ಸಾಂದರ್ಭಿಕ ಚಿತ್ರ (AI Generated)

ಜೀವ ರಕ್ಷಕ 137 ಕ್ಯಾನ್ಸರ್ ಔಷಧಗಳ ಮೇಲೆ ವ್ಯಾಪಾರಿ ಲಾಭದ ಮಿತಿಯನ್ನು ಶೇಕಡಾ 30ಕ್ಕೆ ನಿಗದಿಪಡಿಸಿರುವ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರದ (NPPA) ನಿರ್ಧಾರವನ್ನು ರೋಗಿಗಳು, ಆಸ್ಪತ್ರೆ ಸಂಸ್ಥೆಗಳು ಮತ್ತು ಔಷಧ ಉದ್ಯಮ ಸ್ವಾಗತಿಸಿವೆ. ಈ ಕ್ರಮದಿಂದಾಗಿ ಔಷಧಗಳ ಬೆಲೆ ಇಳಿಕೆಯಾಗಲಿದ್ದು, ರೋಗಿಗಳ ಚಿಕಿತ್ಸಾ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ. ಅಲ್ಲದೆ ಜಾಗತಿಕ ಕ್ಯಾನ್ಸರ್ ಔಷಧ ಮಾರುಕಟ್ಟೆಯಲ್ಲಿ ಭಾರತದ ಸ್ಥಾನ ಮತ್ತಷ್ಟು ಬಲಗೊಳ್ಳಲಿದೆ.

ಅಕ್ಟೋಬರ್ 17ರಂದು ಹೊರಡಿಸಿದ ಆದೇಶದಲ್ಲಿ, ಏಳು ದಿನಗಳ ಒಳಗಾಗಿ ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯನ್ನು (MRPs) ಸಲ್ಲಿಸುವಂತೆ ತಯಾರಕರಿಗೆ ಎನ್‌ಪಿಪಿಎ ಸೂಚಿಸಿದೆ. ಗೆಜೆಟ್ ಅಧಿಸೂಚನೆಯ ಪ್ರಕಾರ, ನವೆಂಬರ್ 9ರಿಂದ ಹೊಸ ಬೆಲೆಗಳು ಜಾರಿಗೆ ಬರಲಿವೆ. ಔಷಧ ಕಂಪನಿಗಳು ಪರಿಷ್ಕೃತ ದರ ಪಟ್ಟಿಯನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು ಮತ್ತು ಚಿಲ್ಲರೆ ಮಾರಾಟಗಾರರು ಹಾಗೂ ಆಸ್ಪತ್ರೆಗಳಿಗೆ ತಲುಪಿಸಬೇಕು.

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆಯ ಅಡಿಯಲ್ಲಿ ಬರುವ ಸ್ವತಂತ್ರ ನಿಯಂತ್ರಣ ಸಂಸ್ಥೆಯಾದ ಎನ್‌ಪಿಪಿಎ, ಔಷಧಗಳು ಕೈಗೆಟುಕುವ ದರದಲ್ಲಿ ಮತ್ತು ಸುಲಭವಾಗಿ ಸಿಗುವಂತೆ ಮಾಡಲು ದರಗಳನ್ನು ನಿಗದಿಪಡಿಸುವ ಹಾಗೂ ಪರಿಷ್ಕರಿಸುವ ಹೊಣೆ ಹೊಂದಿದೆ.

ಕ್ಯಾನ್ಸರ್ ವಿರೋಧಿ ಔಷಧಗಳ ಖರೀದಿಯಲ್ಲಿ ಸಿಂಹಪಾಲು ಹೊಂದಿರುವ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು, ನಿಗದಿತ ದಿನಾಂಕದಿಂದ ಪರಿಷ್ಕೃತ ದರಗಳನ್ನು ಜಾರಿಗೆ ತರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಔಷಧೀಯ ಇಲಾಖೆ (DoP) ಹೇಳಿಕೆಯಲ್ಲಿ ತಿಳಿಸಿದೆ. "ತಯಾರಕರು, ವಿತರಕರು, ಚಿಲ್ಲರೆ ಮಾರಾಟಗಾರರು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಜೌಷಧ ನಿಯಂತ್ರಕರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ" ಎಂದು ಅದು ತಿಳಿಸಿದೆ.

ಔಷಧಗಳ ಮೇಲಿನ ಅತಿಯಾದ ಲಾಭದ ಮಿತಿಯ ಕುರಿತು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 29ರಂದು ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಚಿಲ್ಲರೆ ಮಾರಾಟಗಾರರಿಗೆ 2,700 ರೂಪಾಯಿಗೆ ಸಿಗುವ ಔಷಧಕ್ಕೆ 27,000 ರೂಪಾಯಿ ಎಂಆರ್‌ಪಿ ನಿಗದಿಪಡಿಸುವುದು ಹೇಗೆ ಎಂದು ಪ್ರಶ್ನಿಸಿತ್ತು. ಈ ವ್ಯತ್ಯಾಸವನ್ನು "ಹಗಲು ದರೋಡೆ" ಎಂದು ಬಣ್ಣಿಸಿತ್ತು.

ಅತಿಯಾದ ಲಾಭದ ಮೇಲಿನ ಈ ನಿಯಂತ್ರಣಗಳನ್ನು ಕೇವಲ ಕ್ಯಾನ್ಸರ್ ಔಷಧಗಳಿಗೆ ಮಾತ್ರ ಸೀಮಿತಗೊಳಿಸದೆ, ಇತರ ಅಗತ್ಯ ಔಷಧಗಳಿಗೂ ಏಕೆ ವಿಸ್ತರಿಸಬಾರದು ಎಂದು ನ್ಯಾಯಾಲಯ ಪ್ರಶ್ನಿಸಿತ್ತು. ಔಷಧಗಳ ಸಮಗ್ರ ಬೆಲೆ ನಿಯಂತ್ರಣದ ಬಗ್ಗೆ ಪರಿಶೀಲಿಸಲು ಪೀಠವು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಕಾಯ್ದಿರಿಸಿದೆ.

ಎನ್‌ಪಿಪಿಎ ಆದೇಶದಿಂದಾಗಿ ಪಟ್ಟಿಮಾಡದ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆಯು ಶೇಕಡಾ 70ರವರೆಗೆ ಕಡಿಮೆಯಾಗುವ ನಿರೀಕ್ಷೆಯಿದೆ. ಬೆಲೆ ಇಳಿಕೆಯು ಅಸ್ತಿತ್ವದಲ್ಲಿರುವ ಬೆಲೆ ರಚನೆಯನ್ನು ಅವಲಂಬಿಸಿರುತ್ತದೆ. ಔಷಧ ಕಂಪನಿಯು ವಿತರಕರಿಗೆ ಅಥವಾ ಆಸ್ಪತ್ರೆಗೆ ಔಷಧ ಮಾರಾಟ ಮಾಡುವಾಗ, ಮಾರಾಟದ ಮೊದಲ ಹಂತದಲ್ಲೇ ಈ ಲಾಭದ ಕಡಿತವು ಗೋಚರಿಸಲಿದೆ. ವಿತರಣಾ ಸರಪಳಿಯಲ್ಲಿ ಲಾಭದ ಮಿತಿಯನ್ನು ಹೇರುವ ಮೂಲಕ, ವಿಪರೀತ ಬೆಲೆ ಏರಿಕೆಯನ್ನು ತಡೆಯುವುದು ಮತ್ತು ಕ್ಯಾನ್ಸರ್ ಚಿಕಿತ್ಸೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಈ ಕ್ರಮದ ಉದ್ದೇಶವಾಗಿದೆ.

20ಕ್ಕೂ ಹೆಚ್ಚು ವಿಧದ ಕ್ಯಾನ್ಸರ್ ವಿರುದ್ಧ ಬಳಸುವ ಇಮ್ಯೂನೋಥೆರೆಪಿಗಳು, ಕೆಲವು ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳಿಗೆ ನೀಡುವ ಡೆನೊಸುಮಾಬ್, ಕ್ಯಾನ್ಸರ್ ರೋಗಿಗಳಲ್ಲಿ ನ್ಯೂಟ್ರೋಪೆನಿಯಾವನ್ನು ತಡೆಯುವ ಪೆಗ್‌ಫಿಲ್‌ಗ್ರಾಸ್ಟಿಮ್ ಮತ್ತು ದೊಡ್ಡ ಕರುಳು, ಅಂಡಾಶಯ ಹಾಗೂ ಗರ್ಭಕಂಠದ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲು ಬಳಸುವ ಬೆವಾಸಿಜುಮಾಬ್ ಮುಂತಾದ ಔಷಧಗಳು ಈ ಪಟ್ಟಿಯಲ್ಲಿ ಸೇರಿವೆ. ಇದರೊಂದಿಗೆ ಪೆಂಬ್ರೊಲಿಜುಮಾಬ್, ಡರ್ವಾಲುಮಾಬ್ ಮತ್ತು ಒಸಿಮೆರ್ಟಿನಿಬ್‌ನಂತಹ ವ್ಯಾಪಕವಾಗಿ ಬಳಸುವ ಔಷಧಗಳೂ ಸೇರಿವೆ.

ಆಂಕೊಲಾಜಿಸ್ಟ್‌ಗಳು, ವೈದ್ಯಕೀಯ ತಜ್ಞರು, ಆಸ್ಪತ್ರೆ ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಡಿಯಲ್ಲಿರುವ ತಜ್ಞರ ಸಮಿತಿಯು ಈ ವಿಸ್ತೃತ ಪಟ್ಟಿಯನ್ನು ಶಿಫಾರಸು ಮಾಡಿದೆ. ಇದನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತದೆ.

ಔಷಧ ಇಲಾಖೆಯ ಪ್ರಕಾರ, ಭಾರತದ ಕ್ಯಾನ್ಸರ್ ವಿರೋಧಿ ಔಷಧ ಮಾರುಕಟ್ಟೆಯು ಸುಮಾರು 225 ಔಷಧಗಳು ಮತ್ತು 500 ಫಾರ್ಮುಲೇಶನ್‌ಗಳನ್ನು ಹೊಂದಿದ್ದು, ವಾರ್ಷಿಕ ವಹಿವಾಟು ಸುಮಾರು 12,500 ಕೋಟಿ ರೂಪಾಯಿಗಳಷ್ಟಿದೆ. ಈಗಾಗಲೇ ಬೆಲೆ ನಿಯಂತ್ರಣಕ್ಕೆ ಒಳಪಟ್ಟಿರುವ ಕ್ಯಾನ್ಸರ್ ಔಷಧಗಳು ಸರಿಸುಮಾರು 2,250 ಕೋಟಿ ರೂಪಾಯಿಗಳಷ್ಟಿದ್ದರೆ, ಉಳಿದವು ಪಟ್ಟಿಮಾಡದ ಔಷಧಗಳು ವರ್ಗದಡಿ ಬರುತ್ತವೆ.

ಬೆಲೆ ಮಿತಿ ಹೇಗೆ ಕೆಲಸ ಮಾಡುತ್ತದೆ?

ಲಾಭದ ಮಿತಿಯನ್ನು ಹೇರಲು ಎನ್‌ಪಿಪಿಎಯು 2013ರ ಔಷಧಗಳ (ಬೆಲೆ ನಿಯಂತ್ರಣ) ಆದೇಶದ (DPCO) 19ನೇ ಪ್ಯಾರಾಗ್ರಾಫ್ ಅನ್ನು ಬಳಸಿಕೊಂಡಿದೆ. 42 ಕ್ಯಾನ್ಸರ್ ವಿರೋಧಿ ಔಷಧಗಳ ಮೇಲೆ ಶೇಕಡಾ 30ರಷ್ಟು ವ್ಯಾಪಾರಿ ಲಾಭದ ಮಿತಿ ವಿಧಿಸಿದ್ದ 2019ರ ಪ್ರಾಯೋಗಿಕ ಕ್ರಮದ ಮುಂದುವರಿದ ಭಾಗ ಇದಾಗಿದೆ. ಆ ಕ್ರಮದಿಂದಾಗಿ ಪಟ್ಟಿಮಾಡದ ಕ್ಯಾನ್ಸರ್ ಔಷಧಗಳ 526 ಬ್ರ್ಯಾಂಡ್‌ಗಳ ಎಂಆರ್‌ಪಿಯು ಶೇಕಡಾ 90ರವರೆಗೆ ಕಡಿಮೆಯಾಗಿತ್ತು.

ಕ್ಯಾನ್ಸರ್ ಔಷಧಗಳು ಪಟ್ಟಿಮಾಡಿದ ವರ್ಗದಡಿ ಬರುತ್ತವೆ. ಇದರಲ್ಲಿ 2013ರ ಔಷಧಗಳ (ಬೆಲೆ ನಿಯಂತ್ರಣ) ಆದೇಶದ (DPCO) ಅಥವಾ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯ (NLEM) ಮೊದಲ ವೇಳಾಪಟ್ಟಿಯಲ್ಲಿ ಪಟ್ಟಿ ಮಾಡದ ಔಷಧೀಯ ಸೂತ್ರೀಕರಣಗಳು ಸೇರಿವೆ. ನಿರ್ದಿಷ್ಟ ಸರ್ಕಾರಿ ನಿಯಂತ್ರಣಗಳಿಗೆ ಒಳಪಡುವ ನಿಗದಿತ ಔಷಧಗಳಂತೆ ಅಲ್ಲದೆ, ಪಟ್ಟಿಮಾಡದ ಔಷಧಗಳು ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಬೇಡಿಕೆಯ ಆಧಾರದ ಮೇಲೆ ಆರಂಭಿಕ ಬೆಲೆಗಳನ್ನು ನಿಗದಿಪಡಿಸುವಲ್ಲಿ ತಯಾರಕರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತವೆ.

ಭಾರತದಾದ್ಯಂತ ಕ್ಯಾನ್ಸರ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ಕ್ರಮವು ಅತ್ಯಂತ ಮಹತ್ವದ್ದಾಗಿದೆ. ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಕ್ಯಾನ್ಸರನ್ನು ಕಡ್ಡಾಯವಾಗಿ ವರದಿ ಮಾಡಬೇಕಾದ ಕಾಯಿಲೆ ಎಂದು ಘೋಷಿಸಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಕ್ಯಾನ್ಸರ್ ರೆಜಿಸ್ಟ್ರಿ ಕಾರ್ಯಕ್ರಮದ ಅಂದಾಜಿನ ಪ್ರಕಾರ, ಪ್ರತಿವರ್ಷ ಹೊಸ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಸುಮಾರು 15.3 ಲಕ್ಷದಿಂದ 15.6 ಲಕ್ಷದವರೆಗೆ ಇರುತ್ತದೆ.

ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಹೊಸ ಬೆಲೆ ನಿಯಂತ್ರಣದಿಂದ ಭಾರತೀಯ ರೋಗಿಗಳಿಗೆ ವಾರ್ಷಿಕ ಸುಮಾರು 2,500 ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆಯಿದೆ.

ತಕ್ಷಣದ ಉಳಿತಾಯದ ಹೊರತಾಗಿ, ದೇಶೀಯ ಬೆಲೆಗಳಲ್ಲಿನ ಅಸಮತೋಲನವನ್ನು ಕಡಿಮೆ ಮಾಡಲು ಮತ್ತು ಹೆಚ್ಚು ಸ್ಪರ್ಧಾತ್ಮಕ ವೆಚ್ಚದ ರಚನೆಗಳಲ್ಲಿ ಕಾರ್ಯನಿರ್ವಹಿಸಲು ತಯಾರಕರನ್ನು ಪ್ರೋತ್ಸಾಹಿಸಲು ಈ ಕ್ರಮವು ಸಹಾಯ ಮಾಡುತ್ತದೆ ಎಂದು ಉದ್ಯಮ ವಿಶ್ಲೇಷಕರು ಹೇಳಿದ್ದಾರೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಬಹುದು.

ರಫ್ತು ಸಾಮರ್ಥ್ಯ ಹೆಚ್ಚಿಸುವ ನಿರೀಕ್ಷೆಯಲ್ಲಿ ಉದ್ಯಮ

ಕ್ಯಾನ್ಸರ್ ಔಷಧಗಳನ್ನು ತಯಾರಿಸುವ ಅಗ್ರ ಮೂರು ದೇಶಗಳಲ್ಲಿ ಭಾರತವೂ ಒಂದಾಗಿದ್ದು, ನ್ಯಾಟ್ಕೋ ಫಾರ್ಮಾ (Natco Pharma) ಮತ್ತು ಡಾ. ರೆಡ್ಡೀಸ್ ಲೇಬರೇಟರೀಸ್ (Dr Reddy's Laboratories) ಮುಂತಾದ ಕಂಪನಿಗಳು ಪ್ರಮುಖ ಪಾತ್ರವಹಿಸಿವೆ. ದೇಶೀಯವಾಗಿ ಬೆಲೆ ನಿಯಂತ್ರಣ ಕಟ್ಟುನಿಟ್ಟಾದರೆ ತಯಾರಕರು ವಿದೇಶಿ ಮಾರುಕಟ್ಟೆಗಳಲ್ಲಿ ಇನ್ನಷ್ಟು ಆಕ್ರಮಣಕಾರಿಯಾಗಿ ಸ್ಪರ್ಧಿಸಲು ಪ್ರೇರಣೆಯಾಗಲಿದೆ ಎಂದು ಉದ್ಯಮ ತಜ್ಞರು 'ದಿ ಪ್ರಿಂಟ್'ಗೆ ತಿಳಿಸಿದ್ದಾರೆ. ತಮ್ಮ ಮೂರನೇ ತ್ರೈಮಾಸಿಕ ಫಲಿತಾಂಶಗಳಿಗೂ ಮುನ್ನ ಕಂಪನಿಗಳು ಕಡ್ಡಾಯ ಮೌನ ಅವಧಿಯಲ್ಲಿ ಇರುವುದರಿಂದ ಇಬ್ಬರು ತಜ್ಞರು ತಮ್ಮ ಹೆಸರು ಬಹಿರಂಗಪಡಿಸಲು ನಿರಾಕರಿಸಿದರು.

ಡಾ. ರೆಡ್ಡೀಸ್ ಲೇಬರೇಟರೀಸ್‌ನ ಮುಖ್ಯ ಹಣಕಾಸು ಅಧಿಕಾರಿ ಡಾ. ಎಂ.ವಿ. ನರಸಿಂಹಮ್ ಅವರು ಈ ನಿಯಂತ್ರಣವನ್ನು ಸಕಾರಾತ್ಮಕವಾಗಿ ನೋಡುವುದಾಗಿ 'ದಿ ಪ್ರಿಂಟ್'ಗೆ ತಿಳಿಸಿದ್ದಾರೆ.

"ಇದು ಖಂಡಿತವಾಗಿಯೂ ಕ್ಯಾನ್ಸರ್ ಔಷಧಗಳ ರಫ್ತು ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ನಾವು ಖಚಿತವಾಗಿ ನಂಬುತ್ತೇವೆ. ಆದರೆ, ನಾವು ಸಂಪೂರ್ಣ ನಿಯಂತ್ರಣವನ್ನು ಅಧ್ಯಯನ ಮಾಡುತ್ತಿದ್ದೇವೆ ಮತ್ತು ಇದು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡ ಹೆಜ್ಜೆ ಎಂದು ನಾವು ನಂಬುತ್ತೇವೆ" ಎಂದು ಅವರು ಹೇಳಿದರು.

ಏತನ್ಮಧ್ಯೆ ಲಾಭದ ಮಿತಿಯು ಔಷಧ ಕಂಪನಿಗಳ ವಿತರಣಾ ವ್ಯವಸ್ಥೆಗಳು ಮತ್ತು ಆಸ್ಪತ್ರೆಗಳೊಂದಿಗೆ ನಡೆಸುವ ಮಾತುಕತೆಗಳ ಮೇಲೆ ಬೀರುವ ಪ್ರಭಾವವನ್ನು ಅವಲಂಬಿಸಿ ಪರಿಣಾಮವು ಬದಲಾಗಬಹುದು.

ಡೋಲಟ್ ಕ್ಯಾಪಿಟಲ್‌ನ ಫಾರ್ಮಾ ವಿಶ್ಲೇಷಕರಾದ ರಶ್ಮಿ ಸಂಚೇತಿ 'ದಿ ಪ್ರಿಂಟ್' ಜತೆ ಮಾತನಾಡಿದ್ದು, ಪಟ್ಟಿ ಮಾಡಲಾದ ಯಾವುದೇ ಔಷಧಗಳನ್ನು ಒಳಗೊಂಡಿರುವ ಫಾರ್ಮುಲೇಶನ್‌ಗಳಿಗೆ ಈ ನಿರ್ಬಂಧಗಳು ಅನ್ವಯಿಸುತ್ತವೆ ಎಂದು ಹೇಳಿದರು. ಅವುಗಳನ್ನು ಏಕಾಂಗಿಯಾಗಿ ಬಳಸಲಿ ಅಥವಾ ಒಟ್ಟಾಗಿ ಬಳಸಲಿ, ಯಾವುದೇ ಸಾಮರ್ಥ್ಯದಲ್ಲಿರಲಿ, ಡೋಸೇಜ್ ರೂಪಗಳು ಮತ್ತು ಸೇವನೆಯ ಮಾರ್ಗಗಳಿರಲಿ ಎಲ್ಲದಕ್ಕೂ ಇದು ಅನ್ವಯಿಸುತ್ತದೆ. ಇತರ ಚಿಕಿತ್ಸಕ ಉದ್ದೇಶಗಳಿಗಾಗಿ ಈ ಔಷಧಗಳನ್ನು ಸೂಚಿಸಿದಾಗಲೂ ಇದು ಅನ್ವಯಿಸುತ್ತದೆ.

"ಫಾರ್ಮಾ ಕಂಪನಿಗಳ ಮೇಲೆ ಇದರ ಪ್ರಭಾವ ಅತ್ಯಂತ ಕನಿಷ್ಠವಾಗಿರುತ್ತದೆ. ಏಕೆಂದರೆ ಲಾಭದ ಮಿತಿಯನ್ನು ಸ್ಟಾಕಿಸ್ಟ್ ಬೆಲೆಯಿಂದ ಎಂಆರ್‌ಪಿಯವರೆಗೆ ಲೆಕ್ಕಹಾಕಲಾಗುತ್ತದೆ. ತಯಾರಕರು ತಮ್ಮ ಕಾರ್ಖಾನೆ ದರದಲ್ಲಿ ನೇರವಾಗಿ ಯಾವುದೇ ಕಡಿತವನ್ನು ಎದುರಿಸಬೇಕಾಗಿಲ್ಲ. ಆದರೆ ಮುಂಬರುವ ಕನಿಷ್ಠ 12 ತಿಂಗಳುಗಳಲ್ಲಿ ಅವರು ಆಸ್ಪತ್ರೆಯ ಔಷಧಾಲಯಗಳ ಖರೀದಿ ತಂಡಗಳಿಂದ ಕಠಿಣ ಲಾಭ ಹಂಚಿಕೆಯ ಮರುಮಾತುಕತೆಗಳನ್ನು ಎದುರಿಸಬೇಕಾಗುತ್ತದೆ" ಎಂದಿದ್ದಾರೆ.

Source: https://theprint.in/health/indian-oncology-drug-price-shakeup-how-nppa-price-cap-on-137-cancer-drugs-could-ease-treatment-costs/3076309/

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor