ಪಾರಿವಾಳದ ಹಿಕ್ಕೆಗಳ ಸಮಸ್ಯೆ; ಬ್ಯಾಡ್ಮಿಂಟನ್ ಆಟಗಾರ್ತಿಯ ಆರೋಗ್ಯ ಕಳವಳ ತಪ್ಪಲ್ಲ
2026ರ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಮೈದಾನದ ಒಳಗೆ ಪಾರಿವಾಳದ ಹಿಕ್ಕೆಗಳು ಇರುವುದು ಗಂಭೀರ ಆರೋಗ್ಯ ಸಮಸ್ಯೆ ತರಲಿದೆ ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಮಿಯಾ ಹೇಳಿರುವುದು ವೈರಲ್ ಆಗಿದೆ.
ಡ್ಯಾನಿಷ್ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಮಿಯಾ ಬ್ಲಿಚ್ಫೆಲ್ಡ್‌ಟ್ ಮತ್ತೆ ಭಾರತದ ಪಾರಿವಾಳದ ಸಮಸ್ಯೆಯನ್ನು ಮುನ್ನೆಲೆಗೆ ತಂದಿದ್ದಾರೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ 2026ರ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಮೈದಾನದ ಒಳಗೆ ಪಾರಿವಾಳದ ಹಿಕ್ಕೆಗಳು ಇರುವುದು ಗಂಭೀರ ಆರೋಗ್ಯ ಸಮಸ್ಯೆ ತರಲಿದೆ ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆ ಬೇಗನೇ ವೈರಲ್ ಆಗಿದೆ. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ.
ಪಾರಿವಾಳದ ಹಿಕ್ಕೆಗಳು ಸಮಸ್ಯೆ ಏಕೆ?
ಪಾರಿವಾಳದ ಹಿಕ್ಕೆಗಳನ್ನು ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಲಾಗಿದೆ. ಮುಖ್ಯವಾಗಿ ಹೆಚ್ಚು ಓಡಾಟವಿರುವ ಸ್ಥಳಗಳಲ್ಲಿ ಇದು ನೈರ್ಮಲ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಭಾರತದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ‘ಕರುಣೆ’ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ದೇವಾಲಯಗಳು, ಉದ್ಯಾನವನಗಳು ಮತ್ತು ವಸತಿ ಸಂಕೀರ್ಣಗಳ ಬಾಲ್ಕನಿಗಳಲ್ಲಿ ಅವುಗಳಿಗೆ ಆಹಾರ ನೀಡಲಾಗುತ್ತದೆ. ಆದರೆ ಪಾರಿವಾಳಗಳು ಹಾರಾಡುವುದರಿಂದ ಶ್ವಾಸಕೋಶದ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಬಹುದು ಎಂದು ಪರಿಗಣಿಸಲಾಗಿದೆ.
ಶ್ವಾಸಕೋಶದ ಸೋಂಕಿಗೆ ಕಾರಣವಾಗುವ ಪಾರಿವಾಳ
ವೈದ್ಯರ ಪ್ರಕಾರ ಪಾರಿವಾಳದ ಹಿಕ್ಕೆಗಳಲ್ಲಿ ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ಮತ್ತು ಪ್ರೋಟೀನ್‌ಗಳು ಇರುವುದರಿಂದ ಇದು ‘ಅತಿಸೂಕ್ಷ್ಮ ನ್ಯುಮೊನೈಟಿಸ್’ ಎನ್ನುವ ಗಂಭೀರ ಶ್ವಾಸಕೋಶದ ಸಮಸ್ಯೆಗೆ ಕಾರಣವಾಗಬಹುದು.
ಪಾರಿವಾಳದ ಹಿಕ್ಕೆಗಳಲ್ಲಿ ಕಂಡುಬರುವ ಅತಿ ಅಪಾಯಕಾರಿ ಜೀವಿ ಫಂಗಸ್ ‘ಹಿಸ್ಟೊಪ್ಲಾಸ್ಮ’ ಆಗಿದ್ದು, ಇದು ಹಿಸ್ಟೊಪ್ಲಾಸ್ಮೋಸಿಸ್‌ಗೆ ಕಾರಣವಾಗಬಹುದು ಹಾಗೂ ಶ್ವಾಸಕೋಶಕ್ಕೆ ಹಾನಿ ಉಂಟುಮಾಡುತ್ತದೆ. ಪಾರಿವಾಳದ ಹಿಕ್ಕೆಗಳ ಸುತ್ತ ಪದೇಪದೆ ಓಡಾಡಿದರೆ ಇಂಟರ್ಸ್ಟಿಷಿಯಲ್ ಲಂಗ್ ಡಿಸೀಸ್ (ಐಎಲ್‌ಡಿ)ಗೆ ಕಾರಣವಾಗಿ, ಅಂತಿಮವಾಗಿ ಲಂಗ್ ಫೈಬ್ರೋಸಿಸ್ ಉಂಟಾಗಬಹುದು. ಈ ಹಂತದಲ್ಲಿ ಶ್ವಾಸಕೋಶಗಳು ಗಟ್ಟಿಯಾಗುತ್ತವೆ ಹಾಗೂ ಗೀಚುಗಳು ಮೂಡುತ್ತವೆ. ಆಗ ರೋಗಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಆಮ್ಲಜನಕದ ಬೆಂಬಲದ ಅಗತ್ಯ ಬೀಳಬಹುದು. ಮಾರಕವಾಗಿ ಪರಿಣಮಿಸಿದಲ್ಲಿ ಶ್ವಾಸಕೋಶ ಕಸಿಯ ಅಗತ್ಯವೂ ಬರುವ ಸಾಧ್ಯತೆ ಇದೆ.
ಜನರು ಗಮನಿಸಬೇಕಾದ ಚಿಹ್ನೆಗಳು ಯಾವುವು?
ಪದೇಪದೆ ಕೆಮ್ಮು, ಉಸಿರಾಟ ಕಷ್ಟವಾಗುವುದು, ಎದೆ ಬಿಗಿತ ಅಥವಾ ಸುಸ್ತು ಕಾಣಿಸಿಕೊಂಡರೆ ಎಚ್ಚರಿಕೆಯ ಗಂಟೆ ಎಂದುಕೊಳ್ಳಬೇಕು. ಬಹಳ ದೀರ್ಘಕಾಲ ಪಾರಿವಾಳದ ಹಿಕ್ಕೆಗಳ ನಡುವೆ ಇದ್ದಲ್ಲಿ ಜ್ವರ, ತೂಕ ನಷ್ಟ ಮತ್ತು ಶ್ವಾಸಕೋಶಗಳಲ್ಲಿ ಗೀರುಗಳು ಕಂಡುಬರಬಹುದು. ಶಿಲೀಂಧ್ರ ಸೋಂಕು ತೀವ್ರವಾಗಿದ್ದರೆ ಶ್ವಾಸಕೋಶವಿಡೀ ರೋಗದ ಚಿಹ್ನೆಗಳು ಹರಡಿರುತ್ತವೆ. ಆಸ್ತಮಾ ಇರುವವರಿಗೆ ಆಗಾಗ್ಗೆ ವೀಜಿಂಗ್ ಕಾಣಿಸಿಕೊಳ್ಳಬಹುದು. ಪಾರಿವಾಳಗಳು ಇರುವ ಕಡೆ ಅಸಹಜವಾದ ಉಸಿರಾಟದ ತೊಂದರೆ ಕಂಡುಬಂದರೆ ವೈದ್ಯಕೀಯ ಪರೀಕ್ಷೆ ಅಗತ್ಯ.
ರೋಗ ತಪ್ಪಿಸಲು ಏನು ಮಾಡಬಹುದು?
ಬಾಲ್ಕನಿ ಅಥವಾ ಕಿಟಕಿಯನ್ನು ಸ್ವಚ್ಛವಾಗಿಡಬೇಕು. ಬಾಲ್ಕನಿಯ ಸುತ್ತ ಪಾರಿವಾಳಗಳ ಗೂಡುಗಳಿಗೆ ಅವಕಾಶ ಕೊಡಬಾರದು. ಪಾರಿವಾಳದ ಹಿಕ್ಕೆಗಳನ್ನು ಸ್ವಚ್ಛಗೊಳಿಸುವಾಗ ಎನ್95 ಮಾಸ್ಕ್ ಮತ್ತು ಗ್ಲವ್ಸ್ ಧರಿಸಬೇಕು. ಮೊದಲಿಗೆ ಸ್ಥಳಕ್ಕೆ ನೀರು ಹರಿಸಿ ನಂತರ ಸ್ವಚ್ಛಗೊಳಿಸಿದರೆ ಧೂಳು ಹರಡುವುದಿಲ್ಲ. ಪಾರಿವಾಳಗಳು ಓಡಾಡುವ ಸ್ಥಳದ ಬಳಿ ಬಟ್ಟೆಗಳನ್ನು ಒಣಗಿಸಬಾರದು. ಸಾರ್ವಜನಿಕ ಪ್ರದೇಶಗಳಲ್ಲಿ ಪಾರಿವಾಳಗಳು ಹೆಚ್ಚಾಗಿ ಓಡಾಡುತ್ತಿದ್ದರೆ ಅಧಿಕಾರಿಗಳು ಸೋಂಕುರಹಿತಗೊಳಿಸುವ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ಅವಕಾಶ ಕೊಡಬಾರದು.