×
Ad

ಕ್ರಾಂತಿಕಾರಿಗಳ ದ್ರೋಣಾಚಾರ್ಯ ಹೇಮಚಂದ್ರ ಕನುಂಗೋ

► ಇವರಾರೂ ಕ್ಷಮೆ ಯಾಚಿಸಲಿಲ್ಲ! ► ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಧುಮುಕಿದವರು! ► ಭಾಗ - 23

Update: 2026-01-14 09:23 IST

ಖ್ಯಾತ ಕ್ರಾಂತಿಕಾರಿ ಕವಿ ಕಾಜಿ ನಸ್ರುಲ್ ಇಸ್ಲಾಮ್, ಕನುಂಗೋ ಅವರಿಗೆ ನೀಡಿದ ಅಭಿದಾನ ಇದು.

ಹೇಮಚಂದ್ರ ದಾಸ್ ಕನುಂಗೋ ಭಾರತದ ಕ್ರಾಂತಿಕಾರಿ ಚಳವಳಿಯ ಸಾಕ್ಷಿಪುರುಷ ಕೂಡಾ. ಕನುಂಗೋ ಆಗಸ್ಟ್ 4, 1871ರಲ್ಲಿ ಜನಿಸಿದರು

ಮಿಡ್ನಾಪುರ್‌ನಲ್ಲಿ ಕಲಾ ಶಿಕ್ಷಣಕ್ಕೆ ನೋಂದಾಯಿಸಿಕೊಂಡ ಹೇಮಚಂದ್ರ ಬಳಿಕ ಮನಸ್ಸು ಬದಲಾಯಿಸಿ ಮೆಡಿಕಲ್ ಓದಲು ಕಲ್ಕತ್ತಾದ ಕಾಲೇಜು ಸೇರಿದರು. ಆದರೆ ಮತ್ತೆ ಮನಸ್ಸು ಬದಲಾಯಿಸಿ ಕಲ್ಕತ್ತಾದ ಕಲಾ ಶಾಲೆ ಸೇರಿದರು. ಅದನ್ನೂ ಮೊಟಕುಗೊಳಿಸಿ ಊರಿಗೆ ಮರಳಿ ಶಾಲೆಯೊಂದರಲ್ಲಿ ಕಲಾ ಶಿಕ್ಷಕನಾಗಿ ಕೆಲಸಮಾಡಿದರು.

ಅದನ್ನೂ ಬಿಟ್ಟು ಮಿಡ್ನಾಪುರ್ ಕಾಲೇಜಿನ ಕೆಮಿಸ್ಟ್ರಿ ವಿಭಾಗದಲ್ಲಿ ಡೆಮಾನ್ ಸ್ಟ್ರೇಟರ್ ಆಗಿ ಕೆಲಸಕ್ಕೆ ಸೇರಿದರು. ಅದನ್ನೂ ಬಿಟ್ಟು ಕನುಂಗೋ ಸರ್ವೇಯರ್ ಆಗಿ ಕೆಲಸಕ್ಕೆ ಸೇರಿದರು. ಈ ಸಮಯದಲ್ಲಿ ಬಂಕಿಮ್ ಕೃತಿಗಳ ಪ್ರಭಾವ ಕನುಂಗೋ ಮೇಲೆ ಆಗಿತ್ತು. 1902ರಲ್ಲಿ ಅರೊಬಿಂದ ಘೋಷ್ ನೇತೃತ್ವದಲ್ಲಿ ಅನುಶೀಲನ್ ಸಮಿತಿಯನ್ನು ಸೇರಿದರು. ಗೀತೆ ಮತ್ತು ಖಡ್ಗ ಹಿಡಿದು ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧ ಎಂಬ ಶಪಥ ಮಾಡಿದ್ದರು. ಈ ಶಪಥ ಸಂಸ್ಕೃತದಲ್ಲಿ ಇರುತ್ತಿತ್ತು. ಕನುಂಗೋ ವಾದಿಸಿದ ಬಳಿಕ ಈ ಶಪಥವನ್ನು ಬೆಂಗಾಲಿಯಲ್ಲಿ ತೆಗೆದುಕೊಳ್ಳುವ ಪದ್ಧತಿ ಬಂತು!

1903ರಲ್ಲಿ ಕನುಂಗೋ ಮಿಡ್ನಾಪುರ್‌ನಲ್ಲಿ ಆಖಾಡಾ ಆರಂಭಿಸಿದರು. ಭಗಿನಿ ನಿವೇದಿತಾ ಇದನ್ನು ಉದ್ಘಾಟಿಸಿದ್ದರಂತೆ. ಖುದಿರಾಮ್ ಬೋಸ್ ಇವರ ಮೊದಲ ಶಿಷ್ಯರಲ್ಲೊಬ್ಬ.

1905ರಲ್ಲಿ ಬಂಗಾಲದ ಗವರ್ನರ್ ಅವರ ಹತ್ಯೆಯ ಪ್ರಯತ್ನಗಳನ್ನು ಮಾಡಲಾಯಿತಾದರೂ ಅವೆಲ್ಲವೂ ವಿಫಲವಾದವು. ಉತ್ತಮ ಬಾಂಬು ತಯಾರಿ ಮತ್ತು ರೈಫಲ್ ತರಬೇತಿ ಇಲ್ಲದೆ ಕ್ರಾಂತಿಯ ಪ್ರಯತ್ನ ಅಸಾಧ್ಯ ಎಂದು ಭಾವಿಸಿದ ಕನುಂಗೋ ತಮ್ಮ ಪಿತ್ರಾರ್ಜಿತ ಆಸ್ತಿಯ ಒಂದು ಭಾಗ ಮಾರಿ ಆ ಹಣದಿಂದ ಪ್ಯಾರಿಸ್‌ಗೆ ತೆರಳಿದರು.

ಆದರೆ ಅಲ್ಲಿ ಇದ್ದ ಬದ್ದ ಕಾಸು ಖರ್ಚಾದರೂ ಸಂಪರ್ಕ ದೊರೆಯದೆ ಇಂಡಿಯಾ ಹೌಸ್‌ನ ಶ್ಯಾಮ್‌ಜಿ ಕೃಷ್ಣ ಅವರ ಪರಿಚಯವಾಗಿ ಕನುಂಗೋ ಲಂಡನ್ ತಲುಪಿದರು.


 



ಅಲ್ಲಿ ಸಾವರ್ಕರ್, ಮದನ್ ಲಾಲ್ ಧಿಂಗ್ರಾ ಮತ್ತಿತರರ ಸಾಂಗತ್ಯವೂ ದೊರಕಿತು. ಅಲ್ಲಿಂದ ಮತ್ತೆ ಪ್ಯಾರಿಸ್‌ಗೆ ಬಂದ ಕನುಂಗೋ ದೇಶಭ್ರಷ್ಟ ರಶ್ಯನ್ ಕ್ರಾಂತಿಕಾರಿಗಳ ಸಂಪರ್ಕ ಬೆಳೆಸಿದರು. ಇದರೊಂದಿಗೆ ಅವರು ರಶ್ಯನ್ ಬಾಲ್ಷೆವಿಕ್ ಪಾರ್ಟಿಯನ್ನೂ ಸೇರಿದರು. ಮೇಡಂ ಕಾಮಾ ನೆರವಿನಿಂದ ಪ್ಯಾರಿಸ್‌ನಲ್ಲಿ ಒಂದು ರಾಸಾಯನಿಕ ಪ್ರಯೋಗಶಾಲೆಯನ್ನೂ ಸ್ಥಾಪಿಸಿದರು. 1907ರಲ್ಲಿ ಜರ್ಮನಿಯಲ್ಲಿ ನಡೆದ 2ನೇ ಅಂತರ್‌ರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಭಾಗವಹಿಸಿದರು. ಅಲ್ಲಿ ಮೇಡಂ ಕಾಮಾ ಅವರು ಕನುಂಗೋ ವಿನ್ಯಾಸ ಮಾಡಿದ್ದ ಭಾರತದ ಧ್ವಜವನ್ನೂ ಅರಳಿಸಿದರು.

ಮತ್ತೆ ಪ್ಯಾರಿಸ್‌ಗೆ ಮರಳಿದ ಕನುಂಗೋ ಇನ್ನೊಬ್ಬ ಕ್ರಾಂತಿಕಾರಿ ಬಾಪಟ್ ಜೊತೆಗೆ ಸ್ಫೋಟಕ ತಯಾರಿಯನ್ನು ಕಲಿತರು. ಆಗಲೇ ಫೋಟೋಗ್ರಫಿಯ ಆಸಕ್ತಿ ಬೆಳೆಸಿಕೊಂಡಿದ್ದ ಕನುಂಗೋ ಹಲವಾರು ಕೈಪಿಡಿಗಳ ಫೋಟೊ ತೆಗೆದು ಕಾಪಿಟ್ಟರು.

ಬಾಂಬು ತಯಾರಿ ತಂತ್ರಜ್ಞಾನ ಕಲಿತು ಕನುಂಗೋ ಒಂದು ಟ್ರಂಕ್ ಲೋಡು ಮಾಹಿತಿಯೊಂದಿಗೆ ಭಾರತಕ್ಕೆ ಮರಳಿದರು.

ಮೊದಲ ಯೋಜನೆ ಕಿಂಗ್‌ಸ್ಫೋರ್ಡ್ ಎಂಬ ಬ್ರಿಟಿಷ್ ಅಧಿಕಾರಿಯ ಹತ್ಯೆ. ದುರದೃಷ್ಟವಶಾತ್ ಇನ್ಯಾರನ್ನೋ ಗುರಿ ಮಾಡಿ ಬಾಂಬೆಸೆದು, ಪ್ರಫುಲ್ಲಚಂದ್ರ ಚಾಕಿ ಆತ್ಮಹತ್ಯೆ ಮಾಡಿಕೊಂಡರೆ ಖುದಿರಾಮ್ ಬೋಸ್ ಸೆರೆ ಸಿಕ್ಕರು. ಈ ಪ್ರಕರಣದ ಹಿನ್ನೆಲೆಯಲ್ಲಿ ಕನುಂಗೋ ಸ್ಥಾಪಿಸಿದ್ದ ಭೂಗತ ಬಾಂಬು ಫ್ಯಾಕ್ಟರಿಯನ್ನು ಪೊಲೀಸರು ಪತ್ತೆ ಮಾಡಿ ಅದು ಬಂದಾಯಿತು. ಪ್ರಕರಣದ ಎಲ್ಲಾ ಭಾಗೀದಾರರನ್ನೂ ಪೊಲೀಸರು ಬಂಧಿಸಿದರು.

ಈ ಪ್ರಕರಣ ಆಲಿಪುರ್ ಬಾಂಬು ಪ್ರಕರಣವೆಂದೇ ಹೆಸರು ಪಡೆದಿದೆ. ಅರೊಬಿಂದ ಘೋಷ್ ಮತ್ತು ಕನುಂಗೋ ಈ ಪ್ರಕರಣದ ಮುಖ್ಯ ಆಪಾದಿತರಾಗಿದ್ದರು.

ಬಾಂಬು ತಯಾರಿಕೆಯ ಪುರಾವೆಯೇ ಕನುಂಗೋ ಮೇಲಿದ್ದ ಬಲುದೊಡ್ಡ ಆರೋಪ. ಇದೇ ವೇಳೆಗೆ ನರೇಂದ್ರನಾಥ ಗೋಸ್ವಾಮಿ ಎಂಬ ಸಂಗಾತಿ ಸರಕಾರಿ ಅಪ್ರೂವರ್ ಅಗಿ ಬದಲಾಗಿದ್ದ. ಈ ದ್ರೋಹಿಯನ್ನು ಸತ್ಯೇಂದ್ರನಾಥ ಬಸು ಮತ್ತು ಕನ್ನಯ್ಯಾಲಾಲ್ ದತ್ತ ಎಂಬ ಇಬ್ಬರು ಕ್ರಾಂತಿಕಾರಿ ಸಂಗಾತಿಗಳು ಜೈಲಿನಲ್ಲೇ ಗುಂಡಿಟ್ಟು ಕೊಂದರು. ಈ ರಿವಾಲ್ವರನ್ನೂ ಕನುಂಗೋ ಪೂರೈಸಿದ್ದರು.

ಈ ಎಲ್ಲಾ ಕಾರಣಕ್ಕೆ ಕನುಂಗೋ ಅವರನ್ನು ಜೀವ ಕಾರಾಗೃಹದ ಶಿಕ್ಷೆ ನೀಡಿ ಅಂಡಮಾನ್‌ಗೆ ರವಾನಿಸಲಾಯಿತು. ಅಂಡಮಾನ್‌ನ ದುರ್ದಮ ಶಿಕ್ಷೆ ಅವರ ಆರೋಗ್ಯದ ಮೇಲೂ ಪ್ರಭಾವ ಬೀರಿತು. ಅಂಡಮಾನ್‌ನಲ್ಲಿ ಅವರಿಗೆ ಸಾವರ್ಕರ್, ಉಲ್ಲಾಸ್ಕರ್ ದತ್ತ, ಶಚೀಂದ್ರನಾಥ ದತ್ತ ಮುಂತಾದವರ ಮರು ಪರಿಚಯವಾಯಿತು.

ಬಹುತೇಕ ತರುಣ ಕ್ರಾಂತಿಕಾರಿಗಳು ಕನುಂಗೋ ಅವರನ್ನು ಗುರು ಎಂದೇ ಪರಿಗಣಿಸಿದ್ದರು. ಅವರ ಅನುಭವ ಮತ್ತು ಅಪಾರ ಜ್ಞಾನ ಸಂಪತ್ತು ಈ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಿ ಪಥವಾಯಿತು.

1921ರಲ್ಲಿ ಕಾಂಗ್ರೆಸ್‌ನ ಒತ್ತಾಯದಿಂದಾಗಿ ಬ್ರಿಟಿಷ್ ಸರಕಾರ ಕನುಂಗೋ ಮತ್ತಿತರ ಕ್ರಾಂತಿಕಾರಿಗಳನ್ನು ಬಿಡುಗಡೆ ಮಾಡಿತು.

ಬಿಡುಗಡೆಯ ಬಳಿಕ ಅವರು ಎಂ.ಎನ್. ರಾಯ್ ಸಹಿತ ಇತರ ಕ್ರಾಂತಿಕಾರಿಗಳ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ಕೈ ಜೋಡಿಸಿದರೂ, 1925ರ ವೇಳೆಗೆ ಅವರಿಗೆ ಕ್ರಾಂತಿಯ ವಿಧಿ-ವಿಧಾನಗಳ ಬಗ್ಗೆ ಭಿನ್ನಮತ ಬೆಳೆದಿತ್ತು. ತಮ್ಮ ಊರಿಗೆ ಮರಳಿದ ಕನುಂಗೋ ಮತ್ತೆ ತಮ್ಮ ಆಸಕ್ತಿಯ ಕಲೆ ಮತ್ತು ಛಾಯಾಗ್ರಹಣದಲ್ಲಿ ತಲ್ಲೀನರಾದರು. ಈ ಸಮಯದಲ್ಲಿ ಅವರು ಭಾರತದ ಕ್ರಾಂತಿಕಾರಿಗಳ ಬಗ್ಗೆ ಹಲವು ಪುಸ್ತಕಗಳನ್ನು ಪ್ರಕಟಿಸಿದರು.

ಸೈದ್ಧಾಂತಿಕವಾಗಿ ಸಮಾಜವಾದದೆಡೆ ಆಕರ್ಷಿತರಾಗಿದ್ದ ಕನುಂಗೋ ಅವರು ಬರೆದ ಬಂಗಾಳದ ಕ್ರಾಂತಿಯ ಕುರಿತ ಕೃತಿ ತರುಣ ಕ್ರಾಂತಿಕಾರಿಗಳ ಬೈಬಲ್ ಆಗಿತ್ತು. ಅವರು ವಿನ್ಯಾಸಗೊಳಿಸಿದ ಧ್ವಜ ಭಾರತದ ರಾಷ್ಟ್ರಧ್ವಜಗಳ ಪೈಕಿ ಮೊದಲ ವಿನ್ಯಾಸವಾಗಿತ್ತು. ಸಹಬಾಳ್ವೆಯ ಪ್ರತೀಕವಾಗಿ ಆ ಧ್ವಜದಲ್ಲಿ ಮುಸ್ಲಿಮ್ ಸಂಕೇತವನ್ನೂ ಅಳವಡಿಸಿದ್ದರು.

ತಮ್ಮ ತಾತ್ವಿಕ ನೆಲಗಟ್ಟಿನಲ್ಲಿ ರಾಜಿ ಮಾಡಿಕೊಳ್ಳದೇ ಅಧ್ಯಯನ, ಬರವಣಿಗೆ ಮತ್ತು ಚಿತ್ರಕಲೆಯಲ್ಲಿ ಮಗ್ನರಾದ ಕನುಂಗೋ ತಮ್ಮ 80ನೇ ವಯಸ್ಸಿನಲ್ಲಿ, ಅಂದರೆ 1951ರ ಎಪ್ರಿಲ್ 8ರಂದು ನಿಧನ ಹೊಂದಿದರು.

ಕನುಂಗೋ ಒಂದರ್ಥದಲ್ಲಿ ವಿಲಕ್ಷಣ ಕ್ರಾಂತಿಕಾರಿ. ಅವರು ಕ್ರಾಂತಿಯೆಡೆಗೆ ಹೊರಳಿದಾಗ ಅವರಿಗೆ 30ರ ಹರೆಯ. ಬಹುತೇಕ ಕ್ರಾಂತಿಕಾರಿಗಳು ಹದಿಹರೆಯದಲ್ಲೇ ಈ ಕಡೆಗೆ ಹೊರಳಿದ್ದರು.

ಸಂಘಟನೆ ಮತ್ತು ಅವಶ್ಯ ವಸ್ತುಗಳ ಕುರಿತಂತೆ ಕನುಂಗೋ ಅವರಿಗೆ ಉಳಿದವರಿಗಿಂತ ಹೆಚ್ಚು ಸ್ಪಷ್ಟತೆಯಿತ್ತು. ವಿದೇಶಿ ಸಹಾಯ ಹೊಂದಿಸಿಕೊಳ್ಳುವ ಬಗ್ಗೆ ಚಿಂತಿಸಿದ ಮೊದಲ ಕ್ರಾಂತಿಕಾರಿ ಕನುಂಗೋ.

ರಾಷ್ಟ್ರೀಯತೆಯ ಕ್ರಾಂತಿಕಾರಿ ಸೈದ್ಧಾಂತಿಕ ನಿಲುವಿನಿಂದ ವಸಾಹತುಶಾಹಿಯ ನಿಜ ಸ್ವರೂಪದ ಸ್ಪಷ್ಟತೆಯೂ ಅವರಿಗೆ ದೇಶಭ್ರಷ್ಟ ರಶ್ಯನ್ ಕ್ರಾಂತಿಕಾರಿಗಳ ಮೂಲಕ ದಕ್ಕಿತ್ತು.

ಅದೇಕೋ, 30ರ ದಶಕದ ವೇಳೆಗೆ ಅವರು ಈ ಚಟುವಟಿಕೆಗಳಿಂದ ಭೌತಿಕವಾಗಿ ದೂರ ಸರಿದು ಬರವಣಿಗೆ ಚಿತ್ರಕಲೆಯಲ್ಲಿ ನಿರತರಾಗಿದ್ದರು. ಅತ್ತ ಅರೊಬಿಂದ ಘೋಷ್ ಆಧ್ಯಾತ್ಮಿಕತೆಗೆ ಹೊರಳಿದರೆ ಕನುಂಗೋ ಚಿತ್ರಕಲೆ, ಬರವಣಿಗೆಯಲ್ಲಿ ಧ್ಯಾನಸ್ಥರಾದರು. ಅವರು 1951ರಲ್ಲಿ ಸಾಯುವ ವೇಳೆಗೆ ದೇಶ ಬಹುತೇಕ ಅವರನ್ನು ಮರೆತಿದ್ದಿರಬೇಕು. ಆದರೆ ಕ್ರಾಂತಿಕಾರಿ ಆಂದೋಲನಕ್ಕೆ ಒಂದು ಸ್ಪಷ್ಟ ರೂಪುರೇಷೆ ಕೊಟ್ಟ ಗುರು ಕನುಂಗೋ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಶ್ ಕಂಜರ್ಪಣೆ

contributor

Similar News