ಪೊಲೀಸರ ವೇಷ, ನಕಲಿ ಕೋರ್ಟ್ ವಿಚಾರಣೆ: ಡಿಜಿಟಲ್ ಅರೆಸ್ಟ್ Scamಗೆ ನೂರಾರು ದಾರಿ
ಎಚ್ಚರ... ಇದು 'ಡಿಜಿಟಲ್ ಕ್ರೈಂ' ಕಥನ..
ಸಾಂದರ್ಭಿಕ ಚಿತ್ರ | Photo Credit : freepik
ದೇಶದಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿ ವಂಚಕರು ಪೊಲೀಸ್ ಅಧಿಕಾರಿ/ಐಪಿಎಸ್ ಅಧಿಕಾರಿಗಳಂತೆ ನಟಿಸಿ ಅಮಾಯಕ ಜನರನ್ನು “ಡಿಜಿಟಲ್ ಬಂಧನ”ದ ಮೂಲಕ ಬೆದರಿಸಿ ಹಣ ನೀಡುವಂತೆ ಒತ್ತಾಯಿಸುತ್ತಾರೆ. ಈ ಬೆದರಿಕೆಗೆ ಹೆದರಿ ತಮ್ಮ ಬಳಿಯಲ್ಲಿದ್ದ ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿ ಹಣ ಕಳೆದುಕೊಂಡವರ ಸಂಖ್ಯೆ ಹೆಚ್ಚುತ್ತಿದೆ.
2024 ಮತ್ತು 2025ರಲ್ಲಿ ಭಾರತದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ವ್ಯಾಪಕವಾಗಿ ವರದಿಯಾಗಿವೆ. ಹಿರಿಯ ನಾಗರಿಕರು ಹಾಗೂ ಯುವಕರು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡಿರುವ ಡಿಜಿಟಲ್ ಬಂಧನ ಹಗರಣಗಳನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ದೇಶಾದ್ಯಂತ “ಡಿಜಿಟಲ್ ಅರೆಸ್ಟ್” ವಿಷಯದ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲು ಉನ್ನತ ಮಟ್ಟದ ಅಂತರ-ಇಲಾಖಾ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ. ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ) ಸಮಿತಿಯು ಇದರ ನೇತೃತ್ವ ವಹಿಸಿದ್ದು, ಅವರು ಈಗಾಗಲೇ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಇತ್ತೀಚಿನ ಸಭೆಗಳಲ್ಲಿ ಗೂಗಲ್, ವಾಟ್ಸಾಪ್, ಟೆಲಿಗ್ರಾಮ್ ಸೇರಿದಂತೆ ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಡಿಜಿಟಲ್ ಅರೆಸ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ಗೆ ಸರ್ಕಾರವು ಸ್ಥಿತಿ ವರದಿಯನ್ನು ಸಲ್ಲಿಸಿದ್ದು, ಇಂಥ ವಂಚನೆಗಳನ್ನು ಎದುರಿಸಲು ಟೆಲಿಕಾಂ ಇಲಾಖೆ (DoT) ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಇನ್‌ಪುಟ್ ಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ. ಡಿಸೆಂಬರ್ 26, 2025ರಂದು ಉನ್ನತ ಮಟ್ಟದ ಅಂತರ-ಇಲಾಖಾ ಸಮಿತಿ (IDC) ರಚಿಸಲಾಗಿದೆ. ಡಿಜಿಟಲ್ ಬಂಧನ ವಂಚನೆಯ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ಬಹು ಸಂಸ್ಥೆಗಳ ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ.
ಐಡಿಸಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಡಿಒಟಿ, ವಿದೇಶಾಂಗ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ಕಾನೂನು ಮತ್ತು ನ್ಯಾಯ ಸಚಿವಾಲಯ, ಗ್ರಾಹಕ ವ್ಯವಹಾರಗಳ ಸಚಿವಾಲಯ, ಆರ್‌ಬಿಐ, ಕೇಂದ್ರ ತನಿಖಾ ದಳ, ರಾಷ್ಟ್ರೀಯ ತನಿಖಾ ಸಂಸ್ಥೆ, ದೆಹಲಿ ಪೊಲೀಸ್ ಹಾಗೂ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಪ್ರತಿನಿಧಿಗಳು ಇದ್ದಾರೆ.
ಐಡಿಸಿಯ ಉಳಿದ ಸದಸ್ಯರಿಂದ ಮಾಹಿತಿ ಪಡೆಯಲು ಮತ್ತು ಅದರ ಕುರಿತು ಹೆಚ್ಚಿನ ಚರ್ಚೆಗಳನ್ನು ಕೈಗೊಳ್ಳಲು, ನ್ಯಾಯಾಲಯದ ಮುಂದೆ ಕ್ರೋಢೀಕೃತ ಫಲಿತಾಂಶವನ್ನು ಮಂಡಿಸಲು ಸರ್ಕಾರ ಕನಿಷ್ಠ ಒಂದು ತಿಂಗಳ ಕಾಲಾವಕಾಶ ಕೋರಿತ್ತು. ‘ಡಿಜಿಟಲ್ ಬಂಧನ’ ವಂಚಕರು ಹಾಗೂ ಅವರ ಸಹಚರರನ್ನು ಹತ್ತಿಕ್ಕಲು ಡಿಸೆಂಬರ್ 1ರಂದು ನ್ಯಾಯಾಲಯವು ಕೇಂದ್ರ ತನಿಖಾ ದಳ (ಸಿಬಿಐ) ಯನ್ನು ಕೇಳಿತ್ತು. ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಮ್ಯೂಲ್ ಖಾತೆಗಳನ್ನು ತೆರೆಯುವಲ್ಲಿ ಭಾಗಿಯಾಗಿರುವ ಬ್ಯಾಂಕರ್‌ಗಳ ವಿರುದ್ಧ ಭ್ರಷ್ಟಾಚಾರ-ವಿರೋಧಿ ತನಿಖೆ ಆರಂಭಿಸಲು ಉನ್ನತ ನ್ಯಾಯಾಲಯವು ತನಿಖಾ ಸಂಸ್ಥೆಗೆ ಆದೇಶಿಸಿದೆ.
17 ದಿನ ಡಿಜಿಟಲ್ ಅರೆಸ್ಟ್; ರೂ. 14.85 ಕೋಟಿ ಕಳೆದುಕೊಂಡ ದಂಪತಿ
ಅಮೆರಿಕದಲ್ಲಿ 45 ವರ್ಷಗಳನ್ನು ಕಳೆದ ನಂತರ ದಿಲ್ಲಿಗೆ ವಾಪಾಸಾಗಿದ್ದ ಓಂ ತನೇಜಾ (81) ಮತ್ತು ಅವರ ಪತ್ನಿ ಡಾ. ಇಂದಿರಾ ತನೇಜಾ ಅವರ ಮಗ ಮತ್ತು ಮಗಳು ಅಮೆರಿಕದಲ್ಲೇ ನೆಲೆಸಿದ್ದಾರೆ. ಓಂ ತನೇಜಾ ವಿಶ್ವಸಂಸ್ಥೆಯೊಂದಿಗೆ ಕೆಲಸ ಮಾಡಿದ್ದವರು. ಇಂದಿರಾ ತನೇಜಾ ದಂತವೈದ್ಯೆ. ನಿವೃತ್ತಿಯ ನಂತರ ಈ ದಂಪತಿ ತಾಯ್ನಾಡಿಗೆ ಮರಳಿದ್ದರು.
ದಿಲ್ಲಿಯ ಅತ್ಯಂತ ಶ್ರೀಮಂತ ಪ್ರದೇಶಗಳಲ್ಲಿ ಒಂದಾದ ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್‌ನಲ್ಲಿರುವ ಐಷಾರಾಮಿ ಮೊದಲ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ವೃದ್ಧ ದಂಪತಿ, ಶಾಲೆಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸಿದ್ಧರಾಗುತ್ತಿದ್ದರು. ತಮ್ಮ ಚಾಲಕನಿಗೆ ಕರೆ ಮಾಡಲು ಹೊರಟಾಗ ಅವರಿಗೆ ಬೇರೊಂದು ಕರೆ ಬಂತು. ಕರೆ ಸ್ವೀಕರಿಸಿದ್ದು ಇಂದಿರಾ ತನೇಜಾ.
ಆ ದಿನ ನಡೆದ ಘಟನೆಯನ್ನು ವಿವರಿಸಿದ ಇಂದಿರಾ, ಆ ಕರೆ ಸ್ವೀಕರಿಸಿದಾಗ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI)ದಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿದ ವ್ಯಕ್ತಿಯೊಬ್ಬರು, “ಮುಂಬೈನಲ್ಲಿ ನಡೆದ ಹಣ ವರ್ಗಾವಣೆ ಪ್ರಕರಣದಲ್ಲಿ ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಸಂಖ್ಯೆ ಕಾಣಿಸಿಕೊಂಡಿದೆ. ನಿಮ್ಮ ಸಂಖ್ಯೆಯ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದೇವೆ” ಎಂದಿದ್ದಾರೆ. ಅದು ನನ್ನದಲ್ಲ ಎಂದಾಗ, ಮುಂಬೈನ ಕೊಲಾಬಾ ಪೊಲೀಸ್ ಠಾಣೆಗೆ ಸಂಪರ್ಕಿಸುತ್ತಿರುವುದಾಗಿ ಹೇಳಿದರು. ನಾವು ಗೊಂದಲಕ್ಕೊಳಗಾದೆವು.
ನಂತರ ನನಗೆ ಒಂದು ವೀಡಿಯೊ ಕರೆ ಬಂತು. ಕರೆ ಮಾಡಿದ ವ್ಯಕ್ತಿ ವಿಕ್ರಾಂತ್ ಸಿಂಗ್ ರಜಪೂತ್ ಎಂದು ಪರಿಚಯಿಸಿಕೊಂಡು, ತಾನು ಕೊಲಾಬಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಎಂದು ಹೇಳಿದ್ದಾನೆ. ಅವರ ಹಿಂದೆ ಪೊಲೀಸ್ ಲಾಂಛನವಿತ್ತು. ಆತ ಸಮವಸ್ತ್ರ ಧರಿಸಿದ್ದ. ನರೇಶ್ ಗೋಯಲ್ ಎಂಬ ವ್ಯಕ್ತಿ ರಕ್ಷಣಾ ಸಚಿವಾಲಯಕ್ಕೆ 500 ಕೋಟಿ ರೂಪಾಯಿ ವಂಚಿಸಿದ್ದಾನೆ. ನನ್ನ ಹೆಸರಿನಲ್ಲಿ ನೋಂದಾಯಿಸಲಾದ ಕೆನರಾ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾನೆ. ಗೋಯಲ್ ನ ಪ್ರಮುಖ ಸಹಚರನಾಗಿ ನನ್ನ ವಿರುದ್ಧ ಹಾಗೂ ಸಹ-ಆರೋಪಿಯಾಗಿ ನನ್ನ ಗಂಡನ ವಿರುದ್ಧ ವಾರಂಟ್ ಹೊರಡಿಸಲಾಗಿದೆ. ನೀವು ಮುಂಬೈಗೆ ಬರಬೇಕು ಎಂದು ಅವರು ಹೇಳಿದರು.
ನಮಗೆ ಮುಂಬೈಗೆ ಬರಲಾಗುತ್ತಿಲ್ಲ ಎಂದು ಹೇಳಿ, ವಿವಿಧ ಅಧಿಕಾರಿಗಳಿಗೆ 15 ಪತ್ರಗಳನ್ನು ಬರೆಯುವಂತೆ ಅವರು ಹೇಳಿದರು ಎಂದು ಓಂ ತನೇಜಾ ತಿಳಿಸಿದ್ದಾರೆ.
ನಡೆದ ಘಟನೆಯ ಬಗ್ಗೆ ವಿವರಿಸಿದ ಇಂದಿರಾ, “ಮರುದಿನ ನನ್ನನ್ನು ವೀಡಿಯೊ ಕರೆಯ ಮೂಲಕ ಸುಪ್ರೀಂ ಕೋರ್ಟ್‌ನ ನಕಲಿ ಆನ್‌ಲೈನ್ ವಿಚಾರಣೆಗೆ ಕರೆಸಲಾಯಿತು. ಪರಿಶೀಲನಾ ಪ್ರಕ್ರಿಯೆಯ ಸೋಗಿನಲ್ಲಿ, ವಂಚಕರು ‘ಪೊಲೀಸರು’ ಒದಗಿಸಿದ ಖಾತೆಗಳಿಗೆ ಹಣವನ್ನು ವರ್ಗಾಯಿಸಬೇಕೆಂದು ಹೇಳಿ, ನಂತರ ಅದನ್ನು ಮೌಲ್ಯಮಾಪನಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೆ ಕಳುಹಿಸಲಾಗುವುದು ಎಂದು ತಿಳಿಸಿದರು. ಈ ನಡುವೆ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡ ಡಿಕೆ ಗುಪ್ತಾ ಎಂಬ ವ್ಯಕ್ತಿ ಕರೆಯಲ್ಲಿ ಸೇರಿಕೊಂಡರು. ನಮ್ಮ ಬಳಿ RBI ಸಂಖ್ಯೆ ಇದೆ, ಪರಿಶೀಲನೆಯ ನಂತರ ಹಣವನ್ನು ಮರಳಿ ಪಡೆಯಲು ಪೊಲೀಸರಿಗೆ ಅದನ್ನು ಸಲ್ಲಿಸಬಹುದು ಎಂದು ಹೇಳಿದರು” ಎಂದಿದ್ದಾರೆ.
ನಂತರ ಮೊದಲ ಬೇಡಿಕೆ ಬಂದಿತು: ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS) ಪಾವತಿ ವ್ಯವಸ್ಥೆಯ ಮೂಲಕ 1.99 ಕೋಟಿ ರೂ. ವರ್ಗಾಯಿಸುವಂತೆ. ಇಂದಿರಾ ಅವರಿಗೆ ತಮ್ಮ ಪತಿಯ ಫೋನ್ ಅನ್ನು ಬ್ಯಾಂಕಿಗೆ ಒಂಟಿಯಾಗಿ ತೆಗೆದುಕೊಂಡು ಹೋಗಲು ಸೂಚಿಸಲಾಯಿತು. ಆದರೆ ಓಂ ತನೇಜಾ ತಮ್ಮ ಫೋನ್ ಅನ್ನು ಮನೆಯಲ್ಲಿಯೇ ಇಟ್ಟುಕೊಂಡರು.
ಡಿಸೆಂಬರ್ 29 (ರೂ. 2 ಕೋಟಿ), ಡಿಸೆಂಬರ್ 30 (ರೂ. 2 ಕೋಟಿ), ಜನವರಿ 2 (ರೂ. 2.05 ಕೋಟಿ), ಜನವರಿ 5 (ರೂ. 2.5052 ಕೋಟಿ), ಜನವರಿ 6 (ರೂ. 2.10 ಕೋಟಿ), ಜನವರಿ 8 (ರೂ. 2.20 ಕೋಟಿ) ಮತ್ತು ಜನವರಿ 9 (ರೂ. 50 ಲಕ್ಷ) — ಇದೇ ರೀತಿಯ ಬೇಡಿಕೆಗಳು ಮುಂದುವರಿದವು.
ಬ್ಯಾಂಕ್ ಅಧಿಕಾರಿಗಳು ಪ್ರಶ್ನಿಸಿದಾಗ, ವರ್ಗಾವಣೆಗಳು ದತ್ತಿ ಟ್ರಸ್ಟ್‌ಗಳಿಗೆ ದೇಣಿಗೆಯೆಂದು ಹೇಳಬೇಕೆಂದು ‘ವಂಚಕರು’ ಸೂಚಿಸಿದ್ದರು.
“ನನ್ನ ಗಂಡನನ್ನು ಮನೆಯಲ್ಲಿ ಕೂರಿಸಿ ಫೋನ್ ಕರೆಯಲ್ಲಿಯೇ ಇರುವಂತೆ ಹೇಳಲಾಗಿತ್ತು. ನನ್ನ ಜೀವ ಅಪಾಯದಲ್ಲಿದೆ. ಗೋಯಲ್‌ನ ಜನರು ನಮ್ಮನ್ನು ಗಮನಿಸುತ್ತಿದ್ದಾರೆ ಎಂದು ನನಗೆ ತಿಳಿಸಲಾಯಿತು. ಏನು ನಡೆಯುತ್ತಿದೆ ಅಥವಾ ನಾನು ಹಣವನ್ನು ಏಕೆ ಹಿಂಪಡೆಯುತ್ತಿದ್ದೇನೆ ಎಂಬುದನ್ನು ಯಾರಿಗೂ ಹೇಳಲು ಸಾಧ್ಯವಾಗಲಿಲ್ಲ” ಎಂದು ಇಂದಿರಾ ಹೇಳಿದ್ದಾರೆ.
ಮಕ್ಕಳು ಅಮೆರಿಕದಿಂದ ಕರೆ ಮಾಡಿದಾಗ ಹಾಗೂ ಗ್ರೇಟರ್ ಕೈಲಾಶ್‌ನಲ್ಲಿ ಕೇವಲ ನಾಲ್ಕು ಬ್ಲಾಕ್ ಗಳ ದೂರದಲ್ಲಿ ವಾಸಿಸುವ ಇಂದಿರಾ ಅವರ ಸಹೋದರಿ ವಿಚಾರಿಸಿದಾಗಲೂ, ದಂಪತಿ ಈಗ ಬಂದಿರುವ ಬೆದರಿಕೆ ಕರೆಯ ಸಂಕಷ್ಟ ದೂರವಾಗಲಿ ಎಂದು ಆಶಿಸುತ್ತಾ ಸುಳ್ಳು ಹೇಳುತ್ತಲೇ ಇದ್ದರು.
ಜನವರಿ 9ರ ಹೊತ್ತಿಗೆ, ಇಂದಿರಾ ಎಂಟು RTGS ವರ್ಗಾವಣೆಗಳನ್ನು ಮಾಡಿದ್ದರು. ಒಟ್ಟು ಮೊತ್ತ ರೂ. 14.85 ಕೋಟಿ. ಆ ದಿನ ಬೆಳಿಗ್ಗೆ ಸುಮಾರು 10 ಗಂಟೆಗೆ ಪರಿಶೀಲನೆ ಪೂರ್ಣಗೊಂಡಿದೆ ಎಂದು ವಂಚಕರು ಹೇಳಿದರು. ಅವರು ನನಗೆ RBI ಸಂಖ್ಯೆ ನೀಡಿ, ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಅದನ್ನು ಸಲ್ಲಿಸಿ ಹಣವನ್ನು ವಾಪಸ್ ಪಡೆದುಕೊಳ್ಳಿ ಎಂದರು. ಡಿಕೆ ಗುಪ್ತಾ ಕರೆಯಲ್ಲಿಯೇ ಇದ್ದರು.
ಅವರು ಹೇಳಿದಂತೆ ನಾನು ಸಿಆರ್ ಪಾರ್ಕ್ ಪೊಲೀಸ್ ಠಾಣೆಗೆ ಹೋದೆ. ಆರೋಪಿಗಳು ಎಸ್‌ಎಚ್‌ಒ ಅವರನ್ನು ಎದುರಿಸುವಷ್ಟು ಧೈರ್ಯಶಾಲಿಗಳಾಗಿದ್ದರು. RBI ಸಂಖ್ಯೆಯನ್ನು ನೋಡಿ ಅನುಮಾನಗೊಂಡ ಎಸ್‌ಎಚ್‌ಒ, “ಇದೇನು?” ಎಂದು ಕೇಳಿದರು. ಕರೆಯಲ್ಲಿದ್ದ ಡಿಕೆ ಗುಪ್ತಾ, “ಇದನ್ನು ಆಕೆಗೆ ಅರ್ಥ ಮಾಡಿಸಿ” ಎಂದು ಯಾರಿಗೋ ಹೇಳಿದ್ದು ಕೇಳಿಸಿತು. ನಾನು ಕರೆಯನ್ನು ಸ್ಪೀಕರ್ ಫೋನ್‌ನಲ್ಲಿ ಇಟ್ಟೆ. ಕರೆಯಲ್ಲಿದ್ದ ವ್ಯಕ್ತಿ ಇನ್‌ಸ್ಪೆಕ್ಟರ್ ಮೇಲೆಯೇ ಕೂಗಾಡುತ್ತಾ, “ನೀವೆಂಥ ಎಸ್‌ಎಚ್‌ಒ?” ಎಂದು ಕೇಳಿದ.
ಸ್ವಲ್ಪ ಹೊತ್ತಿನ ಜಗಳದ ನಂತರ ನಾನು “ಡಿಕೆ ಗುಪ್ತಾ ಎಲ್ಲಿ?” ಎಂದು ಕೇಳಿದೆ. ಅತ್ತಲಿಂದ ವ್ಯಕ್ತಿ “ಅವನು ಸತ್ತ” ಎಂದು ಹೇಳಿ ಫೋನ್ ಕರೆ ಕಟ್ ಮಾಡಿದ. ಆಗಲೇ ನಮಗೆ ಗೊತ್ತಾಯಿತು — ಇದು ಡಿಜಿಟಲ್ ಅರೆಸ್ಟ್ ವಂಚನೆ ಎಂದು ಇಂದಿರಾ ಹೇಳಿದ್ದಾರೆ.
ದಂಪತಿ ಈ ವಿಷಯವನ್ನು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ವರದಿ ಮಾಡಿದ್ದು, ಶನಿವಾರ ಇ-ಎಫ್‌ಐಆರ್ ದಾಖಲಿಸಲಾಗಿದೆ. ದೂರಿನ ಪ್ರಕಾರ, 2025 ಡಿಸೆಂಬರ್ 24ರಂದು ಈ ವಂಚನೆ ಕರೆ ಬಂದಿದ್ದು, 17 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ನಡೆಸಲಾಗಿತ್ತು. ದೆಹಲಿ ಪೊಲೀಸರ ಸೈಬರ್ ಅಪರಾಧ ಘಟಕ ತನಿಖೆ ಆರಂಭಿಸಿದೆ.
ಡಿಜಿಟಲ್ ಅರೆಸ್ಟ್ ಬಗ್ಗೆ ತಿಳಿದುಕೊಳ್ಳಿ, ಜಾಗ್ರತರಾಗಿರಿ
ಯಾವುದೇ ಕಾನೂನು ಇದನ್ನು ಅನುಮತಿಸುವುದಿಲ್ಲ: ಡಿಜಿಟಲ್ ಅರೆಸ್ಟ್ ಎಂಬ ಸಂಪೂರ್ಣ ಪರಿಕಲ್ಪನೆಯೇ ವಂಚನೆ. ವಂಚಕರು ಇದನ್ನು ಹಿರಿಯ ನಾಗರಿಕರಂತಹ ದುರ್ಬಲ ಮತ್ತು ಅಮಾಯಕ ಜನರನ್ನು ಮೋಸಗೊಳಿಸಲು ಬಳಸುತ್ತಾರೆ. ವೀಡಿಯೊ ಕರೆ ಮಾಡಿ ತಾವು ಪೊಲೀಸ್ ಅಥವಾ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡರೂ, ಸಮವಸ್ತ್ರ ಧರಿಸಿದ್ದರೂ ಯಾರನ್ನೂ ನಂಬಬೇಡಿ.
ಹಣವನ್ನು ಎಂದಿಗೂ ವರ್ಗಾಯಿಸಬೇಡಿ: ನಿಮ್ಮ ಹಣ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವವರೆಗೆ ಅದು ನಿಮ್ಮದೇ. ಒಮ್ಮೆ ವರ್ಗಾಯಿಸಿದರೆ ಅದು ನಿಮ್ಮದಾಗಿರುವುದಿಲ್ಲ. ನಿಮ್ಮ ಮುಗ್ಧತೆ ಸಾಬೀತಾದ ನಂತರ ಹಣವನ್ನು ಹಿಂತಿರುಗಿಸಲಾಗುತ್ತದೆ ಎಂದು ಯಾರಾದರೂ ಹೇಳಿದರೆ ನಂಬಬೇಡಿ. ಕಾನೂನು ಜಾರಿ ಸಂಸ್ಥೆ ಅಥವಾ ಬ್ಯಾಂಕ್‌ನವರಂತೆ ನಟಿಸಿದರೂ ಹಣವನ್ನು ಎಂದಿಗೂ ವರ್ಗಾಯಿಸಬೇಡಿ.
ತಕ್ಷಣ ಪೊಲೀಸರಿಗೆ ವರದಿ ಮಾಡಿ: ನೀವು ಭಾಗಿಯಾಗಿಲ್ಲದ ಪ್ರಕರಣದಲ್ಲಿ ನಿಮ್ಮನ್ನು ಸಿಲುಕಿಸಲು ಯಾರಾದರೂ ಸಂಪರ್ಕಿಸಿದರೆ ಸ್ಥಳೀಯ ಪೊಲೀಸರಿಗೆ ತಿಳಿಸಿ. ಸಿಬಿಐ ಅಧಿಕಾರಿಗಳಂತೆ ನಟಿಸಿದರೂ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ.
ಸ್ನೇಹಿತರು ಮತ್ತು ಕುಟುಂಬದವರಿಗೆ ತಿಳಿಸಿ: ವಂಚಕರು ಹೆಚ್ಚಾಗಿ ವೃದ್ಧರನ್ನು ಗುರಿಯಾಗಿಸಿಕೊಂಡು ಅವರನ್ನು ಬೆದರಿಸಬಹುದು ಎಂದು ಭಾವಿಸುತ್ತಾರೆ. ಅಂಥ ಸಂದರ್ಭಗಳಲ್ಲಿ ನಿಮ್ಮ ಸಂಬಂಧಿಕರಿಗೆ ತಕ್ಷಣ ತಿಳಿಸಿ. ಸಂಭಾಷಣೆಯಲ್ಲಿ ಮತ್ತೊಬ್ಬರು ಸೇರಿದರೆ ವಂಚಕರು ಹೆದರುತ್ತಾರೆ.
ನೀವು ಪ್ರಾಮಾಣಿಕರಾಗಿದ್ದರೆ ಭಯಪಡುವ ಅಗತ್ಯವಿಲ್ಲ: ನಿಮ್ಮ ಗುರುತನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಯಾರಾದರೂ ಹೇಳಿದಾಗ ಆತಂಕಪಡಬೇಕಾಗಿಲ್ಲ. ನೀವು ಯಾವುದೇ ಕಾನೂನು ಉಲ್ಲಂಘಿಸದಿದ್ದರೆ, ಭಯಪಡಬೇಕಾದ ಅವಶ್ಯಕತೆಯಿಲ್ಲ. ಯಾರಾದರೂ ನೀವು ತಪ್ಪು ಮಾಡಿದ್ದಾರೆಂದು ಆರೋಪಿಸಿದರೆ, ನೀವೇ ನಿಮ್ಮನ್ನು ತಪ್ಪಿತಸ್ಥರೆಂದು ಭಾವಿಸಬೇಕಾಗಿಲ್ಲ.