ಉಪವಾಸ ಸತ್ಯಾಗ್ರಹ ನಿರತರಿಗೆ ಸರ್ಕಾರ ಬಲವಂತವಾಗಿ ಆಹಾರ ನೀಡಬಹುದೇ? ಭಾರತೀಯ ಕಾನೂನು ಏನು ಹೇಳುತ್ತದೆ?

Update: 2026-07-20 22:06 IST

Photo: PTI

21 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ನಂತರ, ಪರಿಸರವಾದಿ ಹಾಗೂ ಸಂಶೋಧಕ ಸೋನಮ್ ವಾಂಗ್ಚುಕ್ ಅವರನ್ನು ದಿಲ್ಲಿ ಪೊಲೀಸರು ಶನಿವಾರ (ಜುಲೈ 18ರಂದು) ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ತೆರವುಗೊಳಿಸಿ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಂಗ್ಚುಕ್ ಅವರ ಆರೋಗ್ಯದ ಮೇಲೆ ಪ್ರತಿದಿನ ಮೇಲ್ವಿಚಾರಣೆ ನಡೆಸಬೇಕು ಮತ್ತು ಅಗತ್ಯವಿದ್ದಲ್ಲಿ ವೈದ್ಯಕೀಯ ನೆರವು ನೀಡಬೇಕು ಎಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶ ಹಾಗೂ ವೈದ್ಯರ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಈ ಕ್ರಮವು ವಾಂಗ್ಚುಕ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಹೀಗೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸೋನಮ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರೂ ಸಹ, ಕುಟುಂಬದ ಮತ್ತು ಅವರ ಆರೋಗ್ಯವನ್ನು ಗಮನಿಸುತ್ತಿರುವ ವೈದ್ಯರ ಒಪ್ಪಿಗೆಯಿಲ್ಲದೆ ಯಾವುದೇ ರೀತಿಯ ಓರಲ್‌ (ಬಾಯಿ ಮೂಲಕ) ಅಥವಾ ಐವಿ (ರಕ್ತನಾಳದ ಮೂಲಕ) ಚಿಕಿತ್ಸೆ ನೀಡಬಾರದು ಎಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಬೆಳವಣಿಗೆಗಳು ಒಂದು ಪ್ರಮುಖ ಕಾನೂನು ಪ್ರಶ್ನೆಯನ್ನು ಹುಟ್ಟುಹಾಕಿವೆ. ಅದೇನೆಂದರೆ, ಶಾಂತಿಯುತ ಪ್ರತಿಭಟನೆಯ ಭಾಗವಾಗಿ ಆಹಾರವನ್ನು ನಿರಾಕರಿಸುವ ವ್ಯಕ್ತಿಗೆ ಸರ್ಕಾರ ಬಲವಂತವಾಗಿ ಆಹಾರ ನೀಡಬಹುದೇ?

ಇದಕ್ಕೆ ಸರಳವಾದ ಹೌದು ಅಥವಾ ಇಲ್ಲ ಎಂಬ ಉತ್ತರ ಭಾರತೀಯ ಕಾನೂನಿನಲ್ಲಿಲ್ಲ. ಉಪವಾಸ ಸತ್ಯಾಗ್ರಹವನ್ನು ಪ್ರಜಾಪ್ರಭುತ್ವದಲ್ಲಿ ಒಂದು ಕಾನೂನುಬದ್ಧ ಪ್ರತಿಭಟನಾ ರೂಪ ಎಂದು ನ್ಯಾಯಾಲಯಗಳು ಸತತವಾಗಿ ಒಪ್ಪಿಕೊಳ್ಳುತ್ತಾ ಬಂದಿವೆ. ಅದೇ ಸಮಯದಲ್ಲಿ, ನಾಗರಿಕರ ಜೀವ ರಕ್ಷಿಸುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ ಎಂದೂ ಕೋರ್ಟ್‌ಗಳು ಪ್ರತಿಪಾದಿಸಿವೆ.

► ಹಾಗಾದರೆ, ದೆಹಲಿ ಹೈಕೋರ್ಟ್ ವಾಂಗ್ಚುಕ್ ಅವರಿಗೆ ಬಲವಂತವಾಗಿ ಆಹಾರ ನೀಡುವಂತೆ ಆದೇಶಿಸಿತ್ತೇ?

ಇಲ್ಲ, ಇದು ಅತ್ಯಂತ ಪ್ರಮುಖವಾದ ವ್ಯತ್ಯಾಸವಾಗಿದೆ.

ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಅಗತ್ಯವಿದ್ದರೆ ಬಲವಂತವಾಗಿ ಆಹಾರ ನೀಡುವುದನ್ನು ಒಳಗೊಂಡಂತೆ ವಾಂಗ್ಚುಕ್ ಅವರಿಗೆ ತುರ್ತು ವೈದ್ಯಕೀಯ ನೆರವು ನೀಡುವಂತೆ ಕೋರಿತ್ತು. ಆದರೆ, ನ್ಯಾಯಾಲಯವು ಅವರಿಗೆ ಬಲವಂತವಾಗಿ ಆಹಾರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಿಲ್ಲ ಅಥವಾ ಪ್ರತಿಭಟನಾ ಸ್ಥಳದಿಂದ ಅವರನ್ನು ತೆರವುಗೊಳಿಸುವಂತೆ ಆದೇಶಿಸಲಿಲ್ಲ.

ಬದಲಿಗೆ, ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನೊಳಗೊಂಡ ಪೀಠವು, ವಾಂಗ್ಚುಕ್ ಅವರ ಆರೋಗ್ಯದ ಮೇಲೆ ಸರ್ಕಾರಿ ವೈದ್ಯರು ಪ್ರತಿದಿನ ಮೇಲ್ವಿಚಾರಣೆ ನಡೆಸುವುದನ್ನು ಮತ್ತು ವೈದ್ಯರು ಅಗತ್ಯವೆಂದು ಭಾವಿಸುವ ಯಾವುದೇ ವೈದ್ಯಕೀಯ ನೆರವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿತು. "ಪ್ರತಿಯೊಬ್ಬ ನಾಗರಿಕನ ಜೀವ ಅಮೂಲ್ಯವಾದುದು" ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತು ಮತ್ತು ಈ ಆದೇಶವನ್ನು ಪಾಲಿಸುವುದಾಗಿ ಕೇಂದ್ರ ಸರ್ಕಾರ ನೀಡಿದ ಭರವಸೆಯನ್ನು ದಾಖಲಿಸಿಕೊಂಡಿತು.

ದೆಹಲಿ ಪೊಲೀಸರು ವಾಂಗ್ಚುಕ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದನ್ನು ಸಮರ್ಥಿಸಿಕೊಳ್ಳಲು, ಅವರ ಕ್ಷೀಣಿಸುತ್ತಿರುವ ಆರೋಗ್ಯದ ಕುರಿತಾದ ವೈದ್ಯಕೀಯ ಸಲಹೆಯೊಂದಿಗೆ ಇದೇ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿದ್ದಾರೆ.

► ಭಾರತದಲ್ಲಿ ಉಪವಾಸ ಸತ್ಯಾಗ್ರಹ ಕಾನೂನುಬದ್ಧವೇ ?

ಹೌದು. ಭಾರತದಲ್ಲಿ ಯಾವುದೇ ಕಾನೂನು ವ್ಯಕ್ತಿಯೊಬ್ಬರು ಉಪವಾಸ ಸತ್ಯಾಗ್ರಹ ಮಾಡುವುದನ್ನು ನಿಷೇಧಿಸುವುದಿಲ್ಲ.

ಸಂವಿಧಾನದ ವಿಧಿ 19(1)(ಎ) ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೂ ವಿಧಿ 19(1)(ಬಿ) ಅಡಿಯಲ್ಲಿ ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಖಾತರಿಪಡಿಸಲಾಗಿದೆ. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮಹಾತ್ಮಾ ಗಾಂಧೀಜಿಯವರು ಉಪವಾಸ ವ್ರತವನ್ನು ಬಳಸಿದ್ದರಿಂದ, ಉಪವಾಸ ಸತ್ಯಾಗ್ರಹವನ್ನು ದೀರ್ಘಕಾಲದಿಂದಲೂ ಶಾಂತಿಯುತ ರಾಜಕೀಯ ಪ್ರತಿಭಟನೆಯ ಒಂದು ರೂಪ ಎಂದು ಗುರುತಿಸಲಾಗಿದೆ.

ಸಾರ್ವಜನಿಕ ಸುವ್ಯವಸ್ಥೆ, ಭದ್ರತೆ ಮತ್ತು ಇತರ ಸಾಂವಿಧಾನಿಕ ಕಾರಣಗಳ ಹಿತದೃಷ್ಟಿಯಿಂದ ಈ ಹಕ್ಕುಗಳು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿದ್ದರೂ, ನ್ಯಾಯಾಲಯಗಳು ಸತತವಾಗಿ ಉಪವಾಸ ಸತ್ಯಾಗ್ರಹವನ್ನು ಪ್ರತಿಭಟನೆಯ ಸಂರಕ್ಷಿತ ರೂಪ ಎಂದೇ ಪರಿಗಣಿಸಿವೆ.

2021ರಲ್ಲಿ ಮದ್ರಾಸ್ ಹೈಕೋರ್ಟ್, ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ರೈತ ಮುಖಂಡರೊಬ್ಬರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತು. ಕೇವಲ ಉಪವಾಸಕ್ಕೆ ಕುಳಿತುಕೊಳ್ಳುವುದು ಆತ್ಮಹತ್ಯೆಯ ಯತ್ನವಾಗುವುದಿಲ್ಲ ಎಂದು ಕೋರ್ಟ್ ತೀರ್ಪು ನೀಡಿತು.

ಸುಪ್ರೀಂ ಕೋರ್ಟ್ ಕೂಡ ಉಪವಾಸವನ್ನು ಸಾಂವಿಧಾನಿಕವಾಗಿ ಒಪ್ಪಿತವಾದ ಪ್ರತಿಭಟನೆಯ ರೂಪ ಎಂದು ಒಪ್ಪಿಕೊಂಡಿದೆ. ‘ರಾಮಲೀಲಾ ಮೈದಾನದ ಘಟನೆ’ ಪ್ರಕರಣದ ತನ್ನ ತೀರ್ಪಿನಲ್ಲಿ, ಉಪವಾಸ ಸತ್ಯಾಗ್ರಹಗಳು ಗಾಂಧೀಜಿಯವರ ಸತ್ಯಾಗ್ರಹ ಪರಂಪರೆಯಿಂದ ಕಾನೂನುಬದ್ಧತೆಯನ್ನು ಪಡೆದುಕೊಂಡಿವೆ ಮತ್ತು ಅವು ಸ್ವಯಂ ತ್ಯಾಗವನ್ನು ಒಳಗೊಂಡಿವೆ ಎಂಬ ಕಾರಣಕ್ಕೆ ಮಾತ್ರ ಅವುಗಳನ್ನು ಅಸಂವಿಧಾನಿಕ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನೆನಪಿಸಿದೆ.

► ಸರ್ಕಾರ ಏಕೆ ಮಧ್ಯಪ್ರವೇಶಿಸುತ್ತದೆ ?

ಸಂವಿಧಾನವು ಕೇವಲ ಪ್ರತಿಭಟನೆಯ ಹಕ್ಕನ್ನು ಮಾತ್ರವಲ್ಲದೆ, ಬದುಕುವ ಹಕ್ಕನ್ನೂ ರಕ್ಷಿಸುತ್ತದೆ.

ಸಂವಿಧಾನದ ವಿಧಿ 21 ಪ್ರತಿಯೊಬ್ಬ ವ್ಯಕ್ತಿಯ ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ. ಯಾರದೇ ಜೀವಕ್ಕೆ ತಕ್ಷಣದ ಅಪಾಯ ಎದುರಾದಾಗ ಸರ್ಕಾರವು ಕೇವಲ ಮೂಕಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯಗಳು ಪದೇ ಪದೇ ಈ ವಿಧಿಯನ್ನು ವ್ಯಾಖ್ಯಾನಿಸಿವೆ.

2024ರಲ್ಲಿ ಪಂಜಾಬ್ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೇವಾಲ್ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶಗಳು ಈ ಸಮತೋಲನವನ್ನು ಸ್ಪಷ್ಟಪಡಿಸುತ್ತವೆ.

ರೈತರ ಪ್ರತಿಭಟನೆಯ ಭಾಗವಾಗಿ ದಲ್ಲೇವಾಲ್ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ತಕ್ಷಣದ ಮತ್ತು ಸೂಕ್ತ ವೈದ್ಯಕೀಯ ಆರೈಕೆಯನ್ನು ಒದಗಿಸುವುದು ಕೇಂದ್ರ ಮತ್ತು ಪಂಜಾಬ್ ಸರ್ಕಾರದ "ಪರಮ ಕರ್ತವ್ಯ" ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಅದೇ ಸಮಯದಲ್ಲಿ, ಅವರ ಜೀವ ಉಳಿಸಲು ತೀರಾ ಅನಿವಾರ್ಯವಾಗದಿದ್ದರೆ, ಉಪವಾಸವನ್ನು ಬಲವಂತವಾಗಿ ನಿಲ್ಲಿಸದೆ ಅಧಿಕಾರಿಗಳು ವೈದ್ಯಕೀಯ ನೆರವು ನೀಡಬೇಕು ಎಂದೂ ಕೋರ್ಟ್ ತಿಳಿಸಿತ್ತು.

ಇಂತಹ ನಿರ್ಧಾರಗಳ ಹಿಂದಿರುವ ತತ್ವವನ್ನು ಕಾನೂನು ತಜ್ಞರು 'ಪಾರೆನ್ಸ್ ಪ್ಯಾಟ್ರಿಯೆ' (parens patriae) ಎಂದು ಕರೆಯುತ್ತಾರೆ. ಇದರ ಪ್ರಕಾರ, ವ್ಯಕ್ತಿಯೊಬ್ಬರ ಜೀವಕ್ಕೆ ತೀವ್ರ ಅಪಾಯವಿದ್ದಾಗ ಸರ್ಕಾರವು ಅವರ ರಕ್ಷಕನ ಪಾತ್ರವನ್ನು ವಹಿಸುತ್ತದೆ.

ವಾಂಗ್ಚುಕ್ ಅವರ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿರುವ ಆದೇಶವೂ ಇದೇ ಹಾದಿಯನ್ನು ಅನುಸರಿಸಿದೆ. ಅಂದರೆ, ಪ್ರತಿಭಟನೆಯಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡದೆ ಜೀವವನ್ನು ರಕ್ಷಿಸುವುದೇ ಇದರ ಉದ್ದೇಶವಾಗಿದೆ.

► ಉಪವಾಸನಿರತರಿಗೆ ಸರ್ಕಾರ ಬಲವಂತವಾಗಿ ಆಹಾರ ನೀಡಬಹುದೇ?

ಪ್ರತಿಯೊಬ್ಬ ಉಪವಾಸ ಸತ್ಯಾಗ್ರಹನಿರತನಿಗೂ ಬಲವಂತವಾಗಿ ಆಹಾರ ನೀಡಲು ಅಧಿಕಾರಿಗಳಿಗೆ ಸ್ವಯಂಚಾಲಿತವಾಗಿ ಅವಕಾಶ ನೀಡುವ ಯಾವುದೇ ನಿರ್ದಿಷ್ಟ ಕಾನೂನು ಭಾರತದಲ್ಲಿಲ್ಲ.

ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿರುವ, ಮಾನಸಿಕವಾಗಿ ಸ್ವಸ್ಥನಾಗಿರುವ ವಯಸ್ಕ ವ್ಯಕ್ತಿಗೆ ಬಲವಂತವಾಗಿ ಆಹಾರ ನೀಡುವುದನ್ನು ಅನುಮತಿಸುವ ಅಥವಾ ನಿಷೇಧಿಸುವ ಯಾವುದೇ ಸಾಮಾನ್ಯ ನಿಯಮವನ್ನು ಸುಪ್ರೀಂ ಕೋರ್ಟ್ ಕೂಡ ರೂಪಿಸಿಲ್ಲ. ಬದಲಿಗೆ, ಪ್ರತಿಯೊಂದು ಪ್ರಕರಣವು ಪ್ರತಿಭಟನಾಕಾರರ ಆರೋಗ್ಯ ಸ್ಥಿತಿ, ಅವರು ಸರ್ಕಾರದ ವಶದಲ್ಲಿದ್ದಾರೆಯೇ, ವೈದ್ಯರ ಮೌಲ್ಯಮಾಪನ ಮತ್ತು ಅನ್ವಯವಾಗುವ ಸಂದರ್ಭಗಳಲ್ಲಿ ನ್ಯಾಯಾಲಯದ ನಿರ್ದೇಶನಗಳಂತಹ ಅಂಶಗಳ ಮೇಲೆ ಆಧಾರಿತವಾಗಿರುತ್ತದೆ.

ವಾಂಗ್ಚುಕ್ ಅವರ ಪ್ರಕರಣದಲ್ಲಿ, ದೆಹಲಿ ಹೈಕೋರ್ಟ್ ಆಗಲಿ ಅಥವಾ ದೆಹಲಿ ಪೊಲೀಸರಾಗಲಿ ಅವರಿಗೆ ಬಲವಂತವಾಗಿ ಆಹಾರ ನೀಡಲಾಗುವುದು ಎಂದು ಎಲ್ಲೂ ಹೇಳಿಲ್ಲ.

ಪ್ರತಿದಿನ ಆರೋಗ್ಯದ ಮೇಲ್ವಿಚಾರಣೆ ನಡೆಸಲು ಮತ್ತು ಅಗತ್ಯ ವೈದ್ಯಕೀಯ ನೆರವು ನೀಡಲು ಕೋರ್ಟ್ ನಿರ್ದೇಶಿಸಿದೆ. ಅವರ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ಮತ್ತು ವೈದ್ಯರ ಸಲಹೆಯ ಮೇರೆಗೆ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಂಗ್ಚುಕ್ ಅವರ ಒಪ್ಪಿಗೆಯಿಲ್ಲದೆ ಕೇವಲ ಆರೋಗ್ಯ ತಪಾಸಣೆಯನ್ನು ಮಾತ್ರವಲ್ಲದೆ ಬೇರೆ ಯಾವುದೇ ಚಿಕಿತ್ಸೆ ನೀಡಬಹುದೇ ಎಂಬುದು ಕಾನೂನು ಮತ್ತು ನೈತಿಕವಾಗಿ ಸಂಕೀರ್ಣವಾದ ಪ್ರಶ್ನೆಯಾಗಿದೆ.

ಅಂತರರಾಷ್ಟ್ರೀಯ ವೈದ್ಯಕೀಯ ನೈತಿಕತೆಯು ಈ ಬಗ್ಗೆ ಕೆಲವು ಮಾರ್ಗದರ್ಶನಗಳನ್ನು ನೀಡುತ್ತದೆ.

ವಿಶ್ವ ವೈದ್ಯಕೀಯ ಸಂಸ್ಥೆಯ (WMA) 'ಉಪವಾಸ ಸತ್ಯಾಗ್ರಹ ನಿರತರ ಕುರಿತ ಮಾಲ್ಟಾ ಘೋಷಣೆ'ಯು, ಸ್ವಯಂಪ್ರೇರಿತರಾಗಿ ಆಹಾರ ನಿರಾಕರಿಸುವ ಮತ್ತು ಮಾನಸಿಕವಾಗಿ ಸ್ವಸ್ಥನಾಗಿರುವ ವ್ಯಕ್ತಿಗೆ ಬಲವಂತವಾಗಿ ಆಹಾರ ನೀಡುವುದು ನೈತಿಕವಾಗಿ ಒಪ್ಪಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಒಂದು ವೇಳೆ ಆ ನಿರ್ಧಾರವು ಸಾವಿಗೆ ಕಾರಣವಾದರೂ, ಚಿಕಿತ್ಸೆಯನ್ನು ನಿರಾಕರಿಸುವ ವ್ಯಕ್ತಿಯ ಪ್ರಜ್ಞಾಪೂರ್ವಕ ನಿರ್ಧಾರವನ್ನು ವೈದ್ಯರು ಗೌರವಿಸಬೇಕು ಎಂದು ಅದು ತಿಳಿಸುತ್ತದೆ.

ಇದು ವ್ಯಕ್ತಿಯೊಬ್ಬನ ದೈಹಿಕ ಸ್ವಾಯತ್ತತೆ ಮತ್ತು ಜೀವ ರಕ್ಷಿಸುವ ಸರ್ಕಾರದ ಜವಾಬ್ದಾರಿಯ ನಡುವೆ ಒಂದು ಕಠಿಣವಾದ ಸಂಘರ್ಷವನ್ನು ಸೃಷ್ಟಿಸುತ್ತದೆ.

ನ್ಯಾಯಾಲಯಗಳು ಮತ್ತು ಸರ್ಕಾರಗಳು ಈ ಹಿಂದೆ ಏನು ಮಾಡಿವೆ?

ಪರಿಸ್ಥಿತಿಗೆ ಅನುಗುಣವಾಗಿ ಭಾರತದಲ್ಲಿ ವಿವಿಧ ಸಂದರ್ಭಗಳಲ್ಲಿ ಉಪವಾಸ ಸತ್ಯಾಗ್ರಹಗಳನ್ನು ವಿಭಿನ್ನ ರೀತಿಯಲ್ಲೇ ನಿರ್ವಹಿಸಲಾಗಿದೆ.

ಉಪವಾಸ ನಿರತರ ವಿರುದ್ಧ ಹಗೆತನದ ಧೋರಣೆ ತಳೆಯುವ ಬದಲು, ಅವರೊಂದಿಗೆ ಮಾತುಕತೆ ನಡೆಸುವಂತೆ ನ್ಯಾಯಾಲಯಗಳು ಸರ್ಕಾರಗಳನ್ನು ಸತತವಾಗಿ ಪ್ರೋತ್ಸಾಹಿಸುತ್ತಾ ಬಂದಿವೆ.

‘ರಾಮಲೀಲಾ ಮೈದಾನದ ಘಟನೆ’

ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಈ ಹಿಂದಿನ ಉದಾಹರಣೆಯೊಂದನ್ನು ದಾಖಲಿಸಿದೆ. 2011ರಲ್ಲಿ ಅಂದಿನ ಪ್ರಧಾನಿ ಮನ್ಮೋಹನ್ ಸಿಂಗ್ ಅವರು ಬಾಬಾ ರಾಮದೇವ್ ಅವರಿಗೆ ಪತ್ರ ಬರೆದು ಪ್ರಸ್ತಾವಿತ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಕೋರಿದ್ದರು. ಪ್ರತಿಭಟನೆ ಆರಂಭವಾಗುವ ಮುನ್ನವೇ ಕೇಂದ್ರದ ಹಿರಿಯ ಸಚಿವರು ಅವರನ್ನು ಭೇಟಿ ಮಾಡಿ ಮಾತುಕತೆಯ ಮೂಲಕ ಮನವೊಲಿಸಲು ಯತ್ನಿಸಿದ್ದರು ಎಂಬುದನ್ನು ಕೋರ್ಟ್ ನೆನಪಿಸಿದೆ.

ಬಲವಂತವಾಗಿ ಆಹಾರ ನೀಡಿದ ಪ್ರಕರಣಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಇರೋಮ್ ಶರ್ಮಿಳಾ ಅವರದ್ದು. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) ವಿರುದ್ಧ ಅವರು 16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆ ಸಮಯದಲ್ಲಿ, ಈಗ ರದ್ದಾಗಿರುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 309ರ (ಆತ್ಮಹತ್ಯೆ ಯತ್ನ) ಅಡಿಯಲ್ಲಿ ಅವರನ್ನು ಪದೇ ಪದೇ ಬಂಧಿಸಲಾಗುತ್ತಿತ್ತು. ಕಸ್ಟಡಿಯಲ್ಲಿದ್ದ ಅವರಿಗೆ ಮೂಗಿನ ನಳಿಕೆ (nasogastric tube) ಮೂಲಕ ಬಲವಂತವಾಗಿ ದ್ರವರೂಪದ ಆಹಾರ ನೀಡಲಾಗುತ್ತಿತ್ತು.

ಶರ್ಮಿಳಾ ಅವರ ಪ್ರಕರಣವು ಅವರು ಸರ್ಕಾರದ ವಶದಲ್ಲಿದ್ದಾಗ ನಡೆದಿದ್ದರಿಂದ, ಇದು ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿರುವ ವಾಂಗ್ಚುಕ್ ಅವರ ಪ್ರತಿಭಟನೆಗಿಂತ ಭಿನ್ನವಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.

ಇದಕ್ಕೆ ವ್ಯತಿರಿಕ್ತವಾಗಿ, 2011ರಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ನಡೆಸಿದ ಉಪವಾಸ ಸತ್ಯಾಗ್ರಹಗಳಿಗೆ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಯಾವುದೇ ಬಲವಂತದ ಆಹಾರ ನೀಡಲಾಗಿರಲಿಲ್ಲ.

ಭಾರತದಲ್ಲಿ ಉಪವಾಸ ಸತ್ಯಾಗ್ರಹಗಳು ಇಂದಿಗೂ ಏಕೆ ಪ್ರಾಮುಖ್ಯತೆ ಹೊಂದಿವೆ?

ಭಾರತದಲ್ಲಿ ಉಪವಾಸಕ್ಕೆ ಆಳವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯಿದೆ. ಮಹಾತ್ಮಾ ಗಾಂಧೀಜಿಯವರು ಇದನ್ನು ದೇಶದ ಅತ್ಯಂತ ಶಕ್ತಿಶಾಲಿ ರಾಜಕೀಯ ಅಸ್ತ್ರವನ್ನಾಗಿ ಪರಿವರ್ತಿಸಿದರು. ಗಾಂಧೀಜಿಯವರ ಪ್ರಕಾರ, ಉಪವಾಸ ಎನ್ನುವುದು ಹಿಂಸೆಯ ಮೂಲಕ ಒತ್ತಾಯಿಸುವ ಕ್ರಮವಾಗಿರಲಿಲ್ಲ. ಬದಲಿಗೆ, ಸಮಾಜದ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಸ್ವಯಂ ತ್ಯಾಗದ ಹಾದಿಯಾಗಿತ್ತು.

ಸ್ವತಂತ್ರ ಭಾರತವು ಭಾಷಾವಾರು ರಾಜ್ಯಗಳ ರಚನೆ, ಭೂಸ್ವಾಧೀನ, ಭ್ರಷ್ಟಾಚಾರ, ರೈತರ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳಿಗಾಗಿ ಹಲವಾರು ಉಪವಾಸ ಸತ್ಯಾಗ್ರಹಗಳಿಗೆ ಸಾಕ್ಷಿಯಾಗುತ್ತಲೇ ಬಂದಿದೆ.

1952ರಲ್ಲಿ ಪೊಟ್ಟಿ ಶ್ರೀರಾಮುಲು ಅವರು 58 ದಿನಗಳ ಉಪವಾಸದ ನಂತರ ಮರಣ ಹೊಂದಿದ್ದು ಆಂಧ್ರ ರಾಜ್ಯದ ರಚನೆಗೆ ಕಾರಣವಾಯಿತು. ಇರೋಮ್ ಶರ್ಮಿಳಾ ಅವರ ಸುದೀರ್ಘ ಉಪವಾಸ ವ್ರತವು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) ವಿರುದ್ಧದ ಪ್ರತಿರೋಧದ ಅಂತರರಾಷ್ಟ್ರೀಯ ಸಂಕೇತವಾಯಿತು. 2011ರಲ್ಲಿ ಅಣ್ಣಾ ಹಜಾರೆ ಅವರು ನಡೆಸಿದ ಉಪವಾಸ ಸತ್ಯಾಗ್ರಹವು ಭ್ರಷ್ಟಾಚಾರ ವಿರೋಧಿ ಚಳವಳಿಗೆ ವ್ಯಾಪಕ ಜನಬೆಂಬಲ ತಂದುಕೊಟ್ಟಿತು.

ಈ ಪ್ರತಿಭಟನಾ ವಿಧಾನವು ಟೀಕೆಗಳಿಗೂ ಒಳಗಾಗಿದೆ.

ಬದಲಾವಣೆಯನ್ನು ತರಲು ಸಾಂವಿಧಾನಿಕ ಮಾರ್ಗಗಳು ಲಭ್ಯವಿರುವಾಗ, ಆಮರಣಾಂತ ಉಪವಾಸ ಮತ್ತು ನಾಗರಿಕ ಅಸಹಕಾರ ಚಳವಳಿಗಳು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಿಗೆ ದಾರಿ ಮಾಡಿಕೊಡಬೇಕು ಎಂದು ಬಿ.ಆರ್. ಅಂಬೇಡ್ಕರ್ ಅವರು 1949ರಲ್ಲೇ ವಾದಿಸಿದ್ದರು. ಇಂತಹ ಕ್ರಮಗಳನ್ನು ಅವರು "ಅರಾಜಕತೆಯ ವ್ಯಾಕರಣ" ಎಂದು ಬಣ್ಣಿಸಿದ್ದರು.

ರಾಜಕೀಯ ತತ್ವಜ್ಞಾನಿ ಪ್ರತಾಪ್ ಭಾನು ಮೆಹ್ತಾ ಅವರೂ ಕೂಡ, ಆಮರಣಾಂತ ಉಪವಾಸಗಳು ಸರ್ಕಾರದ ಮೇಲೆ ತೀವ್ರ ನೈತಿಕ ಒತ್ತಡವನ್ನು ಹೇರುವುದರಿಂದ ಅವು ಬಲವಂತದ ಕ್ರಮಗಳಾಗಿ ಬದಲಾಗಬಹುದು ಎಂದು ವಾದಿಸಿದ್ದಾರೆ.

ಮಾನವಶಾಸ್ತ್ರಜ್ಞ ಸಾಯಂತನ್ ಸಹಾ ರಾಯ್ ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ಉಪವಾಸ ಸತ್ಯಾಗ್ರಹಗಳು ರಾಜಕೀಯವಾಗಿ ಇಂದಿಗೂ ಪ್ರಭಾವಶಾಲಿಯಾಗಿವೆ ಎಂದಿದ್ದಾರೆ. ಪ್ರತಿಭಟನಾಕಾರರ ಕ್ಷೀಣಿಸುತ್ತಿರುವ ದೇಹ ಕಣ್ಣಿಗೆ ಕಾಣುವ ತ್ಯಾಗದ ಸಂಕೇತವಾಗಿ ಬದಲಾಗುತ್ತದೆ. ಇದು ಸರ್ಕಾರ ಮತ್ತು ಸಾರ್ವಜನಿಕರು ತಕ್ಷಣ ಸ್ಪಂದಿಸುವಂತೆ ಒತ್ತಾಯಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ಸೋನಮ್ ವಾಂಗ್ಚುಕ್ ಅವರ ಪ್ರಕರಣವು ಇಂತಹ ಪರಸ್ಪರ ವಿರುದ್ಧವಾದ ತತ್ವಗಳನ್ನು ಮತ್ತೊಮ್ಮೆ ಮುಂಚೂಣಿಗೆ ತಂದಿದೆ. ಶಾಂತಿಯುತ ಪ್ರತಿಭಟನೆಯ ಹಕ್ಕಿಗೆ ರಕ್ಷಣೆ ಸಿಗಬೇಕು ಎಂದು ಭಾರತೀಯ ನ್ಯಾಯಾಲಯಗಳು ಪದೇ ಪದೇ ಪ್ರತಿಪಾದಿಸಿವೆ. ಅದೇ ಸಮಯದಲ್ಲಿ, ನಾಗರಿಕರ ಜೀವಕ್ಕೆ ತಕ್ಷಣದ ಅಪಾಯ ಎದುರಾದಾಗ ಸರ್ಕಾರವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿವೆ.

ಸೌಜನ್ಯ: newslaundry.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News