ದೇಶದ ಏಕತೆ, ಶಿಕ್ಷಣ ಕ್ರಾಂತಿಯ ಶಿಲ್ಪಿ ಮೌಲಾನಾ ಆಝಾದ್
ದ್ವಿರಾಷ್ಟ್ರ ಸಿದ್ಧಾಂತದ ವಿರೋಧಿ; ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ
ಮೌಲಾನಾ ಅಬುಲ್ ಕಲಾಂ ಆಝಾದ್ (Photo: FJP)
ಭಾರತದ ಸ್ವಾತಂತ್ರ್ಯ ಹೋರಾಟ, ರಾಷ್ಟ್ರೀಯ ಏಕತೆ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಜನ್ಮದಿನವಾದ ನವೆಂಬರ್ 11ನ್ನು ದೇಶಾದ್ಯಂತ ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲಾಗುತ್ತದೆ. ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಅವರು, ದೇಶದ ಆಧುನಿಕ ಶಿಕ್ಷಣ ವ್ಯವಸ್ಥೆಯ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಮಹಾನ್ ಶಿಕ್ಷಣ ತಜ್ಞ ಹಾಗೂ ದಾರ್ಶನಿಕರಾಗಿದ್ದರು.
1888ರ ನವೆಂಬರ್ 11ರಂದು ಇಸ್ಲಾಂ ಧರ್ಮದ ಪವಿತ್ರ ಕ್ಷೇತ್ರವಾದ ಮಕ್ಕಾದಲ್ಲಿ ವಿದ್ವಾಂಸ ಮೌಲಾನಾ ಖೈರುದ್ದೀನ್ ಅವರ ಮನೆಯಲ್ಲಿ ಜನಿಸಿದ ಆಝಾದ್ ಅವರ ಮೂಲ ಹೆಸರು ಮುಹಿಯುದ್ದೀನ್ ಅಹ್ಮದ್. ಮುಂದೆ ಅವರು ಮೌಲಾನಾ ಅಬುಲ್ ಕಲಾಂ ಆಝಾದ್ ಎಂದೇ ಪ್ರಸಿದ್ಧರಾದರು. ‘ಅಬುಲ್ ಕಲಾಂ’ ಎಂದರೆ ‘ಮಾತುಗಳ ಒಡೆಯ’ ಎಂದರ್ಥ. ತಮ್ಮ ಪ್ರಖರ ವಾಗ್ಝರಿ, ಅಪಾರ ವಿದ್ವತ್ತು, ಜಾತ್ಯತೀತ ನಿಲುವು ಮತ್ತು ಅಚಲ ದೇಶಪ್ರೇಮದಿಂದ ಅವರು ಭಾರತೀಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಆಝಾದ್, ಸ್ವಾತಂತ್ರ್ಯ ಚಳವಳಿಯ ಅಗ್ರಗಣ್ಯ ನಾಯಕರಾಗಿದ್ದರು. ಭಾರತದ ಏಕತೆ, ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಮತ್ತು ಹಿಂದೂ-ಮುಸ್ಲಿಂ ಸೌಹಾರ್ದದ ಪ್ರಬಲ ಪ್ರತಿಪಾದಕರಾಗಿದ್ದ ಅವರು ದೇಶ ವಿಭಜನೆಯನ್ನು ಕಟ್ಟುನಿಟ್ಟಾಗಿ ವಿರೋಧಿಸಿದ್ದರು.
ವಿಭಜನೆಯ ಸಂದರ್ಭದಲ್ಲಿ ಮೊಳಗಿದ ಐತಿಹಾಸಿಕ ಧ್ವನಿ
ಮೌಲಾನಾ ಆಝಾದ್ ಅವರ ವಾಗ್ಝರಿಯ ಶಕ್ತಿಗೆ 1947ರ ದೇಶ ವಿಭಜನೆಯ ಸಂದರ್ಭದ ಘಟನೆ ಸಾಕ್ಷಿಯಾಗಿದೆ. ಧರ್ಮದ ಹೆಸರಿನಲ್ಲಿ ದಿಲ್ಲಿಯ ಬೀದಿಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದಾಗ, ಪ್ರಾಣಭಯ ಮತ್ತು ಅನಿಶ್ಚಿತತೆಯಿಂದಾಗಿ ಲಕ್ಷಾಂತರ ಭಾರತೀಯ ಮುಸ್ಲಿಮರು ತಮ್ಮ ತಾಯ್ನೆಲವನ್ನು ತೊರೆದು ಪಾಕಿಸ್ತಾನಕ್ಕೆ ವಲಸೆ ಹೋಗಲು ಸಿದ್ಧರಾಗಿದ್ದರು. ದಿಲ್ಲಿಯ ಐತಿಹಾಸಿಕ ಜಾಮಾ ಮಸೀದಿಯ ಮೆಟ್ಟಿಲುಗಳ ಮೇಲೆ ಪಾಕಿಸ್ತಾನಕ್ಕೆ ತೆರಳಲು ನಿರ್ಧರಿಸಿದ್ದ ಸಾವಿರಾರು ಜನರು ಜಮಾಯಿಸಿದ್ದರು.
ಆ ಸಂದರ್ಭದಲ್ಲಿ ಜಾಮಾ ಮಸೀದಿಯ ಕೆಂಪು ಕಲ್ಲಿನ ಮೆಟ್ಟಿಲುಗಳ ಮೇಲೆ ಶೇರ್ವಾನಿ ಧರಿಸಿ ಬಂದು ನಿಂತ ಆಝಾದ್, ಆತಂಕದಿಂದ ತಮ್ಮ ಎದುರು ನಿಂತಿದ್ದ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದರು.
"ನನ್ನ ಸೋದರರೇ, ನಾನು ನಿಮ್ಮನ್ನು ಕರೆಯುತ್ತಿರುವುದು ಹೊಸತೇನಲ್ಲ. ಇದೇ ಮಸೀದಿಯ ಮಿನಾರಗಳ ಮೇಲಿಂದ ನಿಮ್ಮನ್ನು ಎಚ್ಚರಿಸಿದ್ದೆ. ಆಗ ನನ್ನ ಮಾತನ್ನು ನಂಬದೆ ಬೇರೆಯವರ ಹಿಂದೆ ಹೋದಿರಿ. ಇಂದು ನಿಮ್ಮ ದಾರಿ ತಪ್ಪಿಸಿದ ನಾಯಕರೇ ನಿಮ್ಮನ್ನು ಕೈಬಿಟ್ಟು ಹೋಗಿದ್ದಾರೆ. ಜಾಮಾ ಮಸೀದಿಯ ಎತ್ತರದ ಮಿನಾರಗಳು ನಿಮ್ಮನ್ನು ಪ್ರಶ್ನಿಸುತ್ತಿವೆ. ನಿಮ್ಮ ಇತಿಹಾಸದ ಪುಟಗಳನ್ನು ಎಲ್ಲಿ ಕಳೆದುಕೊಂಡಿರಿ? ನಿನ್ನೆಯಷ್ಟೇ ಯಮುನೆಯ ದಂಡೆಯ ಮೇಲೆ ವಝು ಮಾಡಿ ನಮಾಜ್ ಮಾಡಿದವರು, ಇಂದು ಇಲ್ಲಿ ಬದುಕಲು ನಡುಗುತ್ತಿದ್ದೀರಾ?
ದಿಲ್ಲಿ ನಿಮ್ಮ ರಕ್ತದಿಂದ ಸಿಂಚನಗೊಂಡ ಮಣ್ಣು. ಆಕಾಶದಿಂದ ನಕ್ಷತ್ರಗಳು ಉದುರಿದರೆ ಆಕಾಶವೇನೂ ಬಿದ್ದುಹೋಗುವುದಿಲ್ಲ. ನಿಮ್ಮ ಮನಸ್ಸಿನಲ್ಲಿರುವ ಕೃತಕ ಭಯವನ್ನು ಮೊದಲು ಕಿತ್ತೊಗೆಯಿರಿ. ಸಾವಿಗೆ ಹೆದರಿ ಓಡುವವರನ್ನೇ ಸಾವು ಹೆಚ್ಚು ವೇಗವಾಗಿ ಅಟ್ಟಾಡಿಸುತ್ತದೆ ಎಂಬುದು ಪ್ರಕೃತಿಯ ನಿಯಮ. ನಿಮ್ಮ ಹೆಜ್ಜೆಯಲ್ಲಿ ವಿಶ್ವಾಸವಿರಲಿ, ಎದೆಯಲ್ಲಿ ಧೈರ್ಯವಿರಲಿ. ಈ ನೆಲ ನಿಮ್ಮದು; ಈ ಹಿಂದೂಸ್ತಾನ ನಿಮ್ಮ ದೇಶ. ಯಾರೂ ನಿಮ್ಮನ್ನು ನಿಮ್ಮ ನೆಲದಿಂದ ಹೊರದಬ್ಬಲು ಸಾಧ್ಯವಿಲ್ಲ" ಎಂದು ಅವರು ಕರೆ ನೀಡಿದರು.
ಆಝಾದ್ ಅವರ ಈ ಭಾಷಣದಿಂದ ಪ್ರಭಾವಿತರಾದ ಪಾಕಿಸ್ತಾನಕ್ಕೆ ತೆರಳಲು ಗಂಟುಮೂಟೆ ಕಟ್ಟಿಕೊಂಡು ರೈಲು ಹತ್ತಲು ಸಿದ್ಧರಾಗಿದ್ದ ಸಾವಿರಾರು ಮುಸ್ಲಿಮರು ಕಣ್ಣೀರಿಡುತ್ತಾ ತಮ್ಮ ಪೆಟ್ಟಿಗೆಗಳನ್ನು ಕೆಳಗಿಳಿಸಿದರು. ತಮ್ಮ ತಾಯ್ನೆಲವಾದ ಭಾರತದಲ್ಲೇ ಉಳಿಯಲು ಸಂಕಲ್ಪ ಮಾಡಿದರು ಎನ್ನಲಾಗಿದೆ.
ದ್ವಿರಾಷ್ಟ್ರ ಸಿದ್ಧಾಂತಕ್ಕೆ ವಿರೋಧ
ಮುಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವನ್ನು ಮೊದಲಿನಿಂದಲೂ ಸಾರಾಸಗಟಾಗಿ ವಿರೋಧಿಸಿದ್ದ ಮೌಲಾನಾ ಆಝಾದ್, ಧರ್ಮ ರಾಷ್ಟ್ರೀಯತೆಯ ಆಧಾರವಾಗಲಾರದು ಎಂದು ಪ್ರತಿಪಾದಿಸಿದ್ದರು. ದೇಶದ ಏಕತೆ ಮತ್ತು ಹಿಂದೂ-ಮುಸ್ಲಿಂ ಐಕ್ಯತೆಯೇ ಭಾರತದ ಬಲ ಎಂಬ ನಿಲುವು ಹೊಂದಿದ್ದರು.
ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಸೇರಿದಂತೆ ದೇಶದ ಪ್ರಮುಖ ನಾಯಕರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. 1923ರಲ್ಲಿ ಕೇವಲ 35ನೇ ವಯಸ್ಸಿನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ 1940ರಿಂದ 1946ರವರೆಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ನೇತೃತ್ವ ವಹಿಸಿದ್ದರು. ಬ್ರಿಟಿಷರ ವಿರುದ್ಧದ ಕ್ವಿಟ್ ಇಂಡಿಯಾ ಚಳವಳಿಯ ನಿರ್ಣಾಯಕ ಘಟ್ಟದಲ್ಲಿ ಕಾಂಗ್ರೆಸ್ನ ಚುಕ್ಕಾಣಿ ಹಿಡಿದಿದ್ದ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.
ಶಿಕ್ಷಣ ಕ್ಷೇತ್ರಕ್ಕೆ ದೂರದೃಷ್ಟಿಯ ಕೊಡುಗೆ
1947ರಲ್ಲಿ ಭಾರತ ಸ್ವತಂತ್ರವಾದಾಗ ದೇಶದ ಮೊದಲ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಆಝಾದ್ ಅವರ ಮುಂದಿದ್ದ ಸವಾಲು ದೊಡ್ಡದಾಗಿತ್ತು. ಶತಮಾನಗಳ ಬ್ರಿಟಿಷರ ಆಳ್ವಿಕೆಯಿಂದಾಗಿ ದೇಶದ ಸಾಕ್ಷರತಾ ಪ್ರಮಾಣ ಶೇ. 12ಕ್ಕಿಂತಲೂ ಕಡಿಮೆಯಾಗಿತ್ತು. ಬಡತನ, ಹಸಿವು ಮತ್ತು ಕೋಮು ಗಲಭೆಗಳಿಂದ ತತ್ತರಿಸಿದ್ದ ದೇಶಕ್ಕೆ ಆಧುನಿಕ ಶಿಕ್ಷಣದ ಬೆಳಕು ನೀಡುವುದು ಸುಲಭದ ಕೆಲಸವಾಗಿರಲಿಲ್ಲ.
ಆದರೆ ಶಿಕ್ಷಣದ ಮಹತ್ವವನ್ನು ಅರಿತಿದ್ದ ಆಝಾದ್, ದೂರದೃಷ್ಟಿಯ ಯೋಜನೆಗಳ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಕು ನೀಡಿದರು. 1947ರಿಂದ 1958ರವರೆಗೆ ಸತತ 11 ವರ್ಷಗಳ ಕಾಲ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ ಅವರು ಹಾಕಿಕೊಟ್ಟ ಅಡಿಪಾಯ ಇಂದಿನ ಭಾರತದ ಆಧುನಿಕ ಶಿಕ್ಷಣ ವ್ಯವಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ.
ಭಾರತವು ಜಾಗತಿಕ ಮಟ್ಟದ ಎಂಜಿನಿಯರ್ಗಳನ್ನು ರೂಪಿಸಬೇಕಾದರೆ ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಅವರು ಭಾವಿಸಿದ್ದರು. ಇದರ ಫಲವಾಗಿ 1951ರಲ್ಲಿ ಪಶ್ಚಿಮ ಬಂಗಾಳದ ಖರಗ್ಪುರದಲ್ಲಿ ದೇಶದ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಖರಗ್ಪುರ) ಸ್ಥಾಪನೆಯಾಯಿತು.
ಉನ್ನತ ಶಿಕ್ಷಣದ ಗುಣಮಟ್ಟವನ್ನು ನಿಯಂತ್ರಿಸುವ ಉದ್ದೇಶದಿಂದ 1953ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು (ಯುಜಿಸಿ) ಅಸ್ತಿತ್ವಕ್ಕೆ ತರಲಾಯಿತು.
ಶಿಕ್ಷಣ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯೊಂದಿಗೂ ಬೆಸೆದುಕೊಳ್ಳಬೇಕು ಎಂಬ ಆಶಯದಿಂದ ಸಂಗೀತ ನಾಟಕ ಅಕಾಡೆಮಿ, ಲಲಿತ ಕಲಾ ಅಕಾಡೆಮಿ ಮತ್ತು ಸಾಹಿತ್ಯ ಅಕಾಡೆಮಿಗಳ ಸ್ಥಾಪನೆಗೆ ಅವರು ಕೊಡುಗೆ ನೀಡಿದರು.
14 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರೆಯಬೇಕು ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಂಸತ್ತಿನಲ್ಲಿ ಪ್ರತಿಪಾದಿಸಿದ್ದರು. ಶಿಕ್ಷಣದ ಅವಕಾಶಗಳು ಎಲ್ಲ ಮಕ್ಕಳಿಗೂ ಸಮಾನವಾಗಿ ದೊರೆಯಬೇಕು ಎಂಬುದು ಅವರ ಆಶಯವಾಗಿತ್ತು.
ಪತ್ರಿಕೋದ್ಯಮ, ಸಾಹಿತ್ಯದಲ್ಲೂ ಛಾಪು
ಮೌಲಾನಾ ಆಝಾದ್ ಅವರ ಕೊಡುಗೆ ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯೂ ಅವರು ಮಹತ್ವದ ಛಾಪು ಮೂಡಿಸಿದ್ದರು. ಹಿಂದೂ-ಮುಸ್ಲಿಂ ಐಕ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ‘ಅಲ್-ಹಿಲಾಲ್’ ಮತ್ತು ‘ಅಲ್-ಬಲಾಗ್’ ಎಂಬ ಎರಡು ಸಾಪ್ತಾಹಿಕ ನಿಯತಕಾಲಿಕೆಗಳನ್ನು ಆರಂಭಿಸಿದ್ದರು.
ಅವರು ರಚಿಸಿದ ‘ಇಂಡಿಯಾ ವಿನ್ಸ್ ಫ್ರೀಡಂ’ ಕೃತಿ ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತ ಪ್ರಮುಖ ಐತಿಹಾಸಿಕ ದಾಖಲೆಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ಚಳವಳಿಯ ಘಟನೆಗಳು ಮತ್ತು ರಾಜಕೀಯ ಬೆಳವಣಿಗೆಗಳ ಕುರಿತು ಈ ಕೃತಿ ಮಹತ್ವದ ಒಳನೋಟಗಳನ್ನು ಒದಗಿಸುತ್ತದೆ.
ಇಂದು ಭಾರತವು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತನ್ನ ಸಾಧನೆಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದೆ. ಏಳು ದಶಕಗಳ ಹಿಂದೆಯೇ ದೇಶದ ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯ ಸವಾಲುಗಳ ನಡುವೆಯೂ ಆಧುನಿಕ ಶಿಕ್ಷಣದ ಅಗತ್ಯವನ್ನು ಗುರುತಿಸಿ, ಅದರ ಬೆಳವಣಿಗೆಗೆ ದೂರದೃಷ್ಟಿಯಿಂದ ಅಡಿಪಾಯ ಹಾಕಿದ ಮೌಲಾನಾ ಆಝಾದ್ ಅವರ ಕೊಡುಗೆ ಸ್ಮರಣೀಯವಾಗಿದೆ.
ದೇಶದ ಏಕತೆ, ಜಾತ್ಯತೀತತೆ ಮತ್ತು ಸೌಹಾರ್ದಕ್ಕಾಗಿ ಬದುಕು ಮುಡಿಪಾಗಿಟ್ಟ, ಕೋಟ್ಯಂತರ ಜನರಿಗೆ ಶಿಕ್ಷಣದ ಬೆಳಕು ನೀಡುವ ಕನಸು ಕಂಡ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಜನ್ಮದಿನದಂದು ಅವರ ಸೇವೆ, ತತ್ವಾದರ್ಶ ಮತ್ತು ದೂರದೃಷ್ಟಿಯನ್ನು ಸ್ಮರಿಸುವುದು ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ.