EPFO ಸದಸ್ಯರಿಗೆ ಸಿಗಲಿದೆ ನಿವೃತ್ತಿಯ ನಂತರ ಪ್ರತಿ ತಿಂಗಳು PF ಹಣ ಪಡೆಯುವ ಆಯ್ಕೆ
ಸಾಂದರ್ಭಿಕ ಚಿತ್ರ (Photo: India Today)
ನಿವೃತ್ತಿಯ ಸಮಯದಲ್ಲಿ ಪೂರ್ಣ ಪ್ರಮಾಣದ ಪಿಎಫ್ (PF) ಹಣವನ್ನು ಒಂದೇ ಬಾರಿ ಪಡೆಯುವ ಬದಲು, ಪ್ರತಿ ತಿಂಗಳು ಹಂತ-ಹಂತವಾಗಿ ಹಣ ಪಡೆಯುವ (Systematic Withdrawal Plan - SWP) ವ್ಯವಸ್ಥೆಯನ್ನು ಜಾರಿಗೆ ತರಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮುಂದಾಗಿದೆ.
ಗುರುವಾರ ನಡೆಯಲಿರುವ ಇಪಿಎಫ್ಒ ಕೇಂದ್ರೀಯ ಧರ್ಮದರ್ಶಿ ಮಂಡಳಿ (CBT) ಸಭೆಯಲ್ಲಿ ಈ ಪ್ರಸ್ತಾವನೆಯ ಬಗ್ಗೆ ಚರ್ಚೆ ನಡೆಯಲಿದೆ. ಈ ಹೊಸ ಯೋಜನೆಯ ಪ್ರಕಾರ, ನಿವೃತ್ತರಾಗುವ ಸದಸ್ಯರು ತಮ್ಮ ಉಳಿತಾಯದ ಹಣವನ್ನು ಇಪಿಎಫ್ ಖಾತೆಯಲ್ಲೇ ಉಳಿಸಿಕೊಳ್ಳಬಹುದು. ಇದರಿಂದ ಉಳಿದ ಹಣಕ್ಕೆ ಇಪಿಎಫ್ ಬಡ್ಡಿ ಸಿಗುವುದು ಮುಂದುವರಿಯುತ್ತದೆ ಮತ್ತು ಉಳಿತಾಯದ ಮೇಲಿನ ಮಾಲೀಕತ್ವವನ್ನು ಕಳೆದುಕೊಳ್ಳದೆಯೇ ನಿವೃತ್ತಿಯ ನಂತರ ನಿಯಮಿತ ಆದಾಯ ಪಡೆಯಬಹುದು ಎಂದು ಅಧಿಕಾರಿಗಳು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಸದ್ಯದ ನಿಯಮದಂತೆ, ಇಪಿಎಫ್ಒ ಸದಸ್ಯರು 58ನೇ ವಯಸ್ಸಿನಲ್ಲಿ ನಿವೃತ್ತರಾದಾಗ ತಮ್ಮ ಖಾತೆಯಲ್ಲಿರುವ ಶೇ. 100ರಷ್ಟು ಹಣವನ್ನು ಒಂದೇ ಬಾರಿ ಹಿಂಪಡೆಯಬಹುದು. ಜೊತೆಗೆ ಕನಿಷ್ಠ 10 ವರ್ಷಗಳ ಸೇವೆ ಪೂರೈಸಿದ್ದರೆ ಮಾಸಿಕ ಪಿಂಚಣಿ (EPS) ಪಡೆಯಲು ಅರ್ಹರಾಗಿರುತ್ತಾರೆ.
ಹೊಸದಾಗಿ ಪ್ರಸ್ತಾಪಿಸಲಾಗಿರುವ ಎಸ್ಡಬ್ಲ್ಯೂಪಿ (SWP) ಯೋಜನೆಯಡಿ ಹಲವು ಆಯ್ಕೆಗಳನ್ನು ನೀಡಲು ಇಪಿಎಫ್ಒ ಉದ್ದೇಶಿಸಿದೆ:
ಪೂರ್ಣ ಹಣವನ್ನು ಹಂತ-ಹಂತವಾಗಿ (ಮಾಸಿಕವಾಗಿ) ಪಡೆಯುವುದು.
ಸ್ವಲ್ಪ ಭಾಗವನ್ನು ಒಂದೇ ಬಾರಿ ಪಡೆದು, ಉಳಿದ ಹಣವನ್ನು ಹಂತ-ಹಂತವಾಗಿ ಪಡೆಯುವುದು.
ಅಸಲು ಹಣವನ್ನು ಹಾಗೆಯೇ ಉಳಿಸಿ, ಕೇವಲ ಬಡ್ಡಿಯನ್ನು ಮಾತ್ರ ಪಡೆಯುವುದು.
ಇದೇ ವೇಳೆ, ಗಿಗ್ (Gig) ಕಾರ್ಮಿಕರು, ಆನ್ಲೈನ್ ಪ್ಲಾಟ್ಫಾರ್ಮ್ ಕಾರ್ಮಿಕರು ಮತ್ತು ಮನೆಗೆಲಸದವರನ್ನು ಇಪಿಎಫ್ ವ್ಯಾಪ್ತಿಗೆ ತರಲು 'ಮೂರನೇ ವ್ಯಕ್ತಿಯ ಸಣ್ಣ ಕೊಡುಗೆ' (Third-party micro contributions) ವ್ಯವಸ್ಥೆಯನ್ನು ಪರಿಚಯಿಸಲು ಇಪಿಎಫ್ಒ ಪ್ರಸ್ತಾಪಿಸಿದೆ. ಇದರಡಿ ಗ್ರಾಹಕರು ನೀಡುವ ಟಿಪ್ಸ್ , ಉಡುಗೊರೆ ಅಥವಾ ಇನ್ನಿತರ ಸಣ್ಣ ಮೊತ್ತದ ಹಣವನ್ನು ನೇರವಾಗಿ ಕಾರ್ಮಿಕರ ಇಪಿಎಫ್ ಖಾತೆಗೆ ಜಮಾ ಮಾಡಲು ಅವಕಾಶ ನೀಡಲಾಗುವುದು.
ಹಣ ಹಿಂಪಡೆಯುವ ಅವಧಿ ಮತ್ತು ನಾಮಿನಿ ಹಕ್ಕುಗಳು:
ಇಪಿಎಫ್ಒ ಆಂತರಿಕ ಅಂದಾಜಿನ ಪ್ರಕಾರ, ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕರೆ 55 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 5 ಲಕ್ಷ ರೂಪಾಯಿಗಿಂತ ಹೆಚ್ಚು ಪಿಎಫ್ ಉಳಿತಾಯ ಹೊಂದಿರುವ ಸುಮಾರು 6.32 ಲಕ್ಷ ಸದಸ್ಯರಿಗೆ ಇದರಿಂದ ಲಾಭವಾಗಲಿದೆ.
"ಈ ಪ್ರಸ್ತಾವನೆಯ ಪ್ರಕಾರ, ನಿಗದಿತ ಅವಧಿಯವರೆಗೆ ಹಣವನ್ನು ಹಂತ-ಹಂತವಾಗಿ ಹಿಂಪಡೆಯಬಹುದು. ಈ ಅವಧಿಯಲ್ಲಿ ಖಾತೆಯಲ್ಲಿ ಉಳಿದಿರುವ ಹಣ ಇಪಿಎಫ್ ನಿಧಿಯಲ್ಲೇ ಹೂಡಿಕೆಯಾಗಿರುತ್ತದೆ ಮತ್ತು ಆ ಮೊತ್ತಕ್ಕೆ ಬಡ್ಡಿ ಸಿಗುತ್ತಲೇ ಇರುತ್ತದೆ. ಜೊತೆಗೆ, ನಿವೃತ್ತರು ತಮಗೆ ಬೇಕಾದಾಗ ಈ ಎಸ್ಡಬ್ಲ್ಯೂಪಿ ಯೋಜನೆಯನ್ನು ನಿಲ್ಲಿಸಿ, ಉಳಿದ ಪೂರ್ತಿ ಹಣವನ್ನು ಒಂದೇ ಬಾರಿ ಹಿಂಪಡೆಯಲು ಸಹ ಅವಕಾಶವಿರುತ್ತದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್ಡಬ್ಲ್ಯೂಪಿ ಅವಧಿಯಲ್ಲಿ ಸದಸ್ಯರು ಮೃತಪಟ್ಟರೆ, ಅವರ ಸಂಗಾತಿ ಅಥವಾ ನಾಮಿನಿಯು ಅದೇ ನಿಯಮಗಳ ಅಡಿಯಲ್ಲಿ ಉಳಿದ ಹಣವನ್ನು ಪಡೆಯುವುದನ್ನು ಮುಂದುವರಿಸಲು ಅವಕಾಶ ನೀಡುವ ನಿಯಮಗಳನ್ನು ಸೇರಿಸಲು ಇಪಿಎಫ್ಒ ಅಧಿಕಾರಿಗಳು ಯೋಜಿಸಿದ್ದಾರೆ.
ಈ ಹೊಸ ಯೋಜನೆಯಡಿ ಸದಸ್ಯರು ತಮ್ಮ ಕಂಪನಿಯ ವೇತನ ವ್ಯವಸ್ಥೆಯ ಹೊರತಾಗಿಯೂ, ಇಪಿಎಫ್ಒ ನಿಗದಿಪಡಿಸಿದ ಡಿಜಿಟಲ್ ಮಾರ್ಗಗಳ ಮೂಲಕ ನೇರವಾಗಿ ತಮ್ಮ ಇಪಿಎಫ್ ಖಾತೆಗೆ ಸ್ವಯಂಪ್ರೇರಿತವಾಗಿ ಹಣ ಜಮಾ ಮಾಡಬಹುದು. "ಇಂತಹ ಉಳಿತಾಯಕ್ಕೆ ಉದ್ಯೋಗದಾತರ (ಕಂಪನಿಯ) ಪಾಲಿನ ಹಣದ ಅಗತ್ಯವಿರುವುದಿಲ್ಲ. ಆದಾಯ ತೆರಿಗೆ ಕಾಯ್ದೆ ಮತ್ತು ಸಿಬಿಟಿ (CBT) ನಿಗದಿಪಡಿಸಿದ ಮಿತಿಗೆ ಒಳಪಟ್ಟು ಈ ಹಣ ನೇರವಾಗಿ ಸದಸ್ಯರ ಖಾತೆಗೆ ಜಮೆಯಾಗಲಿದೆ," ಎಂದು ಅಧಿಕಾರಿಯೊಬ್ಬರು ವಿವರಿಸಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.
ಅಸಂಘಟಿತ ಮತ್ತು ಗಿಗ್ ಕಾರ್ಮಿಕರಿಗೆ ಸೌಲಭ್ಯ:
ಗಿಗ್ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಉದ್ಯೋಗಿಗಳಿಗೆ ನೆರವಾಗಲು, 'ಮೂರನೇ ವ್ಯಕ್ತಿಯ ಸಣ್ಣ ಕೊಡುಗೆ' ವ್ಯವಸ್ಥೆಯನ್ನು ಪರಿಚಯಿಸಲು ಇಪಿಎಫ್ಒ ಪ್ರಸ್ತಾಪಿಸಿದೆ. ಇದರಡಿ ಗ್ರಾಹಕರು ನೀಡುವ ಟಿಪ್ಸ್ , ಉಡುಗೊರೆ, ಗ್ರಾಚ್ಯುಟಿ ಮತ್ತು ಇಂತಹ ಇತರ ಸಣ್ಣ ಮೊತ್ತದ ಹಣವನ್ನು ಯುಎಎನ್ (UAN) ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ನೇರವಾಗಿ ಇಪಿಎಫ್ ಖಾತೆಗೆ ಜಮಾ ಮಾಡಲು ಅವಕಾಶ ನೀಡಲಾಗುವುದು. "ಇದರಿಂದ ದಿನನಿತ್ಯದ ಸಣ್ಣಪುಟ್ಟ ಆದಾಯವನ್ನು ದೀರ್ಘಕಾಲದ ನಿವೃತ್ತಿ ಉಳಿತಾಯವಾಗಿ ಬದಲಾಯಿಸಲು ಸಾಧ್ಯವಾಗುತ್ತದೆ" ಎಂದು ಅಧಿಕಾರಿ ಹೇಳಿದ್ದಾರೆ.
ಗಿಗ್ ಕಾರ್ಮಿಕರು, ಆನ್ಲೈನ್ ಪ್ಲಾಟ್ಫಾರ್ಮ್ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮನೆಗೆಲಸದವರು, ಬೀದಿ ಬದಿ ವ್ಯಾಪಾರಿಗಳು, ಮನೆಯಿಂದಲೇ ಕೆಲಸ ಮಾಡುವವರು ಮತ್ತು ಇತರ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಮತ್ತು ನಿವೃತ್ತಿ ಉಳಿತಾಯದ ಸೌಲಭ್ಯ ಕಲ್ಪಿಸಲು ಈ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆದಿದೆ.
ಆದರೆ, ಸದ್ಯಕ್ಕೆ ಈ ಎಸ್ಡಬ್ಲ್ಯೂಪಿ ಯೋಜನೆಯು ವಿನಾಯಿತಿ ಪಡೆದ ಟ್ರಸ್ಟ್ಗಳ ಸದಸ್ಯರಿಗೆ ಅನ್ವಯವಾಗುವುದಿಲ್ಲ. ಇದು ಕೇವಲ ಇಪಿಎಫ್ಒ ನೇರ ನಿಧಿಯ ಸದಸ್ಯರಿಗೆ ಮಾತ್ರ ಸೀಮಿತವಾಗಿರುತ್ತದೆ. ವಿನಾಯಿತಿ ಪಡೆದ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಪಿಎಫ್ ಹಣವನ್ನು ತಮ್ಮದೇ ಆದ ಟ್ರಸ್ಟ್ಗಳಲ್ಲಿ ನಿರ್ವಹಿಸುತ್ತವೆ. ಅವು ಇಪಿಎಫ್ಒ ಘೋಷಿಸುವಷ್ಟೇ ಬಡ್ಡಿಯನ್ನು ನೀಡಬೇಕಾಗುತ್ತದೆ ಮತ್ತು ಕೇವಲ ಪಿಂಚಣಿ ನಿಧಿಯ ಪಾಲನ್ನು ಮಾತ್ರ ಇಪಿಎಫ್ಒಗೆ ಜಮಾ ಮಾಡುತ್ತವೆ.
ಈ ಯೋಜನೆಯಲ್ಲಿ ಸದಸ್ಯರು ತಮ್ಮದೇ ಉಳಿತಾಯದ ಹಣವನ್ನು ಹಿಂಪಡೆಯುವುದರಿಂದ, ಕೇಂದ್ರ ಸರ್ಕಾರಕ್ಕಾಗಲಿ, ಇಪಿಎಫ್ಒಗಾಗಲಿ ಅಥವಾ ಉದ್ಯೋಗಿಗಳ ಪಿಂಚಣಿ ನಿಧಿಗಾಗಲಿ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೃಪೆ: indianexpress.com