ನಕಲಿ ವಿವಿಗಳ ವಿರುದ್ಧ ಯುಜಿಸಿ ಎಚ್ಚರಿಕೆ; ಪ್ರವೇಶಕ್ಕೆ ಮುನ್ನ ಏನು ಪರಿಶೀಲಿಸಬೇಕು?
ಸಾಂದರ್ಭಿಕ ಚಿತ್ರ (Photo:
ಹೊಸದಿಲ್ಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ಅವುಗಳ ಮಾನ್ಯತೆ ಮತ್ತು ಕಾನೂನು ಸ್ಥಾನಮಾನವನ್ನು ಪರಿಶೀಲಿಸುವಂತೆ ಸಾರ್ವಜನಿಕ ಸಲಹೆಯನ್ನು ಹೊರಡಿಸಿದೆ. ಯಾವುದೇ ಶೈಕ್ಷಣಿಕ ಅಥವಾ ಆರ್ಥಿಕ ಬದ್ಧತೆಗೆ ಮುನ್ನ ನಕಲಿ ವಿಶ್ವವಿದ್ಯಾಲಯಗಳ ಅಧಿಕೃತ ಪಟ್ಟಿಯನ್ನು ಪರಿಶೀಲಿಸುವಂತೆ ಮತ್ತು ಅಗತ್ಯ ಅನುಮೋದನೆಗಳನ್ನು ಖಚಿತಪಡಿಸಿಕೊಳ್ಳುವಂತೆಯೂ ಆಯೋಗವು ಸೂಚಿಸಿದೆ ಎಂದು Times of India ವರದಿ ಮಾಡಿದೆ.
ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡುವಾಗ ವಿದ್ಯಾರ್ಥಿಗಳು, ಪೋಷಕರು, ಪಾಲಕರು ಮತ್ತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಸಂಸ್ಥೆಯ ಮಾನ್ಯತೆ ಅಥವಾ ಪದವಿ ನೀಡುವ ಅಧಿಕಾರವನ್ನು ಪರಿಶೀಲಿಸಲು ಕೇವಲ ಜಾಹೀರಾತುಗಳು, ವೆಬ್ಸೈಟ್ಗಳು, ಕರಪತ್ರಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ನೆಚ್ಚಿಕೊಳ್ಳುವುದರ ವಿರುದ್ಧ ಯುಜಿಸಿ ಎಚ್ಚರಿಕೆ ನೀಡಿದೆ.
ಯುಜಿಸಿ ದೇಶದ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಕಾಲಕಾಲಕ್ಕೆ ಪ್ರಕಟಿಸುತ್ತದೆ. ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ ಇತ್ತೀಚಿನ ಪಟ್ಟಿ ಹಾಗೂ ವರ್ಗವಾರು ಪಟ್ಟಿಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವ ಮುನ್ನ ಸಂಸ್ಥೆಯ ವಿವರ ಖಚಿತಪಡಿಸಿಕೊಳ್ಳಬಹುದು.
ಪ್ರವೇಶಕ್ಕೆ ಮುನ್ನ ಏನು ಪರಿಶೀಲಿಸಬೇಕು?
1.ಕಾನೂನುಬದ್ಧ ಸ್ಥಾಪನೆ ಅಥವಾ ಮಾನ್ಯತೆ: ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಸಂಸ್ಥೆಯು ಕಾನೂನುಬದ್ಧವಾಗಿ ಸ್ಥಾಪನೆಯಾಗಿದೆಯೇ ಅಥವಾ ಮಾನ್ಯತೆ ಪಡೆದಿದೆಯೇ ಎನ್ನುವುದನ್ನು ವಿದ್ಯಾರ್ಥಿಗಳು ಪರಿಶೀಲಿಸಬೇಕು.
2.ಕೋರ್ಸ್ಗಳನ್ನು ನೀಡುವ ಮತ್ತು ಪದವಿ ಪ್ರದಾನ ಮಾಡುವ ಅಧಿಕಾರ: ಯುಜಿಸಿ ಕಾಯ್ದೆ,1956 ಮತ್ತು ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ನಿರ್ದಿಷ್ಟ ಕೋರ್ಸ್ ಅನ್ನು ಒದಗಿಸಲು ಮತ್ತು ಸಂಬಂಧಿತ ಪದವಿ ಅಥವಾ ಅರ್ಹತೆಯನ್ನು ನೀಡಲು ಸಂಸ್ಥೆಗೆ ಕಾನೂನುಬದ್ಧ ಅನುಮತಿ ಇದೆಯೇ ಎನ್ನುವುದನ್ನು ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬೇಕು.
3.ಅಗತ್ಯ ಅನುಮೋದನೆಗಳು ಮತ್ತು ಅನುಮತಿಗಳು: ಯುಜಿಸಿ ಮತ್ತು ಇತರ ಸಂಬಂಧಿತ ನಿಯಂತ್ರಕ ಪ್ರಾಧಿಕಾರಗಳಿಂದ ಸಂಸ್ಥೆಯು ಅಗತ್ಯ ಮಾನ್ಯತೆ, ಅನುಮೋದನೆ ಅಥವಾ ಅನುಮತಿಗಳನ್ನು ಪಡೆದಿದೆಯೇ ಎನ್ನುವುದನ್ನು ವಿದ್ಯಾರ್ಥಿಗಳು ಪರಿಶೀಲಿಸಬೇಕು.
4.ಕೋರ್ಸ್ ಮತ್ತು ಅಧ್ಯಯನದ ವಿಧಾನ: ಅನ್ವಯವಾಗುವ ನಿಯಮಗಳ ಅಡಿಯಲ್ಲಿ ಕೋರ್ಸ್ ಮತ್ತು ಅದರ ಬೋಧನಾ ವಿಧಾನಕ್ಕೆ ಅನುಮತಿ ಇದೆಯೇ ಎನ್ನುವುದನ್ನೂ ಅಭ್ಯರ್ಥಿಗಳು ಪರಿಶೀಲಿಸಬೇಕು. ಇದರಲ್ಲಿ ದೂರ ಶಿಕ್ಷಣ, ಆನ್ಲೈನ್ ಕೋರ್ಸ್ಗಳು, ಆಫ್-ಕ್ಯಾಂಪಸ್ ಕೇಂದ್ರಗಳು ಮತ್ತು ಅಧ್ಯಯನ ಕೇಂದ್ರಗಳು ಸೇರಿವೆ. ಅರ್ಜಿ ಸಲ್ಲಿಸುವ ಅಥವಾ ಯಾವುದೇ ಶುಲ್ಕ ಪಾವತಿಸುವ ಮುನ್ನ ವಿದ್ಯಾರ್ಥಿಗಳು ಅಧಿಕೃತ ಯುಜಿಸಿ ವೆಬ್ಸೈಟ್ ಪರಿಶೀಲಿಸಿ ತಮ್ಮ ಆಯ್ಕೆಯ ಸಂಸ್ಥೆಯ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಲಾಗಿದೆ.