Photo: NDTV

ವಾಷಿಂಗ್ಟನ್: ಅಮೆರಿಕದ 2026ರ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಂಗ್ರೆಸ್‌ ನಿಂದ ಹಿಡಿದು ವಿವಿಧ ರಾಜ್ಯಗಳ ಶಾಸಕಾಂಗಗಳು ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳವರೆಗೆ ಭಾರತೀಯ ಮೂಲದ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ರಾಜಕೀಯದಲ್ಲಿ ತಮ್ಮ ಪ್ರಾತಿನಿಧ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಅಮೆರಿಕದ ರಾಜಕೀಯದಲ್ಲಿ ಭಾರತೀಯ ಸಮುದಾಯದ ಹೆಚ್ಚುತ್ತಿರುವ ಪ್ರಭಾವಕ್ಕೆ ಈ ಫಲಿತಾಂಶಗಳು ಸಾಕ್ಷಿಯಾಗಿವೆ.

ನ.3ರಂದು ನಡೆದ ಚುನಾವಣೆಯಲ್ಲಿ ವಿವಿಧ ರಾಜ್ಯಗಳ ಶಾಸಕಾಂಗಗಳಿಗೆ ಕನಿಷ್ಠ 30 ಭಾರತೀಯ ಮೂಲದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ 28 ಮಂದಿ ಡೆಮಾಕ್ರಟಿಕ್ ಪಕ್ಷದವರಾಗಿದ್ದರೆ, ಇಬ್ಬರು ರಿಪಬ್ಲಿಕನ್ ಪಕ್ಷದವರು. ಗೆಲುವು ಸಾಧಿಸಿದವರಲ್ಲಿ 15 ಮಂದಿ ಮಹಿಳೆಯರು ಎಂಬುದು ವಿಶೇಷ.

ಸ್ಟೇಟ್ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ 41 ಭಾರತೀಯ ಮೂಲದ ಅಭ್ಯರ್ಥಿಗಳ ಪೈಕಿ 30 ಮಂದಿ ಗೆಲುವು ಸಾಧಿಸಿದ್ದಾರೆ. ಇಬ್ಬರು ಮುನ್ನಡೆಯಲ್ಲಿದ್ದರೆ, 9 ಮಂದಿ ಸೋಲು ಕಂಡಿದ್ದಾರೆ. ಮರು ಆಯ್ಕೆ ಬಯಸಿದ್ದ ಎಲ್ಲ ಹಾಲಿ ಭಾರತೀಯ ಮೂಲದ ಶಾಸಕರು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

ಇಲಿನಾಯ್ಸ್‌ ನಲ್ಲಿ ನಾಲ್ವರು, ನ್ಯೂಯಾರ್ಕ್‌ನಲ್ಲಿ ಮೂವರು ಹಾಗೂ ವಾಷಿಂಗ್ಟನ್ ಮತ್ತು ವರ್ಮಾಂಟ್‌ ನಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ನಲ್ಲಿಯೂ ಭಾರತೀಯ ಮೂಲದವರ ಪ್ರಾತಿನಿಧ್ಯ ಹೆಚ್ಚಿದೆ. ನಾಲ್ವರು ಹಾಲಿ ಸದಸ್ಯರು ಮರು ಆಯ್ಕೆಯಾಗಿದ್ದು, ಫ್ಲೋರಿಡಾದ ಪಿಯಾ ದಾಂಡಿಯಾ ಮೊದಲ ಬಾರಿಗೆ ಕಾಂಗ್ರೆಸ್ ಪ್ರವೇಶಿಸಿದ್ದಾರೆ. ಅರಿಜೋನಾದ ಅಮೀಶ್ ಶಾ ಕೂಡ ಗೆಲುವು ಘೋಷಿಸಿಕೊಂಡಿದ್ದಾರೆ.

ಫ್ಲೋರಿಡಾದಿಂದ ಕಾಂಗ್ರೆಸ್‌ ಗೆ ಪಿಯಾ ದಾಂಡಿಯಾ; ಹೊಸ ಇತಿಹಾಸ

ಫ್ಲೋರಿಡಾದ 22ನೇ ಕಾಂಗ್ರೆಸ್ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಪಿಯಾ ದಾಂಡಿಯಾ, ರಿಪಬ್ಲಿಕನ್ ಅಭ್ಯರ್ಥಿ ಕೇಸಿ ಅಸ್ಕರ್ ಅವರನ್ನು ಸೋಲಿಸಿದ್ದಾರೆ. ಶೇ.51.9ರಷ್ಟು ಮತಗಳನ್ನು ಗಳಿಸಿರುವ ಪಿಯಾ, ಫ್ಲೋರಿಡಾದಿಂದ ಅಮೆರಿಕದ ಕಾಂಗ್ರೆಸ್‌ ಗೆ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾ ಮೂಲದ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯಲ್ಲಿ ಜನಿಸಿದ ಪಿಯಾ ಅವರ ತಂದೆ-ತಾಯಿ ರಾಜಸ್ಥಾನದ ಜೈಪುರ ಮೂಲದವರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಶಿಕ್ಷಕಿಯಾಗಿ ವೃತ್ತಿಜೀವನ ಆರಂಭಿಸಿದ ಅವರು, ನ್ಯೂಯಾರ್ಕ್‌ ನ ಹಾರ್ಲೆಮ್‌ ನ ಶಾಲೆಯೊಂದರ ಪ್ರಾಂಶುಪಾಲರಾಗಿದ್ದರು. ಬಳಿಕ ವೈಟ್ ಹೌಸ್ ಫೆಲೋ ಆಗಿ ಸಾರ್ವಜನಿಕ ನೀತಿಗಳ ರೂಪಿಸುವಿಕೆಯಲ್ಲಿ ಕೆಲಸ ಮಾಡಿದರು. ಆ್ಯಪಲ್ ಕಂಪೆನಿಯಲ್ಲಿಯೂ ಹಿರಿಯ ಹುದ್ದೆ ನಿರ್ವಹಿಸಿದ್ದಾರೆ.

ಆರೋಗ್ಯ ಸೇವೆಗಳ ವೆಚ್ಚ ಕಡಿತ, ಮನೆಗಳ ವಿಮಾ ದರ ನಿಯಂತ್ರಣ ಹಾಗೂ ಸರಕಾರಿ ಶಾಲೆಗಳ ಅಭಿವೃದ್ಧಿ ಅವರ ಪ್ರಮುಖ ಚುನಾವಣಾ ಭರವಸೆಗಳಾಗಿದ್ದವು.

ಅಮೀಶ್ ಶಾ ಗೆಲುವು; ಅರಿಜೋನಾದಿಂದ ಕಾಂಗ್ರೆಸ್‌ಗೆ ಮೊದಲ ಭಾರತೀಯ ಮೂಲದ ಪ್ರತಿನಿಧಿ

ಅರಿಜೋನಾದ ಮೊದಲ ಕಾಂಗ್ರೆಸ್ ಕ್ಷೇತ್ರದಲ್ಲಿ ಭಾರತೀಯ ಮೂಲದ ವೈದ್ಯ ಹಾಗೂ ಡೆಮಾಕ್ರಟಿಕ್ ಅಭ್ಯರ್ಥಿ ಡಾ. ಅಮೀಶ್ ಶಾ ಗೆಲುವು ಘೋಷಿಸಿಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಲ್ಡ್ ಟ್ರಂಪ್ ಬೆಂಬಲಿತ ರಿಪಬ್ಲಿಕನ್ ಅಭ್ಯರ್ಥಿ ಹಾಗೂ ಮಾಜಿ ನ್ಯಾಷನಲ್ ಫುಟ್‌ಬಾಲ್ ಲೀಗ್ ಆಟಗಾರ ಜೇ ಫೀಲಿ ವಿರುದ್ಧ ಅವರು ಸ್ಪರ್ಧಿಸಿದ್ದರು.

ನವೆಂಬರ್ 5ರಂದು ಲಭ್ಯವಾದ ವರದಿಗಳ ಪ್ರಕಾರ, ಅಮೀಶ್ ಶಾ ಶೇ.52.49ರಷ್ಟು ಮತಗಳನ್ನು ಪಡೆದಿದ್ದರೆ, ಜೇ ಫೀಲಿ ಶೇ.45.45ರಷ್ಟು ಮತಗಳನ್ನು ಗಳಿಸಿದ್ದಾರೆ. ಡಿಸಿಷನ್ ಡೆಸ್ಕ್ ಎಚ್‌ಕ್ಯೂ (Decision Desk HQ) ಅಮೀಶ್ ಶಾ ಅವರ ಗೆಲುವನ್ನು ಘೋಷಿಸಿದೆ.

ಈ ಮೂಲಕ ಅರಿಜೋನಾದಿಂದ ಅಮೆರಿಕದ ಕಾಂಗ್ರೆಸ್‌ ಗೆ ಆಯ್ಕೆಯಾಗುತ್ತಿರುವ ಮೊದಲ ಭಾರತೀಯ ಮೂಲದ ಅಮೆರಿಕನ್ ಎಂಬ ಇತಿಹಾಸ ನಿರ್ಮಿಸಿದ್ದಾರೆ.

48 ವರ್ಷದ ಅಮೀಶ್ ಶಾ ಚಿಕಾಗೊದಲ್ಲಿ ಜನಿಸಿದ್ದು, ಅವರ ತಂದೆ-ತಾಯಿ ಗುಜರಾತ್ ಮೂಲದವರು. ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್ಲಿ ಕ್ಯಾಂಪಸ್‌ ನಿಂದ ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ತುರ್ತು ಚಿಕಿತ್ಸಾ ವೈದ್ಯರಾಗಿರುವ ಅವರು, ಅರಿಜೋನಾ ರಾಜ್ಯ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ನಲ್ಲಿ ಮೂರು ಅವಧಿಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ 28 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸಿದ್ದರು ಎಂದು ಭಾರತೀಯ ಅಮೆರಿಕನ್ ಇಂಪ್ಯಾಕ್ಟ್ (Indian American Impact) ಸಂಘಟನೆ ತಿಳಿಸಿದೆ.

ಆರೋಗ್ಯ ಸೇವೆಗಳ ವೆಚ್ಚ ಕಡಿತ, ನೀರಿನ ಬಿಕ್ಕಟ್ಟಿಗೆ ಪರಿಹಾರ, ಜೀವನ ವೆಚ್ಚ ನಿಯಂತ್ರಣ ಮತ್ತು ಆರ್ಥಿಕ ಅಭಿವೃದ್ಧಿ ಅವರ ಪ್ರಮುಖ ಆದ್ಯತೆಗಳಾಗಿವೆ.

ಕಾಂಗ್ರೆಸ್‌ನಲ್ಲಿ ನಾಲ್ವರಿಗೆ ಮತ್ತೆ ಗೆಲುವು

ಸುಹಾಸ್ ಸುಬ್ರಮಣ್ಯಂ:

ವರ್ಜೀನಿಯಾದ 10ನೇ ಕಾಂಗ್ರೆಸ್ ಕ್ಷೇತ್ರದಿಂದ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ರಿಪಬ್ಲಿಕನ್ ಅಭ್ಯರ್ಥಿ ಡೇವ್ ಬೆಕ್‌ವಿತ್ ವಿರುದ್ಧ ಶೇ.61ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ.

1986ರಲ್ಲಿ ಹ್ಯೂಸ್ಟನ್‌ ನಲ್ಲಿ ಜನಿಸಿದ ಸುಹಾಸ್ ಅವರ ತಂದೆ ಬೆಂಗಳೂರಿನವರಾಗಿದ್ದು, ತಾಯಿ ಚೆನ್ನೈ ಮೂಲದವರು. ಕಾನೂನು ಪದವೀಧರರಾಗಿರುವ ಅವರು, ಬರಾಕ್ ಒಬಾಮಾ ಆಡಳಿತದಲ್ಲಿ ವೈಟ್ ಹೌಸ್‌ನ ತಂತ್ರಜ್ಞಾನ ನೀತಿ ಸಲಹೆಗಾರರಾಗಿದ್ದರು. 2024ರಲ್ಲಿ ಮೊದಲ ಬಾರಿ ಕಾಂಗ್ರೆಸ್‌ಗೆ ಆಯ್ಕೆಯಾಗಿದ್ದರು.

ಪ್ರಮೀಳಾ ಜಯಪಾಲ್:

ವಾಷಿಂಗ್ಟನ್ ರಾಜ್ಯದ 7ನೇ ಕಾಂಗ್ರೆಸ್ ಕ್ಷೇತ್ರದಿಂದ ಆರನೇ ಅವಧಿಗೆ ಆಯ್ಕೆಯಾಗಿದ್ದಾರೆ.

ಚೆನ್ನೈನಲ್ಲಿ ಜನಿಸಿದ ಪ್ರಮೀಳಾ, 16ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿದ್ದರು. ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಅವರು, ವಲಸಿಗರ ಹಕ್ಕುಗಳ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿದ್ದರು.

2016ರಲ್ಲಿ ಕಾಂಗ್ರೆಸ್‌ ಗೆ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾ ಮೂಲದ ಅಮೆರಿಕನ್ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದರು. ಆರೋಗ್ಯ ಸೇವೆ, ಕಾರ್ಮಿಕರ ಹಕ್ಕುಗಳು ಹಾಗೂ ವಲಸೆ ಸುಧಾರಣೆಯ ಪ್ರಮುಖ ಪ್ರತಿಪಾದಕರಾಗಿದ್ದಾರೆ.

ರೋ ಖನ್ನಾ:

ಕ್ಯಾಲಿಫೋರ್ನಿಯಾದ 17ನೇ ಕಾಂಗ್ರೆಸ್ ಕ್ಷೇತ್ರದಿಂದ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಸಿಲಿಕಾನ್ ವ್ಯಾಲಿಯನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಭಾರತೀಯ ಮೂಲದ ರಿಪಬ್ಲಿಕನ್ ಅಭ್ಯರ್ಥಿ ರಿತೇಶ್ ಟಂಡನ್ ಅವರನ್ನು ಸೋಲಿಸಿದ್ದಾರೆ.

ಪಂಜಾಬ್ ಮೂಲದ ಕುಟುಂಬದಲ್ಲಿ ಜನಿಸಿದ ರೋ ಖನ್ನಾ, ಯೇಲ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಬರಾಕ್ ಒಬಾಮಾ ಆಡಳಿತದಲ್ಲಿ ವಾಣಿಜ್ಯ ಇಲಾಖೆಯಲ್ಲಿ ಕೆಲಸ ಮಾಡಿದ್ದರು. ಅಮೆರಿಕದ ಉತ್ಪಾದನಾ ವಲಯ, ಸೆಮಿಕಂಡಕ್ಟರ್ ಕೈಗಾರಿಕೆ ಮತ್ತು ತಂತ್ರಜ್ಞಾನ ನೀತಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಮಿ ಬೇರಾ:

ಕ್ಯಾಲಿಫೋರ್ನಿಯಾದ 3ನೇ ಕಾಂಗ್ರೆಸ್ ಕ್ಷೇತ್ರದಿಂದ ಎಂಟನೇ ಅವಧಿಗೆ ಆಯ್ಕೆಯಾಗಿದ್ದಾರೆ. ರಿಪಬ್ಲಿಕನ್ ಅಭ್ಯರ್ಥಿ ರಾಬ್ ಟಕರ್ ಅವರನ್ನು ಸೋಲಿಸಿದ್ದಾರೆ.

ಗುಜರಾತ್ ಮೂಲದ ಕುಟುಂಬದಲ್ಲಿ ಜನಿಸಿದ ಅಮಿ ಬೇರಾ ವೃತ್ತಿಯಲ್ಲಿ ವೈದ್ಯರು. 2012ರಲ್ಲಿ ಮೊದಲ ಬಾರಿ ಕಾಂಗ್ರೆಸ್‌ಗೆ ಆಯ್ಕೆಯಾಗಿದ್ದರು. ಅಮೆರಿಕದ ಕಾಂಗ್ರೆಸ್‌ನಲ್ಲಿ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿರುವ ಭಾರತೀಯ ಮೂಲದ ಸದಸ್ಯ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಭಾರತ-ಅಮೆರಿಕ ಸಂಬಂಧ, ಇಂಡೋ-ಪೆಸಿಫಿಕ್ ಭದ್ರತೆ ಹಾಗೂ ಆರೋಗ್ಯ ನೀತಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮಿಶಿಗನ್‌ನಲ್ಲಿ ರಣಜೀವ್ ಪುರಿಗೆ ಸ್ಪೀಕರ್ ಪಟ್ಟದ ಅವಕಾಶ

ಮಿಶಿಗನ್ ರಾಜ್ಯದ 24ನೇ ಹೌಸ್ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ನಾಯಕ ರಣಜೀವ್ ಪುರಿ ಶೇ.66ರಷ್ಟು ಮತಗಳನ್ನು ಪಡೆದು ಮರು ಆಯ್ಕೆಯಾಗಿದ್ದಾರೆ.

ಭಾರತೀಯ ಮೂಲದ ಸಿಖ್ ಸಮುದಾಯಕ್ಕೆ ಸೇರಿದ ರಣಜೀವ್ ಪುರಿ, ಮಿಶಿಗನ್ ಹೌಸ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ಅಲ್ಪಮತದ ನಾಯಕರಾಗಿದ್ದರು. ಈ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಮಿಶಿಗನ್ ಹೌಸ್‌ನಲ್ಲಿ ಬಹುಮತ ಪಡೆದಿರುವುದರಿಂದ ಅವರು ಸ್ಪೀಕರ್ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ಅವರು ಸ್ಪೀಕರ್ ಆಗಿ ಆಯ್ಕೆಯಾದರೆ ಮಿಶಿಗನ್ ಹೌಸ್‌ನ ಮೊದಲ ಭಾರತೀಯ ಮೂಲದ ಹಾಗೂ ಮೊದಲ ಸಿಖ್ ಸ್ಪೀಕರ್ ಎಂಬ ಇತಿಹಾಸ ನಿರ್ಮಿಸಲಿದ್ದಾರೆ. ಆದರೆ ಹುದ್ದೆಗೆ ಪಕ್ಷದ ಸದಸ್ಯರ ಅಧಿಕೃತ ಆಯ್ಕೆ ಇನ್ನೂ ನಡೆಯಬೇಕಿದೆ.

ಅರಿಜೋನಾದಲ್ಲಿ ಪ್ರಿಯಾ ಸುಂದರೇಶನ್‌ ಗೆ ಉನ್ನತ ಹುದ್ದೆಯ ನಿರೀಕ್ಷೆ

ಅರಿಜೋನಾ ಸ್ಟೇಟ್ ಸೆನೆಟ್‌ ನ 18ನೇ ಕ್ಷೇತ್ರದಿಂದ ಡೆಮಾಕ್ರಟಿಕ್ ನಾಯಕಿ ಪ್ರಿಯಾ ಸುಂದರೇಶನ್ ಶೇ.66ರಷ್ಟು ಮತಗಳೊಂದಿಗೆ ಮರು ಆಯ್ಕೆಯಾಗಿದ್ದಾರೆ.

ಈ ಹಿಂದೆ ಸ್ಟೇಟ್ ಸೆನೆಟ್‌ನಲ್ಲಿ ಅಲ್ಪಮತದ ನಾಯಕರಾಗಿದ್ದ ಅವರು, ಡೆಮಾಕ್ರಟಿಕ್ ಪಕ್ಷಕ್ಕೆ ಬಹುಮತ ಲಭಿಸಿರುವ ಹಿನ್ನೆಲೆಯಲ್ಲಿ ಸೆನೆಟ್ ಅಧ್ಯಕ್ಷೆ ಅಥವಾ ಬಹುಮತದ ನಾಯಕಿಯಂತಹ ಉನ್ನತ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ.

ಅರಿಜೋನಾದಲ್ಲಿ ಡೆಮಾಕ್ರಟಿಕ್ ಪಕ್ಷವು ರಾಜ್ಯದ ಎರಡೂ ಶಾಸಕಾಂಗ ಸದನಗಳು ಹಾಗೂ ಗವರ್ನರ್ ಹುದ್ದೆಯ ಮೇಲೆ ನಿಯಂತ್ರಣ ಸಾಧಿಸಿರುವುದಾಗಿ ಪಕ್ಷದ ಚುನಾವಣಾ ಸಂಘಟನೆ ತಿಳಿಸಿದೆ. ಪ್ರಿಯಾ ಸುಂದರೇಶನ್ ಅವರ ಮುಂದಿನ ಹುದ್ದೆ ಇನ್ನೂ ಅಂತಿಮಗೊಂಡಿಲ್ಲ.

ಜಾರ್ಜಿಯಾ, ಟೆಕ್ಸಾಸ್‌ ನಲ್ಲಿ ಭಾರತೀಯರ ಐತಿಹಾಸಿಕ ಸಾಧನೆ

ಜಾರ್ಜಿಯಾದ 97ನೇ ಹೌಸ್ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜ್ಯೋತ್ ಸಿಂಗ್ ಶೇ.68ರಷ್ಟು ಮತಗಳನ್ನು ಪಡೆದು ರಿಪಬ್ಲಿಕನ್ ಅಭ್ಯರ್ಥಿ ಯಾಸಿನ್ ಮೊಘಾಜಿ ಅವರನ್ನು ಸೋಲಿಸಿದ್ದಾರೆ.

ಈ ಮೂಲಕ ಜಾರ್ಜಿಯಾ ರಾಜ್ಯ ಶಾಸಕಾಂಗಕ್ಕೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ಅಮೆರಿಕನ್ ಹಾಗೂ ಮೊದಲ ಸಿಖ್ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಯೇಲ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಜ್ಯೋತ್ ಸಿಂಗ್, ಮತದಾರರ ನೋಂದಣಿ, ನಾಗರಿಕ ಹಕ್ಕುಗಳು ಮತ್ತು ವಲಸಿಗರ ನೆರವು ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಕಾರ್ಪೊರೇಟ್ ರಾಜಕೀಯ ದೇಣಿಗೆಗಳನ್ನು ನಿರಾಕರಿಸಿ ಸಾಮಾನ್ಯ ಬೆಂಬಲಿಗರ ನೆರವಿನಿಂದ ಪ್ರಚಾರ ನಡೆಸಿದ್ದರು.

ಟೆಕ್ಸಾಸ್‌ ನ 47ನೇ ಹೌಸ್ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಪೂಜಾ ಸೇಠಿ ಶೇ.63ರಷ್ಟು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಟೆಕ್ಸಾಸ್ ಶಾಸಕಾಂಗಕ್ಕೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ಮಹಿಳೆ ಹಾಗೂ ಮೊದಲ ಏಷ್ಯನ್ ಅಮೆರಿಕನ್ ಡೆಮಾಕ್ರಟಿಕ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಲಿನಾಯ್ಸ್ ಸ್ಟೇಟ್ ಸೆನೆಟ್‌ಗೆ ನಬೀಲಾ ಸಯ್ಯದ್

ಇಲಿನಾಯ್ಸ್‌ ನ 26ನೇ ಸ್ಟೇಟ್ ಸೆನೆಟ್ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ನಬೀಲಾ ಸಯ್ಯದ್, ರಿಪಬ್ಲಿಕನ್ ಅಭ್ಯರ್ಥಿ ಡಾರ್ಬಿ ಹಿಲ್ಸ್ ಅವರನ್ನು ಸೋಲಿಸಿದ್ದಾರೆ. ನಬೀಲಾ ಶೇ.57ರಷ್ಟು ಮತಗಳನ್ನು ಪಡೆದರೆ, ಡಾರ್ಬಿ ಹಿಲ್ಸ್ ಶೇ.43ರಷ್ಟು ಮತಗಳನ್ನು ಗಳಿಸಿದ್ದಾರೆ.

1999ರಲ್ಲಿ ಇಲಿನಾಯ್ಸ್‌ ನಲ್ಲಿ ಜನಿಸಿದ ನಬೀಲಾ ಅವರ ತಂದೆ-ತಾಯಿ ಹೈದರಾಬಾದ್ ಮೂಲದ ಭಾರತೀಯ ಮುಸ್ಲಿಂ ವಲಸಿಗರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್ಲಿ ಕ್ಯಾಂಪಸ್‌ನಲ್ಲಿ ಪದವಿ ಪಡೆದ ಅವರು, 2022ರಲ್ಲಿ ಕೇವಲ 23ನೇ ವಯಸ್ಸಿನಲ್ಲಿ ಇಲಿನಾಯ್ಸ್ ಹೌಸ್‌ ಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದರು.

ಸರಕಾರಿ ಶಿಕ್ಷಣ, ಆರೋಗ್ಯ ಸೇವೆಗಳ ವಿಸ್ತರಣೆ ಮತ್ತು ಆಸ್ತಿ ತೆರಿಗೆ ಹೊರೆ ಕಡಿತ ಅವರ ಪ್ರಮುಖ ಆದ್ಯತೆಗಳಾಗಿವೆ.

ಈ ಚುನಾವಣೆ ಇಲಿನಾಯ್ಸ್‌ ನ ಅತ್ಯಂತ ದುಬಾರಿ ರಾಜ್ಯ ಶಾಸಕಾಂಗ ಸ್ಪರ್ಧೆಗಳಲ್ಲಿ ಒಂದಾಗಿತ್ತು. ಅಕ್ಟೋಬರ್ ವೇಳೆಗೆ ನಬೀಲಾ ಸುಮಾರು 32 ಲಕ್ಷ ಡಾಲರ್ ಚುನಾವಣಾ ನಿಧಿ ಸಂಗ್ರಹಿಸಿದ್ದರೆ, ಎದುರಾಳಿ ಸುಮಾರು 15 ಲಕ್ಷ ಡಾಲರ್ ಸಂಗ್ರಹಿಸಿದ್ದರು.

ನ್ಯೂಯಾರ್ಕ್‌ ನಲ್ಲಿ ಲೀಸಾ ಕೌಲ್‌ಗೆ ಗೆಲುವು

ನ್ಯೂಯಾರ್ಕ್ ಸ್ಟೇಟ್ ಸೆನೆಟ್‌ ನ 39ನೇ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಲೀಸಾ ಕೌಲ್, ರಿಪಬ್ಲಿಕನ್ ಪಕ್ಷದ ಹಾಲಿ ಸ್ಟೇಟ್ ಸೆನೆಟರ್ ರಾಬ್ ರೋಲಿಸನ್ ಅವರನ್ನು ಸೋಲಿಸಿದ್ದಾರೆ.

ಲೀಸಾ ಕೌಲ್ ಸುಮಾರು ಶೇ.55ರಷ್ಟು ಮತಗಳನ್ನು ಪಡೆದರೆ, ರೋಲಿಸನ್ ಶೇ.45ರಷ್ಟು ಮತಗಳನ್ನು ಗಳಿಸಿದ್ದಾರೆ. ಈ ಗೆಲುವು ನ್ಯೂಯಾರ್ಕ್ ರಾಜ್ಯ ಶಾಸಕಾಂಗದಲ್ಲಿ ಭಾರತೀಯ ಮೂಲದ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಿದೆ.

ಹಲವು ರಾಜ್ಯಗಳಲ್ಲಿ ಭಾರತೀಯ ಮೂಲದವರ ಗೆಲುವಿನ ಓಟ

ಇಲಿನಾಯ್ಸ್ ಸ್ಟೇಟ್ ಸೆನೆಟ್‌ನ 8ನೇ ಕ್ಷೇತ್ರದಲ್ಲಿ ರಾಮ್ ವಿಲ್ಲಿವಲಂ ಶೇ.73ರಷ್ಟು ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ತಮಿಳುನಾಡು ಮೂಲದ ಕುಟುಂಬಕ್ಕೆ ಸೇರಿದ ಅವರು, ಸ್ಟೇಟ್ ಸೆನೆಟ್‌ನ ಸಾರಿಗೆ ಸಮಿತಿಯ ಅಧ್ಯಕ್ಷರಾಗಿದ್ದು, ಸಾರ್ವಜನಿಕ ಸಾರಿಗೆ ಮತ್ತು ಕಾರ್ಮಿಕರ ಹಕ್ಕುಗಳ ಪರವಾಗಿ ಕೆಲಸ ಮಾಡಿದ್ದಾರೆ.

ಪೆನ್ಸಿಲ್ವೇನಿಯಾದ 30ನೇ ಹೌಸ್ ಕ್ಷೇತ್ರದಲ್ಲಿ ವೈದ್ಯ ಅರವಿಂದ್ ವೆಂಕಟ್ ಶೇ.63ರಷ್ಟು ಮತಗಳೊಂದಿಗೆ ಮರು ಆಯ್ಕೆಯಾಗಿದ್ದಾರೆ. ಮದುರೈನಲ್ಲಿ ಜನಿಸಿದ ಅವರು, ಯೇಲ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದಿದ್ದು, ತುರ್ತು ಚಿಕಿತ್ಸಾ ವ್ಯವಸ್ಥೆಗಳ ಸುಧಾರಣೆಗೆ ಒತ್ತು ನೀಡಿದ್ದಾರೆ.

ನಾರ್ತ್ ಕ್ಯಾರೊಲೈನಾದ 15ನೇ ಸ್ಟೇಟ್ ಸೆನೆಟ್ ಕ್ಷೇತ್ರದಲ್ಲಿ ಜೇ ಚೌಧರಿ ಶೇ.75ರಷ್ಟು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಓಹಯೊದಲ್ಲಿ ಅನಿತಾ ಸೋಮಾನಿ ಶೇ.71, ಕನೆಕ್ಟಿಕಟ್‌ನಲ್ಲಿ ಸುಜಾತಾ ಗಡ್ಕರ್-ವಿಲ್ಕಾಕ್ಸ್ ಶೇ.65, ನ್ಯೂಯಾರ್ಕ್‌ನಲ್ಲಿ ಜೆರೆಮಿ ಕೂನಿ ಶೇ.67 ಹಾಗೂ ವಿಸ್ಕಾನ್ಸಿನ್‌ನಲ್ಲಿ ರೇಣುಕಾ ಮಾಯಾದೇವ್ ಶೇ.90ರಷ್ಟು ಮತಗಳೊಂದಿಗೆ ಆಯ್ಕೆಯಾಗಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಅಶ್ ಕಲ್ರಾ ಶೇ.73, ವಾಷಿಂಗ್ಟನ್‌ನಲ್ಲಿ ಮಂಕಾ ಧಿಂಗ್ರಾ ಶೇ.92 ಹಾಗೂ ಮಿನ್ನೇಸೋಟದಲ್ಲಿ ಕೃಷ್ ಸುಬ್ರಹ್ಮಣಿಯನ್ ಶೇ.63ರಷ್ಟು ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.

ಮಿನ್ನೇಸೋಟದಲ್ಲಿ ಗೆದ್ದ ಕೃಷ್ ಸುಬ್ರಹ್ಮಣಿಯನ್ ಮಕ್ಕಳ ವೈದ್ಯರಾಗಿದ್ದು, ಹೆನ್ನೆಪಿನ್ ಹೆಲ್ತ್ ಸಂಸ್ಥೆಯ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಹಾಗೂ ಮಿನ್ನೇಸೋಟ ಏರ್ ನ್ಯಾಷನಲ್ ಗಾರ್ಡ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಇಲಿನಾಯ್ಸ್‌ನಲ್ಲಿ ಕೆವಿನ್ ಓಲಿಕಲ್ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಸಬಾ ಹೈದರ್ ಶೇ.71ರಷ್ಟು ಮತಗಳೊಂದಿಗೆ ಗೆದ್ದಿದ್ದಾರೆ.

ಐಯೋವಾದ ಮೇಗನ್ ಶ್ರೀನಿವಾಸ್, ಕೆಂಟಕಿಯ ನೀಮಾ ಕುಲಕರ್ಣಿ, ನೆವಾಡಾದ ರೂಬೆನ್ ಡಿಸಿಲ್ವಾ, ನ್ಯೂ ಮೆಕ್ಸಿಕೊದ ರೀನಾ ಶ್ಚೆಪಾನ್ಸ್ಕಿ ಹಾಗೂ ವಾಷಿಂಗ್ಟನ್‌ನ ವಂದನಾ ಸ್ಲಾಟರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವರ್ಮಾಂಟ್‌ನಲ್ಲಿ ಕೇಶಾ ರಾಮ್ ಹಿನ್ಸ್‌ಡೇಲ್ ಮತ್ತು ನಿಖಿಲ್ ಗೋಯಲ್ ಸ್ಟೇಟ್ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಮೇರಿಲ್ಯಾಂಡ್‌ನ ಅಮರ್ ಮುಕುಂದ ಕೂಡ ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ.

ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿದ್ದ ಟೆನ್ನೆಸಿಯ ಸಾಬಿ 'ಡಾಕ್' ಕುಮಾರ್ ಶೇ.66 ಹಾಗೂ ನ್ಯೂಯಾರ್ಕ್‌ನ ಅನಿಲ್ ಬಿಫನ್ ಶೇ.54ರಷ್ಟು ಮತಗಳೊಂದಿಗೆ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

ಮೇರಿಲ್ಯಾಂಡ್‌ನಲ್ಲಿ ಅರುಣಾ ಮಿಲ್ಲರ್, ವಿಸ್ಕಾನ್ಸಿನ್‌ನಲ್ಲಿ ಜೋಶ್ ಕೌಲ್ ಗೆಲುವು

ಮೇರಿಲ್ಯಾಂಡ್‌ ನ ಲೆಫ್ಟಿನೆಂಟ್ ಗವರ್ನರ್ ಅರುಣಾ ಮಿಲ್ಲರ್, ಗವರ್ನರ್ ವೆಸ್ ಮೂರ್ ಅವರೊಂದಿಗೆ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಅವರ ತಂಡ ಸುಮಾರು ಶೇ.63ರಷ್ಟು ಮತಗಳನ್ನು ಗಳಿಸಿದೆ.

ಹೈದರಾಬಾದ್‌ ನಲ್ಲಿ ಜನಿಸಿದ ಅರುಣಾ ಮಿಲ್ಲರ್ ಬಾಲ್ಯದಲ್ಲೇ ಅಮೆರಿಕಕ್ಕೆ ವಲಸೆ ಹೋಗಿದ್ದರು. ಸಿವಿಲ್ ಎಂಜಿನಿಯರ್ ಆಗಿರುವ ಅವರು, ಸುಮಾರು 25 ವರ್ಷಗಳ ಕಾಲ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ.

2022ರಲ್ಲಿ ಮೇರಿಲ್ಯಾಂಡ್‌ ನ ರಾಜ್ಯಮಟ್ಟದ ಕಾರ್ಯಾಂಗ ಹುದ್ದೆಗೆ ಆಯ್ಕೆಯಾದ ಮೊದಲ ವಲಸಿಗ ಹಾಗೂ ಮೊದಲ ವರ್ಣೀಯ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದರು.

ವಿಸ್ಕಾನ್ಸಿನ್‌ನ ಅಟಾರ್ನಿ ಜನರಲ್ ಜೋಶ್ ಕೌಲ್ ಶೇ.55ರಷ್ಟು ಮತಗಳೊಂದಿಗೆ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಅವರ ತಂದೆ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.

ಸ್ಥಳೀಯ ಆಡಳಿತದಲ್ಲಿಯೂ ಭಾರತೀಯರ ಹೆಜ್ಜೆಗುರುತು

ಅಮೆರಿಕದ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯಲ್ಲಿಯೂ ಭಾರತೀಯ ಮೂಲದ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ಉತಾಹ್‌ ನ ಸಾಲ್ಟ್ ಲೇಕ್ ಕೌಂಟಿಯ ಡಿಸ್ಟ್ರಿಕ್ಟ್ ಅಟಾರ್ನಿಯಾಗಿ ಸಿಮ್ ಗಿಲ್ ಶೇ.66ರಷ್ಟು ಮತಗಳೊಂದಿಗೆ ಮರು ಆಯ್ಕೆಯಾಗಿದ್ದಾರೆ.

ನಾರ್ತ್ ಕ್ಯಾರೊಲೈನಾದ ವೇಕ್ ಕೌಂಟಿಯಲ್ಲಿ ಮೋನಾ ಸಿಂಗ್ ಆಯ್ಕೆಯಾಗಿದ್ದಾರೆ. ಟೆಕ್ಸಾಸ್‌ನ ಹ್ಯಾರಿಸ್ ಕೌಂಟಿಯ ಶಿಕ್ಷಣ ಮಂಡಳಿಗೆ ಸಿಲ್ಕಿ ಜೋಶಿ-ಮಲಿಕ್ ಶೇ.63ರಷ್ಟು ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ ನಗರಸಭೆಗೆ ಜನನಿ ರಾಮಚಂದ್ರನ್ ಹಾಗೂ ನ್ಯೂಯಾರ್ಕ್‌ನ ವೆಸ್ಟ್‌ಚೆಸ್ಟರ್ ಕೌಂಟಿಗೆ ಅನಂತ್ ನಂಬಿಯಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಾರ್ಜಿಯಾದ ಫುಲ್ಟನ್ ಕೌಂಟಿ ಕಮಿಷನ್‌ಗೆ ರೋಹಿತ್ ಮಲ್ಹೋತ್ರಾ ಆಯ್ಕೆಯಾಗಿದ್ದಾರೆ. ಇಂಡಿಯಾನಾದ ಸೇಂಟ್ ಜೋಸೆಫ್ ಕೌಂಟಿ ಕೌನ್ಸಿಲ್‌ನ ಬಿ ಕ್ಷೇತ್ರದಲ್ಲಿ ರಂಜನ್ ರೋಹಟ್ಗಿ ಶೇ.57ರಷ್ಟು ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.

ಲಾಸ್ ಏಂಜಲೀಸ್ ಮೇಯರ್ ಆಗಿ ನಿತ್ಯಾ ರಾಮನ್

ಲಾಸ್ ಏಂಜಲೀಸ್ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ನಿತ್ಯಾ ರಾಮನ್, ಹಾಲಿ ಮೇಯರ್ ಕರೆನ್ ಬಾಸ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.

ಐಯೋವಾದ 47ನೇ ಸ್ಟೇಟ್ ಸೆನೆಟ್ ಕ್ಷೇತ್ರದಲ್ಲಿ ನಿಖಿಲ್ ವಾಗ್ಲೆ ಕೂಡ ರಿಪಬ್ಲಿಕನ್ ಅಭ್ಯರ್ಥಿ ಸ್ಕಾಟ್ ವೆಬ್‌ಸ್ಟರ್ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಕ್ಯಾಲಿಫೋರ್ನಿಯಾದ 76ನೇ ಅಸೆಂಬ್ಲಿ ಕ್ಷೇತ್ರದಲ್ಲಿ ದರ್ಶನಾ ಪಟೇಲ್ ಗೆಲುವಿನ ಹಾದಿಯಲ್ಲಿದ್ದಾರೆ.

ವಿವೇಕ್ ರಾಮಸ್ವಾಮಿ ಸೇರಿದಂತೆ ಹಲವರಿಗೆ ಸೋಲು

ಭಾರತೀಯ ಮೂಲದ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೂ, ಕೆಲವು ಪ್ರಮುಖ ಚುನಾವಣಾ ಸ್ಪರ್ಧೆಗಳಲ್ಲಿ ಸೋಲು ಅನುಭವಿಸಿದ್ದಾರೆ.

ಓಹಯೊ ರಾಜ್ಯದ ಗವರ್ನರ್ ಚುನಾವಣೆಯಲ್ಲಿ ಡೊನಲ್ಡ್ ಟ್ರಂಪ್ ಬೆಂಬಲಿತ ರಿಪಬ್ಲಿಕನ್ ಅಭ್ಯರ್ಥಿ ವಿವೇಕ್ ರಾಮಸ್ವಾಮಿ, ಡೆಮಾಕ್ರಟಿಕ್ ಅಭ್ಯರ್ಥಿ ಡಾ. ಏಮಿ ಆಕ್ಟನ್ ವಿರುದ್ಧ ಸೋತಿದ್ದಾರೆ.

ವಿವೇಕ್ ರಾಮಸ್ವಾಮಿ ಸುಮಾರು ಶೇ.44ರಷ್ಟು ಮತಗಳನ್ನು ಪಡೆದರೆ, ಏಮಿ ಆಕ್ಟನ್ ಶೇ.52ರಷ್ಟು ಮತಗಳನ್ನು ಗಳಿಸಿದ್ದಾರೆ. ಕೇರಳ ಮೂಲದ ವಲಸಿಗ ಕುಟುಂಬಕ್ಕೆ ಸೇರಿದ ವಿವೇಕ್ ರಾಮಸ್ವಾಮಿ ಅಮೆರಿಕದ ಉದ್ಯಮಿ ಹಾಗೂ ರಿಪಬ್ಲಿಕನ್ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರು.

ನ್ಯೂಯಾರ್ಕ್‌ ನ ಅಟಾರ್ನಿ ಜನರಲ್ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಸರಿತಾ ಕೋಮಟಿರೆಡ್ಡಿ, ಹಾಲಿ ಡೆಮಾಕ್ರಟಿಕ್ ನಾಯಕಿ ಲೆಟಿಷಿಯಾ ಜೇಮ್ಸ್ ವಿರುದ್ಧ ಸೋತಿದ್ದಾರೆ. ಸರಿತಾ ಸುಮಾರು ಶೇ.38ರಷ್ಟು ಮತಗಳನ್ನು ಗಳಿಸಿದ್ದಾರೆ.

ನಾರ್ತ್ ಕ್ಯಾರೊಲೈನಾದ 4ನೇ ಕಾಂಗ್ರೆಸ್ ಕ್ಷೇತ್ರದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಮಹೇಶ್ ಗಣೋರ್ಕರ್, ಡೆಮಾಕ್ರಟಿಕ್ ಅಭ್ಯರ್ಥಿ ವ್ಯಾಲೆರಿ ಫೌಶೀ ವಿರುದ್ಧ ಸೋಲು ಅನುಭವಿಸಿದ್ದಾರೆ.

ಮಿಶಿಗನ್‌ ನ 11ನೇ ಕಾಂಗ್ರೆಸ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಅನಿಲ್ ಕುಮಾರ್ ಕೂಡ ಸೋತಿದ್ದಾರೆ.

ರಾಜ್ಯ ಶಾಸಕಾಂಗ ಚುನಾವಣೆಗಳಲ್ಲಿ ನ್ಯೂಯಾರ್ಕ್‌ನ ಹರ್ಜೋತ್ ಸಿಂಗ್, ಟೆಕ್ಸಾಸ್‌ನ ಸಂದೀಪ್ ಶ್ರೀನಿವಾಸ್ತವ, ಮೇರಿಲ್ಯಾಂಡ್‌ನ ಜ್ಯೋತಿ ಮೋಹನ್ ಹಾಗೂ ಡೆಲವೇರ್‌ನ ನಿಶಾ ಲೋಧಾವಿಯಾ ಸೋಲು ಅನುಭವಿಸಿದ್ದಾರೆ.

ರಿಪಬ್ಲಿಕನ್ ಅಭ್ಯರ್ಥಿಗಳಾದ ಮಿಶಿಗನ್‌ನ ಅಶೋಕ್ ಬಡ್ಡಿ, ಇಲಿನಾಯ್ಸ್‌ನ ಅಜಯ್ ಗುಪ್ತಾ ಹಾಗೂ ಕ್ಯಾಲಿಫೋರ್ನಿಯಾದ ವಿನಯ್ ಸಿಂಗ್ ಮತ್ತು ಹಿಮತ್ ಸಿಂಗ್ ಬೈನಿವಾಲ್ ಕೂಡ ಸೋತಿದ್ದಾರೆ.

ಕ್ಯಾಲಿಫೋರ್ನಿಯಾದ 6ನೇ ಅಸೆಂಬ್ಲಿ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜಗ್ತಾರ್ ಸಿಂಗ್ ಶೇ.15ರಷ್ಟು ಮತಗಳನ್ನು ಪಡೆದಿದ್ದಾರೆ.

ಸ್ಥಳೀಯ ಚುನಾವಣೆಯಲ್ಲಿ ರಾಂಚೊ ಕುಕಮೋಂಗಾದ ಜಸ್ಕಿರತ್ ಸೋಂಧ್ ಮತ್ತು ಮಿಲ್ಪಿಟಾಸ್‌ನ ಸಂತೋಷ್ ಸಾಹೂ ಮೇಯರ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಫೋಲ್ಸಮ್ ನಗರಸಭೆ ಚುನಾವಣೆಯಲ್ಲಿ ಜಗ್ ನಾಗೇಂದ್ರ ಸೋಲು ಅನುಭವಿಸಿದ್ದಾರೆ.

ಅಮೆರಿಕದ ರಾಜಕೀಯದಲ್ಲಿ ಭಾರತೀಯ ಮೂಲದವರ ಪ್ರಭಾವ ವಿಸ್ತರಣೆ

2026ರ ಮಧ್ಯಂತರ ಚುನಾವಣೆಯ ಫಲಿತಾಂಶಗಳು ಅಮೆರಿಕದ ರಾಜಕೀಯದಲ್ಲಿ ಭಾರತೀಯ ಮೂಲದವರ ಪ್ರಾತಿನಿಧ್ಯ ಮತ್ತು ಪ್ರಭಾವ ವಿಸ್ತರಿಸುತ್ತಿರುವುದನ್ನು ತೋರಿಸಿವೆ.

ಒಂದು ಕಾಲದಲ್ಲಿ ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್‌ನಂತಹ ಸಾಂಪ್ರದಾಯಿಕ ವಲಸಿಗರ ಕೇಂದ್ರಗಳಿಗೆ ಸೀಮಿತವಾಗಿದ್ದ ಭಾರತೀಯ ಮೂಲದವರ ರಾಜಕೀಯ ಪ್ರಭಾವ ಇದೀಗ ಮಿಶಿಗನ್, ಅರಿಜೋನಾ, ಜಾರ್ಜಿಯಾ, ಟೆಕ್ಸಾಸ್, ಪೆನ್ಸಿಲ್ವೇನಿಯಾ ಹಾಗೂ ಇಲಿನಾಯ್ಸ್‌ ನಂತಹ ರಾಜ್ಯಗಳಿಗೂ ವಿಸ್ತರಿಸಿದೆ.

ರಾಜ್ಯ ಶಾಸಕಾಂಗ ಚುನಾವಣೆಯಲ್ಲಿ ಗೆದ್ದ 30 ಭಾರತೀಯ ಮೂಲದ ಅಭ್ಯರ್ಥಿಗಳಲ್ಲಿ ಅರ್ಧದಷ್ಟು ಮಹಿಳೆಯರಾಗಿರುವುದು ಮತ್ತೊಂದು ಗಮನಾರ್ಹ ಬೆಳವಣಿಗೆ. ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಶಿಕ್ಷಕರು, ತಂತ್ರಜ್ಞಾನ ತಜ್ಞರು ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರರು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿ ಯಶಸ್ಸು ಸಾಧಿಸಿದ್ದಾರೆ.

ಮಿಶಿಗನ್‌ ನಲ್ಲಿ ರಣಜೀವ್ ಪುರಿ ಮತ್ತು ಅರಿಜೋನಾದಲ್ಲಿ ಪ್ರಿಯಾ ಸುಂದರೇಶನ್ ಅವರಂತಹ ನಾಯಕರು ರಾಜ್ಯ ಶಾಸಕಾಂಗದ ಉನ್ನತ ಹುದ್ದೆಗಳಿಗೆ ಏರುವ ಸಾಧ್ಯತೆ ಇದೆ. ಇದರಿಂದ ಭಾರತೀಯ ಮೂಲದ ಸಮುದಾಯದ ರಾಜಕೀಯ ಪ್ರಭಾವ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

ಅಮೆರಿಕದ ಕಾಂಗ್ರೆಸ್‌ ನಲ್ಲಿ ಭಾರತೀಯ ಮೂಲದ ಸದಸ್ಯರು ಆರೋಗ್ಯ, ವಿದೇಶಾಂಗ ವ್ಯವಹಾರಗಳು, ತಂತ್ರಜ್ಞಾನ, ಶಿಕ್ಷಣ, ಕಾರ್ಮಿಕರ ಹಕ್ಕುಗಳು ಹಾಗೂ ಭಾರತ-ಅಮೆರಿಕ ಸಂಬಂಧಗಳಂತಹ ಪ್ರಮುಖ ವಿಚಾರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಟ್ಟಾರೆ, 2026ರ ಮಧ್ಯಂತರ ಚುನಾವಣೆಯು ಭಾರತೀಯ ಮೂಲದ ಅಮೆರಿಕನ್ನರು ರಾಜಕೀಯ ಪಕ್ಷಗಳ ಬೆಂಬಲಿಗರಾಗಿ ಮಾತ್ರ ಉಳಿಯದೆ, ಅಧಿಕಾರದ ಚುಕ್ಕಾಣಿ ಹಿಡಿಯುವ ಮತ್ತು ನೀತಿ ನಿರೂಪಣೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಪ್ರಭಾವಿ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವುದನ್ನು ಪ್ರತಿಬಿಂಬಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor