ಮಧ್ಯಂತರ ಚುನಾವಣೆಗೂ ಮುನ್ನ ರಷ್ಯಾದ ಡೀಸೆಲ್ ರಫ್ತು ಅಮೆರಿಕದಲ್ಲಿ ಬೆಲೆ ಇಳಿಕೆಗೆ ಕಾರಣವಾಗಲಿದೆಯೇ?
ಆಂಡಿ ಹಿರ್ಷ್ಫೆಲ್ಡ್ Aljazeera / ರಾಯಿಟರ್ಸ್ ವರದಿ
Photo Credit : aljazeera.com
ಮುಂದಿನ ತಿಂಗಳು ನಡೆಯಲಿರುವ ಮಧ್ಯಂತರ ಚುನಾವಣೆಗೂ ಮುನ್ನ ಅಮೆರಿಕದಲ್ಲಿ ಹೆಚ್ಚುತ್ತಿರುವ ಡೀಸೆಲ್ ಬೆಲೆ ಮತ್ತು ಇಂಧನ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಮಾಡಿಕೊಂಡಿರುವ ಒಪ್ಪಂದದ ಭಾಗವಾಗಿ, ರಷ್ಯಾದಿಂದ ಮೊದಲ ಡೀಸೆಲ್ ಟ್ಯಾಂಕರ್ ಗುರುವಾರ ಅಮೆರಿಕಕ್ಕೆ ಹೊರಡಲಿದೆ.
ರಷ್ಯಾದಿಂದ ಹೊರಡಲಿರುವ ಈ ಟ್ಯಾಂಕರ್ ಅಮೆರಿಕದ ಬಹಿರಂಗಪಡಿಸದ ಬಂದರಿಗೆ ತಲುಪಲಿದೆ ಎಂದು ಮಾಸ್ಕೋ ಬುಧವಾರ ತಿಳಿಸಿದೆ. ರಷ್ಯಾದಲ್ಲಿಯೇ ಇಂಧನ ಪೂರೈಕೆಯ ಕೊರತೆಯಿದ್ದರೂ, ಅಮೆರಿಕದ ಗ್ರಾಹಕರು ಗಗನಕ್ಕೇರಿರುವ ಇಂಧನ ಬೆಲೆಯಿಂದ ಪರದಾಡುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕಕ್ಕೆ ಹೆಚ್ಚಿನ ಇಂಧನ ಕಳುಹಿಸುವ ವಿಶಾಲ ಪ್ರಯತ್ನದ ಭಾಗವಾಗಿ ಈ ಸಾಗಣೆ ನಡೆಯುತ್ತಿದೆ.
ಮಧ್ಯಂತರ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಜೀವನ ವೆಚ್ಚದ ಏರಿಕೆಯಿಂದ ಕಂಗಾಲಾಗಿರುವ ಅಮೆರಿಕನ್ನರ ಆತಂಕವನ್ನು ಕಡಿಮೆ ಮಾಡಲು ಮತ್ತು ಇಂಧನ ಬೆಲೆ ಏರಿಕೆಯನ್ನು ತಡೆಯಲು ಶ್ವೇತಭವನ ಪ್ರಯತ್ನಿಸುತ್ತಿರುವಾಗಲೇ ಈ ಘೋಷಣೆ ಹೊರಬಿದ್ದಿದೆ.
‘ವಾಷಿಂಗ್ಟನ್ ಪೋಸ್ಟ್–ಎಬಿಸಿ ನ್ಯೂಸ್–ಇಪ್ಸೋಸ್’ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಆರ್ಥಿಕ ವಿಷಯಗಳಲ್ಲಿ ರಿಪಬ್ಲಿಕನ್ಗಳಿಗಿಂತ ಡೆಮಾಕ್ರಟ್ಗಳನ್ನು ಮತದಾರರು ಹೆಚ್ಚು ನಂಬುತ್ತಿದ್ದಾರೆ. ಶೇ 37ರಷ್ಟು ಮತದಾರರು ಆರ್ಥಿಕತೆಯ ವಿಚಾರದಲ್ಲಿ ಡೆಮಾಕ್ರಟ್ ಗಳನ್ನು ನಂಬಿದರೆ, ಶೇ 28ರಷ್ಟು ಮಂದಿ ರಿಪಬ್ಲಿಕನ್ಗಳನ್ನು ನಂಬಿದ್ದಾರೆ. ಮತ್ತೊಂದೆಡೆ, ಆರ್ಥಿಕತೆಯನ್ನು ನಿರ್ವಹಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲಿನ ವಿಶ್ವಾಸ ಕುಸಿದಿದ್ದು, ಕೇವಲ ಶೇ 28ರಷ್ಟು ಮಂದಿ ಮಾತ್ರ ಅವರ ಆರ್ಥಿಕ ನಿರ್ವಹಣೆಯನ್ನು ಒಪ್ಪಿಕೊಂಡಿದ್ದಾರೆ.
ಸೆಂಟ್ ಪೀಟರ್ಸ್ಬರ್ಗ್ ಗೆ ಭೇಟಿ ನೀಡಿದ್ದ ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ರಷ್ಯಾದ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ಮೊದಲ ಸಾಗಣೆಯ ಬಗ್ಗೆ ಘೋಷಿಸಲಾಯಿತು.
ಇದು ಕೇವಲ ಒಂದು ಸಾಗಣೆಯೇ ಅಥವಾ ಅನೇಕ ಸಾಗಣೆಗಳೇ?
ಮೊದಲ ಟ್ಯಾಂಕರ್ ಕೇವಲ ಒಂದು ಬಾರಿಯ ಸರಬರಾಜಲ್ಲ. ಬದಲಿಗೆ, ಅಮೆರಿಕಕ್ಕೆ ರಷ್ಯಾದ ಇಂಧನ ಪೂರೈಕೆಯನ್ನು ಹೆಚ್ಚಿಸುವ ವಿಶಾಲ ಒಪ್ಪಂದದ ಭಾಗವಾಗಿದೆ.
ರಷ್ಯಾದಿಂದ 3 ಲಕ್ಷ ಟನ್ ಡೀಸೆಲ್ ಇಂಧನ ರಫ್ತು ಮಾಡುವುದಾಗಿ ಟ್ರಂಪ್ ಹಿಂದೆ ತಿಳಿಸಿದ್ದರು. ಇದರ ಬೆನ್ನಲ್ಲೇ ನವೆಂಬರ್ನಲ್ಲಿ ಮತ್ತಷ್ಟು 5 ಲಕ್ಷ ಟನ್ ಹಾಗೂ ‘ತಕ್ಷಣವೇ’ 10 ಲಕ್ಷ ಟನ್ ಡೀಸೆಲ್ ಪೂರೈಕೆಯಾಗಲಿದೆ ಎಂದು ಹೇಳಲಾಗಿತ್ತು.
ಈ ಆರಂಭಿಕ ಸಾಗಣೆಯು ಮುಂಬರುವ ಹಲವು ಸಾಗಣೆಗಳಲ್ಲಿ ಮೊದಲನೆಯದು ಎಂದು ರಷ್ಯಾದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಆದರೆ, ಈ ಸಾಗಣೆಗಳ ಪ್ರಮಾಣ ಮತ್ತು ಸಮಯದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ರಷ್ಯಾದ ತೈಲ ಶುದ್ಧೀಕರಣ ಘಟಕಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿರುವುದರಿಂದ ದೇಶವು ಇಂಧನ ಕೊರತೆಯನ್ನು ಎದುರಿಸುತ್ತಿದೆ. ಈ ದಾಳಿಗಳು ತೈಲ ಶುದ್ಧೀಕರಣ ಸಾಮರ್ಥ್ಯಕ್ಕೆ ಅಡ್ಡಿಯಾಗಿದ್ದು, ಇಂಧನ ರಫ್ತಿನ ಮೇಲೆ ನಿರ್ಬಂಧಗಳನ್ನು ವಿಧಿಸಲು ಮಾಸ್ಕೋವನ್ನು ಅನಿವಾರ್ಯಗೊಳಿಸಿವೆ.
ದೇಶೀಯ ಬೇಡಿಕೆಯನ್ನು ಈಡೇರಿಸಿಕೊಳ್ಳುವುದರ ಜೊತೆಗೆ, ರಷ್ಯಾ ಎಷ್ಟು ಬೇಗ ಉತ್ಪಾದನೆಯನ್ನು ಮರುಸ್ಥಾಪಿಸುತ್ತದೆ ಎಂಬುದರ ಮೇಲೆ ಭರವಸೆ ನೀಡಿರುವ ಇಂಧನ ಪೂರೈಕೆ ಅವಲಂಬಿತವಾಗಿರುತ್ತದೆ.
ರಷ್ಯಾ ವಿರುದ್ಧದ ಮತ್ತೊಂದು ಸುತ್ತಿನ ನಿರ್ಬಂಧಗಳನ್ನು ಹೇರುವ ಯೋಜನೆಯನ್ನು ಟ್ರಂಪ್ ಕೈಬಿಟ್ಟ ಬಳಿಕ ಈ ಒಪ್ಪಂದ ಏರ್ಪಟ್ಟಿದೆ. ಪ್ರಸ್ತಾವಿತ ಕ್ರಮಗಳಲ್ಲಿ ಚೀನಾ ಮತ್ತು ಭಾರತ ಸೇರಿದಂತೆ ರಷ್ಯಾದ ಕಚ್ಚಾ ತೈಲದ ಪ್ರಮುಖ ಖರೀದಿದಾರರಿಂದ ಆಮದಾಗುವ ಸರಕುಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವುದೂ ಸೇರಿತ್ತು.
ಈ ಸಾಗಣೆಯು ಮಧ್ಯಂತರ ಚುನಾವಣೆಗೂ ಮುನ್ನ ಬೆಲೆ ಇಳಿಕೆಗೆ ಕಾರಣವಾಗಲಿದೆಯೇ?
ಮಧ್ಯಂತರ ಚುನಾವಣೆಗೂ ಮುನ್ನ ಈ ಮೊದಲ ಸಾಗಣೆಯಿಂದ ಅಮೆರಿಕದ ಗ್ರಾಹಕರಿಗೆ ಹೆಚ್ಚಿನ ಪರಿಹಾರ ಸಿಗುವ ಸಾಧ್ಯತೆ ಇಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ. ಸೆಪ್ಟೆಂಬರ್ನಲ್ಲಿ ಅಮೆರಿಕದಲ್ಲಿ ಚಿಲ್ಲರೆ ಡೀಸೆಲ್ ಬೆಲೆ ಪ್ರತಿ ಗ್ಯಾಲನ್ಗೆ 6 ಡಾಲರ್ (ಪ್ರತಿ ಲೀಟರ್ಗೆ 1.59 ಡಾಲರ್) ಗಡಿ ದಾಟಿತ್ತು. ಬೆಲೆಗಳು ಇನ್ನೂ ಗಗನದಲ್ಲೇ ಇವೆ.
ಅಮೆರಿಕನ್ ಆಟೊಮೊಬೈಲ್ ಅಸೋಸಿಯೇಷನ್ (AAA) ಪ್ರಕಾರ, ಬುಧವಾರ ರಾಷ್ಟ್ರೀಯ ಸರಾಸರಿ ಬೆಲೆ ಪ್ರತಿ ಗ್ಯಾಲನ್ಗೆ 6.31 ಡಾಲರ್ (ಪ್ರತಿ ಲೀಟರ್ಗೆ 1.67 ಡಾಲರ್) ಇತ್ತು. ಇದು ಒಂದು ತಿಂಗಳ ಹಿಂದಿನ ಪ್ರತಿ ಗ್ಯಾಲನ್ಗೆ 6.51 ಡಾಲರ್ (ಪ್ರತಿ ಲೀಟರ್ಗೆ 1.72 ಡಾಲರ್) ಬೆಲೆಗೆ ಹೋಲಿಸಿದರೆ ಶೇ 3.1ರಷ್ಟು ಕಡಿಮೆಯಾಗಿದೆ. ಆದರೂ, ಕಳೆದ ವರ್ಷದ ಇದೇ ಅವಧಿಯಲ್ಲಿದ್ದ ಪ್ರತಿ ಗ್ಯಾಲನ್ಗೆ 3.62 ಡಾಲರ್ (ಪ್ರತಿ ಲೀಟರ್ಗೆ 0.96 ಡಾಲರ್) ಬೆಲೆಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
“ಜಾಗತಿಕ ಕೊರತೆಗೆ ಹೋಲಿಸಿದರೆ, ಅಮೆರಿಕದ ಸ್ವಂತ ಉತ್ಪಾದನೆಯ ಪ್ರಮಾಣದ ಎದುರು ರಷ್ಯಾ ಪೂರೈಸಬಲ್ಲ ಇಂಧನದ ಪ್ರಮಾಣ ಬಹಳ ಕಡಿಮೆ. ಈ ಇಂಧನ ಸಾಗಣೆಯು ಪೂರೈಕೆಯ ಮೇಲೆ ಅಥವಾ ಬೆಲೆ ಇಳಿಕೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿಲ್ಲ” ಎಂದು ‘ಸೆಂಟರ್ ಫಾರ್ ಎ ನ್ಯೂ ಅಮೆರಿಕನ್ ಸೆಕ್ಯುರಿಟಿ’ಯ ಹಿರಿಯ ಸಂಶೋಧಕಿ ರಾಚೆಲ್ ಜಿಯೆಂಬಾ ಅಲ್ ಜಝೀರಾಕ್ಕೆ ತಿಳಿಸಿದ್ದಾರೆ.
“ವರದಿಯಾಗಿರುವ ಈ ಸಾಗಣೆಯ ಪ್ರಮಾಣವು ಅಮೆರಿಕದ ಸರಿಸುಮಾರು ಎರಡು ಗಂಟೆಗಳ ಇಂಧನ ಬಳಕೆಗೆ ಸಮಾನವಾಗಿದೆ. ಯೋಜಿಸಿದಂತೆ ಇಂಧನ ಬಂದರೂ, ರಾಷ್ಟ್ರೀಯ ಪೂರೈಕೆಯಲ್ಲಿ ಬಹಳ ಕಡಿಮೆ ವ್ಯತ್ಯಾಸವಾಗಲಿದೆ” ಎಂದು ‘ರಕ್ಷಾ ಇಂಟೆಲಿಜೆನ್ಸ್’ ಸಿಇಒ ಆರತಿ ಕೃಷ್ಣನ್ ಅಲ್ ಜಝೀರಾಕ್ಕೆ ತಿಳಿಸಿದ್ದಾರೆ.
ಮತದಾರರು ಮತ ಚಲಾಯಿಸಲು ತೆರಳುವಷ್ಟರಲ್ಲಿ ಮೊದಲ ಟ್ಯಾಂಕರ್ ಅಮೆರಿಕವನ್ನು ತಲುಪದಿರಬಹುದು ಎಂದು ಜಿಯೆಂಬಾ ಹೇಳಿದ್ದಾರೆ. ಗುರುವಾರ ಟ್ಯಾಂಕರ್ ಹೊರಡುವುದು ಅದರ ಪ್ರಯಾಣದ ಆರಂಭವಷ್ಟೇ ಹೊರತು, ಗ್ರಾಹಕರಿಗೆ ಇಂಧನ ಲಭ್ಯವಾಗುವ ದಿನವಲ್ಲ.
ಬೆಲೆಗಳಲ್ಲಿ ನಿರಂತರ ಇಳಿಕೆಯಾಗಬೇಕಾದರೆ, ಒಂದೇ ಸಾಗಣೆಯ ಬದಲಿಗೆ ಜಾಗತಿಕ ಪೂರೈಕೆಯಲ್ಲಿ ಒಟ್ಟಾರೆ ಸುಧಾರಣೆಯಾಗಬೇಕು.
“ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್ ಪೂರೈಸುವ ರಷ್ಯಾದ ಸಾಮರ್ಥ್ಯವು ಭಾಗಶಃ ಅದರ ತೈಲ ಶುದ್ಧೀಕರಣ ಘಟಕಗಳ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಉಕ್ರೇನ್ನ ದಾಳಿಗಳು ಈ ಘಟಕಗಳ ಮೇಲೆ ಪರಿಣಾಮ ಬೀರುತ್ತಿವೆ. ಕಡಿಮೆ ಇಂಧನ ಬೆಲೆಯನ್ನು ಬಯಸುವ ವಾಷಿಂಗ್ಟನ್ಗೆ ಈ ಅಡಚಣೆಯನ್ನು ಕಡಿಮೆ ಮಾಡುವ ಆಸಕ್ತಿಯೂ ಇದೆ” ಎಂದು ಕೃಷ್ಣನ್ ಹೇಳಿದ್ದಾರೆ.
ಕದನ ವಿರಾಮವು ದೀರ್ಘಕಾಲೀನ ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆಯೇ?
ರಷ್ಯಾ ಮತ್ತು ಉಕ್ರೇನ್ ನಡುವೆ ದೀರ್ಘಕಾಲೀನ ಕದನ ವಿರಾಮ ಏರ್ಪಟ್ಟರೆ, ಹಾನಿಗೊಳಗಾದ ರಷ್ಯಾದ ತೈಲ ಶುದ್ಧೀಕರಣ ಘಟಕಗಳನ್ನು ಪುನರ್ನಿರ್ಮಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಅವಕಾಶ ಸಿಗಲಿದೆ. ಇದರಿಂದ ಇಂಧನ ಮಾರುಕಟ್ಟೆಯ ಮೇಲಿನ ಒತ್ತಡ ತಗ್ಗಬಹುದು.
“ಅಮೆರಿಕವು ಉಕ್ರೇನ್ ಮೇಲೆ ಹೆಚ್ಚಿನ ಒತ್ತಡ ಹೇರುವಂತೆ ಮಾಡಲು ಮತ್ತು ರಷ್ಯಾದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡಲು ಈಗಿನ ಒಪ್ಪಂದವನ್ನು ರಾಜಕೀಯ ತಂತ್ರವಾಗಿ ಬಳಸಲಾಗುತ್ತಿದೆ” ಎಂದು ಜಿಯೆಂಬಾ ಹೇಳಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಗೆ ಗಮನಾರ್ಹ ಪರಿಹಾರ ಸಿಗುವುದು ಮಧ್ಯಪ್ರಾಚ್ಯದ ಬೆಳವಣಿಗೆಗಳ ಮೇಲೆ, ವಿಶೇಷವಾಗಿ ಹಾರ್ಮುಝ್ ಜಲಸಂಧಿಯ ಪರಿಸ್ಥಿತಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಅಮೆರಿಕ–ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸುವ ಮೊದಲು, ಜಗತ್ತಿನ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಪೂರೈಕೆಯ ಸುಮಾರು ಐದನೇ ಒಂದು ಭಾಗವು ಈ ಪ್ರಮುಖ ಸಾಗಣೆ ಮಾರ್ಗದ ಮೂಲಕವೇ ಸಾಗುತ್ತಿತ್ತು.
ಇರಾನ್ ಒಳಗೊಂಡ ಸಂಘರ್ಷ ಮತ್ತು ಇಂಧನ ಸಾಗಣೆಯಲ್ಲಿನ ಅಡಚಣೆಗಳು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಹೆಚ್ಚಿನ ಒತ್ತಡ ತಂದಿರುವ ಸಂದರ್ಭದಲ್ಲೇ ರಷ್ಯಾದ ಈ ಸಾಗಣೆ ನಡೆಯುತ್ತಿದೆ. ದತ್ತಾಂಶ ವಿಶ್ಲೇಷಣಾ ವೇದಿಕೆಯಾದ ‘ಕೆಪ್ಲರ್’ ಪ್ರಕಾರ, ಕಳೆದ ಎರಡು ವಾರಗಳಲ್ಲಿ ಹಡಗುಗಳ ಮೇಲೆ ಕನಿಷ್ಠ 18 ದಾಳಿಗಳು ನಡೆದಿವೆ. ಬುಧವಾರ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಇರಾನ್ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ‘ಫೈನಾನ್ಷಿಯಲ್ ಟೈಮ್ಸ್’ಗೆ ತಿಳಿಸಿದ್ದಾರೆ.
ಹಾನಿಗೊಳಗಾದ ತೈಲ ಶುದ್ಧೀಕರಣ ಘಟಕಗಳನ್ನು ಪುನರ್ನಿರ್ಮಿಸಲು ಅವಕಾಶ ಸಿಗದಿದ್ದರೆ, ರಷ್ಯಾದೊಂದಿಗಿನ ಒಪ್ಪಂದವೊಂದರಿಂದಲೇ ಮೂಲ ಪೂರೈಕೆ ಸಮಸ್ಯೆಯನ್ನು ಪರಿಹರಿಸುವುದು ಅಸಂಭವವಾಗಿದೆ.
“ಈ ಒಪ್ಪಂದವು ವೈಯಕ್ತಿಕ ಖರೀದಿದಾರರಿಗೆ ಸಹಾಯ ಮಾಡಬಹುದು ಅಥವಾ ವ್ಯಾಪಾರಿಗಳಿಗೆ ತಕ್ಷಣದ ಭರವಸೆ ನೀಡಬಹುದು. ಆದರೆ, ಬೆಲೆಗಳಲ್ಲಿ ಶಾಶ್ವತ ಇಳಿಕೆಯಾಗಬೇಕಾದರೆ ಲಭ್ಯವಿರುವ ಡೀಸೆಲ್ ಪ್ರಮಾಣ ನಿಜವಾಗಿಯೂ ಹೆಚ್ಚಾಗಬೇಕು. ಅಷ್ಟು ಪ್ರಮಾಣದ ಇಂಧನ ಪೂರೈಸಲು ಸಾಧ್ಯ ಎಂಬುದನ್ನು ರಷ್ಯಾ ಇನ್ನೂ ಸಾಬೀತುಪಡಿಸಿಲ್ಲ” ಎಂದು ಕೃಷ್ಣನ್ ಹೇಳಿದ್ದಾರೆ.