ದಾರಿ ಕಾಣದಾಗಿದೆ; ವಿದೇಶದಲ್ಲಿ ಕೆಲಸ ಕಳೆದುಕೊಂಡು ಭಾರತಕ್ಕೆ ಮರಳಲು ಸಜ್ಜಾದ ಐಟಿ ವೃತ್ತಿಪರೆಯ ಅಳಲು!
Photo Credit: AI
ಉದ್ಯೋಗ ಮತ್ತು ಶಾಶ್ವತ ನಿವಾಸ ಪಡೆಯುವ ಅವಕಾಶ ಕಳೆದುಕೊಂಡಿರುವ ಭಾರತೀಯ ಮೂಲದ ವಿದೇಶಿ ಮಹಿಳೆಯೊಬ್ಬರು ‘ಸಂಪೂರ್ಣವಾಗಿ ದಿಕ್ಕು ತೋಚದಂತಾಗಿದೆ’ ಎಂದು ಬರೆದುಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ವೈರಲ್ ಆಗಿದೆ.
ಕಳೆದ ಆರು ವರ್ಷಗಳಿಂದ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ತಮ್ಮ ಉದ್ಯೋಗ ಮತ್ತು ಶಾಶ್ವತ ನಿವಾಸ ಪಡೆಯುವ ಅವಕಾಶ ಎರಡನ್ನೂ ಕಳೆದುಕೊಂಡ ನಂತರ ತಾನು ‘ಸಂಪೂರ್ಣವಾಗಿ ದಾರಿ ಕಾಣದಂತಾಗಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ವೈರಲ್ ಆಗಿದ್ದು, ಅನೇಕ ಅನಿವಾಸಿ ಭಾರತೀಯರ ಸ್ಥಿತಿಯನ್ನು ಪ್ರತಿಬಿಂಬಿಸಿದೆ.
ಹೊಸದಿಲ್ಲಿಯ 25 ವರ್ಷದ ಮಹಿಳೆ ಸಾಮಾಜಿಕ ಜಾಲತಾಣವೊಂದರಲ್ಲಿ ಬರೆದುಕೊಂಡಿರುವಂತೆ, ಪದವಿ ಶಿಕ್ಷಣಕ್ಕಾಗಿ 19ನೇ ವಯಸ್ಸಿನಲ್ಲಿ ವಿದೇಶಕ್ಕೆ ತೆರಳಿದ್ದರು. ಬಳಿಕ ಐಟಿ (IT) ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನ ರೂಪಿಸಿಕೊಳ್ಳಲು ಆಸ್ಟ್ರೇಲಿಯದಲ್ಲಿ ನೆಲೆಸಿದರು. ಕಳೆದ ಕೆಲವು ವರ್ಷಗಳಿಂದ ವೃತ್ತಿಜೀವನ ಕಟ್ಟಿಕೊಳ್ಳಲು ಶ್ರಮಿಸಿದ್ದ ಅವರು, ಶಾಶ್ವತ ನಿವಾಸಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಲು ಕೇವಲ ಎರಡು ತಿಂಗಳು ಬಾಕಿ ಇರುವಾಗ ಅನಿರೀಕ್ಷಿತವಾಗಿ ಉದ್ಯೋಗ ಕಳೆದುಕೊಂಡಿದ್ದಾರೆ.
“ಈಗ ನಾನು ನಿರುದ್ಯೋಗಿಯಾಗಿದ್ದೇನೆ. ನಿರಂತರವಾಗಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ. ಒಂದು ವೇಳೆ ನನಗೆ ಬೇರೆ ಉದ್ಯೋಗ ಸಿಗದಿದ್ದರೆ ಮತ್ತು ವೀಸಾ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಾರ್ಚ್ ಅಂತ್ಯದ ವೇಳೆಗೆ ಆಸ್ಟ್ರೇಲಿಯ ತೊರೆಯಬೇಕಾದ ಸ್ಥಿತಿ ಬರಬಹುದು” ಎಂದು ಅವರು ಬರೆದಿದ್ದಾರೆ.
ಈ ಪರಿಸ್ಥಿತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದ್ಯದ ಮಟ್ಟಿಗೆ ಭಾರತಕ್ಕೆ ಮರಳುವ ಸಾಧ್ಯತೆಯೇ ಹೆಚ್ಚಿದೆ ಎಂದೂ ಅವರು ತಿಳಿಸಿದ್ದಾರೆ.
“ನಾನು 19ನೇ ವಯಸ್ಸಿನಲ್ಲಿ ದಿಲ್ಲಿಯನ್ನು ತೊರೆದಿದ್ದೆ. ಕಳೆದ ಆರು ವರ್ಷಗಳಿಂದ ವಿದೇಶದಲ್ಲಿ ಬದುಕು ಕಟ್ಟಿಕೊಂಡು ಸ್ವಾವಲಂಬಿಯಾಗಿದ್ದೇನೆ. ಎಲ್ಲವನ್ನೂ ಸ್ವತಃ ನಿಭಾಯಿಸಲು ಕಲಿತಿದ್ದೇನೆ. ನಿಜವಾಗಿಯೂ ಬಯಸಿದ ಭವಿಷ್ಯಕ್ಕಾಗಿ ಶ್ರಮಿಸಿದ್ದೇನೆ. 25ನೇ ವಯಸ್ಸಿನಲ್ಲಿ ಇಂತಹ ಪರಿಸ್ಥಿತಿಯಲ್ಲಿರುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ” ಎಂದು ಅವರು ಹೇಳಿದ್ದಾರೆ.
ಭಾರತಕ್ಕೆ ಮರಳಿದ ನಂತರ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ ಎಂದೂ ಅವರು ಬರೆದುಕೊಂಡಿದ್ದಾರೆ. “ನಾನು ಕಾರ್ಪೊರೇಟ್ ಉದ್ಯೋಗಕ್ಕಾಗಿ ಪ್ರಯತ್ನಿಸಬಹುದು. ಆದರೆ, ನನಗೆ ತಿಳಿದಿರುವ ಮಟ್ಟಿಗೆ ಅಲ್ಲಿನ ಕೆಲಸದ ಸಂಸ್ಕೃತಿ ಮತ್ತು ವಾತಾವರಣ ಕಷ್ಟವಾಗಬಹುದು. ಸ್ವಂತ ಉದ್ಯಮ ಪ್ರಾರಂಭಿಸುವ ಬಗ್ಗೆಯೂ ಯೋಚಿಸಿದ್ದೇನೆ. ಆದರೆ, ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಿಲ್ಲ. ಏನು ಮಾಡಬೇಕು ಎಂಬ ಕಲ್ಪನೆಯೇ ನನಗಿಲ್ಲ” ಎಂದು ಹೇಳಿದ್ದಾರೆ.
ಭಾರತಕ್ಕೆ ಮರಳುವುದು ಜೀವನದ ಅಂತ್ಯವಲ್ಲ ಎಂಬುದು ತಿಳಿದಿದ್ದರೂ, ಭಾರತದಲ್ಲಿ ತಮ್ಮ ಭವಿಷ್ಯದ ಬಗ್ಗೆ ಯೋಚಿಸಿದಾಗ ಮನಸ್ಸು ಶೂನ್ಯವಾಗುತ್ತದೆ ಎಂದು ಮಹಿಳೆ ತಿಳಿಸಿದ್ದಾರೆ. “ನಾನು ಸ್ವತಃ ವಿಫಲಳಾಗಿದ್ದೇನೆ ಮತ್ತು ನನ್ನನ್ನು ನಂಬಿದ ಎಲ್ಲರಿಗೂ ದ್ರೋಹ ಬಗೆದಂತೆ ಅನಿಸುತ್ತಿದೆ. ಇಲ್ಲಿಗೆ ತಲುಪಲು ಬಹಳ ಕಷ್ಟಪಟ್ಟಿದ್ದೆ. ಶಾಶ್ವತ ನಿವಾಸಿ ಹಕ್ಕು ಪಡೆಯುವ ಹಂತಕ್ಕೆ ಸಮೀಪದಲ್ಲಿದ್ದೆ. ನನ್ನ ನಿಯಂತ್ರಣದಲ್ಲಿಲ್ಲದ ಸನ್ನಿವೇಶಗಳಿಂದಾಗಿ, ಶ್ರಮಪಟ್ಟು ಕಟ್ಟಿಕೊಂಡ ಎಲ್ಲವೂ ಕೈತಪ್ಪುತ್ತಿದೆ” ಎಂದು ಅವರು ಬರೆದಿದ್ದಾರೆ.
► ಭಾರತಕ್ಕೆ ಮರಳುವಂತೆ ಕೆಲವರ ಸಲಹೆ
ಮಹಿಳೆಯ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರು, ಭಾರತಕ್ಕೆ ಮರಳುವುದು ಕೆಟ್ಟ ನಿರ್ಧಾರವಲ್ಲ. ಕುಟುಂಬದೊಂದಿಗೆ ಇರಲು ಸಾಧ್ಯವಾಗುವುದರಿಂದ ಈ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಸಹಾಯವಾಗಬಹುದು ಎಂದು ಸಲಹೆ ನೀಡಿದ್ದಾರೆ.
“ನಿಮ್ಮ ಪೋಷಕರು ಮತ್ತು ಸ್ನೇಹಿತರು ಭಾರತದಲ್ಲಿದ್ದರೆ, ಈ ಕಠಿಣ ಸಮಯದಲ್ಲಿ ಅವರು ಬೆಂಬಲವಾಗಿ ನಿಲ್ಲಬಹುದು. ಹಾಗಾಗಿ ಭಾರತಕ್ಕೆ ಮರಳುವುದು ಕೆಟ್ಟ ನಿರ್ಧಾರವೇನಲ್ಲ. ಗಾಬರಿಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ” ಎಂದು ಮತ್ತೊಬ್ಬರು ಹೇಳಿದ್ದಾರೆ.
ಇನ್ನು ಕೆಲವರು ಆಸ್ಟ್ರೇಲಿಯದಲ್ಲೇ ಉಳಿದುಕೊಂಡು ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುವಂತೆ ಸಲಹೆ ನೀಡಿದ್ದಾರೆ. “ವರ್ಷದ ದ್ವಿತೀಯಾರ್ಧ ಸಾಮಾನ್ಯವಾಗಿ ನಿಧಾನಗತಿಯ ಅವಧಿಯಾಗಿರುತ್ತದೆ. ಶೀಘ್ರದಲ್ಲೇ ನಿಮಗೆ ಹೊಸ ಕೆಲಸ ಸಿಗಬಹುದು” ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.
“ನೀವು ಭಾರತದಿಂದ ಹೊರಬಂದು ಆರು ವರ್ಷಗಳಷ್ಟೇ ಆಗಿದೆ. ವಿದೇಶವನ್ನೇ ಶಾಶ್ವತ ನೆಲೆಯೆಂದು ಭಾವಿಸುವ ಮನಸ್ಥಿತಿಯೇ ಸಮಸ್ಯೆ. ನೀವು ಅಲ್ಲಿ ಕೆಲಸ ಮಾಡುತ್ತಿದ್ದಿರಿ ಎಂಬುದನ್ನು ಬಿಟ್ಟರೆ, ನಿಜವಾಗಿಯೂ ಜೀವನ ಕಟ್ಟಿಕೊಂಡಿರಲಿಲ್ಲ. ಆ ದೇಶ ನಿಮಗೆ ಏನನ್ನೂ ನೀಡಲು ಬದ್ಧವಾಗಿಲ್ಲ” ಎಂದು ಮತ್ತೊಬ್ಬರು ಬರೆದಿದ್ದಾರೆ.
ಅನೇಕರು ಮಹಿಳೆಯ ಪೋಸ್ಟ್ ಗೆ ಪ್ರತಿಕ್ರಿಯಿಸಿ, ಸಮಾಧಾನ ಹೇಳುವುದರ ಜೊತೆಗೆ ಭಾರತಕ್ಕೆ ಮರಳಿ ವೃತ್ತಿಜೀವನವನ್ನು ಹೊಸದಾಗಿ ಆರಂಭಿಸುವಂತೆ ಸಲಹೆ ನೀಡಿದ್ದಾರೆ. ಇದು ಅಸ್ತಿತ್ವದ ಬಿಕ್ಕಟ್ಟಿನ ಸನ್ನಿವೇಶವಾಗಿದ್ದು, ಇಂತಹ ಪರಿಸ್ಥಿತಿಗಳು ಎದುರಾಗುವುದು ಸಾಮಾನ್ಯ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.