ಬರ್ಗರ್ ತಯಾರಿಸಿ ಟ್ರಂಪ್ ಆಡಳಿತದ ವಿರುದ್ಧ ವಿಭಿನ್ನ ಪ್ರಚಾರ; ಅಮೆರಿಕ ಸೆನೆಟ್ ಪ್ರವೇಶಿಸಿದ ಡೆಮೊಕ್ರಾಟ್ ಸ್ಕಾಟ್ ಕಲೋಮ್
ಡೆಮೊಕ್ರೆಟ್ ಸ್ಕಾಟ್ ಕಲೋಮ್
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮೊಕ್ರಟಿಕ್ ಪಕ್ಷದ “ನೀಲಿ ಸುನಾಮಿ” ಮುಂದುವರಿದು ಮಿಸ್ಸಿಸ್ಸಿಪ್ಪಿ ರಾಜ್ಯದ ಸೆನೆಟರ್ ಆಗಿ ಸ್ಕಾಟ್ ಕಲೋಮ್ ಚುನಾಯಿತರಾಗಿದ್ದಾರೆ. ಟ್ರಂಪ್ ಆಡಳಿತದಲ್ಲಿ ಮಾಂಸದ ಬೆಲೆ ಗಗನಕ್ಕೇರಿರುವುದನ್ನೇ ಪ್ರಮುಖ ವಿಷಯವನ್ನಾಗಿಸಿ ವಿಭಿನ್ನವಾಗಿ ಪ್ರಚಾರ ನಡೆಸಿದ್ದ ಇವರು, 1989ರ ನಂತರ ಮಿಸ್ಸಿಸ್ಸಿಪ್ಪಿ ರಾಜ್ಯದಿಂದ ಮೊದಲ ಡೆಮೊಕ್ರಟಿಕ್ ಸೆನೆಟರ್ ಆಗಿ ಚುನಾಯಿತರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಇದರಿಂದ ಒಟ್ಟು 100 ಸೀಟುಗಳ ಸಂಖ್ಯಾಬಲವಿರುವ ಮೇಲ್ಮನೆ “ಸೆನೆಟ್” ಸದನದಲ್ಲಿ ವಿರೋಧ ಪಕ್ಷದ ಸಂಖ್ಯಾಬಲ 55 ತಲುಪಿದೆ. ಇನ್ನೂ ಮತ ಎಣಿಕೆ ನಡೆಯುತ್ತಿರುವ ಅಲಾಸ್ಕ ರಾಜ್ಯದ ಸೆನೆಟ್ ಸೀಟಿನಲ್ಲಿ ಸಹ ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿ ಮೇರಿ ಪಲ್ಟೊಲ ಅಲ್ಪ ಮತಗಳ ಮನ್ನಡೆ ಹೊಂದಿದ್ದು, ಆ ಸೀಟು ಸಹ ಬಹುಪಾಲು ಡೆಮೊಕ್ರಟಿಕ್ ಪಕ್ಷಕ್ಕೆ ದಕ್ಕಲಿದ್ದು ಒಟ್ಟು 56 ಸೀಟುಗಳ ಪ್ರಚಂಡ ಬಹುಮತ ಹೊಂದಲಿದೆ. ಇದು 1984ರ ನಂತರ ಇದೇ ಮೊದಲ ಬಾರಿಗೆ ಡೆಮೊಕ್ರಟಿಕ್ ಪಕ್ಷ ಮಧ್ಯಂತರ ಚುನಾವಣೆಯಲ್ಲಿ ಇಂತಹ ಬೃಹತ್ ವಿಜಯ ಸಾಧಿಸಿದಂತಾಗುತ್ತದೆ. ಅಷ್ಟೇ ಅಲ್ಲದೆ, ಸ್ಕಾಟ್ ಕಲೋಮ್ ಮಿಸ್ಸಿಸ್ಸಿಪ್ಪಿ ರಾಜ್ಯದಿಂದ 140 ವರ್ಷಗಳ ನಂತರ ಚುನಾಯಿತನಾದ ಮೊದಲ ಆಫ್ರಿಕನ್ ಅಮೆರಿಕನ್(ಕಪ್ಪು) ಸೆನೆಟರ್ ಆಗಿದ್ದಾರೆ ಮತ್ತು
ಒಟ್ಟು 435 ಸೀಟುಗಳ ಸಂಖ್ಯಾಬಲವಿರುವ ಕೆಳಮನೆ “ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್”ನಲ್ಲಿ ಇನ್ನೂ 22 ಸೀಟುಗಳ ಮತ ಎಣಿಕೆ ನಡೆಯುತ್ತಿದ್ದು ಇಲ್ಲಿಯವರೆಗೂ 254 ಡೆಮೊಕ್ರಟಿಕ್ ಅಭ್ಯರ್ಥಿಗಳು ಮತ್ತು 169 ರಿಪಬ್ಲಿಕನ್ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಸಮೀಕ್ಷೆಗಳ ಪ್ರಕಾರ ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಮುಗಿದ ನಂತರ ಡೆಮೊಕ್ರಟಿಕ್ ಪಕ್ಷ 259 ಸೀಟುಗಳನ್ನು ಮತ್ತು ರಿಪಬ್ಲಿಕನ್ ಪಕ್ಷ 176 ಸೀಟುಗಳನ್ನು ಪಡೆಯಲಿವೆ. 1990ರ ನಂತರ ಇದೇ ಮೊದಲ ಬಾರಿಗೆ ಇಂತಹ ಪ್ರಚಂಡ ಬಹುಮತವನ್ನು ಡೆಮೊಕ್ರಟಿಕ್ ಪಕ್ಷ ಪಡೆಯುತ್ತಿದೆ. ಅಧ್ಯಕ್ಷ ಟ್ರಂಪ್ ಮತ್ತು ವಿರೋಧಿ ಬಣದ ಅಧಿಕಾರದಲ್ಲಿರುವ ಎರಡೂ ಸದನಗಳ ಸಂಘರ್ಷ ಜನವರಿ 3, 2027ರಿಂದ ಪ್ರಾರಂಭವಾಗಲಿದೆ. ಸದನಗಳು ತರುವ ಮಸೂದೆಗಳನ್ನು ನಾನು “ವೀಟೊ”(ತಡೆಹಕ್ಕು)ಮಾಡುತ್ತೇನೆಂದು ಟ್ರಂಪ್ ಈಗಾಗಲೇ ಹೇಳಿದ್ದಾರೆ. ಅಕಸ್ಮಾತ್ ಡೆಮೊಕ್ರಟಿಕ್ ಪಕ್ಷಕ್ಕೆ ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್ ನಲ್ಲಿ ಒಟ್ಟು 290 ಸೀಟುಗಳು ದಕ್ಕಿದ್ದರೆ, ಆಗ ಅಧ್ಯಕ್ಷ ಟ್ರಂಪ್ ಅವರ ಈ “ವೀಟೊ ಪವರ್” ತಡೆಯುವ ಅಧಿಕಾರ ಸದನಕ್ಕಿರುತ್ತಿತ್ತು. ಈಗಿನ ಲೆಕ್ಕದ ಪ್ರಕಾರ ಡೆಮೊಕ್ರಟಿಕ್ ಪಕ್ಷಕ್ಕೆ ಅಧ್ಯಕ್ಷ ಟ್ರಂಪ್ ನ ವೀಟೊ ಪವರ್ ತಡೆಯಲು 31 ಸೀಟುಗಳು ಕಡಿಮೆ ಇವೆ. ಈ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ಉದ್ದೇಶಪೂರ್ವಕವಾಗಿ ತನ್ನ ಪಕ್ಷಕ್ಕೆ ಗೆಲುವು ಸಾಧಿಸಲು ಅನುಕೂಲಕರವಾಗುವಂತೆ ಹಲವು ಕ್ಷೇತ್ರಗಳ ಗಡಿಗಳನ್ನು ಬದಲಾಯಿಸಿತ್ತು. ಈ ಕೃತ್ಯಕ್ಕೆ Gerrymandering ಎಂದು ಕರೆಯಲಾಗುತ್ತದೆ. ಅದೇ ರೀತಿ, ಎಲಾನ್ ಮಸ್ಕ್ ನಂತಹ ಹಲವು ಕಾರ್ಪೊರೇಟ್ ಹಣವಂತರು ರಿಪಬ್ಲಿಕನ್ ಅಭ್ಯರ್ಥಿಗಳ ಪರ ಹಣದ ಹೊಳೆಯೇ ಹರಿಸಿದರು. ಇವೆಲ್ಲದರ ನಡುವೆಯೂ ಮತದಾರರು ರಿಪಬ್ಲಿಕನ್ ಪಕ್ಷಕ್ಕೆ ಹೀನಾಯ ಸೋಲುಣಿಸಿದ್ದಾರೆ.
ಆಢಳಿತಾರೂಡ ರಿಪಬ್ಲಿಕನ್ ಪಕ್ಷದ ಭಧ್ರಕೋಟೆ ಎಂದು ಪರಿಗಣಿಸಲಾಗಿದ್ದ ದಕ್ಷಿಣ ರಾಜ್ಯ ಮಿಸ್ಸಿಸ್ಸಿಪ್ಪಿಯಲ್ಲಿ ಸೆನೆಟರ್ ಆಗಿ ಆಯ್ಕೆಯಾಗಿರುವ 43 ವರ್ಷದ ಸ್ಕಾಟ್ ಕಲೋಮ್ ಅವರ ವಿಜಯದ ಹಿಂದೆ ರೋಚಕ ಕಥೆಯಿದೆ. ಈ ರಾಜ್ಯದಲ್ಲಿ ಡೆಮೊಕ್ರಟಿಕ್ ಪಕ್ಷಕ್ಕೆ ಗೆಲುವು ಸಾಧ್ಯವಿಲ್ಲವೆನ್ನುವುದು ಅವರದೇ ಪಕ್ಷದ ಮುಖಂಡರಿಗೆ ನಿಚ್ಚಳವಾಗಿ ತಿಳಿದಿತ್ತು. ಆದ್ದರಿಂದ ಕಲೋಮ್ ಪರ ಪ್ರಚಾರ ಮಾಡುವುದಕ್ಕೆ ಹಣ ಮತ್ತು ನಾಯಕರುಗಳನ್ವು ಕಳುಹಿಸುವ ಗೋಜಿಗೇ ಹೋಗಿರಲಿಲ್ಲ. ಆದರೆ, ಛಲದಂಕಮಲ್ಲನಂತೆ ಏಕಾಂಗಿಯಾಗಿ ಪ್ರಚಾರ ಮಾಡಿದ ಕಲೋಮ್ ನಿಧಾನವಾಗಿ ತನ್ನ ಎದುರಾಳಿ ರಿಪಬ್ಲಿಕನ್ ಪಕ್ಷದ ಸೆನೆಟರ್ ಆಗಿದ್ದ ಸಿಂಡಿ ಹೈಡ್-ಸ್ಮಿತ್ ಅವರ ಲೀಡ್ ಕಡಿಮೆ ಮಾಡುತ್ತಾ ಸಾಗಿದರು. ಆಗ ಎಚ್ಚೆತ್ತುಕೊಂಡ ಡೆಮೊಕ್ರಟಿಕ್ ಪಕ್ಷವು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಂದ ಕಲೋಮ್ ಪರ ಪ್ರಚಾರ ವೀಡಿಯೊ ಬಿಡುಗಡೆ ಮಾಡಿದ್ದಲ್ಲದೆ, ಖುದ್ದು ಪ್ರಚಾರ ಮಾಡಲು ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ವು ಕಳುಹಿಸಿತು.
ಅಂತಿಮ ದಿನಗಳಲ್ಲಿ ಸುಮಾರು 3 ಮಿಲಿಯನ್ ಡಾಲರ್ ಹಣವನ್ನೂ ಸಹ ಡೆಮೊಕ್ರಟಿಕ್ ಪಕ್ಷ ಸ್ಕಾಟ್ ಕಲೋಮ್ ಪ್ರಚಾರಕ್ಕೆ ಬಿಡುಗಡೆ ಮಾಡಿತು. ಕಲೋಮ್ ತಮ್ಮ ಪ್ರಚಾರದಲ್ಲಿ ಟ್ರಂಪ್ ಆಡಳಿತದಲ್ಲಿ ಮಾಂಸದ ಬೆಲೆ ಗಗನಕ್ಕೇರಿರುವುದನ್ನು ಮುಖ್ಯ ವಿಷಯವನ್ನಾಗಿಸಿಕೊಂಡರು. ಇದು ಮತದಾರರ ಪ್ರತಿದಿನದ ಮುಖ್ಯ ವಿಷಯವಾಗಿದ್ದು ಜನರ ಮನಸ್ಸನ್ನು ಮುಟ್ಟಿತು. ಪತ್ರಕರ್ತರು ಈ ಬಗ್ಗೆ ಸಿಂಡಿ ಹೈಡ್-ಸ್ಮಿತ್ ಅವರನ್ನು ಪ್ರಶ್ನಿಸಿದಾಗ “ಎಲ್ಲಾ ವಸ್ತುಗಳ ಬೆಲೆಗಳೂ ಕಾಲ ಕಾಲಕ್ಕೆ ಏರಿಳಿತ ಕಾಣುತ್ತವೆ. ಆದರೆ ಪ್ರಜೆಗಳು ಮಾಂಸದ ಬದಲು ಬೇರೆ ಪ್ರೋಟೀನ್ ಗಳನ್ನು ಬದಲಾಯಿಸಿಕೊಳ್ಳಬಹುದು” ಎಂದು ಹೇಳಿಕೆ ನೀಡಿದರು. ಇದನ್ನೇ ದಾಳವನ್ನಾಗಿ ಉಪಯೋಗಿಸಿಕೊಂಡ ಸ್ಕಾಟ್ ಕಲೋಮ್ ಮಿಸ್ಸಿಸ್ಲಿಪ್ಪಿಯನ್ನರು ಬರ್ಗರ್ ತಯಾರಿಸುತ್ತಿರುವುದು, ರೆಸ್ಟೊರೆಂಟ್ ಗಳಲ್ಲಿ ಊಟ ಮಾಡುತ್ತಿರುವುದು ಮತ್ತು ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡುತ್ತಿರುವುದನ್ನು ವೀಡಿಯೊ ಮಾಡಿ “ನಾವು ಬೇರೆ ಪ್ರೋಟೀನ್ ಗೆ ಬದಲಾಯಿಸುವ ಬದಲು ನಮ್ಮ ಸೆನೇಟರ್ ನನ್ನೇ ಬದಲಾಯಿಸುತ್ತೇವೆ” ಎಂಬ ಹೇಳಿಕೆಯ ವೀಡಿಯೊ ಪ್ರಚಾರದ ದಿಕ್ಕನ್ನೇ ಬದಲಿಸಿತು. ಈ ವೀಡಿಯೊ ಇಲ್ಲಿಯವರೆಗೂ 20 ಮಿಲಿಯನ್ ಜನರು ನೋಡಿದ್ದಾರೆ. ಕೊನೆಯ 15 ದಿನಗಳಲ್ಲಿ ಮತದಾರರು ಸ್ಕಾಟ್ ಕಲೋಮ್ ಪರ ತಿರುಗಿಸಿದರು.
ಈ ಹಿಂದಿನ ಅಧ್ಯಕ್ಷ ಜೋ ಬೈಡನ್ 2022ರಲ್ಲಿ ಸ್ಕಾಟ್ ಕಲೋಮ್ ಅವರನ್ನು ಫೆಡರಲ್ ಜಡ್ಜ್ ಆಗಿ ಆಯ್ಕೆ ಮಾಡಿದ್ದರು. ಆ ಆಯ್ಕೆಯನ್ನು ಸೆನೆಟ್ ಅನುಮೋದಿಸಬೇಕಿತ್ತು. ಆದರೆ, ಆಗ ಇದೇ ಸಿಂಡಿ ಹೈಡ್-ಸ್ಮಿತ್ ಅವರು ಸೆನೆಟ್ ನಲ್ಲಿ ಕಲೋಮ್ ಅವರು ಜಡ್ಜ್ ಆಗುವುದನ್ವು ತಡೆದಿದ್ದರು. ಈಗ ಸ್ಕಾಟ್ ಕಲೋಮ್ ಅವರು ಸಿಂಡಿ ಹೈಡ್-ಸ್ಮಿತ್ ಅವರನ್ನು ಸೆನೆಟ್ ಚುನಾವಣೆಯಲ್ಲಿ ಸೋಲಿಸಿರುವುದು ಒಂದು ವಿಪರ್ಯಾಸ.