ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾದ ಅನಾರೋಗ್ಯದ ವದಂತಿಗೆ ನಟ ಸಲ್ಮಾನ್ ಖಾನ್ ಹೇಳಿದ್ದೇನು?

Update: 2026-07-20 16:58 IST

ಸಲ್ಮಾನ್ ಖಾನ್ | Photo Credit : PTI  

ಸಲ್ಮಾನ್ ಖಾನ್ ಮುಂಬೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ನಂತರ ವೀಡಿಯೋಗಳು ವೈರಲ್ ಆಗಿ ಅವರ ಆರೋಗ್ಯದ ಬಗ್ಗೆ ಚರ್ಚೆಗಳಾಗಿದ್ದವು.

ಮುಂಬೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ನಂತರ ಸಲ್ಮಾನ್ ಖಾನ್ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹ ಹರಡಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರೂ, ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟತೆ ನೀಡದೆ ಇರುವುದು ಆನ್ಲೈನ್ನಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಶುಕ್ರವಾರ ಸಲ್ಮಾನ್ ಖಾನ್ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರವು ಹೊಸದಾಗಿ ಅಭಿವೃದ್ಧಿಪಡಿಸಿದ ಡೇಟಾ ಕಲೆಕ್ಷನ್ ಆಂಡ್ ವೆರಿಫಿಕೇಶನ್ ಸಪೋರ್ಟ್ ಸೆಂಟರ್ಗೆ ಭೇಟಿ ನೀಡಿದ್ದರು. ಆ ಸಂದರ್ಭದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತ್ವರಿತವಾಗಿ ವೈರಲ್ ಆದವು. ‘ನಟ ದಣಿದಂತೆ ಕಾಣುತ್ತಿದ್ದಾರೆ’ ಮತ್ತು ‘ಅಸ್ವಸ್ಥರಾಗಿದ್ದಾರೆ’ ಎಂದು ಹಲವರು ಹೇಳಿದ್ದರು. ಅನೇಕರು ‘ಅವರಿಗೆ ವಯಸ್ಸಾಗಿರುವುದಕ್ಕೆ ಹಾಗೆ ಕಾಣುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ರವಿವಾರ ಸಲ್ಮಾನ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಕಪ್ಪು-ಬಿಳುಪು ಛಾಯಾಚಿತ್ರಗಳ ಸರಣಿಯನ್ನು ಪೋಸ್ಟ್ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುವ ಕ್ಯಾಪ್ಷನ್ ನೀಡಿದ್ದಾರೆ. “ನಿಮ್ಮ ಆರೋಗ್ಯ ಹೇಗಿದೆ?” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ತಮ್ಮ ಆರೋಗ್ಯದ ಕುರಿತ ಊಹಾಪೋಹದ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೆ ಇದ್ದರೂ, ಪರೋಕ್ಷವಾಗಿ ಈ ಪೋಸ್ಟ್ ಮೂಲಕ ಕಳವಳಗಳಿಗೆ ಉತ್ತರಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ತಮ್ಮ ಆರೋಗ್ಯದ ಬಗ್ಗೆ ಸಲ್ಮಾನ್ ಖಾನ್ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಹೀಗಾಗಿ ಈ ಪೋಸ್ಟ್ನಲ್ಲಿರುವ ಫೋಟೋಗಳು ಅವರ ಆರೋಗ್ಯದ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಸಲ್ಮಾನ್ ಖಾನ್ ತಮ್ಮ ಕುರಿತ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಸುತ್ತಲಿನ ಊಹಾಪೋಹಗಳ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ನೇರವಾಗಿ ಏನೂ ಹೇಳದೆ ಪರೋಕ್ಷವಾಗಿ ತಮ್ಮದೇ ಶೈಲಿಯಲ್ಲಿ ಉತ್ತರಿಸುತ್ತಾರೆ.

ವೃತ್ತಿರಂಗದಲ್ಲಿ ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರಕ್ಕೆ ‘ಬ್ಯಾಟಲ್ ಆಫ್ ಗಾಲ್ವಾನ್’ ಎಂದು ಹೆಸರಿಸಲಾಗಿತ್ತು. ಇದೀಗ ‘ಮಾತೃಭೂಮಿ’ ಎಂದು ಹೆಸರು ಬದಲಿಸಲಾಗಿದೆ. ಅಪೂರ್ವ ಲಖಿಯಾ ನಿರ್ದೇಶಿಸಿದ ಸಿನಿಮಾದಲ್ಲಿ ಚಿತ್ರಾಂಗದಾ ಸಿಂಗ್ ಕೂಡ ನಟಿಸಿದ್ದಾರೆ. 202ರಲ್ಲಿ ಲಡಾಖ್ನಲ್ಲಿ ಭಾರತ ಮತ್ತು ಚೀನೀ ಸೈನಿಕರ ನಡುವಿನ ಗಾಲ್ವಾನ್ ಕಣಿವೆಯ ಘರ್ಷಣೆಯನ್ನು ಆಧರಿಸಿ ಸಿನಿಮಾ ನಿರ್ಮಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News