಗಳ ಪ್ರಕಾರ ಪರಿಷ್ಕೃತ ಅಂದಾಜು ಪಟ್ಟಿಯು ಸರಕಾರದ ಅನುಮೋದನೆಗೆ ಸಲ್ಲಿಕೆಯಾಗಿತ್ತು. ಆದರೆ ಈವರೆಗೆ ಅನುಮೋದನೆ ದೊರೆಯದ ಕಾರಣ ಗುತ್ತಿಗೆದಾರರಿಗೆ ಇದುವರೆಗೂ ಯಾವುದೇ ಹೆಚ್ಚುವರಿ ಕಾರ್ಯಾದೇಶ ನೀಡಿರುವುದಿಲ್ಲ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.
ಕೊಠಡಿಗಳ ವಿಸ್ತೀರ್ಣಗಳು ಅವಶ್ಯಕತೆಗಿಂತಲೂ ಅಧಿಕ; 18.02 ಕೋಟಿಯಷ್ಟು ಹೆಚ್ಚುವರಿ
ಮುಖ್ಯ ವಾಸ್ತುಶಿಲ್ಪಿ ಅವರ ವರದಿ ಪ್ರಕಾರ ಈ ಕಾಮಗಾರಿಯಲ್ಲಿ ಒಳಗೊಂಡಿರುವ ಎಲ್ಲಾ ಸೌಲಭ್ಯಗಳನ್ನು ಎಂಸಿಐ ಮತ್ತು ಎನ್‌ಎಂಸಿ ನಿಯಮಗಳಿಗೆ ಅನುಸಾರವಾಗಿದೆ. ಆದರೆ ಕೆಲವೊಂದು ಕೊಠಡಿಗಳ ವಿಸ್ತೀರ್ಣಗಳು ಅವಶ್ಯಕತೆಗಿಂತಲೂ ಅಧಿಕವಾಗಿದೆ. ಹೆಚ್ಚುವರಿಯಾಗಿ ಅಳವಡಿಸಿಕೊಂಡಿರುವ ಅಥವಾ ಕೈಗೊಂಡಿರುವ ವಿಸ್ತೀರ್ಣವು 6,400 ಚ.ಮೀಟರ್ ಆಗಿದೆ. ಇದರಿಂದಾಗಿ 18.02 ಕೋಟಿಯಷ್ಟು ಹೆಚ್ಚುವರಿಯಾಗಿದೆ ಎಂದು ವಿವರಿಸಿದೆ.
ಡಿಪಿಆರ್‌ನಲ್ಲೇ ಲೋಪದೋಷ: ತನಿಖಾ ತಂಡವು ಮಂಜೂರಾದ ಅಂದಾಜು ಪಟ್ಟಿಯನ್ನು ಪರಿಷ್ಕೃತ ಅಂದಾಜು ಪಟ್ಟಿಗೆ ಹೋಲಿಸಿದೆ. ಇದರ ಪ್ರಕಾರ ಮಂಜೂರಾದ ಅಂದಾಜುಪಟ್ಟಿಗೆ ಹೋಲಿಸ
ಲಾಗಿದೆ ಈ ಕಾಮಗಾರಿಯಲ್ಲಿ ಹೆಚ್ಚುವರಿ ಪರಿಮಾಣ, ಅಂಶಗಳನ್ನು ಕೈಗೊಳ್ಳಲಾಗಿದೆ. ಕೆಲವು ಹೆಚ್ಚುವರಿಯಾಗಿ ಅಳವಡಿಸಿಕೊಂಡಿರುವ ಕೈಗೊಂಡಿರುವ ಕಾಂಪೋನೆಂಟ್‌ಗಳಿಂದಾಗಿ ಹಾಗೂ ಅನುಮೋದಿಸಿಕೊಂಡಿರುವ ಸ್ಟ್ರಕ್ಚರಲ್ ವಿನ್ಯಾಸ ಮತ್ತು ಡಿಪಿಆರ್ ತಯಾರಿಸುವಾಗ ಲೋಪದೋಷಗಳಿಂದಾಗಿ ಹೆಚ್ಚುವರಿ ಉಂಟಾ
ಗಿದೆ. ಇವುಗಳಿಗೆ ಒದಗಿಸಲಾದ ದಾಖಲೆಗಳ ಪ್ರಕಾರ ಮಾನದಂಡಗಳನ್ನು ಅನುಸರಿಸಿ ಅನುಮೋದನೆಯನ್ನು ಪಡೆದಿಲ್ಲ.
ಆದರೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದುಕೊಳ್ಳಲು ಪರಿಷ್ಕೃತ ಅಂದಾಜು/ಹೆಚ್ಚುವರಿ ಪರಿಮಾಣ, ಅಂಶಗಳನ್ನು ತಯಾರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯಲ್ಲಿ ಮಂಡಿಸಲಾಗಿತ್ತು. ಈ ಸಮಿತಿಯ ಅನುಮೋದನೆಯನ್ನು ಪಡೆದುಕೊಂಡಿದೆ.
130 ಕೋಟಿ ರೂ. ಹೆಚ್ಚುವರಿ: ಈ ಕಾಮಗಾರಿಯಲ್ಲಿ ಈಗಾಗಲೇ ಕೈಗೊಂಡಿರುವ ಮತ್ತು ಕೈಗೊಳ್ಳಲಾಗುತ್ತಿರುವ ಹೆಚ್ಚುವರಿ ಕಾಂಪೋನೆಂಟ್‌ಗಳು ಸೇರಿದಂತೆ ಕಾಮಗಾರಿಯ ಸ್ಟ್ರಕ್ಚರಲ್ ವಿನ್ಯಾಸ ಮತ್ತು ಮಂಜೂರಾದ ಅಂದಾಜು ಪಟ್ಟಿಯಲ್ಲಿನ ಲೋಪದೋಷಗಳು ಮತ್ತು ಪರಿಗಣಿಸದಿರುವ ಅಂಶಗಳ ಪ್ರಕಾರ ಪರಿಷ್ಕೃತ ಅಂದಾಜಿನಂತೆ 130 ಕೋಟಿ ರೂ. ಹೆಚ್ಚುವರಿ
ಯಾಗಿದೆ. ಈವರೆಗೆ ಕೈಗೊಳ್ಳಲಾಗಿರುವ ಕಾಂಪೋನೆಂಟ್‌ಗಳು ಹೆಚ್ಚುವರಿ ಪರಿಮಾಣಗಳಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದಿರುವ ಕುರಿತು ಸಲ್ಲಿಸಿರುವ ದಾಖಲೆಗಳಲ್ಲಿ ಕಂಡುಬಂದಿರುವುದಿಲ್ಲ. ಕಾಮಗಾರಿಯು ಪ್ರಗತಿಯಲ್ಲಿದೆ.
ಈ ಕಾಮಗಾರಿಯ ಟೆಂಡರ್‌ನಲ್ಲಿ ಒಟ್ಟು 4 ಜನ ಗುತ್ತಿಗೆದಾರರು ಭಾಗವಹಿಸಿದ್ದರು. ಎನ್ಸಿಸಿ, ಕೆಬಿಆರ್ ಇನ್ಫ್ರಾಟೆಕ್, ನಿಲೇಶ್ ಟೈಕ್ (ಹರ್ಷ ಕನ್ಸ್ಟ್ರಕ್ಷನ್ಸ್ ಪ್ರೈ ಲಿ.,) ವಿ ಸೇಖರ್ ಬಾಲಾಜಿ ಕೃಪಾ
ಪ್ರಾಜೆಕ್ಟ್ಸ್ ಲಿಮಿಟೆಡ್ ಭಾಗವಹಿಸಿದ್ದವು. ಈ ಪೈಕಿ ನಿಲೇಶ್ ಟೈಕ್ ತಿರಸ್ಕೃತಗೊಂಡಿತ್ತು. ಬಾಲಾಜಿ ಕೃಪಾ ಪ್ರಾಜೆಕ್ಟ್ಸ್ ಲಿಮಿಟೆಡ್ ಕಡಿಮೆ ದರ ನಮೂದಿಸಿ ಅಯ್ಕೆಯಾಗಿದೆ. 2020ರ ಅಕ್ಟೋಬರ್ 23ರಂದೇ ಕಾರ್ಯಾದೇಶ ನೀಡಲಾಗಿದೆ.
ತನಿಖಾ ಸಮಿತಿಯ ಅಭಿಪ್ರಾಯವೇನು?
ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಎಂಸಿಐ ನಿಯಮಗಳಿಗೆ ಅನುಸಾರವಾಗಿ ವಿನ್ಯಾಸ ರೂಪಿಸಿಕೊಳ್ಳಬೇಕಿದೆ. ಹೀಗಾಗಿ ಮುಖ್ಯ ವಾಸ್ತು ಶಿಲ್ಪಿ ಅವರ ತನಿಖಾ ವರದಿಯಂತೆ 6,400 ಚ. ಮೀಟರ್ ವಿಸ್ತೀರ್ಣ ಅಧಿಕವಾಗಿದೆ. ಮಂಜೂರಾದ ಅಂದಾಜಿನಲ್ಲಿ ಕೆಲವು ಕಾಂಪೋನೆಂಟ್‌ಗಳು ಹಾಗೂ ಪರಿಮಾಣಗಳು ಬಿಟ್ಟು ಹೋಗಿವೆ. ಅಲ್ಲದೇ ಪರಿಮಾಣ ಲೆಕ್ಕ ಹಾಕುವಾಗ ತಪ್ಪಾಗಿದೆ. ಇದರಿಂದಾಗಿ 23.98 ಕೋಟಿ ರೂ.ಹೆಚ್ಚುವರಿಯಾಗಿದೆ. ಅದರೆ ಈ ಕಾಮಗಾರಿಯಲ್ಲಿ ಅನುಮೋದಿತ ವಿನ್ಯಾಸ ಮತ್ತು ಸ್ಥಳಕ್ಕೆ ತಕ್ಕಂತೆ ಕಾಮಗಾರಿ ಮುಂದುವರೆಸಿದೆ. ಯಾವುದೇ ಅನಗತ್ಯ ಕಾಂಪೋನೆಂಟ್‌ಗಳನ್ನು ನಿರ್ವಹಿಸಿರುವುದು ಕಂಡುಬಂದಿಲ್ಲ ಎಂದು ವಿವರಿಸಿದೆ.
27.52 ಕೋಟಿ ರೂ.ಗಳಷ್ಟು ಟೆಂಡರ್ ಪ್ರೀಮಿಯಂ ಮತ್ತು 55.08 ಕೋಟಿ ರೂ.ಗಳಷ್ಟು ಪ್ರೈಸ್ ಅಡ್ಜಸ್ಟ್ಮೆಂಟ್ ಮೊತ್ತ ಉಂಟಾಗಿದೆ. ಹೆಚ್ಚುವರಿ ಜಿಎಸ್ಟಿ ಶೇ. 6ರಷ್ಟು ಅಂಧರೇ 20.46 ಕೋಟಿ ರೂ.ಮತ್ತು ಇತರ ಇಲಾಖೆಗಳಿಗೆ ನೀಡುವ ಠೇವಣಿ ಮೊತ್ತ 2.94 ಕೋಟಿ ರೂ.ಸೇರಿ ಒಟ್ಟು 106 ಕೋಟಿ ರೂ.ಗಳಷ್ಟು ಹೆಚ್ಚುವರಿಯಾಗುತ್ತದೆ ಎಂದು ತನಿಖಾ ತಂಡವು ಅಭಿಪ್ರಾಯಿಸಿದೆ.
ಅಲ್ಲದೇ ಕಾಮಗಾರಿಗೆ ನಿಯಮಾವಳಿಗಳ ಪ್ರಕಾರ 30 ದಿನಗಳ ಕಾಲಾವಕಾಶ ನೀಡಬೇಕಾಗಿತ್ತು. ಆದರೆ 22 ದಿನಗಳ ಕಾಲಾವಕಾಶ ನೀಡಲಾಗಿದೆ. ಅಲ್ಪಾವಧಿ ಟೆಂಡರ್ ಕರೆಯಲು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳು ಕಂಡುಬಂದಿರುವುದಿಲ್ಲ ಎಂದು ವರದಿಯು ಅಭಿಪ್ರಾಯಿಸಿದೆ.
ಈ ಕಾಮಗಾರಿ ನಡೆದ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ್ದ ಇಂಜಿನಿಯರ್ ಮತ್ತು ಲೆಕ್ಕಾಧಿಕಾರಿಗಳ ಪಟ್ಟಿಯನ್ನು ತನಿಖಾ ಸಮಿತಿಯು ಒದಗಿಸಿದೆ.