Photo: The Wire

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಾರ್ವಜನಿಕ ಪ್ರತಿಭಟನೆಗಳನ್ನು 'ಆಡಳಿತ ಬದಲಾವಣೆ'ಯ ಪ್ರಯತ್ನಗಳೆಂದು ಬಿಂಬಿಸುವ ಸರ್ಕಾರವು ತನ್ನದೇ ಆದ ಅಸುರಕ್ಷಿತ ಭಾವನೆಯನ್ನು ಸಾರ್ವಜನಿಕವಾಗಿ ಹೊರಹಾಕುತ್ತದೆ. ಇದು ತನ್ನ ಟೀಕಾಕಾರರಿಗೆ ಅನಗತ್ಯ ಮಹತ್ವ ನೀಡುತ್ತದೆ. ಅಧಿಕಾರದಲ್ಲಿ ಮುಂದುವರಿಯುವುದನ್ನು ರಾಷ್ಟ್ರೀಯ ಜವಾಬ್ದಾರಿಯಂತೆ ಬಿಂಬಿಸುತ್ತದೆ ಮತ್ತು ಜನರಿಂದ ಸ್ವಾಭಾವಿಕವಾಗಿ ವ್ಯಕ್ತವಾಗುವ ಪ್ರಜಾಪ್ರಭುತ್ವದ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತದೆ. ಸರ್ಕಾರಗಳು ಮತ್ತು ಪ್ರಧಾನಮಂತ್ರಿಗಳು ಬದಲಾಯಿಸಲ್ಪಡುವವರೇ ಹೊರತು ಶಾಶ್ವತವಲ್ಲ.

2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಿಸುವುದಕ್ಕಾಗಿ ತಾವೇ ನೇರವಾಗಿ ದೇವರಿಂದ ನಿಯೋಜಿಸಲ್ಪಟ್ಟವರು ಎಂದು ಬಿಂಬಿಸಿಕೊಳ್ಳಲು ಅಭ್ಯಾಸ ಮಾಡಿಕೊಂಡಿರುವ ಆಡಳಿತಗಾರನಿಗೆ, ಅವರ ಪಕ್ಷದ ಈಗಿನ ಭಾಷೆಯು ಮತದಾರರು ನರೇಂದ್ರ ಮೋದಿಯನ್ನು ತಿರಸ್ಕರಿಸಿ ಭಾರತಕ್ಕೆ ಬೇರೆ ಹಾಗೂ ಉತ್ತಮ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂಬ ಸ್ವಾಗತಾರ್ಹವಲ್ಲದ ವಾಸ್ತವವನ್ನು ಬಹಿರಂಗಪಡಿಸುತ್ತದೆ. ನ್ಯಾಯಸಮ್ಮತ ಭಿನ್ನಮತವನ್ನು ಅಸ್ತಿತ್ವಕ್ಕೆ ಬಂದಿರುವ ಬೆದರಿಕೆಯೆಂದು ಬಿಂಬಿಸುವ ಮೂಲಕ, ಪ್ರಜಾಪ್ರಭುತ್ವದ ಮೂಲಭೂತ ಸ್ತಂಭವಾಗಿರುವ ರಾಜಕೀಯ ಪರಿವರ್ತನೆಯ ವಾಸ್ತವಿಕ ಸಾಧ್ಯತೆಯನ್ನು ಬಿಜೆಪಿ ಎತ್ತಿಹಿಡಿದಂತಾಗಿದೆ.

ನೆರೆಹೊರೆ ದೇಶಗಳಲ್ಲಿ Gen Z ನೇತೃತ್ವದಲ್ಲಿ ನಡೆದ ಬದಲಾವಣೆಗಳ ಬಗ್ಗೆ ಬಿಜೆಪಿಗೆ ತೀವ್ರ ಎಚ್ಚರಿಕೆಯಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳು ಬೇರೆ ಬೇರೆ ರಾಜಕೀಯ ಹಾದಿಗಳನ್ನು ಅನುಸರಿಸಿದರೂ, ಆಡಳಿತಗಾರರ ವಿರುದ್ಧದ ಪ್ರತಿಯೊಂದು ಸಂಘರ್ಷಕ್ಕೂ ಯುವಜನರ ಅತೃಪ್ತಿಯೇ ಮುಖ್ಯ ಕಾರಣವಾಗಿತ್ತು. 'Gen Z' ಎಂಬ ಪದದ ಬಗ್ಗೆ ಮೋದಿ ಸರ್ಕಾರ ಎಷ್ಟು ಸಂವೇದನಾಶೀಲವಾಗಿದೆ ಎಂದರೆ, ಅದರ ಅಧಿಕೃತ ಹೇಳಿಕೆಗಳು ಈಗ ಹೆಚ್ಚು ಸಾಮಾನ್ಯವಾದ 'ಯುವಕರು' ಎಂಬ ಪದವನ್ನು ಬಳಸುತ್ತಿವೆ. ಪ್ರಧಾನಿ ಮೋದಿ ಅವರ ಸಾರ್ವಜನಿಕರನ್ನು ನೇರವಾಗಿ ತಲುಪುವ ಇನ್‌ಸ್ಟಾಗ್ರಾಮ್ ವಿಡಿಯೊಗಳು ಜನರಿಂದ ವ್ಯಾಪಕ ಹಾಸ್ಯ ಹಾಗೂ ಟೀಕೆಗಳಿಗೆ ಗುರಿಯಾದ ಬಳಿಕ ತಕ್ಷಣವೇ ನಿಂತುಹೋಗಿವೆ.

ಸುದ್ದಿ ಚಾನೆಲ್‌ಗಳ ಚರ್ಚೆಗಳು ಮತ್ತು ಅಧಿಕೃತ ಪತ್ರಿಕಾಗೋಷ್ಠಿಗಳ ಗಲಾಟೆಗೆ ಮಾತ್ರ ತನ್ನನ್ನು ಸೀಮಿತಗೊಳಿಸಿಕೊಂಡಿರುವ ಬಿಜೆಪಿ, ಪ್ರತಿಭಟನಾಕಾರರೊಂದಿಗೆ ಯಾವುದೇ ಅರ್ಥಪೂರ್ಣ ಮಾತುಕತೆ ನಡೆಸುತ್ತಿಲ್ಲ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ, ಚುನಾವಣಾ ಆಯೋಗವು ವಿರೋಧ ಪಕ್ಷಗಳು, ಮಾಜಿ ಕಾರ್ಯದರ್ಶಿಗಳು, ದಿಲ್ಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಮತ್ತು ನಾಗರಿಕ ಸಮಾಜದ ನಾಯಕರಿಗೆ ಸಂಪೂರ್ಣವಾಗಿ ಸಿಗದಂತಾಗಿದೆ. ವಿರೋಧ ಪಕ್ಷದ ನಾಯಕರು ಹಾಗೂ ನಾಗರಿಕ ಸಮಾಜ ಸೇರಿದಂತೆ ದೇಶದ ಪ್ರಜೆಗಳು ಮತ್ತು ಸರ್ಕಾರದ ನಡುವಿನ ಏಕೈಕ ಸಂಪರ್ಕ ಸೇತುವೆಯಾಗಿ ದಿಲ್ಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಬಲಪ್ರಯೋಗ ಮಾತ್ರ ಉಳಿದುಕೊಂಡಿದೆ.

ಸಂಸ್ಥೆಗಳ ಬಾಗಿಲುಗಳನ್ನು ಮುಚ್ಚಿದಾಗ ಮತ್ತು ಪೊಲೀಸರೇ ಸರ್ಕಾರದ ಏಕೈಕ ಪ್ರತಿನಿಧಿಗಳಾದಾಗ, ಹೊಣೆಗಾರಿಕೆಯ ಕುರಿತಾದ ಚರ್ಚೆಯು ಮೋದಿ ಆಡಳಿತದ ಅನಿಯಂತ್ರಿತ ಅಧಿಕಾರ ಬಳಕೆಯ ವಿರುದ್ಧದ ವ್ಯಾಪಕ ಸಂಘರ್ಷವಾಗಿ ಮಾರ್ಪಟ್ಟಿದೆ.

ಇದು ಬಿಜೆಪಿಗೆ ವಿಶೇಷ ಅಪಾಯಗಳನ್ನು ತಂದೊಡ್ಡಿದೆ. ಏಕೆಂದರೆ ಪ್ರಧಾನಿಯಾಗಿ ಮೋದಿಯವರ 13ನೇ ವರ್ಷದಲ್ಲಿ ರಾಜಕೀಯ ಆಯಾಸದ ಭಾವನೆ ಎದ್ದು ಕಾಣುತ್ತಿದೆ. ಜನರ ಸಂಕಷ್ಟಗಳಿಗೆ ತಮ್ಮ ಪೂರ್ವಾಧಿಕಾರಿಗಳನ್ನು ಹೊಣೆ ಮಾಡುತ್ತಾ ನುಣುಚಿಕೊಳ್ಳಲು ಅಥವಾ ತಾವು ವ್ಯವಸ್ಥೆಯ ವಿರೋಧಿ ಎಂಬಂತೆ ನಟಿಸಲು ಅವರಿಗೆ ಇನ್ನು ಸಾಧ್ಯವಿಲ್ಲ. ದಿಲ್ಲಿ ಮತ್ತು ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಹೆಚ್ಚಾಗಿ ನಗರ ಪ್ರದೇಶಗಳಿಂದ ಹಾಗೂ ಸಾಂಪ್ರದಾಯಿಕವಾಗಿ ಬಿಜೆಪಿಯನ್ನು ಬೆಂಬಲಿಸುವ ಕುಟುಂಬಗಳು ಮತ್ತು ಸಾಮಾಜಿಕ ಗುಂಪುಗಳಿಂದ ಬಂದವರಾಗಿದ್ದಾರೆ. ಸರ್ಕಾರದ ಕೇವಲ ದಮನಕಾರಿ ಮುಖವನ್ನು ಅವರು ಎದುರಿಸುತ್ತಿರುವುದು ಮೋದಿಯವರಿಗೆ ತೀವ್ರ ರಾಜಕೀಯ ಹಾನಿಯನ್ನುಂಟುಮಾಡುತ್ತಿದೆ.

ಸಂಸತ್ತಿನಲ್ಲಿ 240 ಸೀಟುಗಳ ಕಡಿತಗೊಂಡ ಬಲದೊಂದಿಗೆ ಆಡಳಿತ ನಡೆಸುತ್ತಿರುವ ಬಿಜೆಪಿಯು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿದೆ.

ಮೋದಿ ಸರ್ಕಾರ ಕಳವಳಗೊಳ್ಳಲು ಏಳು ಕಾರಣಗಳು

1. ನಂಬಿಕಸ್ಥ ಮಿತ್ರಪಕ್ಷಗಳು ಬಿಜೆಪಿಯಿಂದ ದೂರವಾಗುತ್ತಿವೆ

ಬಿಜೆಪಿಗೆ ರಾಜಕೀಯ ಸಂಕಷ್ಟ ಎದುರಾದಾಗಲೆಲ್ಲ ಸದಾ ನೆರವಿಗೆ ಬರುತ್ತಿದ್ದ ವೈಎಸ್ಆರ್ ಕಾಂಗ್ರೆಸ್ ಮತ್ತು ಬಿಜು ಜನತಾದಳದಂತಹ 'ಆಪ್ತ' ರಾಜಕೀಯ ಪಕ್ಷಗಳಿಂದಲೇ ಈಗ ಸರ್ಕಾರಕ್ಕೆ ಆಘಾತಕಾರಿ ಕರೆಗಳು ಬರುತ್ತಿವೆ. ಈ ಪಕ್ಷಗಳು ಈಗ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಜಾಗೆ ಆಗ್ರಹಿಸುತ್ತಿವೆ. ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ 2023ರ ವಿವಾದಾತ್ಮಕ ಕಾಯ್ದೆಯನ್ನು ಬೆಂಬಲಿಸಿದ್ದು ತಾವು ಮಾಡಿದ ತಪ್ಪು ಎಂದು ಜಗನ್ ಮೋಹನ್ ರೆಡ್ಡಿ ಹೇಳುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿದೆ.

ಎಂ.ಕೆ. ಸ್ಟಾಲಿನ್ ಪ್ರತಿಭಟನಾಕಾರರ ಪರವಾಗಿ ನಿಂತಿದ್ದು, ರಾಷ್ಟ್ರಪತಿಯವರನ್ನು ಭೇಟಿಯಾಗಲು ಯೋಜಿಸಿದ್ದಾರೆ ಮತ್ತು ಸಿಇಸಿ (CEC) ವಜಾಗೆ ಒತ್ತಾಯಿಸುತ್ತಿದ್ದಾರೆ. ಡಿಲಿಮಿಟೇಶನ್ ಮಸೂದೆಯ ವಿಚಾರದಲ್ಲಿ ಸರ್ಕಾರವನ್ನು ಬೆಂಬಲಿಸುತ್ತದೆ ಅಥವಾ 'ಕನಿಷ್ಠ ತಟಸ್ಥವಾಗಿರುತ್ತದೆ' ಎಂದು ನಿರೀಕ್ಷಿಸಿದ್ದ ಅದೇ ಸ್ಟಾಲಿನ್, ಈಗ ಆಡಳಿತಾರೂಢ ಪಕ್ಷದ ವಿರುದ್ಧ ಜನರನ್ನು ಸಂಘಟಿಸುತ್ತಿದ್ದಾರೆ.

2. ಎದ್ದು ಕಾಣುತ್ತಿರುವ ಆರ್ಥಿಕ ಅಸಮಾಧಾನ ಮತ್ತು ಹೆಚ್ಚುತ್ತಿರುವ ಆಕ್ರೋಶ

ಬೀದಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳಿಂದ ಉಂಟಾದ ವಾತಾವರಣವನ್ನು ಬದಲಾಯಿಸಲು ಮೋದಿ ಸರ್ಕಾರವು '7.8% ಜಿಡಿಪಿ ಬೆಳವಣಿಗೆ'ಯ ಕಥನವನ್ನು ಬಿಂಬಿಸಲು ಯತ್ನಿಸುತ್ತಿದೆ. ಆದರೆ ಭಾರತೀಯ ಆರ್ಥಿಕತೆಯ ಸುತ್ತಲಿರುವ ನಿರಾಶಾದಾಯಕ ವಾತಾವರಣವು ಸರ್ಕಾರದ ಈ ಪ್ರಯತ್ನವನ್ನು ವಿಫಲಗೊಳಿಸಿದೆ.

ಭದ್ರವಾದ ಉದ್ಯೋಗ ಮತ್ತು ವಾಸ್ತವಿಕ ಆದಾಯದ ಹೆಚ್ಚಳವು ಕಷ್ಟಕರವಾಗಿರುವಾಗ, ಜಿಡಿಪಿ ಬೆಳವಣಿಗೆಯ ಅಂಕಿ-ಅಂಶಗಳು ಜನರಿಗೆ ಯಾವುದೇ ರಾಜಕೀಯ ಭರವಸೆಯನ್ನು ನೀಡುವುದಿಲ್ಲ. ಯುವಜನರಲ್ಲಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಏರುತ್ತಿರುವ ಹಣದುಬ್ಬರ ಮತ್ತು ಸ್ಥಗಿತಗೊಂಡಿರುವ ಗ್ರಾಮೀಣ ವೇತನಗಳು, ಆರ್‌ಬಿಐ (RBI) ಅಳೆಯುವ ಗ್ರಾಹಕರ ಆತ್ಮವಿಶ್ವಾಸವನ್ನು ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ಕೆಳಮಟ್ಟದಲ್ಲೇ ಇರುವಂತೆ ಮಾಡಿವೆ.

ಆದರೆ ಈ ವರ್ಷ ಬಿಜೆಪಿಯ ಸ್ವಂತ ಸಾಮಾಜಿಕ ನೆಲೆಗೂ ಪೆಟ್ಟು ಬೀಳುವ ಸಾಧ್ಯತೆಯಿರುವುದು ವಿಶೇಷ ಕಳವಳಕಾರಿ ಸಂಗತಿಯಾಗಿದೆ. ಜನವರಿಯಿಂದ ಜೂನ್ ನಡುವೆ ಪೋರ್ಟ್‌ಫೋಲಿಯೊ ಮತ್ತು ನೇರ ಹೂಡಿಕೆ ಎರಡರ ರೂಪದಲ್ಲೂ ವಿದೇಶಿ ಬಂಡವಾಳದ ಹೊರಹರಿವು ಸಾರ್ವಕಾಲಿಕ ದಾಖಲೆಯನ್ನು ತಲುಪಿದೆ. ಅಮೆರಿಕದೊಂದಿಗೆ ಉತ್ತಮ ಕಾರ್ಯಕಾರಿ ಬಾಂಧವ್ಯ ಇಲ್ಲದಿರುವುದು ಅನೇಕ ಸುಶಿಕ್ಷಿತ ಭಾರತೀಯರ H-1B ವೀಸಾ ನಿರೀಕ್ಷೆಗಳಿಗೆ ಧಕ್ಕೆ ತಂದಿದೆ. ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ವಿದೇಶಿ ವಿನಿಮಯ ಸಂಗ್ರಹ ಖಾಲಿಯಾಗಿದೆ ಮತ್ತು ಷೇರು ಮಾರುಕಟ್ಟೆ ಅಸ್ಥಿರವಾಗಿ ಉಳಿದಿದ್ದು, ಸಂಕಷ್ಟದಲ್ಲಿ ಸಿಲುಕಿರುವ ಸರ್ಕಾರಕ್ಕೆ ಅಚಾತುರ್ಯದಿಂದ ತಪ್ಪಿಸಿಕೊಳ್ಳಲು ಅಥವಾ ಪರಿಸ್ಥಿತಿ ಸರಿಪಡಿಸಿಕೊಳ್ಳಲು ಕನಿಷ್ಠ ಅವಕಾಶವೂ ಇಲ್ಲದಂತಾಗಿದೆ.

ಭಾರತೀಯ ಜನಸಂಖ್ಯೆಯ ಎರಡೂ ವರ್ಗಗಳು ಆರ್ಥಿಕ ಸಂಕಷ್ಟದ ಹೊರೆಯಿಂದ ಕಂಗಾಲಾಗಿವೆ. ಸರ್ಕಾರದ ಆರ್ಥಿಕ ದುರಾಡಳಿತ ಮತ್ತು ತನ್ನ ಆಪ್ತ ಉದ್ಯಮಿಗಳಿಗೆ ಮಾತ್ರ ಲಾಭ ಮಾಡಿಕೊಡುವ ನೀತಿಯೇ ಈಗ ಬೀದಿಯಲ್ಲಿ ಕಾಣಿಸುತ್ತಿರುವ ಆಕ್ರೋಶ ಮತ್ತು ಅಸಮಾಧಾನಕ್ಕೆ ಮೂಲ ಕಾರಣ ಎಂಬುದನ್ನು ವಾಸ್ತವಿಕ ಪರಿಸ್ಥಿತಿಯನ್ನು ಬಲ್ಲ ಯಾರಾದರೂ ಗ್ರಹಿಸಬಹುದು.

ಸಮಾಜದ ವಿವಿಧ ವರ್ಗಗಳು ಮತ್ತು ರಾಜಕೀಯ ಪಕ್ಷಗಳು ಒಂದಾಗಿ ಕೈಜೋಡಿಸುತ್ತಿರುವ ಕಾರಣ, 'ಗೋ ಪ್ರಧಾನ್' (Go Pradhan) ಹಿಂದಿನ ಪ್ರತಿಭಟನೆಗಳ ಮುಂದುವರಿದ ಭಾಗವಾಗಿ 'ಗೋ ಗ್ಯಾನು' (Go Gyanu) ಪ್ರತಿಭಟನೆಗಳು ಬೆಟ್ಟದ ಮೇಲಿಂದ ಕೆಳಗೆ ಉರುಳುವ ಕಲ್ಲಿನಂತೆ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿವೆ. ವಿರೋಧ ಪಕ್ಷಗಳು, ನಾಗರಿಕ ಸಮಾಜ ಹಾಗೂ 'ಕಾಕ್ರೋಚ್ ಜನತಾ ಪಾರ್ಟಿ' (CJP) ಒಟ್ಟಾಗಿ ಈ ಗೋ ಗ್ಯಾನು ಸಂಘಟನೆಗಾಗಿ ಬಹಿರಂಗವಾಗಿ ಒಂದಾಗಿರುವುದು, ಬೇರೆ ಬೇರೆಯಾಗಿದ್ದ ಜನರ ಅಳಲುಗಳಿಗೆ ಒಂದು ಸಾಮಾನ್ಯ ಗುರಿಯನ್ನು ಒದಗಿಸಿದೆ.

'ವೋಟ್ ಚೋರಿ' (ಮತ ಕಳವು) ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಈ ರೀತಿಯ ಒಮ್ಮುಖವಾಗಿರುವುದು, ಸಾರ್ವಜನಿಕ ಒಪ್ಪಿಗೆಯನ್ನೇ ತನ್ನ ರಾಜಕೀಯ ಪ್ರಾಬಲ್ಯದ ಸಾಕ್ಷಿಯೆಂದು ಬಿಂಬಿಸಿಕೊಂಡು ತಾನು ಸೋಲಲಾರದವನು ಎಂದು ಜನರನ್ನು ನಂಬಿಸಿದ್ದ ಮೋದಿಯವರ ಭ್ರಮೆಯನ್ನು ನುಚ್ಚುನೂರು ಮಾಡಿದೆ.

3. ಸಾರ್ವಜನಿಕ ಭಿನ್ನಮತವು ಅಧಿಕಾರಶಾಹಿಯ ಲೆಕ್ಕಾಚಾರಗಳನ್ನು ಬದಲಾಯಿಸಿದೆ

ನಿರಂತರವಾದ ಪ್ರತಿಭಟನೆಗಳು ಭಾರತದಲ್ಲಿರುವ ಅಧಿಕಾರಿಗಳು ರಾಜಕೀಯ ಮತ್ತು ವೈಯಕ್ತಿಕ ಅಪಾಯಗಳನ್ನು ಅಳೆಯುವ ರೀತಿಯನ್ನೇ ಬದಲಾಯಿಸುತ್ತವೆ. ಅದೇ ಸರ್ಕಾರವು ಅನಂತ ಕಾಲದವರೆಗೆ ಅಧಿಕಾರದಲ್ಲಿರುತ್ತದೆ ಎಂದು ನಂಬುವ ಅಧಿಕಾರಶಾಹಿಯು ಒಂದು ರೀತಿಯ ಧೋರಣೆಯನ್ನು ಹೊಂದಿರುತ್ತದೆ. ಆದರೆ ಆಡಳಿತ ಬದಲಾಗಬಹುದು ಎಂದು ನಿರೀಕ್ಷಿಸುವ ಅಧಿಕಾರಿಗಳು, ಇಂದು ತಾವು ತೆಗೆದುಕೊಳ್ಳುವ ನಿರ್ಧಾರಗಳು ಮುಂದೊಂದು ದಿನ ಕಠಿಣ ತನಿಖೆ ಅಥವಾ ಪರಿಶೀಲನೆಗೆ ಒಳಪಡಲಿವೆ ಎಂಬುದನ್ನು ಅರಿಯುತ್ತಾರೆ.

ಜೂನ್‌ ನಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳ ಬಳಿಕ (ಯೋಗೇಂದ್ರ ಯಾದವ್ ಅವರು ಇದನ್ನು 'ಜುಲೈ ಕ್ರಾಂತಿ' ಎಂದು ಕರೆದಿದ್ದಾರೆ) ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕೆಳಗಿಳಿಸಿರುವುದು ಭಾರತದ ಉಕ್ಕಿನ ಚೌಕಟ್ಟಿನಂತಿರುವ ಅಧಿಕಾರಶಾಹಿಯನ್ನು ಬೆಚ್ಚಿಬೀಳಿಸಿದೆ. ಇದು 'ಆಡಳಿತ ಬದಲಾವಣೆ'ಯ ಸಾಧ್ಯತೆಯನ್ನು ಮತ್ತು ಈಗ ತೆಗೆದುಕೊಳ್ಳುತ್ತಿರುವ ಅಧಿಕೃತ ನಿರ್ಧಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಹೊಸ ರಾಜಕೀಯ ನಾಯಕತ್ವವು ಲೆಕ್ಕ ಕೇಳಲಿದೆ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ಮೂಡಿಸಿದೆ.

ಚುನಾವಣಾ ಆಯೋಗದೊಳಗಿನ ಗಂಭೀರ ಭಿನ್ನಾಭಿಪ್ರಾಯಗಳ ಕುರಿತಾದ ವರದಿಯು 'ಇಂಡಿಯನ್ ಎಕ್ಸ್‌ಪ್ರೆಸ್‌'ನಂತಹ ಪತ್ರಿಕೆಯಲ್ಲಿ ಪ್ರಕಟವಾಗಿರುವುದು, ಮೋದಿ ಅವರ ಸಂಪೂರ್ಣ ನಿಯಂತ್ರಣದಲ್ಲಿದ್ದ ಮತ್ತು ಗುಪ್ತಚರ ಮಾಹಿತಿ ಸೋರಿಕೆಯಾಗದ ವ್ಯವಸ್ಥೆಯಲ್ಲಿ ದೊಡ್ಡ ಬಿರುಕು ಬಿಟ್ಟಿದೆ ಎಂಬುದರ ಸಂಕೇತವಾಗಿದೆ. ಇದು ಅಧಿಕಾರಿಗಳು ಈಗ ಯಾವುದೇ ಸರ್ವಾಧಿಕಾರಿ ಸರ್ಕಾರದ ಬೆದರಿಕೆಗೆ ಹೆದರದೆ, ಸಾಮಾನ್ಯ ಸರ್ಕಾರಗಳ ಕಾಲದಲ್ಲಿ ವರ್ತಿಸುವಂತೆ ಪತ್ರಿಕೆಗಳಿಗೆ ಸೂಕ್ಷ್ಮ ಹಾಗೂ ಹಾನಿಕಾರಕ ಮಾಹಿತಿಗಳನ್ನು ಸೋರಿಕೆ ಮಾಡುವ ಮೂಲಕ ತಮ್ಮ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.

ಅಮೆರಿಕ ಸರ್ಕಾರವು ಮೋದಿ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಮುಖಭಂಗ ಉಂಟುಮಾಡುತ್ತಿರುವುದರಿಂದ, ಈ ನಿರೂಪಣೆಯ ಮೇಲಿನ ನಿಯಂತ್ರಣವು 'ಮಡಿಲು ಮಾಧ್ಯಮ' ಮತ್ತು ಸರ್ಕಾರದ ಕೈಯಿಂದ ಸಂಪೂರ್ಣವಾಗಿ ಜಾರಿಹೋಗಿದೆ. ತಮ್ಮ ಮಕ್ಕಳು ಮತ್ತು ಮಕ್ಕಳನ್ನು ನೋಡಿಕೊಳ್ಳುವವರೊಂದಿಗೆ ಬಂದಿದ್ದ ಎಲಾನ್ ಮಸ್ಕ್ ಅವರನ್ನು ನಮ್ಮ ದೇಶದ ಭದ್ರತೆಯ ಉನ್ನತ ಅಧಿಕಾರಿಗಳು ಭೇಟಿಯಾಗಿದ್ದರು. ಆದರೆ ಈಗ ಅದೇ ಮಸ್ಕ್, ಭಾರತದಲ್ಲಿ ಅಂಬಾನಿಯೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಭಾರತವನ್ನು ಗೇಲಿ ಮಾಡುತ್ತಿದ್ದಾರೆ. ಮಾರ್ಕೊ ರೂಬಿಯೊ ಅವರು ಜಾಮ್‌ನಗರಕ್ಕೆ ಭೇಟಿ ನೀಡಿರುವುದು ಮತ್ತು ಮುಂಬೈನಲ್ಲಿ ಜೈಶಂಕರ್ ಅವರನ್ನು ಭೇಟಿಯಾಗುವುದಾಗಿ ಅಮೆರಿಕದ ರಾಯಭಾರಿ ಘೋಷಿಸಿರುವುದು ಕಾರ್ಯತಂತ್ರದ ಸಾರ್ವಭೌಮತ್ವವನ್ನಲ್ಲ, ಬದಲಿಗೆ ರಾಜತಾಂತ್ರಿಕ ಶರಣಾಗತಿಯನ್ನು ಸ್ಪಷ್ಟಪಡಿಸುತ್ತದೆ.

4. ಬಿಜೆಪಿಯ ಸಾಂಸ್ಥಿಕ ಕಬಳಿಕೆಯು ಜನಸಾಮಾನ್ಯರ ರಾಜಕೀಯದ ಭಾಗವಾಗಿದೆ

ಸಾಂಸ್ಥಿಕ ಸ್ವಾತಂತ್ರ್ಯದ ಕುರಿತಾದ ಪ್ರಶ್ನೆಗಳು ಕೇವಲ ನ್ಯಾಯಾಲಯಗಳು, ತಜ್ಞರ ವಿಶ್ಲೇಷಣೆಗಳು ಮತ್ತು ಸಂಸತ್ ಪ್ರಕ್ರಿಯೆಗಳಿಗೆ ಮಾತ್ರ ಸೀಮಿತವಾಗಿದ್ದಾಗ ಬಿಜೆಪಿಗೆ ಲಾಭವಾಗುತ್ತಿತ್ತು. ಆದರೆ ಅದೇ ಪ್ರಶ್ನೆಗಳು ಚರ್ಚೆಗಳು ಮತ್ತು ಬೀದಿ ಪ್ರತಿಭಟನೆಗಳ ಮೂಲಕ ಜನಸಾಮಾನ್ಯರನ್ನು ತಲುಪಿದಾಗ, ಅದು ಸಂಪೂರ್ಣ ಭಿನ್ನವಾದ ಸವಾಲನ್ನು ತಂದೊಡ್ಡುತ್ತದೆ.

ಮಾಹಿತಿಯ ಮೂಲವಾಗಿ ಸಾಂಪ್ರದಾಯಿಕ ದೂರದರ್ಶನಕ್ಕಿಂತ ಸಾಮಾಜಿಕ ಮಾಧ್ಯಮಗಳೇ ಪ್ರಮುಖವಾಗಿವೆ ಎಂಬುದನ್ನು ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಮತ್ತು ರಾಯ್ಟರ್ಸ್-ಆಕ್ಸ್‌ಫರ್ಡ್ ಸಮೀಕ್ಷೆಗಳು ಖಚಿತಪಡಿಸಿವೆ. 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಮತ್ತು ಬಳಿಕ ನಡೆಸಿದ ಸಮೀಕ್ಷೆಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಪ್ರತಿಕ್ರಿಯಿಸಿದವರು ಮುಖ್ಯವಾಗಿ ಡಿಜಿಟಲ್ ವೇದಿಕೆಗಳನ್ನೇ ನೆಚ್ಚಿಕೊಂಡಿದ್ದಾರೆ.

ಸುದ್ದಿ ಚಾನೆಲ್‌ಗಳ ಪಕ್ಷಪಾತದ ಚರ್ಚೆಗಳಿಂದ ಸೂಕ್ತ ಮಾಹಿತಿ ಸಿಗದೆ ಕಷ್ಟಪಡುತ್ತಿದ್ದ ಜನರಿಗೆ, ಸಾಮಾಜಿಕ ಮಾಧ್ಯಮಗಳ ವಿಶ್ಲೇಷಣೆಗಳು, ಸ್ವತಂತ್ರ ವರದಿಗಳು ಮತ್ತು ರಾಜಕೀಯ ಕಾಮೆಂಟರಿಗಳು ಬಿಜೆಪಿಯ ಸಂಪೂರ್ಣ ಸಾಂಸ್ಥಿಕ ಕಬಳಿಕೆಯ ಗುರಿಯನ್ನು (ಅಂದರೆ ಪ್ರಜೆಗಳ ಹಕ್ಕುಗಳನ್ನು ಕಸಿದುಕೊಂಡು ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ತನ್ನ ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುವ ನೀತಿಯನ್ನು) ಅರ್ಥಮಾಡಿಕೊಳ್ಳಲು ಸಹಾಯ ಮಾಡಿವೆ.

ಪತ್ರಕರ್ತ ರವಿ ಶಂಕರ್ ಅವರು ಹೇಳುವಂತೆ, 'ಭಯ-ಭಕ್ತಿಯ ಕಾಲ ಮುಗಿದಿದೆ' (fall of awe). ಇದರರ್ಥ ಈಗ ಯಾವುದೇ ಸಂಸ್ಥೆಯನ್ನು ಸಾರ್ವಜನಿಕ ವಿಮರ್ಶೆಗೂ ಮೀರಿದ ಪೂಜನೀಯ ಸಂಸ್ಥೆ ಎಂದು ಪರಿಗಣಿಸಲಾಗುವುದಿಲ್ಲ. ಇತ್ತೀಚಿನ ಪ್ರತಿಭಟನೆಗಳು ನೇರವಾಗಿ ಚುನಾವಣಾ ಆಯೋಗದ ವಿರುದ್ಧವೇ ನಡೆಯುತ್ತಿವೆ. 15 ವರ್ಷಗಳ ಹಿಂದೆ ಇದೊಂದು ಸ್ಪರ್ಶಿಸಲಾಗದ ವಿಷಯವಾಗಿತ್ತು. 'ಕಾಕ್ರೋಚ್' ಎಂಬ ಪದವು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ಚರ್ಚೆಗಳಿಂದಲೇ ಹುಟ್ಟಿಕೊಂಡಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ನಡೆಸಿದ ಮೆರವಣಿಗೆಯು ನ್ಯಾಯಾಂಗಕ್ಕೆ ಪರೋಕ್ಷವಾಗಿ ಸವಾಲು ಒಡ್ಡಿದೆ. ನ್ಯಾಯಾಂಗವು ಸರ್ಕಾರದ ಮಾತನ್ನು ಕೇಳುವ ಸಂಸ್ಥೆಯಾಗದೆ, ನ್ಯಾಯ ಒದಗಿಸುವ ನಿಜವಾದ ಪಾತ್ರವನ್ನು ವಹಿಸಬೇಕು ಎಂದು ಈ ಪ್ರತಿಭಟನೆಗಳು ಒತ್ತಾಯಿಸುತ್ತಿವೆ.

ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ, ಚುನಾವಣಾ ಆಡಳಿತ ಅಥವಾ ನ್ಯಾಯಾಂಗದ ಹೊಣೆಗಾರಿಕೆಯಂತಹ ತಾಂತ್ರಿಕ ಹಾಗೂ ಸಂಕೀರ್ಣ ವಿಷಯಗಳು, ಪ್ರಜೆಗಳು ತಮ್ಮ ದಿನನಿತ್ಯದ ಜೀವನದಲ್ಲಿ ಗುರುತಿಸುವ 'ನ್ಯಾಯ' ಮತ್ತು 'ಸಮಾನತೆ'ಯ ಕುರಿತಾದ ಚರ್ಚೆಯಾಗಿ ಮಾರ್ಪಟ್ಟಿದ್ದನ್ನು ಬಿಜೆಪಿ ನಿರೀಕ್ಷಿಸಿರಲಿಲ್ಲ. ಈ ಭಾವನಾತ್ಮಕ ಸಂಪರ್ಕವು ವಿರೋಧ ಪಕ್ಷಗಳ ರಾಜಕೀಯಕ್ಕೆ ಬೀದಿಗಳಲ್ಲಿ ಹೆಚ್ಚಿನ ಜನಬೆಂಬಲ ಮತ್ತು ವಿಶ್ವಾಸಾರ್ಹತೆಯನ್ನು ತಂದುಕೊಟ್ಟಿದೆ.

5. ಬಿಜೆಪಿಯ 'MY' (ಮಹಿಳಾ ಮತ್ತು ಯುವ) ಮತಬ್ಯಾಂಕ್ ಪ್ರತಿಪಾದನೆ ಮೌಲ್ಯ ಕಳೆದುಕೊಂಡಿದೆ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರು ಮತ್ತು ಯುವಜನರು ತಮ್ಮ ನಿಷ್ಠಾವಂತ ಮತದಾರರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೂಲಕ ಬಿಜೆಪಿ ತನ್ನ 'ಎಂ-ವೈ' (MY) ಮತಬ್ಯಾಂಕ್ ಆಧಾರದ ಮೇಲೆ ಆತ್ಮವಿಶ್ವಾಸ ವ್ಯಕ್ತಪಡಿಸಿತ್ತು. ಈ ವರ್ಷದ ಆರಂಭದಲ್ಲಿ, ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಯನ್ನು ಖಾತರಿಪಡಿಸುವ ಮಸೂದೆಯಾಗಿ ಡಿಲಿಮಿಟೇಶನ್ ಮಸೂದೆಯನ್ನು ಬಿಂಬಿಸಲು ಮಾಡಿದ ತೀವ್ರ ಯತ್ನಗಳು ಸಾರ್ವಜನಿಕರ ಗಮನ ಸೆಳೆಯುವಲ್ಲಿ ವಿಫಲವಾದವು. ಮಸೂದೆಯು ಮಹಿಳಾ ಸಬಲೀಕರಣಕ್ಕಾಗಿ ಎಂದು ಎಷ್ಟೇ ಪತ್ರಿಕಾಗೋಷ್ಠಿಗಳನ್ನು ನಡೆಸಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿದರೂ, ಮಸೂದೆಯು ಅಂಗೀಕಾರವಾಗಲಿಲ್ಲ ಮತ್ತು ಸರ್ಕಾರದ ಆ ಪ್ರಚಾರವೂ ಯಶಸ್ವಿಯಾಗಲಿಲ್ಲ.

ಇನ್ನು 'ಯುವಜನತೆ'ಯ ವಿಷಯಕ್ಕೆ ಬಂದರೆ, ಭಾರತದಲ್ಲಿ 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ತರಬೇತಿ ಇಲ್ಲದೆ 'ನೀಟ್' (NEET — Not in Education, Employment or Training) ವರ್ಗಕ್ಕೆ ಸೇರುತ್ತಾರೆ ಎಂದು ನೀತಿ ಆಯೋಗವೇ ಅಂದಾಜಿಸಿದೆ. ಕೇವಲ ಯುವಜನರ ಸಂಖ್ಯೆ ಹೆಚ್ಚಿದ್ದ ತಕ್ಷಣವೇ ಅವರೆಲ್ಲರೂ ಒಂದೇ ರಾಜಕೀಯ ಗುರುತನ್ನು ಪಡೆದುಕೊಳ್ಳುವುದಿಲ್ಲ. ಏಕೆಂದರೆ ಭಾರತೀಯರು ಜಾತಿ, ವರ್ಗ, ಲಿಂಗ, ಪ್ರದೇಶ, ಭಾಷೆ ಮತ್ತು ಅವಕಾಶಗಳ ಆಧಾರದ ಮೇಲೆ ಭಿನ್ನವಾಗಿದ್ದಾರೆ. ಆದರೆ ಉದ್ಯೋಗ ನೇಮಕಾತಿಗಳ ರದ್ದತಿ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಭದ್ರತೆಯಿಲ್ಲದ ಕೆಲಸಗಳು ಮತ್ತು ಮೋದಿ ಆಡಳಿತದಲ್ಲಿ ಪೊಲೀಸರಿಂದ ಎದುರಾದ ಬಲಪ್ರಯೋಗದಂತಹ ಹಂಚಿಕೊಂಡ ಅನುಭವಗಳು, ಇಲ್ಲದಿದ್ದರೆ ರಾಜಕೀಯವಾಗಿ ಪ್ರತ್ಯೇಕವಾಗಿಯೇ ಉಳಿಯುತ್ತಿದ್ದ ವಿವಿಧ ಗುಂಪುಗಳನ್ನು ಒಂದಾಗಿ ಜೋಡಿಸಿವೆ.

ವಿಶ್ವಸಂಸ್ಥೆಯ ಜನಸಂಖ್ಯಾ ಮುನ್ಸೂಚನೆಗಳ ಪ್ರಕಾರ, 2029ರ ವೇಳೆಗೆ ಭಾರತದ 'Gen Z' (18ರಿಂದ 32 ವರ್ಷದೊಳಗಿನ ಯುವಜನತೆ) ಸಂಖ್ಯೆ ಸುಮಾರು 38 ಕೋಟಿಗೆ ತಲುಪಬಹುದು. ಇದು ಮಿಲೇನಿಯಲ್‌ಗಳನ್ನು ಹಿಂದಿಕ್ಕಿ ಭಾರತದ ಅತ್ಯಂತ ದೊಡ್ಡ ವಯಸ್ಕ ತಲೆಮಾರಾಗಲಿದ್ದು, 2029ರ ವೇಳೆಗೆ ಒಟ್ಟು ವಯಸ್ಕ ಜನಸಂಖ್ಯೆಯ ಶೇಕಡಾ 25ರಷ್ಟಾಗಲಿದೆ. ಬೀದಿಗಳಲ್ಲಿ ಯುವಜನರ ಎದ್ದು ಕಾಣುವ ಉಪಸ್ಥಿತಿ ಮತ್ತು ಅವರ ಮೇಲಿನ ದಮನಕಾರಿ ಪೊಲೀಸ್ ನಡವಳಿಕೆಯು ಬಿಜೆಪಿಯ 'ಎಂ-ವೈ' ಕಲ್ಪನೆಯನ್ನು ಸದ್ಯಕ್ಕೆ ತಲೆಕೆಳಗಾಗಿಸಿದೆ. ಯುವಕರು ಮತ್ತು ಮಹಿಳೆಯರು ಸರ್ಕಾರವನ್ನು ಕೇವಲ ರಸ್ತೆ ತಡೆಗಳು, ಇಂಟರ್ನೆಟ್ ಸ್ಥಗಿತ ಹಾಗೂ ಪೊಲೀಸ್ ಕಾರ್ಯಾಚರಣೆಗಳ ಮೂಲಕವೇ ಎದುರಿಸಬೇಕಾಗಿ ಬಂದಾಗ, ಅವರ ಆಶೋತ್ತರಗಳನ್ನು ಪ್ರತಿನಿಧಿಸುತ್ತೇವೆ ಎಂಬ ಬಿಜೆಪಿಯ ಪ್ರತಿಪಾದನೆಗೆ ತಾನೇ ಹಾನಿ ಮಾಡಿಕೊಂಡಂತಾಗಿದೆ.

6. ವ್ಯಾಪಕ ಯುವ ರಾಜಕೀಯವನ್ನು ಒಳಗೊಂಡ ದೀಪ್ಕೆಯವರ ದಲಿತ ಗುರುತು ಹೊಸ ಸವಾಲಾಗಿದೆ

ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆಯವರ ದಲಿತ ಗುರುತು ಬಿಜೆಪಿಗೆ ಹೊಸ ಮತ್ತು ಪ್ರಬಲವಾದ ಸವಾಲನ್ನು ಒಡ್ಡಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಗೌರವಿಸುವ ಹೆಮ್ಮೆಯ ದಲಿತರಾಗಿ ಸಾಮಾಜಿಕ ಪ್ರಾತಿನಿಧ್ಯವನ್ನು ನೀಡುವುದರ ಜೊತೆಗೆ, ಯುವಜನರಿಗಾಗಿ ಶಿಕ್ಷಣ, ಉದ್ಯೋಗ ಮತ್ತು ಸಾಂಸ್ಥಿಕ ಹೊಣೆಗಾರಿಕೆಯಂತಹ ವಿಶಾಲವಾದ ಕಾರ್ಯಸೂಚಿಯನ್ನು ಒಟ್ಟುಗೂಡಿಸುವ ಅವರ ಸಾಮರ್ಥ್ಯದಲ್ಲಿ ಈ ಸವಾಲಿದೆ.

ಮಾಯಾವತಿ, ರಾಮದಾಸ್ ಅಠಾವಳೆ, ಜಿತನ್ ರಾಮ್ ಮಾಂಝಿ, ಚಿರಾಗ್ ಪಾಸ್ವಾನ್, ಚಂದ್ರಶೇಖರ್ ಆಜಾದ್ ಅವರಂತಹ ನಾಯಕರೊಂದಿಗೆ ಮೈತ್ರಿ, ಹೊಂದಾಣಿಕೆ ಅಥವಾ ಚುನಾವಣಾ ಸ್ಪರ್ಧೆಯ ಮೂಲಕ ಕೇವಲ ಗುರುತಿನ ರಾಜಕೀಯಕ್ಕಷ್ಟೇ ಸೀಮಿತರಾದ ದಲಿತ ನಾಯಕರನ್ನು ಎದುರಿಸಿ ಬಿಜೆಪಿಗೆ ಅಭ್ಯಾಸವಿದೆ. ಆದರೆ ಅಂತಹ ಚೌಕಟ್ಟುಗಳ ಆಚೆಗೆ ರೂಪುಗೊಳ್ಳುತ್ತಿರುವ ಯುವ ನಾಯಕತ್ವವನ್ನು ನಿರ್ವಹಿಸುವುದು ಬಿಜೆಪಿಗೆ ಕಷ್ಟಕರವಾಗಿದೆ. ಏಕೆಂದರೆ ದೀಪ್ಕೆಯವರ ರಾಜಕೀಯವು ಅವರ ಸಾಮಾಜಿಕ ಗುರುತಿನಿಂದ ಬೆಂಬಲಿತವಾಗಿದ್ದರೂ, ಅದನ್ನೂ ಮೀರಿ ದಲಿತರ ಕಾಳಜಿಗಳನ್ನು ಶಿಕ್ಷಣ ಮತ್ತು ಉದ್ಯೋಗದ ಕುರಿತಾದ ಯುವಜನರ ಅಸಮಾಧಾನದೊಂದಿಗೆ ಜೋಡಿಸುತ್ತದೆ.

ಇದು BJP-RSSಗೆ ಬಹಳ ಕಾಲದಿಂದ ಇರುವ ಎರಡು ಮುಜುಗರದ ಸಂಗತಿಗಳಾದ ಹಿಂದುತ್ವ ಸಿದ್ಧಾಂತದೊಳಗೆ ದಲಿತರ ಸ್ಥಾನ ಮತ್ತು ಉದ್ಯೋಗ ಹಾಗೂ ಶಿಕ್ಷಣದ ವಿಷಯದಲ್ಲಿ ಮೋದಿಯವರ ದುರ್ಬಲತೆಯನ್ನು ಸ್ಪರ್ಶಿಸುತ್ತದೆ.

ದೀಪ್ಕೆಯವರು ತಮ್ಮ ಸಾಮಾಜಿಕ ಸ್ಥಾನದಿಂದ ಬರುವ ಬೆಂಬಲವನ್ನು ಉಳಿಸಿಕೊಂಡೇ, ಜಾತಿ ಮತ್ತು ವರ್ಗಗಳನ್ನು ಮೀರಿದ ಗಟ್ಟಿ ಒಕ್ಕೂಟವನ್ನು ನಿರ್ಮಿಸುವ ಸಾಮರ್ಥ್ಯವನ್ನು ತೋರಿಸಿದ್ದಾರೆ. ಸಾಮಾಜಿಕ ನ್ಯಾಯದ ರಾಜಕೀಯವನ್ನು ಉದ್ಯೋಗ, ಶಿಕ್ಷಣ ಮತ್ತು ಸಾಂಸ್ಥಿಕ ನ್ಯಾಯದ ಕುರಿತಾದ ಸಾರ್ವಜನಿಕ ಅಸಮಾಧಾನಗಳೊಂದಿಗೆ ಜೋಡಿಸುವ ಮೂಲಕ, ಅವರು ಬಿಜೆಪಿಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ದೌರ್ಬಲ್ಯಗಳನ್ನು ಒಟ್ಟಿಗೇ ಎದುರಿಸುವಂತೆ ಮಾಡುತ್ತಿದ್ದಾರೆ. ಇದರ ರಾಜಕೀಯ ಮತ್ತು ಚುನಾವಣಾ ಮಹತ್ವವು ಅವರ ಸಂಘಟನೆ, ತಲುಪುವಿಕೆ ಮತ್ತು ಸ್ಥಿರತೆಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಬಿಜೆಪಿ ಸದ್ಯಕ್ಕೆ ಈ ಬೆಳವಣಿಗೆಗೆ ಸಿದ್ಧವಾಗಿಲ್ಲದಂತೆ ಕಾಣುತ್ತಿದೆ.

7. ಬೀದಿ ಹೋರಾಟಗಳಿಂದ ರೂಪುಗೊಂಡ ಪಕ್ಷಕ್ಕೆ ಅದರ ಶಕ್ತಿ ತಿಳಿದಿರುತ್ತದೆ

1980ರ ದಶಕದ ಮಧ್ಯಭಾಗದಿಂದ 1990ರ ದಶಕದವರೆಗೆ ಬೀದಿ ಹೋರಾಟಗಳ ಮೂಲಕವೇ ರಾಜಕೀಯ ಅಧಿಕಾರಕ್ಕೆ ಬಂದ ಪಕ್ಷ ಬಿಜೆಪಿಯಾಗಿದೆ. ಆ ಅವಧಿಯಲ್ಲಿ ಹಿಂದುತ್ವದ ಅಲೆಯು ಗಟ್ಟಿಯಾದ ಮತ್ತು ನಿಷ್ಠಾವಂತ ಮತದಾರರ ನೆಲೆಗೆ ಬುನಾದಿಯಾಯಿತು. ಇದು ಇಂದಿಗೂ ಪಕ್ಷಕ್ಕೆ ಆಧಾರವಾಗಿದೆ.

ತನ್ನ ನಿಯಂತ್ರಣದಲ್ಲಿಲ್ಲದ ಎಲ್ಲ ಜನಪರ ಹೋರಾಟಗಳನ್ನು ಹತ್ತಿಕ್ಕುವ ಮತ್ತು ಅಡಗಿಸುವ ಅದರ ಬಯಕೆಯನ್ನು ಇದು ವಿವರಿಸುತ್ತದೆ. ಬೀದಿ ಹೋರಾಟಗಳು ಮತ್ತು ಸಾರ್ವಜನಿಕ ಪ್ರತಿಭಟನೆಗಳು ಚುನಾವಣಾ ಫಲಿತಾಂಶ ಬರುವ ಮೊದಲೇ ಹೊಸ ನಾಯಕರನ್ನು ಸೃಷ್ಟಿಸಬಹುದು, ಜನರ ಅಳಲುಗಳನ್ನು ಜೋಡಿಸಬಹುದು ಮತ್ತು ರಾಜಕೀಯ ಚರ್ಚೆಯ ದಿಕ್ಕನ್ನೇ ಬದಲಾಯಿಸಬಹುದು ಎಂಬುದು ಆ ಪಕ್ಷಕ್ಕೆ ಚೆನ್ನಾಗಿ ತಿಳಿದಿದೆ. ಹೀಗಾಗಿ, ಸತತ 13ನೇ ವರ್ಷದಲ್ಲಿ ಮತ್ತೊಂದು ಯುವಜನ ನೇತೃತ್ವದ ಚಳವಳಿಯು ಹಿಂದುತ್ವ ಆಡಳಿತವನ್ನು ಎದುರಿಸುತ್ತಿರುವುದನ್ನು ನೋಡಿ ನಾಗ್ಪುರ ಮತ್ತು ದಿಲ್ಲಿಯಲ್ಲಿ ಆತಂಕ ಹುಟ್ಟಿಕೊಳ್ಳುವುದು ಸಹಜವೇ ಆಗಿದೆ.

ಮೋದಿ ಸರ್ಕಾರದ ಪ್ರತಿಕ್ರಿಯೆಯಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ, ಈಗಿನ ಪ್ರತಿಭಟನೆಗಳು ಮತ್ತಷ್ಟು ವಿಸ್ತರಿಸಿ ಬಲಗೊಳ್ಳಲಿವೆ. ರಾಜಕೀಯವಾಗಿ ಮಾತುಕತೆ ನಡೆಸಲು ನಿರಾಕರಿಸುವುದು, ಭಿನ್ನಮತವನ್ನು ದೇಶದ್ರೋಹದಂತೆ ಕಾಣುವುದು ಮತ್ತು ರಾಜ್ಯದ ಬಲಪ್ರಯೋಗವನ್ನು ಅವಲಂಬಿಸುವ ಹಠಮಾರಿ ಧೋರಣೆಯು ಬೇರೆ ಬೇರೆ ಗುಂಪುಗಳಿಗೆ ಬಿಜೆಪಿಯನ್ನೇ ಸಾಮಾನ್ಯ ಶತ್ರುವನ್ನಾಗಿ ಮಾಡುತ್ತದೆ. ಅಲ್ಲದೆ, ಅವುಗಳನ್ನು ಒಗ್ಗೂಡಿಸಲು ಹೊಸ ಹೊಸ ವಿಷಯಗಳು ಪ್ರಮುಖ ಕಾರಣಗಳಾಗಿ ಮುನ್ನೆಲೆಗೆ ಬರುತ್ತವೆ.

'ಆಡಳಿತ ಬದಲಾವಣೆ'ಯ ಭೂತವನ್ನು ಬಿತ್ತುವ ಮೂಲಕ ಬಿಜೆಪಿಯೇ ಪಂಥಾಹ್ವಾನದ ಮಟ್ಟವನ್ನು ಹೆಚ್ಚಿಸಿಕೊಂಡಿದೆ. ಇದು ಪ್ರಜಾಪ್ರಭುತ್ವದ ಹೊಣೆಗಾರಿಕೆಯ ಬೇಡಿಕೆಗಳನ್ನು ತನ್ನ ರಾಜಕೀಯ ಅಸ್ತಿತ್ವದ ಪರೀಕ್ಷೆಯನ್ನಾಗಿ ಪರಿವರ್ತಿಸಿದೆ ಮತ್ತು ತಮ್ಮ ಸಾಮೂಹಿಕ ಶಕ್ತಿಯು ಎಷ್ಟು ದೂರದವರೆಗೆ ತಲುಪಬಲ್ಲುದು ಎಂಬುದನ್ನು ಕಂಡುಕೊಳ್ಳಲು ಭಾರತೀಯ ಯುವಕರಿಗೆ ಪ್ರಚೋದನೆ ನೀಡಿದೆ.

ಸೌಜನ್ಯ: The Wire

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor