CJP ಸಂಸತ್ ಚಲೋ: ಭಾರತದಲ್ಲಿ ಸಾರ್ವಜನಿಕ ಪ್ರತಿಭಟನೆಗೆ ಪೊಲೀಸರ ಅನುಮತಿ ಏಕೆ ಬೇಕು?; ಕಾನೂನು ಮಾಹಿತಿ ಇಲ್ಲಿದೆ...
Photo Credit : PTI
ದಿಲ್ಲಿಯ ಜಂತರ್ ಮಂತರ್‌ನಿಂದ ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ಸಂಸತ್ ಚಲೋ ಮಾರ್ಚ್‌ಗೆ ದಿಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಸಿಜೆಪಿ ನಾಯಕರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮುಂದುವರಿಸಲು ಅನುಮತಿ ಪಡೆದಿಲ್ಲ ಮತ್ತು ಈ ರ‍್ಯಾಲಿ ನಡೆಸಲು ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಜೂನ್ 20 ರಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಆದರೆ, ಪೊಲೀಸರ ನಿಲುವಿನ ಮಧ್ಯೆಯೂ ತಾವು ಯೋಜನೆಯಂತೆ ಸೋಮವಾರ ಸಂಸತ್ ಮಾರ್ಚ್ ನಡೆಸುವುದಾಗಿ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಹೇಳಿದ್ದರು. ಇಂದು ಸಂಸತ್ತಿನತ್ತ ಮೆರವಣಿಗೆ ಹೊರಟಿದ್ದ ಭಾರಿ ಸಂಖ್ಯೆಯ ಸಿಜೆಪಿ ನೇತೃತ್ವದ ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ಭೇದಿಸಿ ಮುನ್ನಡೆದಿದ್ದು, ಸಂಸತ್ ಭವನದ ಬಳಿ ಭದ್ರತಾ ಪಡೆಗಳು ಅಶ್ರುವಾಯು ಮತ್ತು ಲಾಠಿಚಾರ್ಜ್ ಪ್ರಯೋಗಿಸಿ ಪ್ರತಿಭಟನಾಕಾರರನ್ನು ತಡೆಯುವ ಪ್ರಯತ್ನ ನಡೆಸಿದ್ದಾರೆ.
ಭಾರತದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಮತ್ತು ಅದಕ್ಕೆ ಪೊಲೀಸರ ಅನುಮತಿ ಏಕೆ ಕಡ್ಡಾಯ ಎಂಬುದಕ್ಕೆ ಕಾನೂನು ಮಾಹಿತಿ ಇಲ್ಲಿದೆ:
►ಪ್ರತಿಭಟಿಸುವ ಹಕ್ಕು
ಭಾರತೀಯ ಸಂವಿಧಾನದ 19ನೇ ವಿಧಿಯಡಿ ನಾಗರಿಕರಿಗೆ ಪ್ರತಿಭಟನೆ ನಡೆಸುವ ಮೂಲಭೂತ ಹಕ್ಕನ್ನು ನೀಡಲಾಗಿದೆ. ವಿಧಿ 19(1)(ಎ) ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಿಧಿ 19(1)(ಬಿ) ಅಡಿಯಲ್ಲಿ ಯಾವುದೇ ಅಸ್ತ್ರಗಳಿಲ್ಲದೆ ಸಾರ್ವಜನಿಕವಾಗಿ ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಸಂವಿಧಾನ ಕಲ್ಪಿಸಿದೆ.
ಆದರೆ, ಈ ಹಕ್ಕು ಸಂಪೂರ್ಣವಾಗಿ ಬೇಷರತ್ತಾದುದಲ್ಲ. ಇದಕ್ಕೆ ಕೆಲವು ನಿರ್ಬಂಧಗಳು ಮತ್ತು ನಿಯಮಗಳಿವೆ. ನಾಗರಿಕರು ಅಧಿಕಾರಿಗಳಿಂದ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದು, ಸಾರ್ವಜನಿಕ ಶಾಂತಿಗೆ ಧಕ್ಕೆ ಬಾರದಂತೆ ಕಾನೂನುಬದ್ಧವಾಗಿ ಮಾತ್ರ ಪ್ರತಿಭಟನೆ ನಡೆಸಬಹುದು.
"ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಅತ್ಯಂತ ಪ್ರಮುಖವಾದುದು ಎಂಬುದನ್ನು ಸುಪ್ರೀಂ ಕೋರ್ಟ್ ಹಲವು ವರ್ಷಗಳಿಂದ ತನ್ನ ತೀರ್ಪುಗಳಲ್ಲಿ ಪುನರುಚ್ಚರಿಸಿದೆ. ಜೊತೆಗೆ, ಈ ಹಕ್ಕನ್ನು ಕಾನೂನುಬದ್ಧವಾಗಿ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳಲು ನಾಗರಿಕರು ಮತ್ತು ಸರ್ಕಾರಿ ಸಂಸ್ಥೆಗಳು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕೂಡ ಕೋರ್ಟ್ ನೀಡಿದೆ" ಎಂದು Nyaaya.org ಸಂಸ್ಥೆಯು ಡಿಸೆಂಬರ್ 2020ರಲ್ಲಿ ಪ್ರಕಟಿಸಿದ 'Guide to Lawful Protesting' ಎಂಬ ವರದಿಯಲ್ಲಿ ತಿಳಿಸಿದೆ. ಈ ಸಂಸ್ಥೆಯು ಕಾನೂನು ಮಾಹಿತಿಯನ್ನು ಮುಕ್ತವಾಗಿ ಒದಗಿಸುವ ಡಿಜಿಟಲ್ ವೇದಿಕೆಯಾಗಿದ್ದು, 'ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ' ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
►ಪೊಲೀಸ್ ಅನುಮತಿಗೆ ಬೇಕಾಗುವ ದಾಖಲೆಗಳು
ಸಂವಿಧಾನದ ಪ್ರಕಾರ "ಕಾನೂನು ಮತ್ತು ಸುವ್ಯವಸ್ಥೆ" ರಾಜ್ಯದ ವಿಷಯವಾಗಿದೆ. ಹೀಗಾಗಿ, ಪ್ರತಿಯೊಂದು ರಾಜ್ಯವು ತನ್ನ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ತನ್ನದೇ ಆದ ಕಾನೂನು ಹಾಗೂ ನಿಯಮಗಳನ್ನು ರೂಪಿಸಿಕೊಳ್ಳಬಹುದು. ಈ ಕಾರಣದಿಂದಾಗಿ, ಪ್ರತಿಭಟನೆಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸುವ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.
ಇಂತಹ ಯಾವುದೇ ಪ್ರತಿಭಟನೆ ಅಥವಾ ಸಾರ್ವಜನಿಕ ಸಭೆ ನಡೆಸಲು, ಆಯಾ ಪ್ರದೇಶದ ವ್ಯಾಪ್ತಿಗೆ ಒಳಪಡುವ ಪೊಲೀಸ್ ಠಾಣೆಯಿಂದ ಸಂಘಟಕರು ನಿರಾಕ್ಷೇಪಣಾ ಪತ್ರ (NOC) ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ಪ್ರತಿಭಟನೆಯು ಒಂದಕ್ಕಿಂತ ಹೆಚ್ಚು ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಒಳಪಡುತ್ತಿದ್ದರೆ, ಪೊಲೀಸ್ ಕಮಿಷನರ್ ಕಚೇರಿ ಅಥವಾ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಕಚೇರಿಯಿಂದ ಈ ಪತ್ರವನ್ನು ಪಡೆಯಬೇಕಾಗುತ್ತದೆ.
ಎನ್‌ಒಸಿ ಅಥವಾ ಪ್ರತಿಭಟನೆಯ ನಿರ್ದಿಷ್ಟ ಅನುಮತಿಗಾಗಿ ಸಲ್ಲಿಸುವ ಅರ್ಜಿಯಲ್ಲಿ ಸಂಘಟಕರ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆಯ ವಿವರಗಳಿರಬೇಕು. ಇದರೊಂದಿಗೆ ಪ್ರತಿಭಟನೆಯ ಕಾರಣಗಳು, ಅದರ ಅವಧಿ, ಅದರಲ್ಲಿ ಭಾಗವಹಿಸಲಿರುವ ಅಂದಾಜು ಜನರ ಸಂಖ್ಯೆ ಮತ್ತು ಪ್ರತಿಭಟನೆ ನಡೆಯುವ ಸ್ಥಳದ ವಿವರಗಳನ್ನು ನೀಡಬೇಕಾಗುತ್ತದೆ. ರ‍್ಯಾಲಿ ನಡೆಸುವುದಾಗಿದ್ದರೆ, ಸಂಚರಿಸುವ ಮಾರ್ಗದ ಸಂಪರ್ಕ ನಕ್ಷೆಯನ್ನು ನೀಡಬೇಕು. ಅಷ್ಟೇ ಅಲ್ಲದೆ, ಮೈಕ್, ಟೆಂಟ್‌ಗಳು ಮತ್ತು ಪೆಂಡಾಲ್‌ಗಳ ಬಳಕೆಯ ಬಗ್ಗೆಯೂ ಅರ್ಜಿಯಲ್ಲಿ ಉಲ್ಲೇಖಿಸುವುದು ಕಡ್ಡಾಯವಾಗಿದೆ.
ಒಂದು ವೇಳೆ ಸಂಬಂಧಪಟ್ಟ ಪೊಲೀಸ್ ಇಲಾಖೆಯಲ್ಲಿ ಯಾವುದೇ ನಿರ್ದಿಷ್ಟ ಅರ್ಜಿ ನಮೂನೆ ಇಲ್ಲದಿದ್ದರೆ, ಎನ್‌ಒಸಿಗಾಗಿ ಮೇಲಿನ ಎಲ್ಲಾ ವಿವರಗಳನ್ನು ಒಳಗೊಂಡ ಸರಳ ಪತ್ರದ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಪತ್ರವನ್ನು ಆಯಾ ಪೊಲೀಸ್ ಠಾಣೆಯ ಉನ್ನತ ಅಧಿಕಾರಿಗೆ ಅಥವಾ ಡಿಸಿಪಿ ಕಚೇರಿಗೆ ಉದ್ದೇಶಿಸಿ ಬರೆಯಬೇಕು. ಇದರೊಂದಿಗೆ ಅರ್ಜಿದಾರರ ಗುರುತಿನ ಚೀಟಿ, ವಿಳಾಸದ ಪುರಾವೆ, ಭಾವಚಿತ್ರ ಮತ್ತು ಅಗತ್ಯವಿರುವ ಇತರ ದಾಖಲೆಗಳನ್ನು ಲಗತ್ತಿಸಬೇಕು. ಪ್ರತಿಭಟನೆಯಲ್ಲಿ ಭಾಗವಹಿಸುವವರಿಗಾಗಿ ಜನಸಂದಣಿ ನಿಯಂತ್ರಣ, ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಇತರ ಸೌಕರ್ಯಗಳ ನಿರ್ವಹಣೆ ಹೇಗೆ ಮಾಡಲಾಗುತ್ತದೆ ಎಂಬ ಹೆಚ್ಚುವರಿ ವಿವರಗಳನ್ನು ಮತ್ತು ಅಲ್ಲಿ ಹಾಜರಿರಬೇಕಾದ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಕುರಿತಾದ ಮಾಹಿತಿಯನ್ನು ಪೊಲೀಸರು ಕೇಳಬಹುದು. ಕೆಲವು ಸಂದರ್ಭಗಳಲ್ಲಿ, ಪೊಲೀಸರು ಈ ವಿವರಗಳನ್ನು ಅಫಿಡವಿಟ್ ರೂಪದಲ್ಲಿ ಸಲ್ಲಿಸುವಂತೆ ಅರ್ಜಿದಾರರಿಗೆ ಅಥವಾ ಸಂಘಟಕರಿಗೆ ಸೂಚಿಸಬಹುದು.
►ಪೊಲೀಸರು ಅನುಮತಿಯನ್ನು ನಿರಾಕರಿಸಬಹುದೇ?
ಖಂಡಿತವಾಗಿಯೂ ನಿರಾಕರಿಸಬಹುದು. ಏಕೆಂದರೆ ಪ್ರತಿಭಟನೆ ನಡೆಸುವ ಹಕ್ಕು ಸಂಪೂರ್ಣವಾಗಿ ಬೇಷರತ್ತಾದುದಲ್ಲ ಮತ್ತು ಇದು ಸೂಕ್ತ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಪ್ರತಿಭಟನೆಗೆ ನಿಗದಿಪಡಿಸಿದ ಪ್ರದೇಶದ ನಿವಾಸಿಗಳ ಹಿತಾಸಕ್ತಿ ಮತ್ತು ಸಾರ್ವಜನಿಕ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳನ್ನು ಪೊಲೀಸರು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಪ್ರತಿಭಟನೆಯಿಂದ ಭಾರತದ ಸಾರ್ವಭೌಮತೆ, ಅಖಂಡತೆ, ದೇಶದ ಭದ್ರತೆ, ವಿದೇಶಗಳೊಂದಿಗಿನ ಸೌಹಾರ್ದಯುತ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಅಥವಾ ನೈತಿಕತೆಗೆ ಧಕ್ಕೆ ಉಂಟಾಗಬಹುದು ಎಂದು ಅಧಿಕಾರಿಗಳಿಗೆ ಅನಿಸಿದರೆ ಅನುಮತಿಯನ್ನು ನಿರಾಕರಿಸಬಹುದು. ನ್ಯಾಯಾಂಗ ನಿಂದನೆ, ಮಾನಹಾನಿ ಅಥವಾ ಅಪರಾಧಕ್ಕೆ ಪ್ರೇರೇಪಿಸುವ ಸಾಧ್ಯತೆಗಳು ಕಂಡುಬಂದರೂ ಇಂತಹ ವಿನಂತಿಯನ್ನು ತಿರಸ್ಕರಿಸಬಹುದು.
ಈಗಾಗಲೇ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಯ ಅನುಮತಿಯನ್ನು ಸಹ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ (ಹಿಂದಿನ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973ರ ಸೆಕ್ಷನ್ 144) ನಿರ್ದಿಷ್ಟ ಪ್ರದೇಶದಲ್ಲಿ ಕರ್ಫ್ಯೂ ಹೇರುವ ಮೂಲಕ ರದ್ದುಗೊಳಿಸಬಹುದಾಗಿದೆ.
ಅರ್ಜಿಯನ್ನು ತಿರಸ್ಕರಿಸಿದಾಗ ಅಥವಾ ನೀಡಿದ್ದ ಅನುಮತಿಯನ್ನು ಹಿಂಪಡೆದಾಗ, ಪೊಲೀಸರು ಅಥವಾ ಜಿಲ್ಲಾಧಿಕಾರಿಗಳಂತಹ ರಾಜ್ಯ ಅಧಿಕಾರಿಗಳು ಅದಕ್ಕೆ ನಿರ್ದಿಷ್ಟ ಕಾರಣಗಳನ್ನು ನೀಡಬೇಕಾಗುತ್ತದೆ. ಪ್ರತಿಭಟನೆಯಿಂದ ಎದುರಾಗಬಹುದಾದ ನಿಖರವಾದ ಅಪಾಯದ ಸ್ವರೂಪ ಹಾಗೂ ನಡೆಯುತ್ತಿರುವ ಪ್ರತಿಭಟನೆಯ ಮೇಲೆ ನಿಷೇಧಾಜ್ಞೆ ಹೇರಲು ಕಾರಣಗಳೇನು ಎಂಬುದನ್ನು ಅವರು ಸ್ಪಷ್ಟಪಡಿಸಬೇಕಾಗುತ್ತದೆ.
ಕೃಪೆ: indianexpress.com