2024ರ ಚುನಾವಣೆ | ಎರಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 51 ಕ್ಷೇತ್ರಗಳಲ್ಲಿ ಚಲಾಯಿಸಿದ ಮತ ಹಾಗೂ ಎಣಿಕೆ ಮಾಡಿದ ಮತಗಳಲ್ಲಿ ಹೊಂದಾಣಿಕೆಯಿಲ್ಲ!
► ಸುಮೇಧಾ ಮಿತ್ತಲ್, ವೆಂಕಟೇಶ್ ನಾಯಕ್ - reporters-collective. in ವರದಿ
Photo Credit : reporters-collective
2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆದ ರೀತಿಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡುತ್ತಾ ವಿರೋಧ ಪಕ್ಷದ ನಾಯಕರು 2025 ಫೆಬ್ರವರಿ 7ರಂದು ಪತ್ರಿಕಾಗೋಷ್ಠಿ ನಡೆಸಿದ್ದರು. ನಾಲ್ಕು ತಿಂಗಳ ನಂತರ, ಬಿಜೆಪಿ 85 ಕ್ಷೇತ್ರಗಳಲ್ಲಿ "ಅಕ್ರಮ" ಎಸಗಿದೆ ಎಂದು ಕಾಂಗ್ರೆಸ್ ಆರೋಪಿಸಿತು. ಇವುಗಳಲ್ಲಿ ಕೆಲವು ಕ್ಷೇತ್ರಗಳಲ್ಲಿ ಮತದಾನದ ಸಮಯ ಮುಗಿದ ನಂತರವೂ ಲಕ್ಷಾಂತರ ಮತಗಳು ಚಲಾವಣೆಯಾಗಿವೆ ಎಂದು ಅದು ಪ್ರತಿಪಾದಿಸಿತ್ತು.
ಚುನಾವಣಾ ಆಯೋಗ (ECI) ಈ ಆರೋಪಗಳನ್ನು ತಳ್ಳಿಹಾಕಿತು. "ಚುನಾವಣಾ ಅಕ್ರಮ" ತಡೆಯಲು ತಾನು ನಡೆಸುವ ಕಟ್ಟುನಿಟ್ಟಿನ ಪರಿಶೀಲನೆ ಪ್ರಕ್ರಿಯೆಯನ್ನು ವಿವರಿಸುತ್ತಾ, ವಿರೋಧ ಪಕ್ಷಗಳಿಗೆ ನೀಡಿದ್ದ 66 ಪುಟಗಳ ಉತ್ತರವನ್ನು ಆಯೋಗ ಉಲ್ಲೇಖಿಸಿತು.
ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳನ್ನು ಎಣಿಕೆ ಮಾಡಿ ಆಯೋಗವು ಫಲಿತಾಂಶ ಪ್ರಕಟಿಸುತ್ತದೆ. ಇದರ ಜೊತೆಗೆ, ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದ ಮತದಾರರ ಸಂಖ್ಯೆಯ ಪ್ರತ್ಯೇಕ ಆಂತರಿಕ ದಾಖಲೆಯನ್ನು ಆಯೋಗ ಇಟ್ಟುಕೊಳ್ಳುತ್ತದೆ. ಕಾನೂನು ಪ್ರಕಾರ ಮತ್ತು ತಾರ್ಕಿಕವಾಗಿ, ಈ ಸಂಖ್ಯೆಯು ಇವಿಎಂನಲ್ಲಿ ಎಣಿಕೆಯಾದ ಮತಗಳ ಸಂಖ್ಯೆಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗಬೇಕು.
ಈ ಎರಡು ಸಂಖ್ಯೆಗಳಲ್ಲಿ ವ್ಯತ್ಯಾಸವಿದ್ದರೆ, ಅದನ್ನು ಬೋಗಸ್ ಮತದಾನ ಅಥವಾ ಮತದಾರರ ಹಕ್ಕು ದುರ್ಬಳಕೆಯಂತಹ ಅಕ್ರಮಗಳ ಸಂಕೇತವೆಂದು ನೋಡಲಾಗುತ್ತದೆ.
ಚುನಾವಣಾ ಅಕ್ರಮಗಳ ಆರೋಪಗಳನ್ನು ತಳ್ಳಿಹಾಕಲು ಆಯೋಗವು ಈ ದಾಖಲೆಗಳನ್ನು ಬಹಿರಂಗಪಡಿಸಬೇಕಿತ್ತು. ಆದರೆ ಆಯೋಗ ಎಂದಿಗೂ ಇವುಗಳನ್ನು ಸಾರ್ವಜನಿಕಗೊಳಿಸುವುದಿಲ್ಲ.
ಮಹಾರಾಷ್ಟ್ರ, ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ 467 ವಿಧಾನಸಭಾ ಕ್ಷೇತ್ರಗಳು ಮತ್ತು 63 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಂತೆ 2024ರ ಚುನಾವಣೆಯ ಈ ಮಾಹಿತಿಯನ್ನು ರಿಪೋರ್ಟರ್ಸ್ ಕಲೆಕ್ಟಿವ್ ಪರಿಶೀಲಿಸಿದೆ. ಅಂದಹಾಗೆ ಇಸಿಐ ಹೊರತಾಗಿ ಬೇರೆಯವರು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಈ ಮಾಹಿತಿಗಳನ್ನು ಪರಿಶೀಲಿಸುತ್ತಿರುವುದು ಇದೇ ಮೊದಲು. ಇದು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ನಡೆಸಿದ 'ಎಲೆಕ್ಷನ್ ಆಡಿಟ್' ಸರಣಿಯ ಮೊದಲ ಲೇಖನ ಇಲ್ಲಿದೆ.
ರಿಪೋರ್ಟರ್ಸ್ ಕಲೆಕ್ಟಿವ್ ಆಂತರಿಕ ದಾಖಲೆಗಳನ್ನು ಪರಿಶೀಲಿಸಿದಾಗ, 51 ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ಸಂಭವನೀಯ ಅಕ್ರಮಗಳನ್ನು ಪರಿಶೀಲಿಸಲು ಇಸಿಐಗೆ ಯಾವುದೇ ದಾರಿಯಿರಲಿಲ್ಲ ಎಂಬುದು ಕಂಡುಬಂದಿದೆ. ಇವುಗಳಲ್ಲಿ 19 ಕ್ಷೇತ್ರಗಳಲ್ಲಿ, ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದ ಮತದಾರರ ಸಂಖ್ಯೆಯನ್ನು ದಾಖಲಿಸುವಲ್ಲಿ ಇಸಿಐ ವಿಫಲವಾಗಿದೆ. ಅಲ್ಲಿನ ಅಧಿಕಾರಿಗಳು ಲೆಕ್ಕ ಬರೆಯಬೇಕಾದ ಜಾಗದಲ್ಲಿ '0' ಅಥವಾ nil ಎಂದು ನಮೂದಿಸಿದ್ದಾರೆ.
ಈ ಪೈಕಿ ಹತ್ತು ಕ್ಷೇತ್ರಗಳು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿದ್ದು, ಅದರಲ್ಲಿ ಏಳು ಕ್ಷೇತ್ರಗಳನ್ನು ಬಿಜೆಪಿ ಅಥವಾ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಗೆದ್ದುಕೊಂಡಿದೆ.
ಮತದಾರರ ಸಂಖ್ಯೆಯ ಜಾಗದಲ್ಲಿ '0' ಎಂದು ನಮೂದಿಸುವುದಕ್ಕೆ ಎರಡು ಅರ್ಥಗಳಿರಬಹುದು: ಒಂದೋ ಈ ಕ್ಷೇತ್ರಗಳಲ್ಲಿ ಯಾರೂ ಮತ ಚಲಾಯಿಸಿಲ್ಲ ಅಥವಾ ಅಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಹೇಗಿದ್ದರೂ, ಈ ದಾಖಲೆಗಳನ್ನು ಪರಿಶೀಲಿಸುವ ಮೊದಲೇ ಭಾರತೀಯ ಚುನಾವಣಾ ಆಯೋಗವು ಫಲಿತಾಂಶಗಳನ್ನು ಘೋಷಿಸುತ್ತದೆ.
ರಿಪೋರ್ಟರ್ಸ್ ಕಲೆಕ್ಟಿವ್ ಪರಿಶೀಲನೆ ನಡೆಸಿದಾಗ ಎರಡು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 32 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳು ಹಾಗೂ ಎಣಿಕೆಯಾದ ಮತಗಳ ಸಂಖ್ಯೆ ಹೊಂದಾಣಿಕೆಯಾಗದಿರುವುದು ಕಂಡುಬಂದಿದೆ.
ಇದರಲ್ಲಿ ಅತ್ಯಂತ ದೊಡ್ಡ ವ್ಯತ್ಯಾಸ ಕಂಡುಬಂದಿರುವುದು ಹರಿಯಾಣದ ಬಡ್ಕಲ್ ವಿಧಾನಸಭಾ ಕ್ಷೇತ್ರದಲ್ಲಿ. ಈ ಕ್ಷೇತ್ರಕ್ಕೆ 2024 ಅಕ್ಟೋಬರ್ನಲ್ಲಿ ಚುನಾವಣೆ ನಡೆದಿತ್ತು. ಇಸಿಐನ ಆಂತರಿಕ ದಾಖಲೆಗಳ ಪ್ರಕಾರ ಇಲ್ಲಿ 3.32 ಲಕ್ಷ ಮತಗಳು ಚಲಾವಣೆಯಾಗಿದ್ದವು. ಆದರೆ ಇವಿಎಂಗಳಲ್ಲಿ ಕೇವಲ 1.60 ಲಕ್ಷ ಮತಗಳನ್ನು ಮಾತ್ರ ಎಣಿಕೆ ಮಾಡಲಾಗಿದೆ ಎಂದು ಆಯೋಗದ ವರದಿ ನೀಡಿದೆ.
ಬಡ್ಕಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಧನೇಶ್ ಅದ್ಲಾಖಾ ವಿರುದ್ಧ 6,181 ಮತಗಳ ಅಂತರದಿಂದ ಕೂದಲೆಳೆ ಅಂತರದಲ್ಲಿ ಸೋತ ಕಾಂಗ್ರೆಸ್ನ ವಿಜಯ್ ಪ್ರತಾಪ್ ಸಿಂಗ್, "ಮತ ಕಳ್ಳತನ" ನಡೆದಿದೆ ಎಂದು ಆರೋಪಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದರು. ಅವರು ಚುನಾವಣೆಯ ಎಲ್ಲಾ ದಾಖಲೆಗಳು ಮತ್ತು ಮತದಾನದ ದಿನದ ಸಿಸಿಟಿವಿ ದೃಶ್ಯಾವಳಿಗಳ ಪ್ರತಿಯನ್ನು ನೀಡುವಂತೆ ಕೋರಿದ್ದರು.
ಕೇವಲ ಸಿಂಗ್ ಅವರದ್ದು ಮಾತ್ರವಲ್ಲ, ಮಹಾರಾಷ್ಟ್ರ, ಹರಿಯಾಣ ಮತ್ತು ದಿಲ್ಲಿಯಲ್ಲೂ ಚುನಾವಣಾ ದಾಖಲೆಗಳನ್ನು ಒದಗಿಸುವಂತೆ ಹಾಗೂ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿ ಪ್ರತ್ಯೇಕ ಪ್ರಕರಣಗಳು ದಾಖಲಾದವು. ಇದಕ್ಕೂ ಮುನ್ನ, 2024ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಇಸಿಐ ವಾದ ಮಂಡಿಸಿ, ಈ ದಾಖಲೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡರೆ "ಇಡೀ ಚುನಾವಣಾ ವ್ಯವಸ್ಥೆಗೆ ತೊಂದರೆಯಾಗಬಹುದು ಮತ್ತು ಅಡಚಣೆ ಉಂಟಾಗಬಹುದು" ಎಂದು ಹೇಳಿತ್ತು.
2024ರ ಡಿಸೆಂಬರ್ 10 ರಂದು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಇಸಿಐಗೆ ನಿರ್ದೇಶನ ನೀಡಿತು. ಹತ್ತು ದಿನಗಳ ನಂತರ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ನಾಗರಿಕರು ಈ ಮಾಹಿತಿಯನ್ನು ಪಡೆಯುವುದನ್ನು ತಡೆಯಲು ಚುನಾವಣಾ ನಿಯಮಗಳಿಗೆ ತಿದ್ದುಪಡಿ ತಂದಿತು.
ಬಡ್ಕಲ್ ಸೇರಿದಂತೆ ಒಟ್ಟು 32 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಇವಿಎಂಗಳಲ್ಲಿ ಎಣಿಕೆಯಾದ ಮತಗಳ ಸಂಖ್ಯೆಯು ಜನರು ಚಲಾಯಿಸಿದ ಮತಗಳಿಗಿಂತ ಕಡಿಮೆಯಿತ್ತು.
ಉಳಿದ 20 ಕ್ಷೇತ್ರಗಳಲ್ಲಿ, ಸಾರ್ವಜನಿಕರು ಚಲಾಯಿಸಿದ ಮತಗಳಿಗಿಂತ ಎಣಿಕೆಯಾದ ಮತಗಳ ಸಂಖ್ಯೆಯೇ ಹೆಚ್ಚಾಗಿತ್ತು ಎಂದು ಇಸಿಐ ಆಂತರಿಕ ದಾಖಲೆಗಳು ತೋರಿಸುತ್ತವೆ.
ಎರಡೂ ಸಂದರ್ಭಗಳು ಮತದಾರರ ಹಕ್ಕು ಹತೋಟಿ ಅಥವಾ ಬೋಗಸ್ ಮತದಾನ ನಡೆದಿರುವ ಸಾಧ್ಯತೆಯನ್ನುಸೂಚಿಸುತ್ತವೆ.
ಈ ಎರಡು ಲೆಕ್ಕಗಳು ಪರಸ್ಪರ ಹೊಂದಾಣಿಕೆಯಾಗದಿದ್ದಾಗ, ಕಾನೂನಿನ ಪ್ರಕಾರ ಇಸಿಐ ಇದನ್ನು "ಚುನಾವಣಾ ಅಕ್ರಮ" ಪ್ರಕರಣವೆಂದು ಪರಿಗಣಿಸಿ ತನಿಖೆ ನಡೆಸಬೇಕಾಗುತ್ತದೆ.
ಅಪರೂಪದ ಸಂದರ್ಭಗಳಲ್ಲಿ, ಯಾರಾದರೂ ಚಲಾಯಿಸಿದ ಮತ ರದ್ದಾಗಿದ್ದರೆ ಅಥವಾ ಮತದಾನ ಕೇಂದ್ರಕ್ಕೆ ಹೋದ ವ್ಯಕ್ತಿ ಮತ ಚಲಾಯಿಸದೆ ಹಿಂತಿರುಗಿದ್ದರೆ ಸಣ್ಣಮಟ್ಟದ ವ್ಯತ್ಯಾಸ ಬರಲು ಸಾಧ್ಯವಿದೆ.
'ದಿ ರಿಪೋರ್ಟರ್ಸ್ ಕಲೆಕ್ಟಿವ್' 530 ಕ್ಷೇತ್ರಗಳ ಚುನಾವಣಾಧಿಕಾರಿಗಳು ಸಲ್ಲಿಸಿದ ಈ ಆಂತರಿಕ ಚುನಾವಣಾ ವರದಿಗಳನ್ನು ಪಡೆದುಕೊಂಡಿದೆ. ಈ ತನಿಖೆಗಾಗಿ ನಾವು ಒಟ್ಟು 4,212 ಭೌತಿಕ ದಾಖಲೆಗಳನ್ನು ಡಿಜಿಟಲೀಕರಿಸಿ, ಮರುಪರಿಶೀಲಿಸಿ ಮೌಲ್ಯಮಾಪನ ಮಾಡಿದ್ದೇವೆ. ನಾವು ಎಲ್ಲಾ 531 ಕ್ಷೇತ್ರಗಳ ದಾಖಲೆಗಳಿಗಾಗಿ ಹುಡುಕಾಟ ನಡೆಸಿದೆವು, ಆದರೆ ಜಮ್ಮು ಮತ್ತು ಕಾಶ್ಮೀರದ ದೇವ್ಸರ್ ಕ್ಷೇತ್ರದ ವರದಿ ಮಾತ್ರ ನಮಗೆ ಸಿಗಲಿಲ್ಲ ಎಂದು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ವರದಿ ಉಲ್ಲೇಖಿಸಿದೆ.
2019ರ ಲೋಕಸಭಾ ಚುನಾವಣೆಯ 373 ಕ್ಷೇತ್ರಗಳ ಡೇಟಾದಲ್ಲಿಯೂ ಇದೇ ರೀತಿಯ ವ್ಯತ್ಯಾಸಗಳಿದ್ದ ಬಗ್ಗೆ 'ದಿ ಕ್ವಿಂಟ್'ನ ಪೂನಂ ಅಗರ್ವಾಲ್ ವರದಿ ಮಾಡಿದ್ದರು. ಆ ವರದಿಯು ಇಸಿಐ ವೆಬ್ಸೈಟ್ನಲ್ಲಿ ಪ್ರಕಟವಾದ ಮತದಾನದ ಪ್ರಮಾಣ ಮತ್ತು ಎಣಿಕೆಯಾದ ಮತಗಳ ಸಂಖ್ಯೆಯನ್ನು ಆಧರಿಸಿತ್ತು.
ಪ್ರತಿಯೊಂದು ಕ್ಷೇತ್ರದ ಚುನಾವಣಾಧಿಕಾರಿಯೂ ಚುನಾವಣೆ ಮುಗಿದ ಹದಿನೈದು ದಿನಗಳ ಒಳಗಾಗಿ ಈ ವರದಿಗಳನ್ನು ಇಸಿಐಗೆ ಕಳುಹಿಸಿಕೊಡುತ್ತಾರೆ. ಇವು ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಸಂಗ್ರಹಿಸಿದ ಎಲ್ಲಾ ಚುನಾವಣಾ ಮಾಹಿತಿಯನ್ನು ಒಳಗೊಂಡಿರುತ್ತವೆ.
ಪ್ರತಿ ಬೂತ್ನಲ್ಲೂ ಇಬ್ಬರು ಪ್ರತ್ಯೇಕ ಚುನಾವಣಾ ಸಿಬ್ಬಂದಿ ಈ ಎರಡು ಲೆಕ್ಕಗಳನ್ನು ದಾಖಲಿಸುವ ಜವಾಬ್ದಾರಿ ಹೊಂದಿರುತ್ತಾರೆ. ಒಬ್ಬರು ಮತ ಚಲಾಯಿಸಿದ ಮತದಾರರ ಲೆಕ್ಕ ಇಟ್ಟರೆ, ಇನ್ನೊಬ್ಬರು ಎಣಿಕೆಯಾದ ಮತಗಳ ಲೆಕ್ಕ ಇಡುತ್ತಾರೆ. ಈ ಲೆಕ್ಕಗಳೇ ಕ್ಷೇತ್ರದಲ್ಲಿ ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಇಸಿಐ ಬಳಿ ಇರುವ ಮುಖ್ಯ ಆಂತರಿಕ ದಾಖಲೆಯಾಗಿವೆ.
2019ರ ಸಾರ್ವತ್ರಿಕ ಚುನಾವಣೆವರೆಗೆ ಇಸಿಐ ಬೂತ್ ಮಟ್ಟದ ಮತದಾನದ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಿತ್ತು. ಆದರೆ ಆ ನಂತರ ಈ ಪ್ರಮುಖ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದನ್ನು ನಿಲ್ಲಿಸಿದೆ.
ಆಯೋಗವು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದರೆ, ಕೇವಲ ಆಯಾ ಕ್ಷೇತ್ರಗಳ, ರಾಜ್ಯ ಕಚೇರಿಗಳ ಮತ್ತು ಹೊಸದಿಲ್ಲಿಯ ಪ್ರಧಾನ ಕಚೇರಿಯ ಅಧಿಕಾರಿಗಳು ಮಾತ್ರವಲ್ಲದೆ ಸಾಮಾನ್ಯ ನಾಗರಿಕರು ಮತ್ತು ರಾಜಕೀಯ ಪಕ್ಷಗಳು ಕೂಡ ಯಾವುದೇ ಅಕ್ರಮದ ಬಗ್ಗೆ ಎಚ್ಚೆತ್ತುಕೊಳ್ಳಬಹುದಿತ್ತು.
ಒಂದು ವೇಳೆ ಇಸಿಐಗೆ ಅನುಮಾನದ ಲಾಭ ನೀಡಬೇಕೆಂದರೂ, ಈ ಎರಡು ಲೆಕ್ಕಗಳ ನಡುವಿನ ದೊಡ್ಡ ವ್ಯತ್ಯಾಸವು ಕನಿಷ್ಠ ಪಕ್ಷ 2024ರಲ್ಲಿ ಚುನಾವಣೆ ನಡೆದ ಎರಡು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 530 ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ 51 ಕ್ಷೇತ್ರಗಳಲ್ಲಿ ಬೋಗಸ್ ಮತದಾನ ನಡೆದಿಲ್ಲ ಎಂದು ಪ್ರಮಾಣೀಕರಿಸಲು ಆಯೋಗ ವಿಫಲವಾಗಿರುವುದನ್ನು ತೋರಿಸುತ್ತದೆ.
ಸಾರ್ವಜನಿಕರ ಹಣದ ರಕ್ಷಕನಾಗಿರುವ ಬ್ಯಾಂಕ್ವೊಂದು ಯಾರು ಹಣ ಠೇವಣಿ ಮಾಡಿದ್ದಾರೆ ಮತ್ತು ಯಾರು ಹಣ ಹಿಂಪಡೆದಿದ್ದಾರೆ ಎಂಬ ಲೆಕ್ಕವನ್ನೇ ಇಡಲು ಸಾಧ್ಯವಾಗದ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಚುನಾವಣಾ ದಾಖಲೆಗಳಲ್ಲಿ ನಮಗೆ ಕಂಡುಬಂದ ಈ ವ್ಯತ್ಯಾಸವೂ ಅದೇ ರೀತಿಯದ್ದಾಗಿದೆ, ಇಲ್ಲಿ ಇಸಿಐ ನಾಗರಿಕರ ಮತದಾನದ ಹಕ್ಕುಗಳನ್ನು ಕಾಪಾಡುವ ಹೊಣೆ ಹೊತ್ತಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಸಮಯದಲ್ಲಿ ಮತದಾರರ ಪಟ್ಟಿ ಬದಲಾವಣೆ ಮತ್ತು ಚುನಾವಣಾ ಅಕ್ರಮಗಳಿಗೆ ಅವಕಾಶ ನೀಡಿದೆ ಎಂದು ವಿರೋಧ ಪಕ್ಷಗಳಿಂದ ಇಸಿಐ ಆರೋಪ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ರಿಪೋರ್ಟರ್ ಕಲೆಕ್ಟಿವ್ ಪರಿಶೀಲಿಸಿದ ಆಯೋಗದ ಆಂತರಿಕ ಮಾಹಿತಿಯು ಮತದಾನ ಪ್ರಕ್ರಿಯೆಯನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಪಾರದರ್ಶಕವಾಗಿ ಉಸ್ತುವಾರಿ ಹಾಗೂ ಆಡಿಟ್ ಮಾಡುವ ತನ್ನ ಸಂವಿಧಾನಾತ್ಮಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂಬುದನ್ನು ತೋರಿಸುತ್ತದೆ.
ನಮಗೆ ಗೊತ್ತಿಲ್ಲ, ನಮ್ಮ ಮಾಹಿತಿಯನ್ನು ನಮಗೆ ನೀಡಿ ಎಂದ ಚುನಾವಣಾ ಆಯೋಗ
ನಾವು ಇಸಿಐಗೆ ವಿವರವಾದ ಪ್ರಶ್ನೆಗಳನ್ನು ಕಳುಹಿಸಿದ್ದೆವು. ಅವರು ನಮ್ಮ ಪತ್ರಕರ್ತರ ಪ್ರಶ್ನೆಗಳನ್ನು ದೂರು ಎಂದು ಪರಿಗಣಿಸಿ, ತಮ್ಮ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಗೆ ರವಾನಿಸಿದ್ದಾರೆ.
ಅಷ್ಟೇ ಅಲ್ಲದೆ, ತಮ್ಮದೇ ಮಾಹಿತಿಯನ್ನು ತಮಗೆ ನೀಡುವಂತೆ ನಮ್ಮನ್ನು ಕೇಳಿದ ಅವರು, ಅದನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು. "ಮಾಹಿತಿಯನ್ನು ಇಲಾಖೆಯೊಳಗೆ ಸುರಕ್ಷಿತವಾಗಿಡಲಾಗುತ್ತದೆ ಮತ್ತು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ" ಎಂದು ಅವರು ಬರೆದಿದ್ದಾರೆ. ಇಸಿಐ ನೀಡಿದ ಸಂಪೂರ್ಣ ಉತ್ತರವನ್ನು ನೀವು ಇಲ್ಲಿ ಓದಬಹುದು.
'ದಿ ರಿಪೋರ್ಟರ್ಸ್ ಕಲೆಕ್ಟಿವ್' ಈ 'ಎಲೆಕ್ಷನ್ ಆಡಿಟ್' ಸರಣಿಯ ಕೊನೆಯ ಭಾಗದೊಂದಿಗೆ ಎಲ್ಲಾ ಮೂಲ ಮಾಹಿತಿ ಮತ್ತು ಇಸಿಐನ ಮೂಲ ದಾಖಲೆಗಳನ್ನು ಸಾರ್ವಜನಿಕಗೊಳಿಸಲಿದೆ. ನಾವು ಯಾವುದೇ 'ಕುಂದುಕೊರತೆ' ದೂರು ಸಲ್ಲಿಸುವುದಿಲ್ಲ. ಇಸಿಐ ಜೊತೆ ರಹಸ್ಯವಾಗಿ ಸಂವಹನವನ್ನೂ ನಡೆಸುವುದಿಲ್ಲ. ನಾವು ಅವರಿಗೆ ಕೇಳಿದ ಪ್ರಶ್ನೆಗಳನ್ನು ಇಲ್ಲಿ ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಿದ್ದೇವೆ.
ವಿಶ್ವಾಸಾರ್ಹವಲ್ಲದ ಇಸಿಐ ಉಸ್ತುವಾರಿ
ಹರಿಯಾಣದ ಬಡ್ಕಲ್ನಂತೆಯೇ ಇತರ ಹಲವಾರು ಕ್ಷೇತ್ರಗಳಲ್ಲೂ ಭಾರೀ ವ್ಯತ್ಯಾಸಗಳು ಕಂಡುಬಂದಿವೆ. ಅತ್ಯಂತ ದೊಡ್ಡ ವ್ಯತ್ಯಾಸ ಕಂಡುಬಂದಿರುವುದು ಮಹಾರಾಷ್ಟ್ರದ ಮುಂಬೈ ನಾರ್ತ್ ಲೋಕಸಭಾ ಕ್ಷೇತ್ರದಲ್ಲಿ. ಇಲ್ಲಿಂದ ಪಿಯೂಶ್ ಗೋಯಲ್ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ಗೋಯಲ್ ಅವರು ಕಾಂಗ್ರೆಸ್ನ ಭೂಷಣ್ ಪಾಟೀಲ್ ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದರು.
ಇಸಿಐ ಆಂತರಿಕ ದಾಖಲೆಗಳ ಪ್ರಕಾರ, ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳು 18.11 ಲಕ್ಷ. ಆದರೆ ಆಯೋಗ ಪ್ರಕಟಿಸಿದ ಫಲಿತಾಂಶದ ಪ್ರಕಾರ ಕ್ಷೇತ್ರದಲ್ಲಿ 10.33 ಲಕ್ಷ ಮತಗಳು ಚಲಾವಣೆಯಾಗಿದ್ದವು. ಇದರರ್ಥ ಚಲಾವಣೆಯಾದ ಮತಗಳಲ್ಲಿ ಬರೋಬ್ಬರಿ 7.78 ಲಕ್ಷ ಮತಗಳು (ಶೇಕಡಾ 42.8 ರಷ್ಟು ಮತಗಳು) ಇವಿಎಂಗಳಲ್ಲಿ ಎಣಿಕೆಯಾಗೇ ಇಲ್ಲ!
ಮುಂಬೈ ನಾರ್ತ್ ಮತ್ತು ಬಡ್ಕಲ್ ಎರಡೂ ಕ್ಷೇತ್ರಗಳಲ್ಲಿ, ಇಸಿಐ ಅಧಿಕಾರಿಗಳು ಕ್ಷೇತ್ರದಲ್ಲಿರುವ ಒಟ್ಟು ನೋಂದಾಯಿತ ಮತದಾರರ ಸಂಖ್ಯೆಯನ್ನೇ ಚಲಾವಣೆಯಾದ ಮತಗಳ ಸಂಖ್ಯೆ ಎಂದು ದಾಖಲಿಸಿದ್ದರು. ಆಂತರಿಕ ದಾಖಲೆಗಳ ಪ್ರಕಾರ ನೋಡುವುದಾದರೆ, ಈ ಕ್ಷೇತ್ರಗಳಲ್ಲಿ ಶೇಕಡಾ 100 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ ಎಂದರ್ಥ. ಆದರೆ ಇಸಿಐ ಅಧಿಕೃತವಾಗಿ ಪ್ರಕಟಿಸಿದ ಮತದಾನದ ಪ್ರಮಾಣ ಅತ್ಯಂತ ಕಡಿಮೆಯಿತ್ತು . ಮುಂಬೈ ನಾರ್ತ್ನಲ್ಲಿ ಶೇಕಡಾ 57 ಮತ್ತು ಬಡ್ಕಲ್ನಲ್ಲಿ ಶೇಕಡಾ 48 ಮತದಾನ ದಾಖಲಾಗಿದೆ.
ಎರಡು ರಾಜ್ಯಗಳ ಇನ್ನೂ ನಾಲ್ಕು ಕ್ಷೇತ್ರಗಳಲ್ಲಿ ಇದೇ ರೀತಿಯ ದಾಖಲೆಗಳು ಕಂಡುಬಂದಿದ್ದು, ಅಲ್ಲಿನ ಚುನಾವಣಾ ಅಧಿಕಾರಿಗಳು ಒಟ್ಟು ನೋಂದಾಯಿತ ಮತದಾರರ ಸಂಖ್ಯೆಯನ್ನೇ ಚಲಾವಣೆಯಾದ ಮತಗಳ ಸಂಖ್ಯೆ ಎಂದು ನಮೂದಿಸಿದ್ದಾರೆ.
ಇವುಗಳನ್ನು ಬರೆಯುವಾಗ ಸಂಭವಿಸಿದ ತಪ್ಪು (clerical errors) ಎಂದು ತಳ್ಳಿಹಾಕಬಹುದಾದರೂ, ಒಂದು ವೇಳೆ ಈ ಕ್ಷೇತ್ರಗಳಲ್ಲಿ ಅಕ್ರಮ ನಡೆದಿದ್ದರೆ ಅಂತಹ ವ್ಯತ್ಯಾಸಗಳು ಅದನ್ನು ಮುಚ್ಚಿಹಾಕುತ್ತವೆ. ಇದು ಈ ದಾಖಲೆಗಳನ್ನು ನಿರ್ವಹಿಸುವ ಮತ್ತು ಪರಿಶೀಲಿಸುವ ಮುಖ್ಯ ಉದ್ದೇಶವನ್ನೇ ಇಲ್ಲದಂತೆ ಮಾಡುತ್ತದೆ.
ಇಸಿಐನ ದಾಖಲೆಗಳು, ಉಸ್ತುವಾರಿ ಮತ್ತು ಚುನಾವಣಾ ಆಡಿಟ್ ವ್ಯವಸ್ಥೆ ಎಷ್ಟು ವಿಶ್ವಾಸಾರ್ಹವಲ್ಲ ಎಂಬುದು ಇತರ ಹಲವು ಪ್ರಕರಣಗಳಲ್ಲಿ ಇನ್ನಷ್ಟು ಸ್ಪಷ್ಟವಾಗುತ್ತದೆ. ಹರಿಯಾಣದ ಕೈತಲ್ ವಿಧಾನಸಭಾ ಕ್ಷೇತ್ರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅಲ್ಲಿ ಕಾಂಗ್ರೆಸ್ನ ಆದಿತ್ಯ ಸುರ್ಜೇವಾಲಾ ಅವರು ಬಿಜೆಪಿಯ ಲೀಲಾ ರಾಮ್ ಅವರನ್ನು 8,124 ಮತಗಳ ಅಂತರದಿಂದ ಸೋಲಿಸಿದ್ದರು.
ಇಸಿಐನ ಆಂತರಿಕ ಆಡಿಟ್ ದಾಖಲೆಯ ಪ್ರಕಾರ ಇಡೀ ಕ್ಷೇತ್ರದಲ್ಲಿ ಕೇವಲ 215 ನಾಗರಿಕರು ಮಾತ್ರ ಮತ ಚಲಾಯಿಸಿದ್ದಾರೆ. ಆದರೆ ಕೈತಲ್ನಲ್ಲಿ ಇವಿಎಂಗಳಲ್ಲಿ ಅಧಿಕಾರಿಗಳು 1,67,285 ಮತಗಳನ್ನು ಎಣಿಕೆ ಮಾಡಿದ್ದಾರೆ. ಈ ಎರಡು ಲೆಕ್ಕಗಳ ನಡುವಿನ ಭಾರೀ ವ್ಯತ್ಯಾಸವನ್ನು ನಂಬುವುದೇ ಕಷ್ಟ.
ಅದೇ ರೀತಿ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಇವಿಎಂಗಳಲ್ಲಿ 6,72,942 ಮತಗಳನ್ನು ಎಣಿಕೆ ಮಾಡಲಾಗಿತ್ತು. ಆದರೆ ಆಂತರಿಕ ದಾಖಲೆಗಳ ಪ್ರಕಾರ ಕೇವಲ 6,66,046 ಮತಗಳು ಮಾತ್ರ ಚಲಾವಣೆಯಾಗಿದ್ದವು. ಅಂದರೆ ಇಸಿಐ ಇಲ್ಲಿ 6,896 ಹೆಚ್ಚುವರಿ ಮತಗಳನ್ನು ಎಣಿಕೆ ಮಾಡಿದೆ. ಈ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಗಾ ಸೈಯದ್ ರುಹುಲ್ಲಾ ಮೆಹ್ದಿ ಗೆಲುವು ಸಾಧಿಸಿದ್ದರು.
2024ರ ವಿಧಾನಸಭಾ ಕ್ಷೇತ್ರದ ಚುನಾವಣೆ ನಂತರ ಹರಿಯಾಣದ 20 ಕ್ಷೇತ್ರಗಳಲ್ಲಿ ಮರು ಮತದಾನಕ್ಕೆ ಕಾಂಗ್ರೆಸ್ ಪಟ್ಟು ಹಿಡಿದಾಗ ಇಸಿಐ 1,600 ಪುಟಗಳ ವಿವರವಾದ ಉತ್ತರ ನೀಡಿತು. "ಹರಿಯಾಣ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ದೋಷರಹಿತವಾಗಿತ್ತು ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರ ಸಮ್ಮುಖದಲ್ಲೇ ನಡೆದಿದೆ" ಎಂದು ಇಸಿಐ ಹೇಳಿತ್ತು.
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮುಗಿದ ನಂತರ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ - ಶರದ್ ಚಂದ್ರ ಪವಾರ್ (NCP(SP) ಪಕ್ಷವು ಎರಡು ಕ್ಷೇತ್ರಗಳಲ್ಲಿ ಮತದಾರರ ಹಕ್ಕು ತಡೆ ಮತ್ತು ಬೋಗಸ್ ಮತದಾನ ನಡೆದಿರುವ ಬಗ್ಗೆ ವಿಡಿಯೊ ಸಾಕ್ಷ್ಯಗಳನ್ನು ಇಸಿಐಗೆ ಸಲ್ಲಿಸಿತು. ಜೊತೆಗೆ ಮರು ಮತದಾನಕ್ಕೂ ಮನವಿ ಮಾಡಿತು. ಆದರೆ ಚುನಾವಣಾಧಿಕಾರಿಗಳು ಈ ಮನವಿಯನ್ನು ತಿರಸ್ಕರಿಸಿದರು.
ಚುನಾವಣಾಧಿಕಾರಿಗಳು ಈ ವರದಿಗಳನ್ನು ಇಡೀ ಕ್ಷೇತ್ರದ ಮಟ್ಟದಲ್ಲಿ ತಯಾರಿಸುವುದರಿಂದ, ಅಕ್ರಮಗಳು ನಡೆದ ನಿರ್ದಿಷ್ಟ ಬೂತ್ಗಳನ್ನು ಗುರುತಿಸುವುದು ಕಷ್ಟ. ಪ್ರತಿಯೊಂದು ಮತದಾನ ಕೇಂದ್ರದ ಮುಖ್ಯಸ್ಥರು ತಯಾರಿಸುವ 'ಫಾರ್ಮ್ 17ಸಿ' (Form 17C) ತಲುಪಿದರೆ ಮಾತ್ರ ಇದು ಸಾಧ್ಯ. ಈ ಫಾರ್ಮ್ನಲ್ಲಿ ಮತ ಚಲಾಯಿಸಲು ಬಂದ ಮತದಾರರ ಸಂಖ್ಯೆ ಮತ್ತು ಆ ಬೂತ್ನ ಇವಿಎಂನಲ್ಲಿ ಚಲಾವಣೆಯಾದ ಒಟ್ಟು ಮತಗಳ ಲೆಕ್ಕ ಇರುತ್ತದೆ.
ನಾವು ಪಡೆದುಕೊಂಡಿರುವ ಆಂತರಿಕ ದಾಖಲೆಗಳು ಚುನಾವಣಾಧಿಕಾರಿಗಳು ಎಲ್ಲಾ ಬೂತ್ಗಳಿಂದ ಸಂಗ್ರಹಿಸಿ, ಕಡ್ಡಾಯವಾಗಿ ಇಸಿಐಗೆ ಸಲ್ಲಿಸುವ ಒಟ್ಟು ಮಾಹಿತಿಯ ಪಟ್ಟಿಯಾಗಿದೆ.
2024ರ ಲೋಕಸಭಾ ಚುನಾವಣೆಯ ಎಲ್ಲಾ 'ಫಾರ್ಮ್ 17C' ದಾಖಲೆಗಳನ್ನು ಬಹಿರಂಗಪಡಿಸಬೇಕೆಂದು ಕೋರಿ ಪಾರದರ್ಶಕತೆಗಾಗಿ ಶ್ರಮಿಸುವ ಸಂಸ್ಥೆ 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಇಸಿಐ ಈ ಮನವಿಯನ್ನು ನಿರಾಕರಿಸಿತು. "ಅಭ್ಯರ್ಥಿ ಅಥವಾ ಅವರ ಏಜೆಂಟ್ ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗೆ ಫಾರ್ಮ್ 17C ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ" ಎಂದು ಆಯೋಗ ಹೇಳಿತು.
ಇದಾದ ತಕ್ಷಣವೇ, ಕೇಂದ್ರ ಸರಕಾರವು ಈ ದಾಖಲೆಗಳು ಸಾರ್ವಜನಿಕರಿಗೆ ಸಿಗದಂತೆ ತಡೆಯಲು 1961ರ ಚುನಾವಣಾ ನಿರ್ವಹಣಾ ನಿಯಮಗಳಿಗೆ ತಿದ್ದುಪಡಿ ತಂದಿತು. ಈ ತಿದ್ದುಪಡಿಯ ಅಧಿಸೂಚನೆಯನ್ನು 2024ರ ಡಿಸೆಂಬರ್ 20 ರಂದು ರಾತ್ರಿ 10.23 ಕ್ಕೆ ಹೊರಡಿಸಲಾಯಿತು.
ಇಸಿಐ ಮತದಾರರ ದಾಖಲೆಯನ್ನು ಏಕೆ ಮತ್ತು ಹೇಗೆ ಇಟ್ಟುಕೊಳ್ಳುತ್ತದೆ?
ಚುನಾವಣೆಯ ಸಮಯದಲ್ಲಿ ನಮ್ಮ ಸ್ಥಳೀಯ ಬೂತ್ಗಳಲ್ಲಿ ಮತದಾನ ಹೇಗೆ ನಡೆಯುತ್ತದೆ ಎಂಬುದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ. ನಾಗರಿಕರು ಒಳಗೆ ಹೋಗುತ್ತಾರೆ, ಅವರ ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸಲಾಗುತ್ತದೆ, ಬೆರಳಿಗೆ ಶಾಯಿ ಗುರುತು ಹಾಕಲಾಗುತ್ತದೆ ಮತ್ತು ಅವರು ಬೀಪ್ ಶಬ್ದದೊಂದಿಗೆ ಇವಿಎಂನಲ್ಲಿ ತಮ್ಮ ಮತವನ್ನು ಚಲಾಯಿಸುತ್ತಾರೆ.
ಈ ಎಲ್ಲಾ ಹಂತಗಳನ್ನು ಚುನಾವಣಾ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ದಾಖಲಿಸುತ್ತಾರೆ. ಮತದಾರರೊಬ್ಬರು ಒಳಗಡೆ ಹೋದರೂ ಮತ ಚಲಾಯಿಸಲು ಅವಕಾಶ ನೀಡದಿರುವುದು ಅಥವಾ ಒಬ್ಬರೇ ಮತದಾರ ಒಳಗೆ ಹೋಗಿ ಒಂದೇ ಇವಿಎಂನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸುವುದು. ಸರಳವಾಗಿ ಹೇಳುವುದಾದರೆ ಚುನಾವಣಾ ಅಕ್ರಮಗಳನ್ನು ತಡೆಯಲು ಮತ್ತು ಪರಿಶೀಲಿಸಲು ಈ ದಾಖಲೆ ಅಗತ್ಯ.
ಇಂತಹ ಚುನಾವಣಾ ಅಕ್ರಮಗಳನ್ನು ತಡೆಯಲು, ಬೂತ್ ಮಟ್ಟದಲ್ಲಿ ಮತದಾನದ ಎರಡು ಪ್ರತ್ಯೇಕ ಲೆಕ್ಕಗಳನ್ನು ನಿರ್ವಹಿಸುವುದನ್ನು ಇಸಿಐ ಕಡ್ಡಾಯಗೊಳಿಸಿದೆ. ಮತದಾನದ ಕೊನೆಯಲ್ಲಿ ಈ ಎರಡೂ ಲೆಕ್ಕಗಳು ಪರಸ್ಪರ ಹೊಂದಾಣಿಕೆಯಾಗಬೇಕು.
ಚುನಾವಣಾ ನಿರ್ವಹಣಾ ನಿಯಮಗಳ ಪ್ರಕಾರ, ಮತದಾರರು ಮತದಾನ ಕೇಂದ್ರವನ್ನು ಪ್ರವೇಶಿಸಿದ ನಂತರ ಪ್ರತಿಯೊಬ್ಬ ಮತದಾರನ ಲೆಕ್ಕವನ್ನೂ ಇಡುವುದು ಕಡ್ಡಾಯವಾಗಿದೆ.
ಇದನ್ನು 'ಫಾರ್ಮ್ 17ಎ' (Form 17A) ಅಥವಾ 'ಮತದಾರರ ನೋಂದಣಿ ಪುಸ್ತಕ' (Register of Voters) ಎಂಬ ಮತ್ತೊಂದು ದಾಖಲೆಯಲ್ಲಿ ನಮೂದಿಸಲಾಗುತ್ತದೆ.
ಮೊದಲು ಚುನಾವಣಾಧಿಕಾರಿಯೊಬ್ಬರು ಮತದಾರರ ಗುರುತನ್ನು ಮತದಾರರ ಪಟ್ಟಿಯೊಂದಿಗೆ ತಾಳೆ ಮಾಡಿ ನೋಡುತ್ತಾರೆ, ಆ ನಂತರವೇ ಅವರ ಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಯಿಯ ಗುರುತು ಹಾಕುತ್ತಾರೆ.
ನಂತರ ಮತ್ತೊಬ್ಬ ಅಧಿಕಾರಿ ಮತದಾರರ ವಿವರಗಳನ್ನು ಮತದಾರರ ನೋಂದಣಿ ಪುಸ್ತಕದಲ್ಲಿ ಕ್ರಮಸಂಖ್ಯೆಯಂತೆ ನಮೂದಿಸುತ್ತಾರೆ. ಅದೇ ಅಧಿಕಾರಿ ಮತದಾರನ ಕ್ರಮಸಂಖ್ಯೆಯನ್ನು ಒಳಗೊಂಡ ಚೀಟಿಯನ್ನು (ಸ್ಲಿಪ್) ಸಿದ್ಧಪಡಿಸಿ ಮತದಾರನಿಗೆ ನೀಡುತ್ತಾರೆ.
ಇವಿಎಂ ಉಸ್ತುವಾರಿ ವಹಿಸಿರುವ ಮೂರನೇ ಅಧಿಕಾರಿ ಈ ಚೀಟಿಯನ್ನು ಪಡೆದುಕೊಂಡು ಮತದಾರನಿಗೆ ಮತ ಚಲಾಯಿಸಲು ಅವಕಾಶ ನೀಡುತ್ತಾರೆ.
ಮತದಾರರ ನೋಂದಣಿ ಪುಸ್ತಕದಲ್ಲಿ ಹೆಸರುಗಳು ನಮೂದಾದ ಅದೇ ಅನುಕ್ರಮದಲ್ಲಿಯೇ ಮತದಾರರು ಇವಿಎಂನಲ್ಲಿ ಮತ ಚಲಾಯಿಸುವುದು "ಅತ್ಯಂತ ಅತ್ಯಗತ್ಯ" ಎಂದು ಇಸಿಐ ನಿಯಮಗಳು ಹೇಳುತ್ತವೆ.
ಮತದಾನ ಪೂರ್ಣಗೊಂಡ ನಂತರ, ಮತದಾನ ಕೇಂದ್ರದ ಪ್ರಿಸೈಡಿಂಗ್ ಆಫೀಸರ್ ಇವಿಎಂನ ಕಂಟ್ರೋಲ್ ಯೂನಿಟ್ನಲ್ಲಿರುವ "ಕ್ಲೋಸ್" (Close) ಬಟನ್ ಒತ್ತುತ್ತಾರೆ. ಆಗ ಕಂಟ್ರೋಲ್ ಯೂನಿಟ್ನಲ್ಲಿ ಒಟ್ಟು ಚಲಾವಣೆಯಾದ ಮತಗಳ ಸಂಖ್ಯೆ ಕಾಣಿಸಿಕೊಳ್ಳುತ್ತದೆ.
ಕಾನೂನಿನ ಪ್ರಕಾರ, ಮತದಾರರ ನೋಂದಣಿ ಪುಸ್ತಕದಲ್ಲಿರುವ ಒಟ್ಟು ಮತದಾರರ ಸಂಖ್ಯೆ ಮತ್ತು ಇವಿಎಂನಲ್ಲಿ ದಾಖಲಾದ ಮತಗಳ ಸಂಖ್ಯೆ ಸಂಪೂರ್ಣವಾಗಿ ಹೊಂದಾಣಿಕೆಯಾಗಬೇಕು.
ಇದರಲ್ಲಿ ಈ ಎರಡು ಸಂದರ್ಭಗಳನ್ನು ಹೊರತುಪಡಿಸಿ, ಅಂದರೆ ಮತದಾರರೊಬ್ಬರು ಬೂತ್ಗೆ ಬಂದರೂ ಮತ ಚಲಾಯಿಸಲು ನಿರಾಕರಿಸಿದಾಗ (Rule 490), ಅಥವಾ ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಿಸೈಡಿಂಗ್ ಆಫೀಸರ್ ಮತದಾರರಿಗೆ ಮತ ಚಲಾಯಿಸದಂತೆ ತಡೆದಾಗ (Rule 49M). ಕ್ಷೇತ್ರದ ಮಟ್ಟದಲ್ಲಿ ಈ ಎರಡೂ ಸಂಖ್ಯೆಗಳು ಸಾಮಾನ್ಯವಾಗಿ ಅತ್ಯಂತ ಕಡಿಮೆಯಿರುತ್ತವೆ.
ಮತದಾನದ ಮುಕ್ತಾಯದ ಸಮಯದಲ್ಲಿ, ಪ್ರಿಸೈಡಿಂಗ್ ಆಫೀಸರ್ 'ಫಾರ್ಮ್ 17ಸಿ' ನ ಭಾಗ 1 ರಲ್ಲಿ (ದಾಖಲಾದ ಮತಗಳ ಲೆಕ್ಕ - Account of Votes Recorded) ಈ ಎರಡೂ ದಾಖಲೆಗಳನ್ನು ತಾಳೆ ಮಾಡಿ ನೋಡುತ್ತಾರೆ.
ಮತದಾನ ನಡೆದ ಮರುದಿನ, ಚುನಾವಣಾಧಿಕಾರಿಯು ಇಸಿಐ ಭಾಷೆಯಲ್ಲಿ ಹೇಳುವ "ಮರೆಮಾಚಿದ ಚುನಾವಣಾ ಅಕ್ರಮಗಳನ್ನು" ಪತ್ತೆಹಚ್ಚಲು ತಮ್ಮ ಕ್ಷೇತ್ರದ ಫಾರ್ಮ್ 17C ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ.
ದಾಖಲೆಗಳಲ್ಲಿ ಯಾವುದೇ ತಪ್ಪು ಅಥವಾ ಅಕ್ರಮದ ಸುಳಿವು ಸಿಕ್ಕರೆ, ಆ ಅಧಿಕಾರಿ ಇಸಿಐಗೆ ಮರು ಮತದಾನ ನಡೆಸುವಂತೆ ಶಿಫಾರಸು ಮಾಡುತ್ತಾರೆ. ಆದರೆ ನಮ್ಮ ವಿಶ್ಲೇಷಣೆಯಲ್ಲಿ ಲೆಕ್ಕದ ವ್ಯತ್ಯಾಸಗಳು ಕಂಡುಬಂದ 51 ಕ್ಷೇತ್ರಗಳಲ್ಲಿ ಯಾವುದರಲ್ಲೂ ಮರು ಮತದಾನ ನಡೆದಿಲ್ಲ.
ಸೌಜನ್ಯ: reporters-collective.in