Photo Credit :indianexpress.com

1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಐವರು ಕೈದಿಗಳಿಗೆ 60 ದಿನಗಳ ಪೆರೋಲ್ ನೀಡಲು ತಮಿಳಗ ವೆಟ್ರಿ ಕಳಗಂ ನೇತೃತ್ವದ ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವನ್ನು ಹಿಂಪಡೆಯುವಂತೆ ಬಿಜೆಪಿ ಒತ್ತಾಯಿಸಿದೆ. ಇದರಿಂದಾಗಿ ದಶಕಗಳ ಕಾಲದ ದುಃಖ, ಶಿಕ್ಷೆ ಮತ್ತು ರಾಜಕೀಯ ಸಂಘರ್ಷದ ಕುರಿತಾದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

58 ಜನರ ಸಾವಿಗೆ ಕಾರಣವಾಗಿದ್ದ ಮತ್ತು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದ್ದ ಈ ದಾಳಿಗೆ ಮೂರು ತಿಂಗಳ ಮೊದಲು ಕೋಮು ಗಲಭೆ ಹಾಗೂ ಪೊಲೀಸ್ ಗುಂಡಿನ ದಾಳಿ ನಡೆದಿತ್ತು. ಅದರಲ್ಲಿ 18 ಮುಸ್ಲಿಮರು ಪ್ರಾಣ ಕಳೆದುಕೊಂಡಿದ್ದರು.

ಈ ಎರಡೂ ಘಟನೆಗಳು ಕೋಮು ಧ್ರುವೀಕರಣ, ಪೊಲೀಸ್ ವೈಫಲ್ಯ ಮತ್ತು ಭಯೋತ್ಪಾದಕ ಸಂಚಿನ ಪರಸ್ಪರ ಸಂಪರ್ಕ ಹೊಂದಿರುವ ಇತಿಹಾಸವನ್ನು ತೋರಿಸುತ್ತವೆ. ಇವು ಕೊಯಮತ್ತೂರಿನ ದೈನಂದಿನ ಜೀವನವನ್ನು ಬದಲಾಯಿಸಿದವು ಮತ್ತು ಅಂದಿನ ಡಿಎಂಕೆ ಸರ್ಕಾರಕ್ಕೆ ಶಾಶ್ವತ ರಾಜಕೀಯ ಮುಖಭಂಗವನ್ನು ಉಂಟುಮಾಡಿದವು.

ಕೊಯಮತ್ತೂರು ಸರಣಿ ಸ್ಫೋಟಕ್ಕೆ ಮುನ್ನ ನಡೆದಿದ್ದೇನು?

1980ರ ದಶಕದ ಆರಂಭದಿಂದಲೂ ಕೊಯಮತ್ತೂರಿನಲ್ಲಿ ಕೋಮು ಉದ್ವಿಗ್ನತೆ ಹೆಚ್ಚಾಗುತ್ತಿತ್ತು. ಬಲಪಂಥೀಯ ಹಿಂದೂ ನಾಯಕರ ಪ್ರಚೋದನಾಕಾರಿ ಭಾಷಣಗಳು, ಮುಸ್ಲಿಂ ಸಂಘಟನೆಗಳ ಪ್ರತಿ-ಸಂಘಟನೆಗಳು ಮತ್ತು ಪ್ರತೀಕಾರದ ಹತ್ಯೆಗಳು ವಿಭಜನೆಯನ್ನು ಇನ್ನಷ್ಟು ತೀವ್ರಗೊಳಿಸಿದವು. 1992ರ ಬಾಬರಿ ಮಸೀದಿ ಧ್ವಂಸ ಘಟನೆಯು ಈಗಾಗಲೇ ಅಪಾಯಕಾರಿಯಾಗಿದ್ದ ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸಿತು.

1997ರ ನವೆಂಬರ್ 29ರಂದು, 1993ರಲ್ಲಿ ಕೊಯಮತ್ತೂರಿನಲ್ಲಿ ಎಸ್.ಎ. ಬಾಷಾ ಎಂಬುವವರು ಸ್ಥಾಪಿಸಿದ್ದ 'ಅಲ್-ಉಮ್ಮಾ' ಎಂಬ ಇಸ್ಲಾಮಿಕ್ ತೀವ್ರವಾದಿ ಸಂಘಟನೆಯ ಕಾರ್ಯಕರ್ತರು ಟ್ರಾಫಿಕ್ ಕಾನ್‌ಸ್ಟೆಬಲ್ ಆರ್. ಸೆಲ್ವರಾಜ್ ಅವರನ್ನು ಹತ್ಯೆ ಮಾಡಿದರು. ಸೆಲ್ವರಾಜ್ ಹತ್ಯೆಯು ಪೊಲೀಸ್ ಪಡೆಯಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದಿದ್ದಾಗ ಉಂಟಾದ ಭದ್ರತಾ ಲೋಪವನ್ನು ಬಳಸಿಕೊಂಡು ಹಿಂದೂ ತೀವ್ರವಾದಿಗಳು ಮುಸ್ಲಿಮರು ಮತ್ತು ಅವರ ವ್ಯಾಪಾರ ಸಂಸ್ಥೆಗಳ ಮೇಲೆ ದಾಳಿ ಮಾಡಿದರು.

ಬೆನ್ನಲ್ಲೇ ನಡೆದ ಕೋಮು ಗಲಭೆ ಮತ್ತು ಪೊಲೀಸ್ ಗುಂಡಿನ ದಾಳಿಯಲ್ಲಿ 18 ಮುಸ್ಲಿಮರು ಕೊಲ್ಲಲ್ಪಟ್ಟರು. ಸೇನೆ ಮತ್ತು ಕೇಂದ್ರ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತರುವ ಮೊದಲು ಅಂಗಡಿಗಳನ್ನು ಲೂಟಿ ಮಾಡಲಾಯಿತು, ಆಸ್ತಿಯನ್ನು ಧ್ವಂಸಗೊಳಿಸಲಾಯಿತು ಮತ್ತು ಕುಟುಂಬಗಳು ಸಂಕಷ್ಟಕ್ಕೊಳಗಾದವು.

ಮಾನವ ಹಕ್ಕುಗಳು ಮತ್ತು ನಾಗರಿಕ ಹಕ್ಕುಗಳ ಸಂಘಟನೆಯಾದ 'ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್' (PUCL)ನ ಸತ್ಯಶೋಧನಾ ತಂಡವು ಪೊಲೀಸರ ಕೆಲವು ವಿಭಾಗಗಳು ಹಿಂದೂ ತೀವ್ರವಾದಿಗಳೊಂದಿಗೆ ಭಾಗಿಯಾಗಿದ್ದವು ಎಂದು ಆರೋಪಿಸಿತ್ತು. ಮುಸ್ಲಿಂ ಮಾಲೀಕತ್ವದ ಸಂಸ್ಥೆಗಳ ಮೇಲಿನ ದಾಳಿಗಳು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ಗಾಯಾಳು ಮುಸ್ಲಿಮರ ಮೇಲಿನ ಹಲ್ಲೆಗಳು ಇದರಲ್ಲಿ ಸೇರಿದ್ದವು.

ಈ ಸಾವುಗಳನ್ನು ನಂತರ ತೀವ್ರವಾದಿಗಳು ಪ್ರತೀಕಾರಕ್ಕಾಗಿ ಬೆಂಬಲ ಸಂಗ್ರಹಿಸಲು ಬಳಸಿಕೊಂಡರು. ಸಂತ್ರಸ್ತರ ಫೋಟೊಗಳು ಮತ್ತು ವಿಡಿಯೊಗಳು ಹರಿದಾಡಿದವು. ನಾಗರಿಕರ ಸಂಕಷ್ಟವು ಇತರ ನಾಗರಿಕರ ಮೇಲಿನ ಸಂಚಿಗೆ ವಸ್ತುವಾಯಿತು.

1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದಲ್ಲಿ ಸಂಭವಿಸಿದ್ದೇನು?

1998ರ ಫೆಬ್ರುವರಿ 14ರಂದು ಆರ್.ಎಸ್. ಪುರಂನಲ್ಲಿ ಅಡ್ವಾಣಿ ಅವರ ಚುನಾವಣಾ ಸಭೆಗಾಗಿ ಜನರು ಸೇರುತ್ತಿದ್ದಂತೆ ಕೊಯಮತ್ತೂರಿನಾದ್ಯಂತ ಬಾಂಬ್‌ ಗಳು ಸ್ಫೋಟಗೊಂಡವು. ಅವರ ವಿಮಾನ ತಡವಾದ ಕಾರಣ, ಸ್ಫೋಟಗಳು ಆರಂಭವಾದಾಗ ಅವರು ಸ್ಥಳಕ್ಕೆ ತಲುಪಿರಲಿಲ್ಲ.

ರ‍್ಯಾಲಿಯ ಸುತ್ತಮುತ್ತಲಿನ ಪ್ರದೇಶಗಳಷ್ಟೇ ಅಲ್ಲದೆ, ವಾಣಿಜ್ಯ ಸಂಸ್ಥೆಗಳು, ಸಾರಿಗೆ ಕೇಂದ್ರಗಳು, ಬಿಜೆಪಿ ಚುನಾವಣಾ ಕಚೇರಿ ಮತ್ತು ಸರ್ಕಾರಿ ಆಸ್ಪತ್ರೆಯೂ ದಾಳಿಗೆ ತುತ್ತಾದ ಸ್ಥಳಗಳಲ್ಲಿ ಸೇರಿವೆ. ಕಾರುಗಳು, ದ್ವಿಚಕ್ರ ವಾಹನಗಳು, ಬ್ಯಾಗ್‌ಗಳು ಮತ್ತು ಅನಾನಸ್ ತಳ್ಳುಗಾಡಿಯಲ್ಲಿ ಸ್ಫೋಟಕಗಳನ್ನು ಮರೆಮಾಚಲಾಗಿತ್ತು.

ಈ ಸ್ಫೋಟಗಳಲ್ಲಿ ಒಟ್ಟು 58 ಜನರು ಸಾವಿಗೀಡಾದರು. 200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಸ್ಫೋಟಗೊಳ್ಳದ ಹಲವಾರು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಯಿತು. ರ‍್ಯಾಲಿಯ ಸ್ಥಳದ ಹತ್ತಿರವಿದ್ದ ಒಂದು ಕಾರಿನಲ್ಲಿ ಸುಮಾರು 70 ಕೆ.ಜಿ. ಸ್ಫೋಟಕಗಳಿದ್ದವು. ಅವುಗಳನ್ನು ನಿಷ್ಕ್ರಿಯಗೊಳಿಸಲು ದಿನಗಳೇ ಬೇಕಾದವು.

ಈ ದಾಳಿಯ ಹಿಂದೆ 'ಅಲ್-ಉಮ್ಮಾ' ಸಂಘಟನೆಯ ಕೈವಾಡವಿದೆ ಎಂದು ತನಿಖಾಧಿಕಾರಿಗಳು ಗುರುತಿಸಿದರು. ಬಳಿಕ ಆ ಸಂಘಟನೆಯನ್ನು ನಿಷೇಧಿಸಲಾಯಿತು.

ನ್ಯಾಯಮೂರ್ತಿ ಗೋಕುಲಕೃಷ್ಣನ್ ಆಯೋಗದ ವರದಿಯಲ್ಲೇನಿದೆ?

ಮುಖ್ಯಮಂತ್ರಿ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವು, ನವೆಂಬರ್-ಡಿಸೆಂಬರ್ 1997ರ ಕೋಮು ಗಲಭೆಯನ್ನು ತನಿಖೆ ಮಾಡಲು ಮದ್ರಾಸ್ ಹೈಕೋರ್ಟ್‌ನ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಆರ್. ಗೋಕುಲಕೃಷ್ಣನ್ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿತ್ತು. ಫೆಬ್ರುವರಿ 22, 1998ರಂದು ಬಾಂಬ್ ಸ್ಫೋಟಗಳು ಮತ್ತು ಅದಕ್ಕೂ ಮುನ್ನ ನಡೆದ ಪರಿಸ್ಥಿತಿಯನ್ನು ಪರಿಶೀಲಿಸುವಂತೆ ಆಯೋಗಕ್ಕೆ ಸೂಚಿಸಲಾಯಿತು.

ಆಯೋಗದ ತನಿಖಾ ವರದಿಯು ಬೇರೆ ಬೇರೆ ಘಟನೆಗಳಿಗೆ ಸಂಬಂಧಿಸಿದ್ದಾಗಿದ್ದು, ಅವುಗಳನ್ನು ಪ್ರತ್ಯೇಕವಾಗಿ ಓದಬೇಕಾಗುತ್ತದೆ.

1998ರ ನವೆಂಬರ್‌ನಲ್ಲಿ ಸಲ್ಲಿಸಲಾದ ಆರಂಭಿಕ ವರದಿಯಲ್ಲಿ, ನವೆಂಬರ್-ಡಿಸೆಂಬರ್ 1997ರ ಗಲಭೆಯನ್ನು ನಿಯಂತ್ರಿಸಲು ಪೊಲೀಸ್ ಗುಂಡಿನ ದಾಳಿ ಅಗತ್ಯವಿತ್ತು ಎಂದು ಆಯೋಗ ಸಮರ್ಥಿಸಿತು. ಆದರೆ, ಕಮಿಷನರ್ ಆದೇಶವಿದ್ದರೂ ಸೆಲ್ವರಾಜ್ ಹತ್ಯೆಯ ನಂತರ ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡಿತು.

ಸರಣಿ ಬಾಂಬ್ ಸ್ಫೋಟಗಳ ಕುರಿತು, ಹಿಂದಿನ ಗಲಭೆಯಲ್ಲಿ ಮುಸ್ಲಿಮರ ಸಾವುಗಳಿಗೆ ಪ್ರತೀಕಾರ ತೀರಿಸಿಕೊಳ್ಳುವುದೇ ಈ ಸಂಚಿನ ಮುಖ್ಯ ಉದ್ದೇಶವಾಗಿತ್ತು ಎಂದು ಆಯೋಗವು ತನ್ನ ಅಂತಿಮ ವರದಿಯಲ್ಲಿ ತಿಳಿಸಿತು. 2000ರಲ್ಲಿ ಬಿಡುಗಡೆಯಾದ ಅಂತಿಮ ವರದಿಯಲ್ಲಿ, ಅಲ್-ಉಮ್ಮಾ ಸಂಘಟನೆಯು ಬಾಂಬ್ ಸ್ಫೋಟಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟ ಕಾವಲು ವೈಫಲ್ಯಗಳನ್ನು ಆಯೋಗ ಟೀಕಿಸಿತು.

ಹಿಂಸಾಚಾರವು ದೈನಂದಿನ ಜೀವನವನ್ನು ಹೇಗೆ ಬದಲಾಯಿಸಿತು?

ರಸ್ತೆಗಳು ಮತ್ತೆ ಮುಕ್ತವಾದ ನಂತರವೂ ಕೊಯಮತ್ತೂರಿನಲ್ಲಿ ಭೀತಿ ಮುಂದುವರಿದಿತ್ತು. 1998ರ ನವೆಂಬರ್ ವಾರ್ಷಿಕೋತ್ಸವದ ಮುನ್ನಾ ದಿನಗಳಲ್ಲಿ ಭದ್ರತೆಗಾಗಿ ಹೆಚ್ಚುವರಿಯಾಗಿ 4,000 ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಈಗಾಗಲೇ ಇದ್ದ 12 ಜೀಪುಗಳ ಜೊತೆಗೆ ಸೈರನ್ ಅಳವಡಿಸಿದ 30 ಜೀಪುಗಳನ್ನು ಬಳಸಿಕೊಳ್ಳಲಾಯಿತು. 17 ಚೆಕ್‌ಪೋಸ್ಟ್‌ಗಳು ಮತ್ತು 32 ಪೊಲೀಸ್ ಪಿಕೆಟ್‌ಗಳನ್ನು ಸ್ಥಾಪಿಸಲಾಯಿತು. ಇದರೊಂದಿಗೆ ಶಾಂತಿ ಸಮಿತಿಗಳನ್ನೂ ರಚಿಸಲಾಯಿತು.

ಕೊಟ್ಟೈಮೇಡು, ಉಕ್ಕಡಂ ಮತ್ತು ಅಲ್-ಅಮೀನ್ ಕಾಲೊನಿಯಂತಹ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಜನರು ನಿರಂತರ ಪರಿಶೋಧನೆಗಳು ಮತ್ತು ಸಾಮೂಹಿಕ ಅನುಮಾನದ ಭೀತಿಯನ್ನು ಎದುರಿಸಿದರು. ಬಾಂಬ್ ಸ್ಫೋಟಗಳನ್ನು ವಿರೋಧಿಸಿದ ನಿವಾಸಿಗಳು, ತಮ್ಮ ಖಂಡನೆಯನ್ನು ಯಾರೂ ನಂಬುವುದಿಲ್ಲ ಎಂಬ ಭಾವನೆಗೆ ಒಳಗಾದರು.

ಅದೇ ಸಮಯದಲ್ಲಿ ಪರಸ್ಪರ ಒಗ್ಗಟ್ಟಿನ ಘಟನೆಗಳೂ ನಡೆದವು. ಆಸ್ಪತ್ರೆಗಳು ಸಂತ್ರಸ್ತರಿಗೆ ಚಿಕಿತ್ಸೆ ನೀಡಿದವು, ವೈದ್ಯರು ತಮ್ಮ ವೈಯಕ್ತಿಕ ದುಃಖವನ್ನು ಬದಿಗಿಟ್ಟು ಕೆಲಸ ಮಾಡಿದರು ಮತ್ತು ಬಾಂಬ್ ನಿಷ್ಕ್ರಿಯ ದಳಕ್ಕೆ ಸ್ಥಳೀಯರು ಬೆಂಬಲ ನೀಡಿದರು. ಈ ನಗರದ ಪ್ರತಿಕ್ರಿಯೆಯಲ್ಲಿ ಅನುಮಾನದ ಜೊತೆಗೆ ಮಾನವೀಯತೆಯೂ ಇತ್ತು.

ಡಿಎಂಕೆ ಪಕ್ಷಕ್ಕೆ ರಾಜಕೀಯವಾಗಿ ಹೊಡೆತ ಬಿದ್ದಿದ್ದು ಯಾಕೆ?

ಪೊಲೀಸರ ನಿರ್ಲಕ್ಷ್ಯ ಮತ್ತು ಗುಪ್ತಚರ ಇಲಾಖೆಯ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸುವಲ್ಲಿ ವಿಫಲವಾಗಿದೆ ಎಂಬ ಕಾರಣಕ್ಕೆ ಕರುಣಾನಿಧಿ ಸರ್ಕಾರ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಬಾಂಬ್ ಸ್ಫೋಟಗಳನ್ನು ಮುಂದಿಟ್ಟುಕೊಂಡು ಬಿಜೆಪಿಯು, ಜಯಲಲಿತಾ ಅವರ ಎಐಎಡಿಎಂಕೆ (AIADMK) ಪಕ್ಷದೊಂದಿಗೆ ಸೇರಿ ಆಡಳಿತಾರೂಢ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು. ಮತ್ತೊಂದೆಡೆ, ಹಿಂದಿನ ಗಲಭೆಯ ಸಂದರ್ಭದಲ್ಲಿ ಮುಸ್ಲಿಮರನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮುಸ್ಲಿಮರೂ ಪ್ರಶ್ನಿಸಿದರು.

ಇದರ ಪರಿಣಾಮವಾಗಿ, ಬಳಿಕ ನಡೆದ 1998ರ ಸಂಸತ್ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಒಕ್ಕೂಟವು ತಮಿಳುನಾಡಿನ ಒಟ್ಟು 39 ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ ಒಂಭತ್ತು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತು. 1999ರಲ್ಲಿ ಎಐಎಡಿಎಂಕೆ ಪಕ್ಷವು ಬಿಜೆಪಿಯೊಂದಿಗೆ ಹೊಂದಿದ್ದ ಮೈತ್ರಿಯನ್ನು ಮುರಿದುಕೊಂಡ ನಂತರ, ಡಿಎಂಕೆ ಪಕ್ಷವು ಬಿಜೆಪಿ ನೇತೃತ್ವದ 'ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ' (NDA) ಸೇರಿಕೊಂಡಿತು. ಅದೇ ವರ್ಷ ಆ ಒಕ್ಕೂಟವು ಮತ್ತೆ ಸರ್ಕಾರ ರಚಿಸಿತು.

ಬಾಷಾಗೆ ಪೆರೋಲ್

2007ರಲ್ಲಿ ವಿಶೇಷ ನ್ಯಾಯಾಲಯವು 158 ಜನರನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಎಸ್.ಎ. ಬಾಷಾ ಮತ್ತು ಮೊಹಮ್ಮದ್ ಅನ್ಸಾರಿ ಸೇರಿದಂತೆ 43 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 84 ವರ್ಷದ ಬಾಷಾ ತನ್ನ ಕೊನೆಯ ವರ್ಷಗಳಲ್ಲಿ ಪೆರೋಲ್ ಪಡೆದುಕೊಂಡಿದ್ದ. ಆತ 2024ರ ಡಿಸೆಂಬರ್‌ ನಲ್ಲಿ ಮೃತಪಟ್ಟನು.

ಬಾಷಾ ನಿಧನದ ನಂತರ ವಕೀಲ ಪ್ರಭು ಬಾಲಸುಬ್ರಹ್ಮಣ್ಯನ್ ಅವರು ಒಂದು ವಿಷಯವನ್ನು ಸ್ಮರಿಸಿಕೊಂಡಿದ್ದರು. ಪರಿಸ್ಥಿತಿ ತನ್ನ ನಿಯಂತ್ರಣ ಮೀರಿ ಹೋದಾಗ ಅದನ್ನು ತಡೆಯಲು ತಾನು ಪ್ರಯತ್ನಿಸಿದ್ದಾಗಿ ಬಾಷಾ ಒಮ್ಮೆ ತಮ್ಮ ಬಳಿ ಹೇಳಿಕೊಂಡಿದ್ದ ಎಂದು ಅವರು ತಿಳಿಸಿದರು. ಅಲ್-ಉಮ್ಮಾ ಸಂಸ್ಥಾಪಕರನ್ನು ಬಲ್ಲವರಾಗಿದ್ದ ಪ್ರಭು ಬಾಲಸುಬ್ರಹ್ಮಣ್ಯನ್, ಬಾಷಾ ಅವರ ಪಶ್ಚಾತ್ತಾಪ ಹಾಗೂ ತನ್ನ ಮೊಮ್ಮಕ್ಕಳನ್ನು ನೋಡುವ ಆತನ ಬಯಕೆಯ ಬಗ್ಗೆಯೂ ವಿವರಿಸಿದರು.

ಇಂತಹ ನೆನಪುಗಳು ವಯಸ್ಸಾದ ಕೈದಿಯೊಬ್ಬ ಕುಟುಂಬದೊಂದಿಗಿನ ಸಮಯದ ಬೇಡಿಕೆಯನ್ನು ವಿವರಿಸುತ್ತವೆಯಾದರೂ, ಆತನ ಮೇಲಿನ ಅಪರಾಧ ಸಾಬೀತಾಗಿರುವುದನ್ನು ಅಥವಾ ಸಂತ್ರಸ್ತರ ಸಂಕಷ್ಟವನ್ನು ಅವು ಎಂದಿಗೂ ಅಳಿಸಿಹಾಕಲಾರವು.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor