Apple ನಲ್ಲೂ ಉದ್ಯೋಗ ಕಡಿತ; 200ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್ ಪಾಸ್!

Update: 2026-08-23 17:53 IST

Photo Credit ; PTI

ಸಿರಿ ಎಐ ಮತ್ತು ವಿಷನ್ ಪ್ರೊ ವಿಭಾಗದಲ್ಲಿ ಭಾರೀ ಬದಲಾವಣೆ ತರುವ ಉದ್ದೇಶದಿಂದ ನೂರಾರು ಉದ್ಯೋಗಿಗಳನ್ನು ವಜಾ ಮಾಡಲು ಆ್ಯಪಲ್ ನಿರ್ಧರಿಸಿದೆ.

ಐಫೋನ್ ತಯಾರಕ ಕಂಪನಿಯಾದ ಆ್ಯಪಲ್ ತನ್ನ ಪ್ರಮುಖ ಸಿರಿ ವಾಯ್ಸ್ ಅಸಿಸ್ಟಂಟ್ ಮತ್ತು ವಿಷನ್ ಪ್ರೊ ಹೆಡ್ಸೆಟ್ ಅಭಿವೃದ್ಧಿಪಡಿಸುತ್ತಿರುವ ತಂಡಗಳಿಂದ ಕನಿಷ್ಠ 200 ಸಿಬ್ಬಂದಿಗಳನ್ನು ವಜಾಗೊಳಿಸುತ್ತಿದೆ. ಹೊಸ ಸಾಧನಗಳು ಮತ್ತು AI ಮೇಲೆ ಗಮನ ಕೇಂದ್ರೀಕರಿಸುವ ಆ್ಯಪಲ್ ಕಂಪನಿಯ ಪ್ರಯತ್ನಗಳ ಭಾಗವಾಗಿ ಈ ಉದ್ಯೋಗ ಕಡಿತ ಮಾಡಲಾಗುತ್ತಿದೆ. ʼಬ್ಲೂಮ್ಬರ್ಗ್ʼನ ವರದಿಯ ಪ್ರಕಾರ 200 ಸಿಬ್ಬಂದಿಗಳಲ್ಲಿ ವಿಷನ್ ಪ್ರೊ ವಿಭಾಗದಿಂದ 100 ಕ್ಕೂ ಹೆಚ್ಚು ಉದ್ಯೋಗಗಳು ಮತ್ತು ಸಿರಿ ತಂಡ ಮತ್ತು ಇತರ ಇಂಟರ್ನಲ್ ಯುನಿಟ್ಗಳಿಂದ ಇನ್ನೂ 100 ಹುದ್ದೆಗಳನ್ನು ತೆಗೆದು ಹಾಕಲಾಗುವುದು.

ಮಿಕ್ಸ್ಡ್ ರಿಯಾಲಿಟಿ ಹೆಡ್ಸೆಟ್ಗಾಗಿ ಗೇಮಿಂಗ್ ಫೀಚರ್ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದ ಸಂಪೂರ್ಣ ವಿಷನ್ ಪ್ರೊ ತಂಡವನ್ನು ಆ್ಯಪಲ್ ಕಂಪನಿಯು ಮುಚ್ಚುತ್ತಿದೆ. ವಿಷನ್ ಪ್ರೊ ಬಳಕೆದಾರರಿಗೆ ಇಮ್ಮರ್ಸಿವ್ ವೀಡಿಯೋ ಕಂಟೆಂಟ್ ನಿರ್ಮಿಸುವ ಜವಾಬ್ದಾರಿ ಹೊತ್ತ ಇಂಟರ್ನಲ್ ಯುನಿಟ್ ಗಾತ್ರವನ್ನೂ ಕಂಪನಿ ಕಿರಿದಾಗಿಸುತ್ತಿದೆ.

ಆ್ಯಪಲ್ ಕಂಪನಿಯ ಸಾಧನಗಳಲ್ಲಿ ಕೆಲವು AI ಫೀಚರ್ಗಳನ್ನು ತರಲು ಜವಾಬ್ದಾರಿ ಹೊತ್ತ ಸಾಫ್ಟ್ವೇರ್ ಎಂಜಿನಿಯರಿಂಗ್ ಆಪ್ಟಿಮೈಸೇಶನ್ ತಂಡವಾಗಿರುವ ಇಂಟೆಲಿಜೆಂಟ್ ಸಿಸ್ಟಮ್ಸ್ ಎಕ್ಸ್ಪೀರಿಯನ್ಸ್ ಮೇಲೂ ವಜಾದಿಂದ ಪರಿಣಾಮ ಬೀರಲಿದೆ. “ನಮ್ಮ ಬಳಕೆದಾರರಿಗೆ ಉತ್ತಮ ಅನುಭವಗಳ್ನು ನೀಡಲು ಉದ್ಯಮವನ್ನು ವಿಸ್ತರಿಸಲು ಕೆಲವು ತಂಡಗಳ ಮರುಜೋಡಣೆ ಮಾಡಲಾಗುತ್ತಿದೆ” ಎಂದು ಆ್ಯಪಲ್ ಹೇಳಿರುವುದಾಗಿ ವರದಿಯಾಗಿದೆ.

“ಈ ಬದಲಾವಣೆಯ ಭಾಗವಾಗಿ ಹೊಸ ಹುದ್ದೆಗಳನ್ನು ನಾವು ರಚಿಸುತ್ತೇವೆ. ಆದರೆ ಸೀಮಿತ ಪ್ರಮಾಣದಲ್ಲಿ ಅಸ್ತಿತ್ವದಲ್ಲಿರುವ ಹುದ್ದೆಗಳ ಮೇಲೂ ಪರಿಣಾಮವಾಗಲಿದೆ. ಆ ತಂಡಗಳ ಸದಸ್ಯರ ಕೊಡುಗೆಗಾಗಿ ನಾವು ಕೃತಜ್ಞರಾಗಿರುತ್ತೇವೆ ಮತ್ತು ಆ್ಯಪಲ್ ನಲ್ಲಿ ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಒಳಗೊಂಡಂತೆ ಪರಿವರ್ತನೆಯ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡಲು ಬದ್ಧರಾಗಿದ್ದೇವೆ” ಎಂದು ಕಂಪನಿ ಹೇಳಿದೆ.

ಆ್ಯಪಲ್ ವಜಾಗೊಳಿಸುವಿಕೆ ಹಿಂದೆ AI ಇದೆಯೆ?

ಈ ವರ್ಷದ ಆರಂಭದಿಂದಲೂ ಮೆಟಾ, ಮೈಕ್ರೋಸಾಫ್ಟ್, ಅಮೆಝಾನ್ ಮತ್ತು ಕ್ಲೌಡ್ಫ್ಲೇರ್ನಂತಹ ಟೆಕ್ ದೈತ್ಯರು ಬೃಹತ್ ವಜಾಗೊಳಿಸುವಿಕೆಯ ಜೊತೆಗೆ ಹೆಚ್ಚಿನ ಆದಾಯವನ್ನು ವರದಿ ಮಾಡಿದ್ದಾರೆ. ಈ ವಜಾಗೊಳಿಸುವ ಟ್ರೆಂಡ್ನಲ್ಲಿ AI ಪಾತ್ರ ಹೆಚ್ಚಾಗಿದೆ. ವರದಿಗಳ ಪ್ರಕಾರ 2026ರ ಆರಂಭದಿಂದ ಅಮೆರಿಕದ ತಂತ್ರಜ್ಞಾನ ಕಂಪನಿಗಳು ಸುಮಾರು 1,40,000 ಉದ್ಯೋಗಗಳನ್ನು ಕಡಿತಗೊಳಿಸಿವೆ. ಈ ಕಂಪನಿಗಳು ಉದ್ಯೋಗ ಕಡಿತಕ್ಕೆ AI ಪ್ರಮುಖ ಅಂಶವೆಂದು ಉಲ್ಲೇಖಿಸಿವೆ.

ಆದರೆ ಆ್ಯಪಲ್ ನ ಇತ್ತೀಚೆಗಿನ ಸುತ್ತಿನ ವಜಾಗೊಳಿಸುವಿಕೆಯು AI ಚಾಲಿತ ಅಟೋಮೇಶನ್ ಅಥವಾ AI ಡೇಟಾ ಸೆಂಟರ್ಗಳ ನಿರ್ಮಾಣದೊಂದಿಗೆ ಸಂಬಂಧವನ್ನು ಹೊಂದಿಲ್ಲ. ಸಿರಿ ತಂಡದ ಪುನರ್ರಚನೆಯು ಆ್ಯಪಲ್ ನ ಟೆಕ್ನಿಕಲ್ ಆರ್ಕಿಟೆಕ್ಷರ್ ಅನ್ನು ಪರಿಷ್ಕರಿಸುವ ಮೂಲಕ ಅದರ ಅಸಿಸ್ಟಂಟ್ನ AI ಆವೃತ್ತಿಯನ್ನು ತರುವ ಮಹಾತ್ವಾಕಾಂಕ್ಷೆಗಾಗಿ ಕೆಲಸ ಮಾಡುತ್ತಿದೆ. ಅಪ್ಡೇಟ್ ಆಗಿರುವ ಸಿರಿಯನ್ನು ತರುವ ಉದ್ದೇಶದಲ್ಲಿ ಕಂಪನಿಯು ಸಣ್ಣ ಹುದ್ದೆಗಳನ್ನು ತೆಗೆದು ಹಾಕಿ ಸಂಪನ್ಮೂಲಗಳನ್ನು ಮರುಜೋಡಿಸಿಕೊಳ್ಳುತ್ತಿದೆ.

ಬದಲಾವಣೆಗೆ ಕಾರಣವಾದ ವಿಷನ್ ಪ್ರೊ

ಈ ನಡುವೆ ಇಂಟೆಲಿಜೆಂಟ್ ಸಿಸ್ಟಮ್ಸ್ ಎಕ್ಸ್ಪೀರಿಯನ್ಸ್ ತಂಡವು ಆ್ಯಪಲ್ನ ಅಪ್ಲಿಕೇಶನ್ಗಳು ಮತ್ತು AI ಕಾರ್ಯಗಳನ್ನು ಸಂಯೋಜಿಸುವತ್ತ ಗಮನಹರಿಸಲು ಕೆಲವು ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತಿದೆ. ಮೂಲಭೂತವಾಗಿ ಮರುಆದ್ಯತೆಯ ಕ್ರಮವಾಗಿದೆ. ಹಳೆಯ ಕ್ಷೇತ್ರಗಳಲ್ಲಿನ ಕಡಿಮೆ ಆದ್ಯತೆಯ ಹುದ್ದೆಗಳನ್ನು ತೆಗೆದು AI ನಾವೀನ್ಯತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆ್ಯಪಲ್ ಗ್ರಾಹಕರು ವಿಷನ್ ಪ್ರೊವನ್ನು ಹೇಗೆ ಬಳಸುತ್ತಿದ್ದಾರೆ ಮತ್ತು ಇತರ ಭವಿಷ್ಯದ ಉತ್ಪನ್ನಗಳ ಕಡೆಗೆ ಹೆಚ್ಚಿನ ಸಂಪನ್ಮೂಲವನ್ನು ನಿರ್ದೇಶಿಸುವ ಉದ್ದೇಶದಿಂದ ವಿಷನ್ ಪ್ರೊ ಕಡಿತಗಳನ್ನು ಮಾಡಲಾಗಿದೆ.

ವಿಷನ್ ಪ್ರೊ ಮತ್ತು visionOS ಆಪರೇಟಿಂಗ್ ಸಿಸ್ಟಂ ತೆಗೆದು ಹಾಕಲಾಗುತ್ತಿಲ್ಲ. ಬದಲಾಗಿ 2024ರಲ್ಲಿ ಈ ಮಿಕ್ಸ್ಡ್ ರಿಯಾಲಿಟಿ ಹೆಡ್ಸೆಟ್ ಅನ್ನು ಅತ್ಯುತ್ತಮ ಉತ್ಪನ್ನವಾಗಿ ನೀಡಲಾಗಿತ್ತು. ಆದರೆ ಸದ್ಯ 3,699 ಡಾಲರ್ಗೆ ಮಾರಾಟವಾಗುತ್ತಿರುವುದು ಬಹಳ ಕಠಿಣ ಮಾರ್ಕೆಟಿಂಗ್ಗೆ ಕಾರಣವಾಗಿದೆ. ಈ ಹೆಡ್ಸೆಟ್ನಲ್ಲಿ ಗೇಮಿಂಗ್ ಪರಿಚಯಿಸಲೂ ಆ್ಯಪಲ್ ಪ್ರಯತ್ನಿಸಿದೆ. ಹಾಗಿದ್ದರೂ ಮಾರ್ಕೆಟಿಂಗ್ ಕಷ್ಟವಾಗಿದೆ.

ಮತ್ತೊಂದೆಡೆ ಇಮ್ಮರ್ಸಿವ್ ವೀಡಿಯೋ ಬಿಡುಗಡೆಯಾದಾಗಿನಿಂದ ವಿಷನ್ ಪ್ರೊ ಮಾರಾಟಕ್ಕೆ ಪ್ರಮುಖ ಅಂಶವಾಗಿದೆ. ಆದರೆ, ಅಂತಹ 3ಡಿ ವೀಡಿಯೋಗಳನ್ನು ಉತ್ಪಾದಿಸುವುದರಿಂದ ಉಂಟಾಗುವ ವೆಚ್ಚಗಳು ವ್ಯವಹಾರವನ್ನು ತಗ್ಗಿಸಿವೆ ಎನ್ನಲಾಗುತ್ತಿದೆ. ಹೀಗಾಗಿ ವೀಡಿಯೋಗಳಿಗೆ ಕಂಟೆಂಟ್ ತಯಾರಿಸುವುದನ್ನು ಹೊರಗುತ್ತಿಗೆ ನೀಡುವ ಬಗ್ಗೆಯೂ ಕಂಪನಿ ಯೋಜಿಸುತ್ತಿದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News