Photo Credit: indiatoday

ಗ್ಯಾಂಗ್‌ ಸ್ಟರ್ ಲಾರೆನ್ಸ್ ಬಿಷ್ಣೋಯ್... ಈ ಹೆಸರು ಕೇಳಿದಾಗ ನೆನಪಾಗುವುದು ಕೊಲೆ ಬೆದರಿಕೆಗಳು, ಸುಲಿಗೆ, ಗುಂಡಿನ ದಾಳಿಗಳು ಮತ್ತು ಅಂತರರಾಷ್ಟ್ರೀಯ ಅಪರಾಧ ಜಾಲದ ಆರೋಪಗಳು. ದಾವೂದ್ ಇಬ್ರಾಹಿಂನ ‘ಡಿ-ಕಂಪೆನಿ’ ದಶಕಗಳ ಕಾಲ ನಿರ್ಮಿಸಿದ ಭಯದ ಸಾಮ್ರಾಜ್ಯಕ್ಕೆ ಹೋಲಿಸಬಹುದಾದ ಜಾಲವನ್ನು ರೂಪಿಸಿದ್ದಾನೆ ಎಂಬ ಆರೋಪ ಈತನ ಮೇಲಿದೆ. ಅತ್ಯಂತ ಬಿಗಿ ಭದ್ರತೆಯ ಜೈಲಿನಲ್ಲಿದ್ದರೂ ತನ್ನ ಸಹಚರರ ಮೂಲಕ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂಬ ಆರೋಪಗಳು ಆತನ ಹೆಸರನ್ನು ಮತ್ತೆ ಮತ್ತೆ ಸುದ್ದಿಯ ಮುನ್ನೆಲೆಗೆ ತರುತ್ತಿವೆ.

ಬಾಲಿವುಡ್ ನಟರಿಗೆ ಸುಲಿಗೆ ಬೇಡಿಕೆ, ರಾಜಕಾರಣಿಗಳ ಹತ್ಯೆ, ಪಂಜಾಬ್‌ ನ ಖ್ಯಾತ ಗಾಯಕ ಸಿಧು ಮೂಸೆ ವಾಲಾ ಕೊಲೆ, ಕೆನಡಾದಲ್ಲಿನ ವಿವಾದಗಳು... ಹೀಗೆ ಒಂದರ ಹಿಂದೆ ಒಂದರಂತೆ ಕೇಳಿಬಂದ ಪ್ರಕರಣಗಳು ಲಾರೆನ್ಸ್ ಬಿಷ್ಣೋಯ್‌ ನನ್ನು ದೇಶದ ಅತ್ಯಂತ ಚರ್ಚಿತ ಗ್ಯಾಂಗ್‌ಸ್ಟರ್‌ ಗಳಲ್ಲಿ ಒಬ್ಬನನ್ನಾಗಿ ಮಾಡಿವೆ.

ಆದರೆ ಈ ಕಥೆಯ ಆರಂಭವೇನು? ಮರುಭೂಮಿಯ ಬಯಲು ಪ್ರದೇಶದಲ್ಲಿ ಬೆಳೆದ ಹುಡುಗನೊಬ್ಬ ಹೇಗೆ ಅಪರಾಧ ಜಗತ್ತಿನ ಕುಖ್ಯಾತ ಹೆಸರಾಗಿ ಬೆಳೆದ? ಜೈಲಿನಲ್ಲಿದ್ದರೂ ಆತನ ಹೆಸರಿನೊಂದಿಗೆ ಗುರುತಿಸಿಕೊಂಡಿರುವ ಜಾಲ ಹೇಗೆ ಕಾರ್ಯನಿರ್ವಹಿಸುತ್ತಿದೆ? ಆತನಿಗೆ ಒಮ್ಮೆ ಆಪ್ತನಾಗಿದ್ದ ಗೋಲ್ಡಿ ಬ್ರಾರ್ ಈಗ ಏಕೆ ಎದುರಾಳಿಯಾಗಿದ್ದಾನೆ?

ಇದು ಲಾರೆನ್ಸ್ ಬಿಷ್ಣೋಯ್‌ ನ ಉದಯ, ಅಪರಾಧ ಜಾಲದ ವಿಸ್ತರಣೆ ಮತ್ತು ಅದರೊಳಗಿನ ಬಿರುಕುಗಳ ಕಥೆ.

*20 ಕೋಟಿ ರೂ. ಸುಲಿಗೆ: ಬಾಲಿವುಡ್‌ ಗೆ ಮತ್ತೆ ನಡುಕ

ನಟ ರಣವೀರ್ ಸಿಂಗ್ ಅವರ ಮ್ಯಾನೇಜರ್‌ ಗೆ ಅಮೆರಿಕದಲ್ಲಿ ನೋಂದಣಿಯಾಗಿದ್ದ ಅಪರಿಚಿತ ಸಂಖ್ಯೆಯಿಂದ ವಾಯ್ಸ್ ನೋಟ್ ಬಂದಿತ್ತು. ಸಂದೇಶವನ್ನು ತೆರೆದಾಗ, ಶಾಂತವಾಗಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ 20 ಕೋಟಿ ರೂ. ಸುಲಿಗೆಗೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ, ನಟನ ಮುಂದಿನ ಏಳು ತಲೆಮಾರುಗಳೂ ನೆನಪಿನಲ್ಲಿಟ್ಟುಕೊಳ್ಳುವಂತಹ ಗತಿ ಕಾಣಿಸುವುದಾಗಿ ಬೆದರಿಕೆ ಹಾಕಿದ್ದ.

ಕರೆ ಮಾಡಿದವನು ತನ್ನನ್ನು ಹ್ಯಾರಿ ಬಾಕ್ಸರ್ ಎಂದು ಪರಿಚಯಿಸಿಕೊಂಡಿದ್ದ. ಆತ ಬಿಷ್ಣೋಯ್ ಗ್ಯಾಂಗ್‌ ನ ಸದಸ್ಯನೆಂದು ಹೇಳಲಾಗಿತ್ತು.

ಮುಂಬೈಗೆ ಈ ಸಂದೇಶದ ಅರ್ಥ ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಗುಂಡಿನ ದಾಳಿಗಳು, ಕೊಲೆ ಬೆದರಿಕೆಗಳು ಮತ್ತು ಸುಲಿಗೆ ಬೇಡಿಕೆಗಳೊಂದಿಗೆ ಗುರುತಿಸಿಕೊಂಡಿರುವ ಲಾರೆನ್ಸ್ ಬಿಷ್ಣೋಯ್‌ ನ ಹೆಸರು ಮತ್ತೆ ಮುನ್ನೆಲೆಗೆ ಬಂದಿತ್ತು.

ಇದಕ್ಕೂ ಕೆಲವೇ ವಾರಗಳ ಹಿಂದೆ ನಿರ್ಮಾಪಕ-ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಭಾಗಿಯಾಗಿದ್ದ ಶೂಟರ್‌ ಗಳಲ್ಲಿ ಒಬ್ಬನೇ ಈ ದಾಳಿಯ ಹಿಂದೆಯೂ ಇದ್ದ ಎಂದು ಹೇಳಲಾಗಿತ್ತು.

1990ರ ದಶಕದಲ್ಲಿ ದುಬೈನಿಂದ ದಾವೂದ್ ಇಬ್ರಾಹಿಂನ ಸಹಚರರು ಬಾಲಿವುಡ್ ನಿರ್ಮಾಪಕರಿಗೆ ಬೆದರಿಕೆ ಕರೆ ಮಾಡುತ್ತಿದ್ದ ಕಾಲವನ್ನು ಈ ಬೆಳವಣಿಗೆ ನೆನಪಿಸಿತ್ತು. ಆದರೆ ಈಗಿನ ಪರಿಸ್ಥಿತಿಯ ವಿಶೇಷವೆಂದರೆ, ಈ ಎಲ್ಲದರೊಂದಿಗೆ ಗುರುತಿಸಿಕೊಂಡಿರುವ ಲಾರೆನ್ಸ್ ಬಿಷ್ಣೋಯ್ ಸ್ವತಃ ಅತ್ಯಂತ ಬಿಗಿ ಭದ್ರತೆಯ ಜೈಲಿನಲ್ಲಿದ್ದಾನೆ.

*ಬರಗಾಲ, ಮಹಾರಾಜ ಮತ್ತು ಗಂಗ್ ಕಾಲುವೆ

ಲಾರೆನ್ಸ್ ಬಿಷ್ಣೋಯ್‌ನ ಕಥೆಯನ್ನು ಅರ್ಥಮಾಡಿಕೊಳ್ಳಲು ಮೊದಲು ಆತನ ಸಮುದಾಯದ ಇತಿಹಾಸದತ್ತ ಮುಖ ಮಾಡಬೇಕು. ಈ ಕಥೆಯ ಬೇರುಗಳು ರಾಜಸ್ಥಾನದ ಥಾರ್ ಮರುಭೂಮಿ, ಭೀಕರ ಬರಗಾಲ ಮತ್ತು ನೀರಿಗಾಗಿ ನಡೆದ ಪ್ರಯತ್ನಗಳೊಂದಿಗೆ ಬೆಸೆದುಕೊಂಡಿವೆ.

1899ರಲ್ಲಿ ಮರುಭೂಮಿಯನ್ನು ಆವರಿಸಿದ ಭೀಕರ ಬರಗಾಲ ಜನಜೀವನವನ್ನು ನಾಶಮಾಡಿತ್ತು. ‘ಛಪ್ಪಾನಿಯಾ ಅಕಾಲ’ ಎಂದು ಕರೆಯಲ್ಪಡುವ ಈ ಬರಗಾಲದಲ್ಲಿ ಜಾನುವಾರುಗಳು ಸತ್ತಿದ್ದವು. ಹಳ್ಳಿಗಳು ನಿರ್ಜನವಾಗಿದ್ದವು. ಜನರ ಸಂಕಷ್ಟಕ್ಕೆ ಕೊನೆಯೇ ಕಾಣಿಸಿರಲಿಲ್ಲ.

ಬಿಕಾನೇರ್ ಸಂಸ್ಥಾನದ ಆಡಳಿತಗಾರ ಮಹಾರಾಜ ಗಂಗಾ ಸಿಂಗ್, ಮರುಭೂಮಿಗೆ ನೀರು ತರುವ ಸಂಕಲ್ಪ ಮಾಡಿದರು. ಉತ್ತರದ ನದಿಗಳಿಂದ ನೀರನ್ನು ಹರಿಸುವ ಯೋಜನೆ ರೂಪುಗೊಂಡಿತು.

1922ರಲ್ಲಿ ಗಂಗ್ ಕಾಲುವೆಯ ನಿರ್ಮಾಣ ಕಾರ್ಯ ಆರಂಭವಾಯಿತು. ಪಂಜಾಬ್‌ ನ ಫಿರೋಜ್‌ ಪುರ ಸಮೀಪದ ಸಟ್ಲೆಜ್ ನದಿಯ ಹುಸೇನಿವಾಲಾ ಹೆಡ್‌ವರ್ಕ್ಸ್‌ ನಿಂದ ನೀರನ್ನು ಕಾಲುವೆಗೆ ಹರಿಸಲಾಯಿತು. 1927ರಲ್ಲಿ ನೀರು ಹರಿಯತೊಡಗಿದ ಬಳಿಕ ಮರುಭೂಮಿಯ ಹಲವು ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ವಿಸ್ತರಿಸಿದವು.

ನೀರಿನೊಂದಿಗೆ ಜನರೂ ಬಂದರು. ಪಂಜಾಬ್‌ ನ ಮಾಂಝಾ ಮತ್ತು ಮಾಲ್ವಾ ಪ್ರದೇಶಗಳಿಂದ ರೈತರು ತಮ್ಮ ಕುಟುಂಬಗಳು, ಕೃಷಿ ಉಪಕರಣಗಳು ಮತ್ತು ಸಂಪ್ರದಾಯಗಳೊಂದಿಗೆ ಹೊಸ ನೆಲೆಯತ್ತ ವಲಸೆ ಬಂದರು.

ಅವರಲ್ಲಿ ರಾಜಸ್ಥಾನದ ಬಿಷ್ಣೋಯಿ ಸಮುದಾಯದವರೂ ಇದ್ದರು. ಮರಗಳನ್ನು ಬಂಧುಗಳಂತೆ ಮತ್ತು ಪ್ರಾಣಿಗಳನ್ನು ಪವಿತ್ರ ಜೀವಿಗಳಂತೆ ಕಾಣುವ ಈ ಸಮುದಾಯದವರು ಹೊಸ ಪ್ರದೇಶಗಳಲ್ಲಿ ನೆಲೆಸಿದರು. ಮಹಾರಾಜ ಗಂಗಾ ಸಿಂಗ್ ನೀಡಿದ ಭೂಮಿಯಿಂದ ಅನೇಕ ಹಳ್ಳಿಗಳು ರೂಪುಗೊಂಡವು. ಅವುಗಳಲ್ಲಿ ಫಾಜಿಲ್ಕಾ ಜಿಲ್ಲೆಯ ದುತಾರಾವಳಿ ಕೂಡ ಒಂದು.

ಮರುಭೂಮಿಗೆ ನೀರು ತಂದ ಕಾಲುವೆಯು ಕೃಷಿ ಮತ್ತು ವಸತಿಗೆ ಹೊಸ ದಾರಿ ತೆರೆದಿತ್ತು. ಆದರೆ ಇದೇ ಪ್ರದೇಶದ ಹಿನ್ನೆಲೆಯಿಂದ ಬಂದ ಲಾರೆನ್ಸ್ ಬಿಷ್ಣೋಯ್‌ ನ ಹೆಸರು ಮುಂದೆ ಹಿಂಸಾಚಾರ ಮತ್ತು ಅಪರಾಧಗಳ ಆರೋಪಗಳೊಂದಿಗೆ ಗುರುತಿಸಿಕೊಳ್ಳುತ್ತದೆ ಎಂಬುದನ್ನು ಆಗ ಯಾರೂ ಊಹಿಸಿರಲಿಲ್ಲ.

► 29 ತತ್ವಗಳ ಧಾರ್ಮಿಕ ಪರಂಪರೆ

ಬಿಷ್ಣೋಯಿ ಸಮುದಾಯದ ಇತಿಹಾಸವು 15ನೇ ಶತಮಾನಕ್ಕೆ ಹಿಂದಿರುಗುತ್ತದೆ. 1485ರಲ್ಲಿ ಪಶ್ಚಿಮ ರಾಜಸ್ಥಾನದ ನಾಗೌರ್ ಸಮೀಪದ ಪಿಪಾಸರ್ ಗ್ರಾಮದಲ್ಲಿ ಜಂಭೇಶ್ವರ್ ಎಂಬುವವರು ಹೊಸ ಧಾರ್ಮಿಕ ಪಂಥವನ್ನು ಸ್ಥಾಪಿಸಿದರು. ಅವರ ಅನುಯಾಯಿಗಳು ಅವರನ್ನು ಜಂಭೋಜಿ ಎಂದು ಕರೆಯುತ್ತಿದ್ದರು.

ಜಂಭೋಜಿ ಸಮುದಾಯಕ್ಕಾಗಿ 29 ತತ್ವಗಳನ್ನು ರೂಪಿಸಿದರು. ‘ಬಿಷ್’ ಎಂದರೆ ಇಪ್ಪತ್ತು ಮತ್ತು ‘ನೋಯ್’ ಎಂದರೆ ಒಂಭತ್ತು ಎಂಬ ವಿವರಣೆಯಿಂದ ಬಿಷ್ಣೋಯಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ಹಸಿರು ಮರಗಳನ್ನು ಕಡಿಯಬಾರದು, ಎಲ್ಲ ಜೀವಿಗಳ ಬಗ್ಗೆ ಕರುಣೆ ಹೊಂದಿರಬೇಕು, ಪ್ರಾಣಿಗಳನ್ನು ಕೊಲ್ಲಬಾರದು ಮತ್ತು ಮದ್ಯ ಹಾಗೂ ತಂಬಾಕು ಸೇವಿಸಬಾರದು ಎಂಬುದು ಈ ತತ್ವಗಳ ಪ್ರಮುಖ ಅಂಶಗಳು.

ಕೃಷ್ಣಮೃಗದ ಬಗ್ಗೆ ಬಿಷ್ಣೋಯಿ ಸಮುದಾಯಕ್ಕಿರುವ ವಿಶೇಷ ಗೌರವವೂ ಗಮನಾರ್ಹ. ಜಾನಪದ ನಂಬಿಕೆಗಳ ಪ್ರಕಾರ, ಕೃಷ್ಣಮೃಗವನ್ನು ಪವಿತ್ರ ಪ್ರಾಣಿಯಾಗಿ ಕಾಣುವ ಸಂಪ್ರದಾಯ ಈ ಸಮುದಾಯದಲ್ಲಿದೆ.

ಶತಮಾನಗಳಿಂದ ಉಳಿದುಬಂದಿರುವ ಈ ನಂಬಿಕೆಗಳು ಮುಂದೆ ಸಲ್ಮಾನ್ ಖಾನ್ ವಿರುದ್ಧದ ಪ್ರಕರಣ ಮತ್ತು ಲಾರೆನ್ಸ್ ಬಿಷ್ಣೋಯ್‌ ನ ಬೆದರಿಕೆಗಳ ಚರ್ಚೆಯಲ್ಲಿ ಪ್ರಮುಖ ಸ್ಥಾನ ಪಡೆದವು.

ಇಲ್ಲಿ ಒಂದು ದೊಡ್ಡ ವೈರುಧ್ಯವೂ ಇದೆ. ಅಹಿಂಸೆ, ಜೀವಿಗಳ ರಕ್ಷಣೆ ಮತ್ತು ಪ್ರಕೃತಿಯ ಸಂರಕ್ಷಣೆಯನ್ನು ಪ್ರತಿಪಾದಿಸುವ ಸಮುದಾಯದ ಹೆಸರಿನೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬನ ವಿರುದ್ಧವೇ ಹಿಂಸಾತ್ಮಕ ಅಪರಾಧಗಳ ಆರೋಪಗಳು ಕೇಳಿಬರುತ್ತಿವೆ.

► ‘ಮಿಲ್ಕಿ’ ಎಂಬ ಹುಡುಗನಿಂದ ಕುಖ್ಯಾತ ಗ್ಯಾಂಗ್‌ ಸ್ಟರ್‌ ವರೆಗೆ

1993ರ ಫೆಬ್ರುವರಿ 12ರಂದು ಪೊಲೀಸ್ ಕಾನ್‌ಸ್ಟೇಬಲ್ ಲವಿಂದರ್ ಸಿಂಗ್ ಮತ್ತು ಸುನೀತಾ ದಂಪತಿಗೆ ಗಂಡು ಮಗು ಜನಿಸಿತು. ಮಗುವಿಗೆ ಬಲ್ಕರನ್ ಎಂದು ಹೆಸರಿಡಲಾಯಿತು. ಬಿಳಿ ಮೈಬಣ್ಣ ಹೊಂದಿದ್ದ ಆತನನ್ನು ಸ್ನೇಹಿತರು ‘ಮಿಲ್ಕಿ’ ಎಂದು ಕರೆಯುತ್ತಿದ್ದರು. ಮುಂದೆ ಆತ ಲಾರೆನ್ಸ್ ಬಿಷ್ಣೋಯ್ ಎಂಬ ಹೆಸರಿನಿಂದ ಕುಖ್ಯಾತಿ ಗಳಿಸಿದನು.

2010ರಲ್ಲಿ ಚಂಡೀಗಢದ ಡಿಎವಿ ಕಾಲೇಜಿಗೆ ಸೇರಿದ ಲಾರೆನ್ಸ್, 2011ರ ಹೊತ್ತಿಗೆ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ವಿದ್ಯಾರ್ಥಿ ರಾಜಕೀಯದಲ್ಲಿ ಪ್ರಭಾವ ಗಳಿಸಿ ಸಂಘಟನೆಯ ಅಧ್ಯಕ್ಷನಾಗಬೇಕೆಂಬ ಆಸೆ ಹೊಂದಿದ್ದ.

ಇದೇ ಅವಧಿಯಲ್ಲಿ ಆತ ಸತೀಂದರ್‌ ಜಿತ್ ಸಿಂಗ್‌ ನನ್ನು ಭೇಟಿಯಾದನು. ಮುಂದೆ ಗೋಲ್ಡಿ ಬ್ರಾರ್ ಎಂದು ಪ್ರಸಿದ್ಧನಾದ ಈತ ಲಾರೆನ್ಸ್‌ ನ ಆಪ್ತ ಸಹಚರನಾದ. ಇಬ್ಬರೂ ಕ್ಯಾಂಪಸ್‌ ನಲ್ಲಿ ಹಿಂಸಾಚಾರ ಮತ್ತು ಕ್ರಿಮಿನಲ್ ಚಟುವಟಿಕೆಗಳ ಆರೋಪಗಳಿಗೆ ಗುರಿಯಾದರು.

ಕಾಲೇಜು ಚುನಾವಣೆಯ ಸಂದರ್ಭದಲ್ಲಿ ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳನ್ನು ಜೀವಂತವಾಗಿ ಸುಟ್ಟುಹಾಕಿದ ಘಟನೆ ಇಬ್ಬರನ್ನೂ ವೈಯಕ್ತಿಕ ಸೇಡಿನ ಹಾದಿಗೆ ತಳ್ಳಿತು ಎಂದು ಕೆಲವು ವರದಿಗಳು ಹೇಳುತ್ತವೆ. ಆದರೆ ಈ ಆರೋಪ ದೃಢಪಟ್ಟಿಲ್ಲ. ಲಾರೆನ್ಸ್ ಕೂಡ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ.

2010ರಿಂದ 2012ರ ನಡುವೆ ಚಂಡೀಗಢದಲ್ಲಿ ಕೊಲೆ ಯತ್ನ, ಅತಿಕ್ರಮಣ, ಹಲ್ಲೆ ಮತ್ತು ದರೋಡೆ ಸೇರಿದಂತೆ ಏಳು ಪ್ರಕರಣಗಳು ದಾಖಲಾಗಿದ್ದವು ಎಂದು ವರದಿಯಾಗಿದೆ.

ಕಾಲೇಜು ರಾಜಕೀಯದೊಂದಿಗೆ ಆರಂಭವಾದ ಆತನ ಜೀವನ ಕ್ರಮೇಣ ಕ್ರಿಮಿನಲ್ ಪ್ರಕರಣಗಳತ್ತ ತಿರುಗಿತು. ಈ ಬದಲಾವಣೆಯೇ ಮುಂದೆ ದೊಡ್ಡ ಅಪರಾಧ ಜಾಲದ ರೂಪುಗೊಳ್ಳುವಿಕೆಗೆ ನೆಲೆಯಾಯಿತು ಎಂದು ವಿಶ್ಲೇಷಿಸಲಾಗುತ್ತದೆ.

► ಜೈಲು: ಶಿಕ್ಷೆಯ ಸ್ಥಳವೋ, ಅಪರಾಧ ಜಾಲದ ಕೇಂದ್ರವೋ?

2014ರಲ್ಲಿ ರಾಜಸ್ಥಾನ ಪೊಲೀಸರೊಂದಿಗಿನ ಸಶಸ್ತ್ರ ಘರ್ಷಣೆಯ ಬಳಿಕ ಲಾರೆನ್ಸ್ ಬಿಷ್ಣೋಯ್ ಬಂಧನಕ್ಕೊಳಗಾದನು. ಆಗ ಆತನಿಗೆ 21 ವರ್ಷ ವಯಸ್ಸು. ಎರಡು ರಾಜ್ಯಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಆತ ಜೈಲು ಸೇರಿದನು.

ಆದರೆ ಜೈಲು ಸೇರಿದ ಬಳಿಕ ಆತನ ಹೆಸರು ಅಪರಾಧ ಜಗತ್ತಿನಿಂದ ಮರೆಯಾಗಲಿಲ್ಲ. ಬದಲಾಗಿ, ಅಲ್ಲಿಂದಲೇ ತನ್ನ ಸಂಪರ್ಕಗಳನ್ನು ಸಂಘಟಿಸಲು ಮತ್ತು ಜಾಲವನ್ನು ವಿಸ್ತರಿಸಲು ಪ್ರಯತ್ನಿಸಿದನೆಂಬ ಆರೋಪಗಳು ಕೇಳಿಬಂದವು.

ನಿರ್ಮಾಣ ಕ್ಷೇತ್ರದಲ್ಲಿ ಸುಲಿಗೆ ಮತ್ತು ಅಕ್ರಮ ವ್ಯವಹಾರ ನಡೆಸುವ ಜಾಲಗಳು, ರಿಯಲ್ ಎಸ್ಟೇಟ್ ಜಾಲಗಳು ಮತ್ತು ಗಡಿಯಾಚೆಗಿನ ಕಳ್ಳಸಾಗಣೆ ಸರಪಳಿಗಳ ಕಾರ್ಯವೈಖರಿಯನ್ನು ಆತ ಗಮನಿಸಿದನು ಎಂದು ವಿಶ್ಲೇಷಿಸಲಾಗುತ್ತದೆ. ಜಾಲದ ಮುಖ್ಯಸ್ಥ ಜೈಲಿನಲ್ಲಿದ್ದರೂ ಸಹಚರರ ಮೂಲಕ ಕಾರ್ಯಾಚರಣೆ ಮುಂದುವರಿಸಬಹುದಾದ ವ್ಯವಸ್ಥೆಯನ್ನು ರೂಪಿಸುವ ಸಾಧ್ಯತೆಯನ್ನು ಆತ ಅರಿತುಕೊಂಡಿದ್ದಾನೆ ಎಂಬ ಆರೋಪವಿದೆ.

ಭಯದ ಮೂಲಕ ಹೆಸರು ಗಳಿಸುವುದು, ದೊಡ್ಡ ಗುರಿಗಳ ವಿರುದ್ಧ ಹಿಂಸಾಚಾರ ನಡೆಸಿ ವ್ಯಾಪಕ ಪ್ರಚಾರ ಪಡೆಯುವುದು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವುದು ಈ ಜಾಲದ ಕಾರ್ಯತಂತ್ರದ ಭಾಗವೆಂದು ಹೇಳಲಾಗುತ್ತದೆ.

ಹೀಗೆ ಜೈಲಿನ ಗೋಡೆಗಳ ನಡುವೆಯೇ ಅಪರಾಧ ಜಾಲದ ಪ್ರಭಾವ ವಿಸ್ತರಿಸಿದೆಯೇ ಎಂಬ ಪ್ರಶ್ನೆ ತನಿಖಾ ಸಂಸ್ಥೆಗಳಿಗೂ ಸವಾಲಾಗಿದೆ.

► ಸಲ್ಮಾನ್ ಖಾನ್ ಮತ್ತು ಕೃಷ್ಣಮೃಗ ಪ್ರಕರಣ

1998ರ ಅಕ್ಟೋಬರ್ 1ರಂದು ‘ಹಮ್ ಸಾಥ್-ಸಾಥ್ ಹೈನ್’ ಚಿತ್ರದ ಚಿತ್ರೀಕರಣಕ್ಕಾಗಿ ಜೋಧ್‌ ಪುರದಲ್ಲಿದ್ದ ಸಲ್ಮಾನ್ ಖಾನ್, ಎರಡು ಕೃಷ್ಣಮೃಗಗಳನ್ನು ಕೊಂದಿದ್ದಾರೆ ಎಂದು ಆರೋಪಿಸಲಾಯಿತು. ಬಿಷ್ಣೋಯಿ ಸಮುದಾಯದವರು ಈ ಸಂಬಂಧ ದೂರು ದಾಖಲಿಸಿದರು. ಪ್ರಕರಣ ಹಲವು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಟ್ಟಿತ್ತು.

ಲಾರೆನ್ಸ್ ಬಿಷ್ಣೋಯ್ ಈ ಪ್ರಕರಣವನ್ನು ತನ್ನ ಸಮುದಾಯದ ಧಾರ್ಮಿಕ ನಂಬಿಕೆಗಳೊಂದಿಗೆ ಜೋಡಿಸಿಕೊಂಡನು. ಕೃಷ್ಣಮೃಗವನ್ನು ತನ್ನ ಗುರುತಿನ ಸಂಕೇತವನ್ನಾಗಿ ಮಾಡಿಕೊಂಡು ಸಲ್ಮಾನ್ ಖಾನ್ ವಿರುದ್ಧ ಸಾರ್ವಜನಿಕವಾಗಿ ಬೆದರಿಕೆ ಹಾಕಿದನು.

2018ರಲ್ಲಿ ಲಾರೆನ್ಸ್‌ ನ ಸಹಚರ ಸಂಪತ್ ನೆಹ್ರಾನನ್ನು ಮುಂಬೈನ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್‌ ನ ಹೊರಗೆ ಬಂಧಿಸಲಾಯಿತು. ಸಲ್ಮಾನ್ ಖಾನ್ ಅವರ ಮನೆಯ ಸುತ್ತಮುತ್ತ ಕಣ್ಗಾವಲು ನಡೆಸಿದ್ದ ಆರೋಪ ಆತನ ಮೇಲಿತ್ತು.

ಈ ಬೆಳವಣಿಗೆಗಳ ಬಳಿಕ ಸಲ್ಮಾನ್ ಖಾನ್ ಮತ್ತು ಬಿಷ್ಣೋಯ್ ಗ್ಯಾಂಗ್ ನಡುವಿನ ಸಂಘರ್ಷ ಕೇವಲ ವೈಯಕ್ತಿಕ ಅಥವಾ ಕಾನೂನು ವಿವಾದವಾಗಿ ಉಳಿಯದೆ, ಸಾರ್ವಜನಿಕ ಭದ್ರತೆಯ ಪ್ರಶ್ನೆಯಾಗಿಯೂ ಚರ್ಚೆಗೆ ಬಂದಿತು.

► ಸಿಧು ಮೂಸೆ ವಾಲಾ ಹತ್ಯೆ: ದೇಶದ ಗಮನ ಸೆಳೆದ ಘಟನೆ

2022ರ ಮೇ 29ರಂದು ಪಂಜಾಬ್‌ ನ ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮಕ್ಕೆ ತೆರಳುತ್ತಿದ್ದ ಗಾಯಕ ಸಿಧು ಮೂಸೆ ವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಅವರು ತಮ್ಮ ಮಹೀಂದ್ರಾ ಥಾರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಎರಡು ವಾಹನಗಳು ದಾರಿ ತಡೆದಿದ್ದವು. ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಅವರ ಮೇಲೆ 28 ಗುಂಡುಗಳನ್ನು ಹಾರಿಸಲಾಗಿತ್ತು.

ಈ ಹತ್ಯೆ ದೇಶಾದ್ಯಂತ ಸಂಚಲನ ಮೂಡಿಸಿತು. ಕೆನಡಾದಲ್ಲಿದ್ದ ಗೋಲ್ಡಿ ಬ್ರಾರ್ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಲ್ಲದೆ, ಲಾರೆನ್ಸ್ ಬಿಷ್ಣೋಯ್ ತನ್ನ ಪಾಲುದಾರ ಎಂದು ಹೇಳಿಕೊಂಡನು.

ಸಿಧು ಮೂಸೆ ವಾಲಾ ಹತ್ಯೆಯ ಬಳಿಕ ಬಿಷ್ಣೋಯ್ ಗ್ಯಾಂಗ್‌ ನ ಹೆಸರು ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಚರ್ಚೆಗೆ ಬಂತು. ಗ್ಯಾಂಗ್‌ ನ ಅಂತರರಾಷ್ಟ್ರೀಯ ಸಂಪರ್ಕಗಳು, ಹಣಕಾಸಿನ ಮೂಲಗಳು ಮತ್ತು ಸಹಚರರ ಜಾಲದ ಬಗ್ಗೆ ತನಿಖಾ ಸಂಸ್ಥೆಗಳು ಗಮನ ಹರಿಸಿದವು.

► ಕೆನಡಾ ನಂಟು: ಅಪರಾಧದಿಂದ ಅಂತರರಾಷ್ಟ್ರೀಯ ರಾಜಕೀಯದವರೆಗೆ

ಸಿಖ್ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ನನ್ನು 2023ರ ಜೂನ್‌ ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಭಾರತ ಸರಕಾರ ನಿಜ್ಜರ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿತ್ತು.

ಈ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಸರಕಾರ ಆರೋಪಿಸಿತು. ಬಳಿಕ ಬಿಷ್ಣೋಯ್ ಗ್ಯಾಂಗ್ ಅನ್ನು ಪರೋಕ್ಷ ಜಾಲವಾಗಿ ಬಳಸಿಕೊಳ್ಳಲಾಗುತ್ತಿತ್ತು ಮತ್ತು ಇದರ ಹಿಂದೆ ಭಾರತೀಯ ಗುಪ್ತಚರ ಸಂಸ್ಥೆಗಳಿದ್ದವು ಎಂಬ ಆರೋಪಗಳೂ ಕೇಳಿಬಂದವು. ಭಾರತ ಈ ಆರೋಪಗಳನ್ನು ನಿರಾಕರಿಸಿತು.

ಸಬರಮತಿ ಜೈಲಿನಲ್ಲಿದ್ದ ಲಾರೆನ್ಸ್ ತನ್ನನ್ನು ದೇಶಭಕ್ತ ಮತ್ತು ಹಿಂದೂ ರಾಷ್ಟ್ರೀಯವಾದಿ ಎಂದು ಬಿಂಬಿಸಿಕೊಂಡನು. ಖಾಲಿಸ್ತಾನ್ ಚಳವಳಿಯನ್ನು ವಿರೋಧಿಸುವುದಾಗಿ ಹೇಳಿದ ಆತ, ತಾನು ಯಾರ ಕೈಗೊಂಬೆಯೂ ಅಲ್ಲ ಎಂದು ಸಮರ್ಥಿಸಿಕೊಂಡನು.

ಆದರೆ ಆರೋಪಗಳು, ನಿರಾಕರಣೆಗಳು ಮತ್ತು ತನಿಖೆಗಳ ನಡುವೆ ಪಂಜಾಬ್‌ ನ ಗಡಿ ಪ್ರದೇಶದ ಹಿನ್ನೆಲೆಯಿಂದ ಬಂದ ಗ್ಯಾಂಗ್‌ ಸ್ಟರ್‌ ನ ಹೆಸರು ಅಂತರರಾಷ್ಟ್ರೀಯ ರಾಜಕೀಯದ ಚರ್ಚೆಗಳಿಗೂ ಪ್ರವೇಶಿಸಿತು.

ಬಾಬಾ ಸಿದ್ದಿಕಿ ಹತ್ಯೆ: ಮುಂಬೈನಲ್ಲಿ ಭಯದ ಹೊಸ ಅಧ್ಯಾಯ

2024ರ ಅಕ್ಟೋಬರ್ 12ರಂದು ಮುಂಬೈನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಗೀಡಾದರು. ಬಾಂದ್ರಾದಲ್ಲಿರುವ ತಮ್ಮ ಮಗನ ಕಚೇರಿಯಿಂದ ಹೊರಬಂದಿದ್ದ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಫುಟ್‌ಪಾತ್ ತಲುಪುವ ಮೊದಲೇ ಅವರಿಗೆ ಮೂರು ಗುಂಡುಗಳು ತಗುಲಿದ್ದವು.

ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕಿ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಪ್ರಭಾವಿ ಸಂಪರ್ಕಗಳನ್ನು ಹೊಂದಿದ್ದರು. ಬಾಲಿವುಡ್ ತಾರೆಯರು ಭಾಗವಹಿಸುತ್ತಿದ್ದ ಇಫ್ತಾರ್ ಕೂಟಗಳ ಆಯೋಜಕರಾಗಿಯೂ ಪ್ರಸಿದ್ಧರಾಗಿದ್ದರು.

ಈ ಹತ್ಯೆಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತು. ಸಲ್ಮಾನ್ ಖಾನ್ ಅವರೊಂದಿಗಿನ ಸಿದ್ದಿಕಿ ಅವರ ನಿಕಟ ಸಂಬಂಧವೇ ದಾಳಿಗೆ ಕಾರಣವೆಂದು ಹೇಳಲಾಯಿತು.

ಹತ್ಯೆಯು ಬಿಷ್ಣೋಯ್ ಗ್ಯಾಂಗ್‌ ನ ಕಾರ್ಯಾಚರಣೆಯ ವ್ಯಾಪ್ತಿ ಮುಂಬೈಗೂ ವಿಸ್ತರಿಸಿರುವುದನ್ನು ತೋರಿಸಿತು. ಇತರ ಅಪರಾಧ ಜಾಲಗಳ ಪ್ರಭಾವವಿದ್ದ ಪ್ರದೇಶದಲ್ಲೂ ದಾಳಿ ನಡೆಸುವ ಸಾಮರ್ಥ್ಯವನ್ನು ಗ್ಯಾಂಗ್ ಹೊಂದಿದೆ ಎಂಬ ಸಂದೇಶ ರವಾನೆಯಾಯಿತು.

ಇದು ಕೇವಲ ಒಬ್ಬ ರಾಜಕಾರಣಿಯ ಹತ್ಯೆಯಲ್ಲ. ಬಾಲಿವುಡ್, ರಾಜಕೀಯ ಮತ್ತು ಅಪರಾಧ ಜಗತ್ತಿನ ನಡುವಿನ ಸಂಪರ್ಕಗಳ ಬಗ್ಗೆ ಆತಂಕ ಹೆಚ್ಚಿಸಿದ ಘಟನೆಯೂ ಆಗಿತ್ತು.

► ರಾಷ್ಟ್ರೀಯವಾದಿ ಮುಖವಾಡದ ಆರೋಪ

2025ರ ಎಪ್ರಿಲ್‌ ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಬಿಷ್ಣೋಯ್ ಗ್ಯಾಂಗ್ ಪಾಕಿಸ್ತಾನ ಮತ್ತು ಹಫೀಝ್ ಸಯೀದ್‌ ಗೆ ಬೆದರಿಕೆ ಹಾಕಿತು. ‘ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಫೀಝ್ ಸಯೀದ್‌ ಗೆ ಮೃತ್ಯುವಾಗಲಿದೆ’ ಎಂಬ ಸಂದೇಶದ ಮೂಲಕ ತನ್ನನ್ನು ರಾಷ್ಟ್ರೀಯವಾದಿ ಮತ್ತು ಪಾಕಿಸ್ತಾನ ವಿರೋಧಿ ಸಂಘಟನೆಯಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸಿತು.

ಇದನ್ನು ಗ್ಯಾಂಗ್‌ ನ ಪ್ರಚಾರ ತಂತ್ರದ ಭಾಗವೆಂದು ವಿಶ್ಲೇಷಿಸಲಾಗಿದೆ. ಸಲ್ಮಾನ್ ಖಾನ್ ವಿರುದ್ಧದ ಬೆದರಿಕೆಗಳನ್ನು ಧಾರ್ಮಿಕ ನಂಬಿಕೆಗಳ ರಕ್ಷಣೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್, ಬಳಿಕ ತನ್ನನ್ನು ರಾಷ್ಟ್ರದ ರಕ್ಷಕನಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸಿತು.

ಆದರೆ ಇಂತಹ ಪ್ರಚಾರದ ಮೂಲಕ ಅಪರಾಧಗಳ ಆರೋಪಗಳ ಗಂಭೀರತೆಯನ್ನು ಮರೆಮಾಚಲು ಸಾಧ್ಯವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

► 800ಕ್ಕೂ ಹೆಚ್ಚು ಶಾರ್ಪ್‌ಶೂಟರ್‌ ಗಳ ಜಾಲ?

ಲಾರೆನ್ಸ್ ಬಿಷ್ಣೋಯ್ ಗುಜರಾತ್‌ ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಗರಿಷ್ಠ ಭದ್ರತೆಯಲ್ಲಿದ್ದಾನೆ. ಆದರೂ, ಆತನ ಹೆಸರಿನೊಂದಿಗೆ ಗುರುತಿಸಿಕೊಂಡಿರುವ ಗ್ಯಾಂಗ್‌ ನ ಬೆದರಿಕೆಗಳು ಮತ್ತು ಹಿಂಸಾತ್ಮಕ ಕೃತ್ಯಗಳು ಮುಂದುವರಿದಿವೆ ಎಂಬ ಆರೋಪಗಳಿವೆ.

NIA ತನ್ನ ಆರೋಪಪಟ್ಟಿಗಳಲ್ಲಿ ಈ ಜಾಲವನ್ನು ಸಂಘಟಿತ ಅಪರಾಧ ವ್ಯವಸ್ಥೆಯಾಗಿ ವಿವರಿಸಿದೆ. ಕ್ರಮಾನುಗತ ವ್ಯವಸ್ಥೆ, ಪ್ರಾದೇಶಿಕ ಪ್ರಭಾವ, ಶಿಸ್ತು, ಮಾಧ್ಯಮ ತಂತ್ರ ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳು ಈ ಜಾಲದ ಭಾಗವೆಂದು ಆರೋಪಿಸಲಾಗಿದೆ.

ಕಳ್ಳಸಾಗಣೆ ಮೂಲಕ ಪಡೆದ ಮೊಬೈಲ್ ಫೋನ್‌ ಗಳು, ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳು ಮತ್ತು ಇಂಟರ್ನೆಟ್ ಆಧಾರಿತ VoIP ಕರೆಗಳನ್ನು ಬಳಸಿಕೊಂಡು ಜಾಲವನ್ನು ನಿರ್ವಹಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಕೆನಡಾ, ಥಾಯ್ಲೆಂಡ್, ಅರ್ಮೇನಿಯಾ, ಅಝರ್‌ ಬೈಜಾನ್ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಗ್ಯಾಂಗ್‌ ನ ಶೂಟರ್‌ ಗಳು ಹಾಗೂ ಸಹಚರರು ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಗಳಿವೆ. ಜಾಲವು 800ಕ್ಕೂ ಹೆಚ್ಚು ಶಾರ್ಪ್‌ ಶೂಟರ್‌ಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ವರದಿಗಳು ಹೇಳುತ್ತವೆ.

ಈ ಆರೋಪಗಳು ಸಾಬೀತಾಗಬೇಕಾದರೂ, ಜೈಲಿನಲ್ಲಿರುವ ಆರೋಪಿಯೊಬ್ಬನ ಹೆಸರಿನೊಂದಿಗೆ ಇಷ್ಟು ವ್ಯಾಪಕವಾದ ಅಪರಾಧ ಜಾಲ ಗುರುತಿಸಿಕೊಂಡಿರುವುದು ತನಿಖಾ ಸಂಸ್ಥೆಗಳ ಮುಂದಿರುವ ಸವಾಲಿನ ಗಂಭೀರತೆಯನ್ನು ತೋರಿಸುತ್ತದೆ.

► ಆಪ್ತರಿಂದ ಎದುರಾಳಿಗಳಾದ ಗೋಲ್ಡಿ ಬ್ರಾರ್

ಲಾರೆನ್ಸ್ ಬಿಷ್ಣೋಯ್‌ನ ಕಥೆಯಲ್ಲಿ ಈಗ ಹೊಸ ತಿರುವು ಕಾಣಿಸಿಕೊಂಡಿದೆ. ಒಂದು ಕಾಲದಲ್ಲಿ ಆತನ ಅತ್ಯಂತ ಆಪ್ತ ಸಹಚರನಾಗಿದ್ದ ಗೋಲ್ಡಿ ಬ್ರಾರ್ ಈಗ ಎದುರಾಳಿಯಾಗಿದ್ದಾನೆ.

2025ರ ನವೆಂಬರ್‌ನಲ್ಲಿ ಲಾರೆನ್ಸ್‌ ನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್‌ ನನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲಾಯಿತು. ಆತ ತಿಹಾರ್ ಜೈಲಿನಲ್ಲಿದ್ದಾನೆ ಎಂದು ವರದಿಯಾಗಿದೆ. ಗ್ಯಾಂಗ್‌ ನ ಅಂತರರಾಷ್ಟ್ರೀಯ ಸಂಪರ್ಕಗಳನ್ನು ಪತ್ತೆಹಚ್ಚಲು NIA ಆತನ ವಿಚಾರಣೆಯನ್ನು ಬಳಸಿಕೊಳ್ಳುತ್ತಿದೆ.

ಅನ್ಮೋಲ್‌ ನ ಬಂಧನವು ಗ್ಯಾಂಗ್‌ ಗೆ ಕಾರ್ಯಾಚರಣೆಯ ಹೊಡೆತ ನೀಡುವುದರ ಜೊತೆಗೆ ಲಾರೆನ್ಸ್ ಮತ್ತು ಗೋಲ್ಡಿ ಬ್ರಾರ್ ನಡುವಿನ ಸಂಬಂಧದಲ್ಲಿನ ಬಿರುಕುಗಳನ್ನು ಮತ್ತಷ್ಟು ಆಳಗೊಳಿಸಿತು.

ಸುಮಾರು 15 ವರ್ಷಗಳ ಕಾಲ ಒಟ್ಟಿಗೆ ಕಾರ್ಯನಿರ್ವಹಿಸಿದ್ದ ಇಬ್ಬರ ನಡುವೆ, ಅನ್ಮೋಲ್ ಅಮೆರಿಕದಲ್ಲಿ ಬಂಧನಕ್ಕೊಳಗಾದ ಬಳಿಕ 2024ರಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದವು. ಕಾನೂನು ನೆರವು ನೀಡುವಲ್ಲಿ ಬ್ರಾರ್ ವಿಫಲನಾಗಿದ್ದಾನೆ ಎಂದು ಬಿಷ್ಣೋಯ್ ಬಣ ಭಾವಿಸಿತ್ತು ಎನ್ನಲಾಗಿದೆ.

2025ರ ಆರಂಭದ ವೇಳೆಗೆ ಇಬ್ಬರ ಬಣಗಳು ಬೇರ್ಪಟ್ಟವು. ಹಲವು ಪ್ರಮುಖ ಅಪರಾಧಿಗಳು ತಮ್ಮ ನಿಷ್ಠೆಯನ್ನು ಬದಲಿಸಿಕೊಂಡರು. ಇದರಿಂದ ಗ್ಯಾಂಗ್‌ ವಾರ್ ತೀವ್ರಗೊಂಡಿತು.

2025ರ ಡಿಸೆಂಬರ್‌ ನಲ್ಲಿ ಲಾರೆನ್ಸ್‌ ನ ಹಳೆಯ ಸಹಚರ ಇಂದರ್‌ ಪ್ರೀತ್ ಸಿಂಗ್ ಅಲಿಯಾಸ್ ಪ್ಯಾರಿಯನ್ನು ಚಂಡೀಗಢದ ಸೆಕ್ಟರ್ 26ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಡಿಎವಿ ಕಾಲೇಜಿನ ದಿನಗಳಿಂದಲೂ ಆತ ಲಾರೆನ್ಸ್‌ ನ ಆಪ್ತನಾಗಿದ್ದ. ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಲಾರೆನ್ಸ್‌ ಗೆ ಆಹಾರ ಕಳುಹಿಸುತ್ತಿದ್ದನೆಂದೂ ಹೇಳಲಾಗಿತ್ತು.

ಪ್ಯಾರಿ ಬಣ ಬದಲಿಸಿದ್ದಾನೆ ಎಂದು ಆರೋಪಿಸಿದ ಬಿಷ್ಣೋಯ್ ಗ್ಯಾಂಗ್ ಹತ್ಯೆಯ ಹೊಣೆ ಹೊತ್ತುಕೊಂಡಿತು. ಇದಕ್ಕೆ ಪ್ರತಿಯಾಗಿ ಗೋಲ್ಡಿ ಬ್ರಾರ್ ಆರು ನಿಮಿಷಗಳ ಆಡಿಯೊ ಸಂದೇಶ ಬಿಡುಗಡೆ ಮಾಡಿ, ಲಾರೆನ್ಸ್ ತನ್ನದೇ ಮರಣದಂಡನೆಗೆ ಸಹಿ ಹಾಕಿದ್ದಾನೆ ಎಂದು ಎಚ್ಚರಿಸಿದನು.

ಒಮ್ಮೆ ಪರಸ್ಪರರ ಬಲವಾಗಿದ್ದವರು ಈಗ ಪರಸ್ಪರರ ವಿರುದ್ಧ ನಿಂತಿರುವುದು ಗ್ಯಾಂಗ್‌ನೊಳಗಿನ ಸಂಘರ್ಷ ಎಷ್ಟು ತೀವ್ರವಾಗಿದೆ ಎಂಬುದನ್ನು ತೋರಿಸುತ್ತದೆ.

► ಕಾನೂನಿನ ದೃಷ್ಟಿಯಲ್ಲಿ ವಿಚಾರಣಾಧೀನ ಕೈದಿ

2026ರ ಆರಂಭದ ವೇಳೆಗೆ ಲಾರೆನ್ಸ್ ಬಿಷ್ಣೋಯ್ ಯಾವುದೇ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿಲ್ಲ ಎಂದು ವರದಿಗಳು ಹೇಳುತ್ತವೆ. NIAಯ ಆರೋಪಪಟ್ಟಿಗಳು ವಿಸ್ತರಿಸಿದ್ದು, ಹಲವು ರಾಜ್ಯಗಳಲ್ಲಿ ಆತನ ವಿರುದ್ಧದ ಪ್ರಕರಣಗಳ ಸಂಖ್ಯೆ 84ರಷ್ಟಿದೆ ಎಂಬ ಮಾಹಿತಿ ವರದಿಯಾಗಿದೆ.

ಕಾನೂನಿನ ದೃಷ್ಟಿಯಲ್ಲಿ ಆತ ವಿಚಾರಣಾಧೀನ ಕೈದಿ. ಗ್ಯಾಂಗ್‌ ನ ದೃಷ್ಟಿಯಲ್ಲಿ ಕಮಾಂಡರ್. ಆದರೆ ಈ ಎರಡು ಚಿತ್ರಣಗಳ ನಡುವಿನ ಅಂತರವೇ ಆತನ ಕಥೆಯ ಸಂಕೀರ್ಣತೆಯನ್ನು ತೋರಿಸುತ್ತದೆ.

ಒಂದೆಡೆ ತನಿಖಾ ಸಂಸ್ಥೆಗಳು ಆತನ ಜಾಲದ ಅಂತರರಾಷ್ಟ್ರೀಯ ಸಂಪರ್ಕಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ. ಮತ್ತೊಂದೆಡೆ, ಸಾಮಾಜಿಕ ಮಾಧ್ಯಮಗಳಲ್ಲಿ ಆತನನ್ನು ಬಂಡಾಯಗಾರ ಅಥವಾ ಧಾರ್ಮಿಕ ನಂಬಿಕೆಗಳ ರಕ್ಷಕನಂತೆ ಬಿಂಬಿಸುವ ಪ್ರವೃತ್ತಿಯೂ ಕಂಡುಬರುತ್ತಿದೆ.

ಫ್ಯಾನ್ ಪೇಜ್ ಗಳು, ರೀಲ್ಸ್ ಗಳು ಮತ್ತು ಯೂಟ್ಯೂಬ್ ಸಾಕ್ಷ್ಯಚಿತ್ರಗಳು ಆತನ ವ್ಯಕ್ತಿತ್ವವನ್ನು ವೈಭವೀಕರಿಸುತ್ತಿವೆ. ಆತನ ಹೆಸರಿನ ಜಾಕೆಟ್‌ ಗಳೂ ಮಾರಾಟವಾಗುತ್ತಿವೆ. ಅಪರಾಧಗಳ ಆರೋಪಗಳಿಗೆ ಗುರಿಯಾಗಿರುವ ವ್ಯಕ್ತಿಯೊಬ್ಬನನ್ನು ಜನಪ್ರಿಯ ಸಂಸ್ಕೃತಿಯ ಭಾಗವಾಗಿ ರೂಪಿಸುವ ಈ ಪ್ರವೃತ್ತಿ ಆತಂಕಕಾರಿ ಎಂಬ ಅಭಿಪ್ರಾಯಗಳಿವೆ.

► ಮನುಷ್ಯನಿಗಿಂತ ದೊಡ್ಡದಾದ ಪುರಾಣ

ಸಬರಮತಿ ಜೈಲಿನಲ್ಲಿರುವ ಲಾರೆನ್ಸ್ ಬಗ್ಗೆ ಹಲವು ದಂತಕಥೆಗಳು ಹರಿದಾಡುತ್ತಿವೆ. ಆತ ಮಾಂಸ ಮತ್ತು ಮದ್ಯವನ್ನು ತ್ಯಜಿಸಿ ತಪಸ್ವಿಯಂತೆ ಬದುಕುತ್ತಿದ್ದಾನೆ ಎಂಬ ಮಾತುಗಳಿವೆ. ದಿನದ ಬಹುಭಾಗ ಧ್ಯಾನದಲ್ಲಿ ಕಳೆಯುತ್ತಾನೆ ಮತ್ತು ಬಳಿಕ ತನ್ನ ಸಹಚರರಿಗೆ ಹಿಂಸಾತ್ಮಕ ಕೃತ್ಯಗಳ ಆದೇಶ ನೀಡುತ್ತಾನೆ ಎಂಬ ಕಥೆಗಳೂ ಕೇಳಿಬರುತ್ತವೆ. ಆದರೆ ಇವುಗಳಿಗೆ ದೃಢೀಕರಣವಿಲ್ಲ.

ಇನ್ನೊಂದು ವದಂತಿಯ ಪ್ರಕಾರ, ಆತ ಯಾವುದೋ ಗುಪ್ತ ಶಕ್ತಿಯ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ವಿದೇಶಗಳಲ್ಲಿ ನಡೆಯುವ ಕೆಲವು ಹತ್ಯೆಗಳ ಹಿಂದೆಯೂ ಆತನ ಕೈವಾಡವಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇಂತಹ ಹೇಳಿಕೆಗಳನ್ನು ದೃಢಪಟ್ಟ ಸತ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ.

ಈ ಎಲ್ಲ ಪುರಾಣಗಳ ನಡುವೆ ಒಂದು ದೊಡ್ಡ ವೈರುಧ್ಯವಿದೆ. ಲಾರೆನ್ಸ್ ಬಿಷ್ಣೋಯ್ ಜೀವ ರಕ್ಷಾ ಸಮಿತಿಯ ಯುವ ವಿಭಾಗದ ಅಧ್ಯಕ್ಷನಾಗಿದ್ದಾನೆ ಎಂದು ಹೇಳಲಾಗುತ್ತದೆ. ಜೀವಿಗಳ ರಕ್ಷಣೆಗಾಗಿ ಸ್ಥಾಪಿಸಲಾದ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಯೇ ಹಿಂಸಾಚಾರ ಮತ್ತು ಕೊಲೆ ಬೆದರಿಕೆಗಳ ಆರೋಪಗಳಿಗೆ ಗುರಿಯಾಗಿರುವುದು ವಿರೋಧಾಭಾಸದ ಸಂಗತಿ.

► ಕಾಲುವೆ ಹರಿಯುತ್ತಿದೆ; ಪ್ರಶ್ನೆಗಳು ಉಳಿದಿವೆ

ಗಂಗ್ ಕಾಲುವೆ ಇಂದಿಗೂ ಹರಿಯುತ್ತಿದೆ. ಕೃಷ್ಣಮೃಗಗಳು ಗಡಿ ಪ್ರದೇಶದ ಬಯಲುಗಳಲ್ಲಿ ಮೇಯುತ್ತಿವೆ. ಆದರೆ ಅಹಿಂಸೆ ಮತ್ತು ಜೀವಿಗಳ ರಕ್ಷಣೆಯನ್ನು ಪ್ರತಿಪಾದಿಸುವ ಬಿಷ್ಣೋಯಿ ಸಮುದಾಯವು, ಸಾವಿನೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಯ ಹೆಸರಿನೊಂದಿಗೆ ತನ್ನ ಧಾರ್ಮಿಕ ಪರಂಪರೆಯನ್ನು ಹೇಗೆ ಹೊಂದಿಸಿಕೊಳ್ಳಬೇಕು ಎಂಬ ಪ್ರಶ್ನೆಯನ್ನು ಎದುರಿಸುತ್ತಿದೆ.

ಲಾರೆನ್ಸ್ ಬಿಷ್ಣೋಯ್‌ನ ಕಥೆ ಕೇವಲ ಒಬ್ಬ ಗ್ಯಾಂಗ್‌ಸ್ಟರ್‌ ನ ಏಳಿಗೆಯ ಕಥೆಯಲ್ಲ. ಇದು ಅಪರಾಧ ಜಾಲಗಳ ವಿಸ್ತರಣೆ, ಜೈಲುಗಳೊಳಗಿನ ಕಾರ್ಯಾಚರಣೆಗಳ ಆರೋಪ, ಸಾಮಾಜಿಕ ಮಾಧ್ಯಮಗಳ ಮೂಲಕ ಅಪರಾಧಿಗಳ ವೈಭವೀಕರಣ ಮತ್ತು ಧಾರ್ಮಿಕ ಗುರುತಿನ ರಾಜಕೀಯ ಬಳಕೆಯ ಕುರಿತಾದ ಹಲವು ಪ್ರಶ್ನೆಗಳನ್ನು ಎತ್ತುತ್ತದೆ.

ಮರುಭೂಮಿಗೆ ನೀರು ತಂದ ಕಾಲುವೆಯ ಇತಿಹಾಸದಿಂದ ಆರಂಭವಾದ ಈ ಕಥೆ, ಇಂದು ಅಂತರರಾಷ್ಟ್ರೀಯ ಅಪರಾಧ ಜಾಲದ ಆರೋಪಗಳು ಮತ್ತು ಹಿಂಸಾಚಾರದ ನೆರಳಿನಲ್ಲಿ ಅಂತ್ಯವಿಲ್ಲದ ಪ್ರಶ್ನೆಗಳನ್ನು ಉಳಿಸಿದೆ.

ಒಂದು ಕಾಲದಲ್ಲಿ ಬಾಯಾರಿದ ಭೂಮಿಗೆ ಜೀವ ತುಂಬಿದ ನೆಲದಿಂದ ಬಂದ ವ್ಯಕ್ತಿಯ ಹೆಸರು ಇಂದು ಭಯದೊಂದಿಗೆ ಗುರುತಿಸಿಕೊಳ್ಳುತ್ತಿರುವುದು ಅತ್ಯಂತ ಕಹಿ ವೈರುಧ್ಯ.

ಸೌಜನ್ಯ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor