Photo Credit : Bloomberg

ಇಸ್ರೇಲ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಪರ್ಯಾಯವಾಗಿ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸನ್‌ ಕೋಟ್ ಅವರಿಗೆ ಸರ್ಕಾರ ರಚಿಸುವಂತೆ ಅಧ್ಯಕ್ಷ ಐಸಾಕ್ ಹರ್ಝೋಗ್ ಆಹ್ವಾನ ನೀಡಿದ್ದಾರೆ. ಆದರೆ, ನೆತನ್ಯಾಹು ಅಧಿಕಾರದಿಂದ ನಿರ್ಗಮಿಸುತ್ತಿದ್ದಾರೆ ಎಂಬ ಕಾರಣಕ್ಕೆ ಫೆಲೆಸ್ತೀನ್ ಜನರ ಮೇಲಿನ ದೌರ್ಜನ್ಯಕ್ಕೆ ಅಂತ್ಯ ಹಾಡಲಾಗುತ್ತದೆ ಎಂದು ಭಾವಿಸುವಂತಿಲ್ಲ. ಏಕೆಂದರೆ, ಐಸನ್‌ ಕೋಟ್ ಅವರ ಮಿಲಿಟರಿ ಹಿನ್ನೆಲೆ ಮತ್ತು ಹಿಂದಿನ ಕಾರ್ಯತಂತ್ರಗಳು ಇಂತಹ ನಿರೀಕ್ಷೆಗಳಿಗೆ ಅವಕಾಶ ನೀಡುವುದಿಲ್ಲ.

ನೆತನ್ಯಾಹು ಭ್ರಷ್ಟ ಮತ್ತು ಅಮಾನವೀಯ ರಾಜಕಾರಣಿಯಾಗಿ ಕ್ರೌರ್ಯ ಮೆರೆದಿದ್ದರೆ, ಹೊರನೋಟಕ್ಕೆ ಶಾಂತವಾಗಿ ಕಾಣುವ ಐಸನ್‌ ಕೋಟ್ ಫೆಲೆಸ್ತೀನ್ ವಿರುದ್ಧ ಕಠಿಣ ನಿಲುವು ಹೊಂದಿರುವ ಮಿಲಿಟರಿ ತಂತ್ರಜ್ಞ. ಹೀಗಾಗಿ ಅಧಿಕಾರದ ಚುಕ್ಕಾಣಿ ಅವರ ಕೈಗೆ ಬಂದರೆ ಫೆಲೆಸ್ತೀನ್ನಲ್ಲಿ ಪರಿಸ್ಥಿತಿ ಸುಧಾರಿಸುವ ಬದಲು ಮತ್ತಷ್ಟು ಹದಗೆಡುವ ಅಪಾಯವಿದೆ ಎಂಬ ಆತಂಕ ವ್ಯಕ್ತವಾಗಿದೆ.

ಇದಕ್ಕೆ ಪ್ರಮುಖ ಕಾರಣ ಐಸನ್‌ ಕೋಟ್ ರೂಪಿಸಿದ ‘ದಾಹಿಯಾ ಸಿದ್ಧಾಂತ’. ನಾಗರಿಕ ಪ್ರದೇಶಗಳನ್ನೇ ಧ್ವಂಸಗೊಳಿಸುವ ಈ ಭೀಕರ ಮಿಲಿಟರಿ ಕಾರ್ಯತಂತ್ರದ ರೂವಾರಿ ಅವರೇ. ನೆತನ್ಯಾಹು ಅವರ ಆಕ್ರಮಣಶೀಲತೆ ರಾಜಕೀಯ ಅಬ್ಬರ ಮತ್ತು ವಾಕ್ಚಾತುರ್ಯದಿಂದ ಕೂಡಿದ್ದರೆ, ಐಸನ್‌ ಕೋಟ್ ಅವರದ್ದು ಲೆಕ್ಕಾಚಾರದ, ವ್ಯವಸ್ಥಿತ ಮಿಲಿಟರಿ ಕಾರ್ಯಾಚರಣೆ. ಶತ್ರುಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ಕಾರ್ಯತಂತ್ರಗಳನ್ನು ರೂಪಿಸಿ ಜಾರಿಗೆ ತಂದ ಅನುಭವ ಅವರಿಗಿದೆ.

ಹೀಗಾಗಿ ಕೇವಲ ಆಡಳಿತದ ಮುಖ ಬದಲಾದರೆ ಕ್ರೌರ್ಯ ನಿಲ್ಲುವುದಿಲ್ಲ ಎಂಬ ಆತಂಕ ಎದುರಾಗಿದೆ. ನೆತನ್ಯಾಹು ಅವರ ಬಲಪಂಥೀಯ ರಾಜಕೀಯ ಧ್ರುವೀಕರಣದ ಬದಲಿಗೆ ಐಸನ್‌ ಕೋಟ್ ಸಾಂಸ್ಥಿಕ ಶಿಸ್ತಿನ ಹೆಸರಿನಲ್ಲಿ ಅದೇ ಮಿಲಿಟರಿ ಯಂತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವ ಸಾಧ್ಯತೆಯಿದೆ ಎಂಬುದು ಅವರ ಟೀಕಾಕಾರರ ಅಭಿಪ್ರಾಯ.

►ಬಹುಮತದ ಕೊರತೆ ನೆತನ್ಯಾಹುಗೆ ಹಿನ್ನಡೆ

ಅಕ್ಟೋಬರ್ 27ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗಲಿಲ್ಲ. ನೆತನ್ಯಾಹು ಅವರ ಲಿಕುಡ್ ಪಕ್ಷ 27 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅವರ ಮೈತ್ರಿಕೂಟಕ್ಕೆ ಒಟ್ಟು 53 ಸ್ಥಾನಗಳಷ್ಟೇ ಲಭಿಸಿವೆ. ಸರ್ಕಾರ ರಚನೆಗೆ ಅಗತ್ಯವಿರುವ 61 ಸ್ಥಾನಗಳ ಮ್ಯಾಜಿಕ್ ನಂಬರ್ ತಲುಪಲು ಅವರಿಗೆ ಸಾಧ್ಯವಾಗಿಲ್ಲ.

ಮತ್ತೊಂದೆಡೆ, 21 ಸ್ಥಾನಗಳನ್ನು ಗೆದ್ದಿರುವ ಯಶಾರ್ ಪಕ್ಷದ ನಾಯಕ ಐಸನ್‌ ಕೋಟ್ ಅವರಿಗೆ 48 ಸದಸ್ಯರ ಮೈತ್ರಿಕೂಟದ ಬೆಂಬಲ ದೊರೆತಿದೆ. ಅರಬ್ ಪಕ್ಷಗಳು 19 ಸ್ಥಾನಗಳನ್ನು ಗೆದ್ದಿದ್ದು, ನೆತನ್ಯಾಹು ಆಡಳಿತವನ್ನು ವಿರೋಧಿಸುವ ಉದ್ದೇಶದಿಂದ ಐಸನ್‌ ಕೋಟ್ ಪರವಾಗಿ ಅಧ್ಯಕ್ಷರಿಗೆ ಶಿಫಾರಸು ಪತ್ರ ಸಲ್ಲಿಸಿವೆ. ಹೀಗಾಗಿ ಸರ್ಕಾರ ರಚಿಸುವ ಮೊದಲ ಅವಕಾಶ ಐಸನ್‌ ಕೋಟ್ ಅವರಿಗೆ ಲಭಿಸಿದೆ.

►ಮಿಜ್ರಾಹಿ ಸಮುದಾಯದ ಮೊದಲ ಪ್ರಧಾನಿ?

1960ರ ಮೇ 19ರಂದು ಇಸ್ರೇಲ್ನ ಟಿಬೇರಿಯಾಸ್ ನಲ್ಲಿ ಜನಿಸಿದ ಐಸನ್‌ ಕೋಟ್ ಅವರಿಗೆ ಈಗ 66 ವರ್ಷ. ಅವರ ಪೋಷಕರು ಮೊರಾಕೊ ಮೂಲದ ವಲಸಿಗರು. ಒಂದು ವೇಳೆ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರೆ, ಇಸ್ರೇಲ್ ಇತಿಹಾಸದಲ್ಲಿ ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದ ಬೇರುಗಳನ್ನು ಹೊಂದಿರುವ ಮೊದಲ ‘ಮಿಜ್ರಾಹಿ’ ಪ್ರಧಾನಿಯಾಗಲಿದ್ದಾರೆ.

ಇಸ್ರೇಲ್ ರಕ್ಷಣಾ ಪಡೆಗಳಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿರುವ ಅವರು, 2015ರಿಂದ 2019ರವರೆಗೆ ಐಡಿಎಫ್ನ 21ನೇ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಸೇನೆಯಿಂದ ನಿವೃತ್ತರಾದ ಬಳಿಕ 2022ರಲ್ಲಿ ಸಕ್ರಿಯ ರಾಜಕೀಯ ಪ್ರವೇಶಿಸಿದರು.

ಇಸ್ರೇಲ್ ರಾಜಕೀಯದಲ್ಲಿ ಅವರನ್ನು ಸೌಮ್ಯವಾದಿ ಮತ್ತು ಸಂಯಮದ ನಾಯಕ ಎಂದು ಬಿಂಬಿಸಲಾಗುತ್ತಿದೆ. ಮಾಧ್ಯಮಗಳಿಂದ ಕೊಂಚ ದೂರವೇ ಉಳಿಯುವ ಅವರು, ಅತಿಯಾಗಿ ಭಾಷಣ ಮಾಡುವವರಲ್ಲ. 2023ರ ಅಕ್ಟೋಬರ್ 7ರ ದಾಳಿಯ ಬಳಿಕ ನೆತನ್ಯಾಹು ರಚಿಸಿದ್ದ ತುರ್ತು ಯುದ್ಧ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೆ, ನಂತರ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಸಾಲಿಗೆ ಮರಳಿದರು.

ಯುದ್ಧದ ಸಂದರ್ಭದಲ್ಲಿ ಅವರ ಕುಟುಂಬವೂ ಭಾರಿ ನಷ್ಟ ಅನುಭವಿಸಿದೆ. ಅವರ ಮಗ ಮತ್ತು ಇಬ್ಬರು ಸೋದರಳಿಯಂದಿರು ಗಾಝಾದಲ್ಲಿ ನಡೆದ ಕದನದಲ್ಲಿ ಹತರಾಗಿದ್ದಾರೆ. ಈ ಘಟನೆ ಇಸ್ರೇಲಿ ನಾಗರಿಕರಲ್ಲಿ ಅವರ ಬಗ್ಗೆ ಭಾವನಾತ್ಮಕ ಬೆಂಬಲ ಹೆಚ್ಚಲು ಕಾರಣವಾಯಿತು.

ತೀವ್ರ ಬಲಪಂಥೀಯ ನಾಯಕರಾದ ಬೆನ್-ಗ್ವೀರ್ ಮತ್ತು ಸ್ಮೊಟ್ರಿಚ್ ಅವರ ನೀತಿಗಳನ್ನು ಅವರು ಬಹಿರಂಗವಾಗಿಯೇ ಟೀಕಿಸುತ್ತಾ ಬಂದಿದ್ದಾರೆ. ವೆಸ್ಟ್ ಬ್ಯಾಂಕ್ ನಲ್ಲಿ ಪಶ್ಚಿಮ ದೇಶಗಳ ತೀವ್ರ ಟೀಕೆಗೆ ಗುರಿಯಾಗಿರುವ ಇಸ್ರೇಲಿ ವಸಾಹತುಗಾರರ ಹಿಂಸಾಚಾರವನ್ನೂ ವಿರೋಧಿಸಿದ್ದಾರೆ. ಈ ಕಾರಣಗಳಿಂದಾಗಿ ಅವರನ್ನು ನೆತನ್ಯಾಹು ಅವರಿಗಿಂತ ಭಿನ್ನವಾದ ರಾಜಕೀಯ ನಾಯಕ ಎಂದು ಗುರುತಿಸಲಾಗುತ್ತಿದೆ.

►ದಾಹಿಯಾ ಸಿದ್ಧಾಂತ: ನಾಗರಿಕ ಪ್ರದೇಶಗಳನ್ನೇ ಗುರಿಯಾಗಿಸುವ ಕಾರ್ಯತಂತ್ರ

ಆದರೆ, ಐಸನ್‌ ಕೋಟ್ ಅವರ ಮಿಲಿಟರಿ ಹಿನ್ನೆಲೆಯನ್ನು ಗಮನಿಸಿದರೆ ಈ ಸೌಮ್ಯ ರಾಜಕೀಯ ಮುಖವಾಡದ ಹಿಂದೆ ಕಠಿಣ ಕಾರ್ಯತಂತ್ರವಿದೆ ಎಂಬ ವಿಶ್ಲೇಷಣೆಗಳಿವೆ. ಹಲವು ರಕ್ಷಣಾ ವಿಶ್ಲೇಷಕರ ಪ್ರಕಾರ, ಅವರು ನೆತನ್ಯಾಹುಗಿಂತಲೂ ಹೆಚ್ಚು ಕಠಿಣ ಮತ್ತು ಅಪಾಯಕಾರಿ ಮಿಲಿಟರಿ ತಂತ್ರಜ್ಞ.

ಇಸ್ರೇಲ್ ಸೇನಾ ಇತಿಹಾಸದಲ್ಲಿ ಕುಖ್ಯಾತವಾಗಿರುವ ‘ದಾಹಿಯಾ ಸಿದ್ಧಾಂತ’ದ ರೂವಾರಿ ಐಸನ್‌ ಕೋಟ್. 2006ರ ಲೆಬನಾನ್ ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ಸೇನೆಯ ಉತ್ತರ ಕಮಾಂಡ್ ಮುಖ್ಯಸ್ಥರಾಗಿದ್ದ ಅವರು ಈ ಸಿದ್ಧಾಂತವನ್ನು ರೂಪಿಸಿದ್ದರು.

ಶತ್ರು ನೆಲೆ ಅಥವಾ ನಾಗರಿಕ ಪ್ರದೇಶದಿಂದ ಇಸ್ರೇಲ್ ಮೇಲೆ ದಾಳಿ ನಡೆದರೆ, ಆ ಇಡೀ ಪ್ರದೇಶದ ಮೇಲೆ ಅಪಾರ ಪ್ರಮಾಣದ ಅಸಮಾನ ಬಲಪ್ರಯೋಗ ನಡೆಸಿ ಅದನ್ನು ಸಂಪೂರ್ಣವಾಗಿ ನಾಶಪಡಿಸುವುದು ಈ ಸಿದ್ಧಾಂತದ ಮೂಲ ಆಶಯ.

ನೆತನ್ಯಾಹು ರಾಜಕೀಯ ಪ್ರೇರಿತ ಆಕ್ರಮಣಶೀಲತೆಯ ಮೂಲಕ ಆಡಳಿತ ನಡೆಸಿದರೆ, ಐಸನ್‌ ಕೋಟ್ ವೃತ್ತಿಪರ ಮಿಲಿಟರಿ ಯೋಜಕರಾಗಿ ಕಾರ್ಯಾಚರಣೆಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿದ್ದಾರೆ. ನೆತನ್ಯಾಹು ಅವರ ರಾಜಕೀಯ ಧ್ರುವೀಕರಣಕ್ಕಿಂತ ಐಸನ್‌ ಕೋಟ್ ಅವರ ಸಾಂಸ್ಥಿಕ ಮಿಲಿಟರಿ ಕಾರ್ಯತಂತ್ರಗಳು ಹೆಚ್ಚು ವ್ಯವಸ್ಥಿತ ವಿನಾಶಕ್ಕೆ ಕಾರಣವಾಗಬಹುದು ಎಂಬ ಆತಂಕವೂ ಇದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ಇಸ್ರೇಲ್ನೊಳಗೆ ಐಸನ್‌ ಕೋಟ್ ಅವರಿಗೆ ಸೇನಾ ಗೌರವವಿದೆ. ಇದೇ ಗೌರವ ಅವರ ಆಕ್ರಮಣಕಾರಿ ನಿರ್ಧಾರಗಳಿಗೆ ಜಾಗತಿಕ ಮನ್ನಣೆ ದೊರೆಯುವಂತೆ ಮಾಡಬಹುದು. ನೆತನ್ಯಾಹು ಅವರ ನಿರ್ಧಾರಗಳನ್ನು ಜಗತ್ತು ಸಂಶಯದಿಂದ ನೋಡಿದರೆ, ಐಸನ್‌ ಕೋಟ್ ಅವರ ಮಿಲಿಟರಿ ಕಾರ್ಯತಂತ್ರಗಳನ್ನು ಪಾಶ್ಚಿಮಾತ್ಯ ದೇಶಗಳು ‘ವೃತ್ತಿಪರ ರಕ್ಷಣಾ ತಂತ್ರ’ ಎಂದು ಸಮರ್ಥಿಸಿಕೊಳ್ಳುವ ಸಾಧ್ಯತೆಯಿದೆ.

ಹೀಗಾಗಿ ಐಸನ್‌ ಕೋಟ್ ಅಧಿಕಾರಕ್ಕೆ ಬಂದರೆ ಫೆಲೆಸ್ತೀನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳು ನಿಲ್ಲುವ ಅಥವಾ ತೀವ್ರತೆ ಕಡಿಮೆಯಾಗುವ ನಿರೀಕ್ಷೆ ಇಲ್ಲ. ಬದಲಿಗೆ ಅವು ಇನ್ನಷ್ಟು ವ್ಯವಸ್ಥಿತ ಸ್ವರೂಪ ಪಡೆದುಕೊಳ್ಳಬಹುದು ಎಂಬ ಆತಂಕ ವ್ಯಕ್ತವಾಗಿದೆ.

►28 ದಿನಗಳಲ್ಲಿ ಸರ್ಕಾರ ರಚಿಸುವ ಸವಾಲು

ಐಸನ್‌ ಕೋಟ್ ಅವರಿಗೆ ಅಧಿಕಾರಕ್ಕೇರುವ ಹಾದಿ ಸುಗಮವಾಗಿಲ್ಲ. ಅಧ್ಯಕ್ಷರು ನೀಡಿರುವ 28 ದಿನಗಳ ಕಾಲಮಿತಿಯೊಳಗೆ ಅವರು ಬಹುಮತಕ್ಕೆ ಅಗತ್ಯವಿರುವ ಮೈತ್ರಿಕೂಟವನ್ನು ರಚಿಸಬೇಕಿದೆ.

ಅರಬ್ ಪಕ್ಷಗಳ ನೇರ ಬೆಂಬಲ ಪಡೆಯಲು ಅವರು ನಿರಾಕರಿಸಿದ್ದಾರೆ. ಮತ್ತೊಂದೆಡೆ, ಕಠಿಣ ನಿಲುವಿನ ಅಲ್ಟ್ರಾ ಆರ್ಥೊಡಾಕ್ಸ್ ಪಕ್ಷಗಳ ಬೆಂಬಲ ಪಡೆಯುವುದೂ ಸುಲಭವಲ್ಲ. ನೆತನ್ಯಾಹು ಅವರೊಂದಿಗೆ ಐಕ್ಯ ಸರ್ಕಾರ ರಚಿಸುವ ಸಾಧ್ಯತೆಯನ್ನೂ ಅವರು ಈ ಹಿಂದೆ ತಳ್ಳಿಹಾಕಿದ್ದಾರೆ.

ಈ ರಾಜಕೀಯ ಜಿದ್ದಾಜಿದ್ದಿ ಮುಂದುವರಿದರೆ ಇಸ್ರೇಲ್ ಮತ್ತೊಂದು ಚುನಾವಣೆಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

ಒಟ್ಟಿನಲ್ಲಿ, ನೆತನ್ಯಾಹು ಆಡಳಿತಕ್ಕೆ ಪರ್ಯಾಯವಾಗಿ ಐಸನ್‌ ಕೋಟ್ ಮುನ್ನೆಲೆಗೆ ಬಂದಿರುವುದು ಇಸ್ರೇಲ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ. ಆದರೆ, ಫೆಲೆಸ್ತೀನ್ ಮತ್ತು ನೆರೆಹೊರೆಯ ದೇಶಗಳೊಂದಿಗಿನ ಬಿಕ್ಕಟ್ಟಿನ ವಿಚಾರದಲ್ಲಿ ಇಸ್ರೇಲ್ನ ಕಠಿಣ ಮಿಲಿಟರಿ ನಿಲುವು ಬದಲಾಗುವ ಸಾಧ್ಯತೆ ಕಡಿಮೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಆಡಳಿತದ ಮುಖ ಬದಲಾಗಬಹುದು; ಆದರೆ ನೆತನ್ಯಾಹು ಆಡಳಿತದಲ್ಲಿ ಮುಂದುವರಿದಿರುವ ಫೆಲೆಸ್ತೀನ್ ವಿರುದ್ಧದ ವಿನಾಶಕಾರಿ ಮಿಲಿಟರಿ ನೀತಿ ಹೊಸ ನಾಯಕತ್ವದಲ್ಲೂ ಮುಂದುವರಿದರೆ ಅಚ್ಚರಿಯಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor