ಸಾಂದರ್ಭಿಕ ಚಿತ್ರ  (Photo: The Indian Express)

ಅರುಣಾಚಲ ಪ್ರದೇಶದ ಮಂಡಲ–ಫುದುಂಗ್–ಖೆಲ್ಲಾಂಗ್ ಪ್ರದೇಶದಲ್ಲಿ ‘ಖಾಗಿ’ಗೆ ಸುದೀರ್ಘ ಇತಿಹಾಸವಿದೆ. ಮೋಂಪಾ ಸಮುದಾಯದ ಜನರ ಪಾಲಿಗೆ ಇದು ಆರ್ಥಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನೂ ಹೊಂದಿದೆ.

ಅರುಣಾಚಲ ಪ್ರದೇಶದ ಸ್ಥಳೀಯ ಸಮುದಾಯಗಳ ಅಡುಗೆಮನೆಗಳಲ್ಲಿ ‘ಖಾಗಿ’ ಬಹುಕಾಲದಿಂದ ಬಳಕೆಯಲ್ಲಿದೆ. ‘ಝಾಂಥೋಕ್ಸೈಲಮ್’ (Zanthoxylum) ಪ್ರಭೇದಕ್ಕೆ ಸೇರಿದ ಸಸ್ಯದ ಸ್ಥಳೀಯ ಹೆಸರೇ ಖಾಗಿ. ಇದರ ತೀಕ್ಷ್ಣವಾದ ಲಿಂಬೆ ಸುವಾಸನೆ ಮತ್ತು ನಾಲಿಗೆಯನ್ನು ಝುಮ್ಮೆನ್ನಿಸುವ ರುಚಿ ಮಾಂಸದ ಸಾರು, ಚಟ್ನಿ ಸೇರಿದಂತೆ ಸ್ಥಳೀಯ ಖಾದ್ಯಗಳಿಗೆ ವಿಶೇಷ ರುಚಿ ನೀಡುತ್ತದೆ. ಪಶ್ಚಿಮ ಕಾಮೆಂಗ್ ಜಿಲ್ಲೆಯ ಗ್ರಾಮಸ್ಥರಿಗೆ ತಲೆಮಾರುಗಳಿಂದ ಪರಿಚಿತವಾಗಿರುವ ಈ ಮಸಾಲೆ ಈಗ ಆದಾಯದ ಮೂಲವಾಗಿಯೂ ಬದಲಾಗಿದೆ.

ಮಂಡಲ–ಫುದುಂಗ್–ಖೆಲ್ಲಾಂಗ್ ಪ್ರದೇಶದಲ್ಲಿ ಖಾಗಿಗೆ ಸುದೀರ್ಘ ಇತಿಹಾಸವಿದೆ. ಮೋಂಪಾ ಸಮುದಾಯದ ಜನರ ಪಾಲಿಗೆ ಇದು ಆರ್ಥಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನೂ ಹೊಂದಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ, ಖಾಗಿಯನ್ನು ತವಾಂಗ್ ಮಠಕ್ಕೆ ತೆರಿಗೆ ಅಥವಾ ಕಾಣಿಕೆಯ ರೂಪದಲ್ಲಿ ನೀಡಲಾಗುತ್ತಿತ್ತು.

ಉತ್ತಮ ಗುಣಮಟ್ಟದ ಖಾಗಿ ಉತ್ಪಾದಿಸುವ ಪ್ರದೇಶವೆಂಬ ಖ್ಯಾತಿ ಹೊಂದಿದ್ದರೂ, ಇದರ ಮಾರಾಟ ಬಹುತೇಕ ಅನೌಪಚಾರಿಕವಾಗಿಯೇ ಉಳಿದಿತ್ತು. “ಪ್ರತಿಯೊಂದು ಕುಟುಂಬವೂ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ವಿವಿಧ ಭಾಗಗಳಿಂದ ಬರುತ್ತಿದ್ದ ವ್ಯಾಪಾರಿಗಳೊಂದಿಗೆ ನೇರವಾಗಿ ವ್ಯವಹರಿಸುತ್ತಿತ್ತು. ಸಾಮಾನ್ಯವಾಗಿ ಬೆಲೆಯ ಬಗ್ಗೆಯೂ ತಾವೇ ಮಾತುಕತೆ ನಡೆಸುತ್ತಿದ್ದರು” ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

ಈ ವ್ಯವಸ್ಥೆಗೆ ತನ್ನದೇ ಆದ ಮಿತಿಗಳಿದ್ದವು. ಕುಟುಂಬಗಳು ಸ್ವತಃ ಖರೀದಿದಾರರನ್ನು ಹುಡುಕಬೇಕಿತ್ತು. ಕೆಲವೊಮ್ಮೆ ಮಾರುಕಟ್ಟೆಗಳಿಗೆ ತೆರಳಬೇಕಿತ್ತು ಮತ್ತು ಸಾರಿಗೆ ವೆಚ್ಚವನ್ನೂ ಭರಿಸಬೇಕಿತ್ತು. ಸ್ವತಂತ್ರವಾಗಿ ಮಾರಾಟ ಮಾಡುವುದರಿಂದ ಕೆಲವೊಮ್ಮೆ ಹೆಚ್ಚಿನ ಬೆಲೆ ಸಿಗುತ್ತಿದ್ದರೂ, ಅದಕ್ಕೆ ಸಾಕಷ್ಟು ಸಮಯ ಮತ್ತು ಶ್ರಮ ವ್ಯಯಿಸಬೇಕಾಗಿತ್ತು.

ಮಂಡಲ–ಫುದುಂಗ್–ಖೆಲ್ಲಾಂಗ್ ಸಮುದಾಯ ಸಂರಕ್ಷಿತ ಪ್ರದೇಶದ ಗ್ರಾಮಸ್ಥರು ಈಗ ಒಗ್ಗೂಡಿ ಖಾಗಿ ಸಂಗ್ರಹಣೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಸಂಘಟಿಸಿದ್ದಾರೆ. ‘ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಇಂಡಿಯಾ’ (ಡಬ್ಲ್ಯುಡಬ್ಲ್ಯುಎಫ್–ಇಂಡಿಯಾ) ಮತ್ತು ಅದರ ಪಾಲುದಾರ ಸಂಸ್ಥೆಗಳ ಬೆಂಬಲದೊಂದಿಗೆ, ಈ ಮಸಾಲೆಯನ್ನು ಸಂಗ್ರಹಿಸುವುದು, ವಿಂಗಡಿಸುವುದು, ಶ್ರೇಣೀಕರಿಸುವುದು, ಪ್ಯಾಕೇಜ್ ಮಾಡುವುದು ಹಾಗೂ ಮಾರಾಟ ಮಾಡುವುದಕ್ಕಾಗಿ ಸಾಮೂಹಿಕ ವ್ಯವಸ್ಥೆಯೊಂದನ್ನು ರೂಪಿಸಿದ್ದಾರೆ.

ಕಳೆದ ಎರಡು ಸುಗ್ಗಿ ಋತುಗಳಲ್ಲಿ ಈ ಉಪಕ್ರಮದ ಮೂಲಕ 10 ಟನ್‌ ಗಿಂತಲೂ ಹೆಚ್ಚು ಖಾಗಿ ಮಾರಾಟವಾಗಿದೆ. ಇದರಿಂದ ಸುಮಾರು 39 ಲಕ್ಷ ರೂ. ವಹಿವಾಟು ನಡೆದಿದ್ದು, 200ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರಯೋಜನವಾಗಿದೆ.

ಫುದುಂಗ್ ಗ್ರಾಮದ ‘ಗಾಂವ್ ಬುರಾ’ (ಸಾಂಪ್ರದಾಯಿಕ ಸಮುದಾಯದ ನಾಯಕ) ವಾಂಗ್ಡಿ ಅವರ ಪ್ರಕಾರ, ಈ ವ್ಯವಸ್ಥೆಯ ಅತಿದೊಡ್ಡ ಪ್ರಯೋಜನವೆಂದರೆ ಕುಟುಂಬಗಳು ಸ್ವತಃ ಖರೀದಿದಾರರನ್ನು ಹುಡುಕುವ ಅಥವಾ ಉತ್ಪನ್ನವನ್ನು ದೀರ್ಘಕಾಲ ಸಂಗ್ರಹಿಸಿಡುವ ಅಗತ್ಯವಿಲ್ಲದೆ, ಸುಗ್ಗಿಯ ಬಳಿಕವೇ ಉತ್ಪನ್ನವನ್ನು ಮಾರಾಟ ಮಾಡಲು ಸಾಧ್ಯವಾಗಿರುವುದು.

“ಈ ಸಾಮೂಹಿಕ ವಿಧಾನವು ನಮ್ಮ ಆತಂಕವನ್ನು ಕಡಿಮೆ ಮಾಡಿದೆ. ಉತ್ಪನ್ನಗಳನ್ನು ದೀರ್ಘಕಾಲ ಸಂಗ್ರಹಿಸಿಡುವ ಚಿಂತೆಯಿಲ್ಲದೆ ಮಾರಾಟ ಮಾಡಬಹುದು. ಹಿಂದೆ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬೇರೆ ಬೇರೆ ಮಾರುಕಟ್ಟೆಗಳಿಗೆ ಹೋಗಬೇಕಿತ್ತು. ಕೆಲವೊಮ್ಮೆ ಇದರಿಂದ ಉತ್ತಮ ಬೆಲೆ ಸಿಗುತ್ತಿತ್ತಾದರೂ, ಸಾರಿಗೆ ವೆಚ್ಚದ ಜೊತೆಗೆ ಸಾಕಷ್ಟು ಸಮಯ ಮತ್ತು ಶ್ರಮವೂ ವ್ಯಯವಾಗುತ್ತಿತ್ತು” ಎಂದು ಅವರು ಹೇಳಿದ್ದಾರೆ.

ಡಬ್ಲ್ಯುಡಬ್ಲ್ಯುಎಫ್–ಇಂಡಿಯಾ ಪ್ರಕಾರ, ಒಟ್ಟು ಮಾರಾಟದ ಆದಾಯದಲ್ಲಿ ಸುಮಾರು ಶೇ 95ರಷ್ಟು ನೇರವಾಗಿ ಕುಟುಂಬಗಳಿಗೆ ತಲುಪುತ್ತದೆ. ಉಳಿದ ಶೇ 5ರಷ್ಟು ಹಣವನ್ನು ಸಮುದಾಯ ಸಂರಕ್ಷಿತ ಪ್ರದೇಶ ನಿರ್ವಹಣಾ ಸಮಿತಿಯು ಸಂಗ್ರಹಣೆ, ದಾಸ್ತಾನು, ವಿಂಗಡಣೆ, ಪ್ಯಾಕೇಜಿಂಗ್ ಮತ್ತು ಸಾರಿಗೆ ವೆಚ್ಚಗಳನ್ನು ಭರಿಸಲು ಬಳಸುತ್ತದೆ.

ಗ್ರಾಮಸ್ಥರಿಗೆ ಖಾಗಿ ಕೇವಲ ಮಾರಾಟ ಮಾಡಬಹುದಾದ ಮಸಾಲೆಯಷ್ಟೇ ಅಲ್ಲ. ಇದರ ನಿರಂತರ ಲಭ್ಯತೆಯು ಖಾಗಿ ಮರಗಳನ್ನು ಹೇಗೆ ನಿರ್ವಹಿಸಲಾಗುತ್ತದೆ ಮತ್ತು ಅವುಗಳಿಂದ ಹೇಗೆ ಫಸಲು ಪಡೆಯಲಾಗುತ್ತದೆ ಎಂಬುದರ ಮೇಲೂ ಅವಲಂಬಿತವಾಗಿದೆ.

“ಖಾಗಿ ಪ್ರಕೃತಿಗೂ ಒಳ್ಳೆಯದು. ಖಾಗಿಯನ್ನು ಸುರಕ್ಷಿತವಾಗಿ ಸಂಗ್ರಹಿಸುವುದರಿಂದ ಕುಟುಂಬಗಳಿಗೆ ಆದಾಯ ಸಿಗುತ್ತದೆ. ಇದರಿಂದ ಅವರು ಅರಣ್ಯವನ್ನು ರಕ್ಷಿಸುತ್ತಾರೆ” ಎಂದು ಪರಿಸರವಾದಿ ಜಸ್ಮಿತ್ ಸಿಂಗ್ ಆರೋರಾ ಹೇಳಿದ್ದಾರೆ.

ಅನೇಕ ಕುಟುಂಬಗಳು ತಮ್ಮ ಮನೆಗಳ ಹಿತ್ತಲಿನಲ್ಲಿ, ಹೊಲದ ಬದುಗಳ ಮೇಲೆ, ಜಮೀನಿನ ಗಡಿಗಳಲ್ಲಿ ಮತ್ತು ಬೇಲಿಗಳ ಬಳಿ ಖಾಗಿ ಗಿಡಗಳನ್ನು ಬೆಳೆಸಿಕೊಂಡಿವೆ. ಇವುಗಳ ಪೈಕಿ ಕೆಲವು ಹಳೆಯ ಮರಗಳು ಸುಮಾರು 18ರಿಂದ 20 ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಸ್ಥಳೀಯರ ಪ್ರಕಾರ, ಹಿಂದೆ ಗ್ರಾಮಸ್ಥರು ಸುತ್ತಮುತ್ತಲಿನ ಕಾಡುಗಳಿಂದ ಖಾಗಿ ಹಣ್ಣುಗಳನ್ನು ಸಂಗ್ರಹಿಸುತ್ತಿದ್ದರು. ಆದರೆ ಕಾಲಕ್ರಮೇಣ ಕೃಷಿ ಜಮೀನುಗಳ ಬಳಿ ಈ ಮರಗಳನ್ನು ನೆಡಲು ಅಥವಾ ಈಗಾಗಲೇ ಬೆಳೆದಿರುವ ಮರಗಳನ್ನು ಉಳಿಸಿಕೊಳ್ಳಲು ಆರಂಭಿಸಿದರು. ಮರಗಳಿಗೆ ಹಾನಿಯಾಗದಂತೆ ಫಸಲು ಪಡೆಯುವ ಪದ್ಧತಿಯನ್ನು ಗ್ರಾಮಸ್ಥರು ಅನುಸರಿಸುತ್ತಾರೆ.

ಮರಗಳನ್ನು ಹತ್ತುವ ಬದಲು, ಕೊಯ್ಲು ಮಾಡುವವರು ಮರದ ಕೊಂಬೆಗಳನ್ನು ತಲುಪಲು ತಾತ್ಕಾಲಿಕ ಎತ್ತರದ ವೇದಿಕೆಗಳನ್ನು ಬಳಸುತ್ತಾರೆ. ಇದರಿಂದ ಕೊಂಬೆಗಳು ಭಾರಕ್ಕೆ ಮುರಿಯುವ ಅಪಾಯ ಕಡಿಮೆಯಾಗುತ್ತದೆ. ಅಲ್ಲದೆ, ಹಣ್ಣಾದ ಹಣ್ಣುಗಳನ್ನು ಸುಲಭವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ.

ಈ ಸಂಗ್ರಹಣಾ ಪ್ರಕ್ರಿಯೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆಯೇ ಎಂಬುದನ್ನು ನಿರ್ಧರಿಸಲು ಖಾಗಿ ಸಸ್ಯಗಳ ಸಂಖ್ಯೆ, ಹೊಸ ಸಸಿಗಳ ಬೆಳವಣಿಗೆ ಮತ್ತು ಪ್ರತಿ ಋತುವಿನಲ್ಲಿ ಸಂಗ್ರಹಿಸುವ ಪ್ರಮಾಣವನ್ನು ನಿರಂತರವಾಗಿ ಗಮನಿಸಬೇಕಾಗುತ್ತದೆ. ಅರಣ್ಯ ಪ್ರದೇಶದಲ್ಲಿನ ಬದಲಾವಣೆಗಳು ಮತ್ತು ರೆಡ್ ಪಾಂಡಾಗಳಂತಹ ವನ್ಯಜೀವಿಗಳ ಸಂಖ್ಯೆಯಲ್ಲಿನ ಏರಿಳಿತಗಳನ್ನು ಗಮನಿಸುವ ಮೂಲಕ, ಈ ಉಪಕ್ರಮವು ಪರಿಸರದ ಮೇಲೆ ಬೀರುವ ವ್ಯಾಪಕ ಪರಿಣಾಮಗಳನ್ನು ಸಂಶೋಧಕರು ಅಂದಾಜಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor