×
Ad

ಕ್ರೀಡೆಯ ಮುಖವಾಡದ ಹಿಂದೆ ರಾಜಕೀಯ ದಾಳ: ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ 'ಸ್ಪೋರ್ಟ್ಸ್‌ವಾಷಿಂಗ್' ತಂತ್ರ

Update: 2026-06-11 22:24 IST

Photo Credit : AP, PTI 

ಜಗತ್ತಿನಾದ್ಯಂತ ಕೋಟ್ಯಂತರ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 'ಫಿಫಾ ವಿಶ್ವಕಪ್ 2026' (FIFA World Cup 2026) ಫುಟ್‌ಬಾಲ್ ಪಂದ್ಯಾವಳಿಗೆ ಇಂದಿನಿಂದ ಚಾಲನೆ ಸಿಗುತ್ತಿದೆ. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಈ ಪಂದ್ಯಾವಳಿಯ ಉದ್ಘಾಟನಾ ಪಂದ್ಯವು ಭಾರತೀಯ ಕಾಲಮಾನ ಪ್ರಕಾರ ಗುರುವಾರ ಮಧ್ಯರಾತ್ರಿ 12.30ಕ್ಕೆ ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜರುಗಲಿದೆ. ಸೆಮಿಫೈನಲ್ ಹಾಗೂ ಫೈನಲ್ ಸೇರಿದಂತೆ ಒಟ್ಟು 78 ಪಂದ್ಯಗಳಿಗೆ ಅಮೆರಿಕವೇ ಪ್ರಮುಖ ವೇದಿಕೆಯಾಗಿದೆ.

ಆದರೆ, ಈ ಕ್ರೀಡಾ ಸಂಭ್ರಮದ ನಡುವೆಯೇ ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದವೊಂದು ಭುಗಿಲೆದ್ದಿದೆ. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಪ್ರಕಾರ, ಈ ಬಾರಿಯ ವಿಶ್ವಕಪ್ ಕೇವಲ ಕ್ರೀಡಾಕೂಟವಾಗಿ ಉಳಿದಿಲ್ಲ, ಬದಲಿಗೆ ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ "ಸ್ಪೋರ್ಟ್ಸ್‌ವಾಷಿಂಗ್ ಮಹೋತ್ಸವ"ವಾಗಿ ಮಾರ್ಪಟ್ಟಿದೆ.

ಏನಿದು 'ಸ್ಪೋರ್ಟ್ಸ್‌ವಾಷಿಂಗ್'?

ಹ್ಯೂಮನ್ ರೈಟ್ಸ್ ವಾಚ್‌ನ (HRW) ಮಿಂಕಿ ವರ್ಡನ್ ಅವರ ಪ್ರಕಾರ, "ಅಭಿಮಾನಿಗಳನ್ನು ಮತ್ತು ಧನಾತ್ಮಕ ಸುದ್ದಿ ಪ್ರಸಾರವನ್ನು ಆಕರ್ಷಿಸಲು ಅತ್ಯಂತ ಜನಪ್ರಿಯ ಕ್ರೀಡಾಕೂಟವನ್ನು ಬಳಸಿಕೊಳ್ಳುವ ಮೂಲಕ, ದೇಶದಲ್ಲಿ ನಡೆಯುತ್ತಿರುವ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಮುಚ್ಚಿಹಾಕುವ ಪ್ರಕ್ರಿಯೆಯೇ ಸ್ಪೋರ್ಟ್ಸ್‌ವಾಷಿಂಗ್." ಈ ಹಿಂದೆ ಕೇವಲ ಸರ್ವಾಧಿಕಾರಿ ಅಥವಾ ಪ್ರಜಾಪ್ರಭುತ್ವವಲ್ಲದ ಆಡಳಿತಗಳಿಗೆ ಮಾತ್ರ ಬಳಸಲಾಗುತ್ತಿದ್ದ ಈ ಪದವನ್ನು, ಈಗಿನ ಅಮೆರಿಕ ಸರ್ಕಾರಕ್ಕೂ ಅನ್ವಯಿಸಬೇಕು ಎಂದು ಅವರು ವಾದಿಸಿದ್ದಾರೆ.

"ಇದು ಕಾರ್ಮಿಕರು, ಅಭಿಮಾನಿಗಳು ಮತ್ತು ಆಟಗಾರರಿಗೆ ಸುರಕ್ಷತೆ ನೀಡುವ ಇತಿಹಾಸದ ಮೊದಲ ಮಾನವ ಹಕ್ಕುಗಳ ಆಧಾರಿತ ವಿಶ್ವಕಪ್ ಆಗಬೇಕಿತ್ತು. ಆದರೆ ಅಮೆರಿಕ ಸರ್ಕಾರದ ಕ್ರೂರ ವಲಸೆ ನೀತಿಗಳು ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಬೆದರಿಕೆಗಳು ಇಡೀ ಪಂದ್ಯಾವಳಿಯನ್ನು ಭಯದ ವಾತಾವರಣಕ್ಕೆ ದೂಡಿವೆ" ಎಂದು ವರ್ಡನ್ ಆತಂಕ ವ್ಯಕ್ತಪಡಿಸಿದ್ದಾರೆ.

ಭೀತಿ ಮತ್ತು ಬಹಿಷ್ಕಾರದ ನೆರಳಿನಲ್ಲಿ ಫುಟ್‌ಬಾಲ್ ಅಭಿಮಾನಿಗಳು

ವಿಶ್ವಕಪ್ ವೀಕ್ಷಿಸಲು ಬರುವ ಅಭಿಮಾನಿಗಳು ಅಮೆರಿಕದಲ್ಲಿ ಏನಾದರೂ ಸಣ್ಣ ತಪ್ಪು ಅಥವಾ ಮೂರ್ಖತನದ ಕೆಲಸ ಮಾಡಿದರೂ ಅಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ತೀವ್ರ ಕ್ರಮ ಕೈಗೊಳ್ಳಬಹುದು ಎಂದು ಅಭಿಮಾನಿ ಸಂಘಟನೆಗಳು ಎಚ್ಚರಿಸಿವೆ. ಸದ್ಯ ಸುಮಾರು 30 ದೇಶಗಳ ನಾಗರಿಕರ ಮೇಲೆ ಅಮೆರಿಕ ವೀಸಾ ನಿರ್ಬಂಧ ಹೇರಿದೆ.

ಮಾನವ ಹಕ್ಕುಗಳ ವರದಿಯ ಪ್ರಕಾರ, 2025ರ ಜನವರಿ 20ರಿಂದ ಮಾರ್ಚ್ 10ರ ನಡುವೆ ಪಂದ್ಯಗಳು ನಡೆಯಲಿರುವ 11 ನಗರಗಳ ಸುತ್ತಮುತ್ತ ಅಮೆರಿಕದ ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಸಂಸ್ಥೆಯು ಕನಿಷ್ಠ 1,67,000 ಜನರನ್ನು ಬಂಧಿಸಿದೆ. ಚರ್ಮದ ಬಣ್ಣ ಹಾಗೂ ಭಾಷೆಯ ಆಧಾರದ ಮೇಲೆ ವಲಸಿಗರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ 'ಸ್ಪೋರ್ಟ್ಸ್ ಅಂಡ್ ರೈಟ್ಸ್ ಅಲೈಯನ್ಸ್' (SRA) ಸಂಘಟನೆಯು ಅಭಿಮಾನಿಗಳ ರಕ್ಷಣೆಗೆ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಫಿಫಾ ಮಂಡಳಿಗೆ ಕರೆ ನೀಡಿದೆ.

ಟ್ರಂಪ್‌ಗೆ 'ಫಿಫಾ ಶಾಂತಿ ಪ್ರಶಸ್ತಿ'

ಇಷ್ಟೆಲ್ಲಾ ವಿವಾದಗಳ ನಡುವೆಯೂ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರು ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೊಸದಾಗಿ ಸ್ಥಾಪಿಸಲಾದ 'ಫಿಫಾ ಶಾಂತಿ ಪ್ರಶಸ್ತಿ'ಯನ್ನು ನೀಡಿ ಗೌರವಿಸಿರುವುದು ತೀವ್ರ ಟೀಕೆಗೆ ಒಳಗಾಗಿದೆ.

ಅಧಿಕಾರ ವಹಿಸಿಕೊಂಡಾಗಿನಿಂದ 4,50,000ಕ್ಕೂ ಹೆಚ್ಚು ಜನರನ್ನು ದೇಶದಿಂದ ಗಡೀಪಾರು ಮಾಡಿದ ಹಾಗೂ ಇರಾನ್ ಸೇರಿದಂತೆ ಹಲವು ದೇಶಗಳ ವಿರುದ್ಧ ಮಿಲಿಟರಿ ಕ್ರಮಗಳನ್ನು ಕೈಗೊಂಡ ಟ್ರಂಪ್ ಅವರಿಗೆ ಈ ಪ್ರಶಸ್ತಿ ನೀಡಿರುವುದು ಯಾವುದೇ ವಿಶ್ವಾಸಾರ್ಹತೆಗೆ ತದ್ವಿರುದ್ಧವಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಕಿಡಿಕಾರಿದೆ. ದೇಶದೊಳಗೆ ತೃತೀಯಲಿಂಗಿಗಳು ಮತ್ತು ನಾಗರಿಕ ಸಮಾಜದ ಹಕ್ಕುಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂಬ ಆರೋಪಗಳನ್ನೂ ಅದು ಉಲ್ಲೇಖಿಸಿದೆ.

ಸ್ಪೋರ್ಟ್ಸ್‌ವಾಷಿಂಗ್ ಇತಿಹಾಸ

ಕ್ರೀಡೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ.

1936ರ ನಾಝಿ ಜರ್ಮನಿ: ಹಿಟ್ಲರ್ ಆಡಳಿತವು ಒಲಿಂಪಿಕ್ಸ್ ಆತಿಥ್ಯ ವಹಿಸಿದ್ದಾಗ ತನ್ನ ಯಹೂದಿ ವಿರೋಧಿ ಕ್ರೂರ ಮುಖವನ್ನು ಮುಚ್ಚಿಟ್ಟು ಜಗತ್ತಿಗೆ ಒಳ್ಳೆಯವರಂತೆ ನಟಿಸಲು ಸಲಿಂಗಕಾಮದ ವಿರುದ್ಧದ ಕಾನೂನನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಸರ್ಕಾರಿ ಸ್ವಾಮ್ಯದ ಪತ್ರಿಕೆಗಳಲ್ಲಿ ಕಠಿಣ ಹಾಗೂ ತಾರತಮ್ಯದ ಭಾಷಣಗಳನ್ನು ಪ್ರಕಟಿಸುವುದನ್ನು ನಿಲ್ಲಿಸಿತ್ತು. ನಾಝಿ ಹಾಗೂ ಯಹೂದಿ ವಿರೋಧಿ ಚಿತ್ರಣಗಳನ್ನು ತೆಗೆದುಹಾಕಲಾಗಿತ್ತು. ಅಷ್ಟೇ ಅಲ್ಲದೆ, ಯಹೂದಿಯೊಬ್ಬರ ಮಗಳಾದ ಬೆಳ್ಳಿ ಪದಕ ವಿಜೇತೆ ಹೆಲೆನ್ ಮೇಯರ್ ಎಂಬ ಒಬ್ಬೇ ಒಬ್ಬ 'ಆರ್ಯನ್ ಅಲ್ಲದ' ಕ್ರೀಡಾಪಟುವಿಗೆ ಸ್ಪರ್ಧಿಸಲು ಸಾಂಕೇತಿಕವಾಗಿ ಅವಕಾಶ ನೀಡಲಾಗಿತ್ತು.

2008ರ ಚೀನಾ ಒಲಿಂಪಿಕ್ಸ್: ಜಗತ್ತನ್ನು ಬೆರಗುಗೊಳಿಸಲು ಚೀನಾ 40 ಬಿಲಿಯನ್ ಡಾಲರ್ ಖರ್ಚು ಮಾಡಿತು. ಒಲಿಂಪಿಕ್ ಕ್ರೀಡಾಂಗಣಗಳ ನಿರ್ಮಾಣಕ್ಕಾಗಿ ಅಲ್ಲಿನ ಅಧಿಕಾರಿಗಳು ಲಕ್ಷಾಂತರ ನಿವಾಸಿಗಳನ್ನು ಹೊರಹಾಕಿದರು, ಪತ್ರಕರ್ತರನ್ನು ಬಂಧಿಸಿದರು. "ಪ್ರತಿಭಟನಾ ವಲಯಗಳನ್ನು" ಸ್ಥಾಪಿಸಿದ್ದರೂ ಅಲ್ಲಿ ಯಾರೂ ಪ್ರತಿಭಟಿಸದಂತೆ ನಿರ್ಬಂಧ ಹೇರಲಾಯಿತು. ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ ಒಬ್ಬ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಜಗತ್ತೆಲ್ಲ ಬೀಜಿಂಗ್‌ನ ಸಾಂಸ್ಥಿಕ ದಕ್ಷತೆಯನ್ನು ಶ್ಲಾಘಿಸುತ್ತಿರುವಾಗಲೇ, ಚೀನಾದ ಕಣ್ಗಾವಲು ವ್ಯವಸ್ಥೆಯು ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತ್ತು.

2018ರ ರಷ್ಯಾ ಫಿಫಾ ವಿಶ್ವಕಪ್: ಸೋಚಿ 2014ರ ಚಳಿಗಾಲದ ಒಲಿಂಪಿಕ್ಸ್ ಮತ್ತು 2018ರ ಫಿಫಾ ವಿಶ್ವಕಪ್ ಎರಡೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ರಷ್ಯಾದ ಪ್ರತಿಷ್ಠೆಯನ್ನು ಜಾಗತಿಕವಾಗಿ ಪ್ರದರ್ಶಿಸುವ ಸಾಧನಗಳಾಗಿದ್ದವು. ಅದೇ ಸಮಯದಲ್ಲಿ ಅವರು ನಾಗರಿಕ ಸಮಾಜ ಮತ್ತು LGBTQ ಹಕ್ಕುಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದರು.

ಆ ಸಮಯದಲ್ಲಿ ಕಾನೂನುಬಾಹಿರ ಕೊಲೆಗಳು, ಅಕ್ರಮ ಬಂಧನಗಳು ಮತ್ತು ಸಲಿಂಗಕಾಮಿ ಪುರುಷರ ಮೇಲಿನ ದೌರ್ಜನ್ಯಗಳ ಆರೋಪಗಳಿಗಾಗಿ ರಷ್ಯಾ ಸರ್ಕಾರ ತೀವ್ರ ಟೀಕೆಗೆ ಒಳಗಾಗಿತ್ತು. ಇದಲ್ಲದೆ, ಅಮೆರಿಕದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪ ಹಾಗೂ 2014ರ ಕ್ರಿಮಿಯಾ ಆಕ್ರಮಣದ ಬಗ್ಗೆಯೂ ಜಾಗತಿಕವಾಗಿ ಕಳವಳ ವ್ಯಕ್ತವಾಗಿತ್ತು. ಆದರೆ, ವಿಶ್ವಕಪ್‌ನ ಮೇಲಿನ ತೀವ್ರ ಆಸಕ್ತಿ ಮತ್ತು ಉತ್ಸಾಹದ ನಡುವೆ ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳ ಈ ಉಲ್ಲಂಘನೆಗಳು ಒಂದಿಷ್ಟು ಮೂಲೆಗುಂಪಾದವು. 2018ರ ಫಿಫಾ ವಿಶ್ವಕಪ್ ಕ್ರೀಡಾಂಗಣಗಳ ನಿರ್ಮಾಣದ ವೇಳೆ ಸುಮಾರು ಎರಡು ಡಜನ್ ಕಾರ್ಮಿಕರು ಸಾವನ್ನಪ್ಪಿದ್ದರಿಂದ, ಹ್ಯೂಮನ್ ರೈಟ್ಸ್ ವಾಚ್ ಅದನ್ನು 'ಬ್ಲಡಿ ವರ್ಲ್ಡ್ ಕಪ್' (Bloody World Cup) ಎಂದು ಕರೆದಿತ್ತು.

2022ರ ಖತರ್ ವಿಶ್ವಕಪ್: ಖತರ್‌ ತನ್ನ ಜಾಗತಿಕ ಇಮೇಜ್ ಬದಲಿಸಿಕೊಳ್ಳಲು 220 ಬಿಲಿಯನ್ ಡಾಲರ್ ವೆಚ್ಚ ಮಾಡಿತು. ಆದರೆ ಈ ಮೂಲಸೌಕರ್ಯ ನಿರ್ಮಾಣದ ವೇಳೆ ಸಾವಿರಾರು ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡರು. ಮೂಲಸೌಕರ್ಯಗಳನ್ನು ನಿರ್ಮಿಸುವಾಗ ಗಾಯಗೊಂಡ ಅಥವಾ ಮೃತಪಟ್ಟವರ ಕುಟುಂಬಗಳಿಗೆ ಆರ್ಥಿಕ ಪರಿಹಾರ ನೀಡುವ "ಜವಾಬ್ದಾರಿ" ಫುಟ್‌ಬಾಲ್ ಸಂಸ್ಥೆಗೆ ಇದೆ ಎಂದು ಫಿಫಾದ ಸ್ವಂತ ಮಾನವ ಹಕ್ಕುಗಳ ಸಮಿತಿಯೇ ತೀರ್ಮಾನಿಸಿತ್ತು. ಆದರೆ ಫಿಫಾ ಆ ಕುಟುಂಬಗಳಿಗೆ ಯಾವುದೇ ಪರಿಹಾರವನ್ನು ಪಾವತಿಸಿಲ್ಲ. ಖತರ್ ಈ ಪಂದ್ಯಾವಳಿಯ ಆತಿಥ್ಯ ವಹಿಸಲು ಬಯಸಿದ್ದರ ಹಿಂದೆ ಸ್ಪೋರ್ಟ್ಸ್‌ವಾಷಿಂಗ್ ಪ್ರಮುಖ ಪ್ರೇರಕ ಶಕ್ತಿಯಾಗಿತ್ತು ಎಂದು ಇಎಸ್‌ಪಿಎನ್ (ESPN) ಹೇಳಿತ್ತು.

"ವಿಶ್ವಕಪ್‌ನಂತಹ ಬೃಹತ್ ಕ್ರೀಡಾಕೂಟಗಳು ರಾಜಕೀಯ ನಾಟಕಗಳಿಗೆ ಫಲವತ್ತಾದ ಭೂಮಿಯನ್ನು ಒದಗಿಸುತ್ತವೆ. ದೇಶದ ಶಕ್ತಿ ಮತ್ತು ಸರ್ವಶ್ರೇಷ್ಠತೆಯನ್ನು ಪ್ರದರ್ಶಿಸಲು ಸರ್ಕಾರಗಳು ಇದನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತವೆ" ಎಂದು ಗ್ಲೌಸೆಸ್ಟರ್‌ಶೈರ್ ವಿಶ್ವವಿದ್ಯಾಲಯದ ಪ್ರೊಫೆಸರ್ ಎಮಿಲಿ ರೈಯಾಲ್ ವಿಶ್ಲೇಷಿಸಿದ್ದಾರೆ.

ಭಾರತದ ಮೇಲೂ ಕ್ರೀಡಾ ರಾಜಕೀಯದ ನೆರಳು?

ಕ್ರೀಡೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಇಂತಹ ಟೀಕೆಗಳಿಂದ ಭಾರತವೂ ಹೊರತಾಗಿಲ್ಲ.

ಇದಕ್ಕೆ ಮುಖ್ಯ ಉದಾಹರಣೆಯಾಗಿ 2023ರ ಮಾರ್ಚ್‌ನಲ್ಲಿ ಅಹಮದಾಬಾದ್‌ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ವೇಳೆ ನಡೆದ ಸಮಾರಂಭವನ್ನು ಉಲ್ಲೇಖಿಸಲಾಗುತ್ತದೆ. ಆಗ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಸುವರ್ಣ ರಥದಂತಿದ್ದ ಗಾಲ್ಫ್ ಕಾರ್ಟ್‌ ನಲ್ಲಿ ಕ್ರೀಡಾಂಗಣದ ಸುತ್ತ ಸಂಚರಿಸಿ ಪ್ರೇಕ್ಷಕರತ್ತ ಕೈಬೀಸಿದ್ದರು. ಅಲ್ಲದೆ, ಮೋದಿಯವರಿಗೆ ಅವರದೇ ಚಿತ್ರವಿರುವ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಲಾಗಿತ್ತು.

ಇದು 2023ರ ಐಸಿಸಿ (ICC) ಕ್ರಿಕೆಟ್ ವಿಶ್ವಕಪ್‌ಗೆ ಮುಂಚಿತವಾಗಿ ನಡೆದ ರಾಜಕೀಯ ಝಲಕ್ ಆಗಿತ್ತು ಎಂದು ವಿಮರ್ಶಕರು ಹೇಳುತ್ತಾರೆ. ಆ ವಿಶ್ವಕಪ್‌ನ ಫೈನಲ್ ಪಂದ್ಯವೂ ಇದೇ ಮೈದಾನದಲ್ಲಿ ನಡೆದಿತ್ತು ಮತ್ತು ಭಾರತವನ್ನು ಸೋಲಿಸಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು.

ಭಾರತದ ಮುಂದಿನ ಕ್ರೀಡಾ ಹೆಜ್ಜೆಗಳು

ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯವಾಗಿದ್ದರೂ, ದೇಶವು ಇತರ ಪ್ರಮುಖ ಜಾಗತಿಕ ಕ್ರೀಡಾಕೂಟಗಳಿಗೂ ಯಶಸ್ವಿಯಾಗಿ ಆತಿಥ್ಯ ವಹಿಸುತ್ತಾ ಬಂದಿದೆ. 2017ರ ಫಿಫಾ U17 ವಿಶ್ವಕಪ್, 2022ರಲ್ಲಿ ಚೆನ್ನೈನಲ್ಲಿ ನಡೆದ ಪ್ರತಿಷ್ಠಿತ ಚೆಸ್ ಒಲಿಂಪಿಯಾಡ್ ಮತ್ತು 2023ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗಳು ಭಾರತದ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.

ಇದೀಗ ಮತ್ತೊಂದು ಮಹತ್ತರ ಬೆಳವಣಿಗೆಯಾಗಿ, 2030ರ ಕಾಮನ್‌ವೆಲ್ತ್ ಕ್ರೀಡಾಕೂಟದ (Commonwealth Games) ಆತಿಥ್ಯವನ್ನು ಅಹಮದಾಬಾದ್‌ನಲ್ಲಿ ವಹಿಸಲು ಭಾರತ ಸಜ್ಜಾಗಿದೆ. ಈ ಮುಂಚೆ 2010ರಲ್ಲಿ ಹೊಸದಿಲ್ಲಿಯಲ್ಲಿ ಭಾರತ ಕೊನೆಯ ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತ್ತು. ಇದರ ಬೆನ್ನಲ್ಲೇ 2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವನ್ನು ಭಾರತಕ್ಕೆ ತರಬೇಕೆಂಬ ಮಹತ್ವಾಕಾಂಕ್ಷಿ ಗುರಿಯನ್ನೂ ದೇಶ ಹೊಂದಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಮೌಲ್ಯವನ್ನು ಹೆಚ್ಚಿಸಲು ಈ ಕ್ರೀಡಾಕೂಟಗಳು ಪ್ರಮುಖ ಪಾತ್ರ ವಹಿಸಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News