×
Ad

ತಡವಾಗಿ ಮಲಗುವ ಅಭ್ಯಾಸವೇ? ಇದು ನಿಮ್ಮ ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು

Update: 2026-06-14 20:00 IST

ಸಾಂದರ್ಭಿಕ ಚಿತ್ರ | Photo Credit : magnific.com

ದೇಹದ ಜೈವಿಕ ಗಡಿಯಾರವು ಚಯಾಪಚಯ ಕ್ರಿಯೆ, ಸಂತಾನೋತ್ಪತ್ತಿ ಮತ್ತು ಒಟ್ಟಾರೆ ಆರೋಗ್ಯದಲ್ಲಿ ಒಳಗೊಂಡಿರುವ ಹಾರ್ಮೋನ್‌ ಗಳ ಬಿಡುಗಡೆಯನ್ನು ನಿಯಂತ್ರಿಸುತ್ತದೆ.

ಸ್ತ್ರೀರೋಗ ತಜ್ಞೆ ಡಾ. ಮಹಿಮಾ ಕಾಕ್ ನಾಗ್ಪಾಲ್ ಅವರು ಇತ್ತೀಚೆಗೆ ರಾತ್ರಿ 11 ಗಂಟೆಯ ಮೊದಲು ಮಲಗುವುದು ಮಹಿಳೆಯರ ಹಾರ್ಮೋನ್ ಆರೋಗ್ಯಕ್ಕೆ ಉತ್ತಮ ಎಂದು ವಿವರಿಸಿದ್ದಾರೆ. ಇನ್‌ ಸ್ಟಾಗ್ರಾಂ ಪೋಸ್ಟ್‌ ನಲ್ಲಿ ಅವರು, “ಮಹಿಳೆಯರಲ್ಲಿ ಹಾರ್ಮೋನ್‌ ಗಳ ಸಮತೋಲನ, ಚಯಾಪಚಯ ಆರೋಗ್ಯ ಮತ್ತು ಸಂತಾನೋತ್ಪತ್ತಿ ಕಾರ್ಯವನ್ನು ಕಾಪಾಡುವಲ್ಲಿ ನಿದ್ರೆ ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಹದ ಹಾರ್ಮೋನ್ ವ್ಯವಸ್ಥೆಯು ಸಹಜವಾದ ಸಿರ್ಕಾಡಿಯನ್ ಲಯವನ್ನು ಅನುಸರಿಸುತ್ತದೆ. ತಡರಾತ್ರಿಯ ನಿದ್ರೆಯ ಅಡಚಣೆಯು ಅಂಡೋತ್ಪತ್ತಿ ಮತ್ತು ಫಲವತ್ತತೆಗೆ ಸಂಬಂಧಿಸಿದ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಕಳಪೆ ನಿದ್ರೆಯ ಅಭ್ಯಾಸಗಳು ಮತ್ತು ಸಾಕಷ್ಟು ನಿದ್ರೆ ಇಲ್ಲದಿರುವುದು ಹೆಚ್ಚಿನ ಕಾರ್ಟಿಸೋಲ್ ಮಟ್ಟ, ಇನ್ಸುಲಿನ್ ಪ್ರತಿರೋಧ, ಅನಿಯಮಿತ ಮುಟ್ಟಿನ ಚಕ್ರಗಳು ಮತ್ತು ಅಂಡೋತ್ಪತ್ತಿ ಅಪಸಾಮಾನ್ಯ ಕ್ರಿಯೆ (Ovulatory Dysfunction)ಗೆ ಸಂಬಂಧಿಸಿವೆ” ಎಂದು ಹೇಳಿದ್ದಾರೆ.

11 ಗಂಟೆಯ ಮೊದಲು ಮಲಗುವುದರಿಂದ ನಿಜವಾಗಿಯೂ ವ್ಯತ್ಯಾಸ ಉಂಟಾಗುತ್ತದೆಯೇ?

ನರ್ಚರ್ ಐವಿಎಫ್ ಕ್ಲಿನಿಕ್‌ ನ ಸ್ತ್ರೀರೋಗ ತಜ್ಞೆ ಹಾಗೂ ಐವಿಎಫ್ ತಜ್ಞೆ ಡಾ. ಅರ್ಚನಾ ಧವನ್ ಬಜಾಜ್ ಅವರ ಪ್ರಕಾರ, “ನಿದ್ರೆಯ ಸಮಯವೂ ಅಷ್ಟೇ ಮುಖ್ಯ.”

ನಿದ್ರೆಯ ಸಮಯ ಏಕೆ ಮುಖ್ಯ?

“ನಿದ್ರೆ ಮತ್ತು ಮಹಿಳೆಯರ ಹಾರ್ಮೋನ್ ಆರೋಗ್ಯದ ನಡುವೆ ನಿಕಟ ಸಂಬಂಧವಿದೆ. ಒಟ್ಟು ನಿದ್ರೆಯ ಅವಧಿ ಮುಖ್ಯವಾಗುತ್ತದೆ. ಆದರೆ ಇತ್ತೀಚಿನ ಅನೇಕ ಸಂಶೋಧನೆಗಳು ನಿದ್ರೆಯ ಸಮಯವೂ ಮಹತ್ವದ್ದಾಗಿದೆ ಎಂದು ಸೂಚಿಸುತ್ತವೆ. ದೇಹದ ಜೈವಿಕ ಗಡಿಯಾರ (ಸಿರ್ಕಾಡಿಯನ್ ರಿದಮ್) ಚಯಾಪಚಯ ಕ್ರಿಯೆ, ಸಂತಾನೋತ್ಪತ್ತಿ ಮತ್ತು ಒಟ್ಟಾರೆ ಆರೋಗ್ಯದಲ್ಲಿ ಒಳಗೊಂಡಿರುವ ಹಾರ್ಮೋನ್‌ ಗಳ ಬಿಡುಗಡೆಯನ್ನು ನಿಯಂತ್ರಿಸುತ್ತದೆ. ರಾತ್ರಿ 11 ಗಂಟೆಯ ಮೊದಲು ನಿದ್ರಿಸುವುದರಿಂದ ಪ್ರಯೋಜನಗಳಿವೆ. ಏಕೆಂದರೆ ಅದು ದೇಹದ ಜೈವಿಕ ಗಡಿಯಾರದ ಲಯದೊಂದಿಗೆ ಹೊಂದಿಕೆಯಾಗುತ್ತದೆ. ರಾತ್ರಿಯ ಮೊದಲ ಭಾಗದಲ್ಲಿ ದೇಹವು ಮೆಲಟೋನಿನ್ ಮತ್ತು ಬೆಳವಣಿಗೆಯ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ. ಅವು ಅಂಗಾಂಶಗಳ ದುರಸ್ತಿ, ಚಯಾಪಚಯ ನಿಯಂತ್ರಣ ಹಾಗೂ ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ” ಎಂದು ಅರ್ಚನಾ ಧವನ್ ಹೇಳಿದ್ದಾರೆ.

ತಡವಾಗಿ ಮಲಗುವ ಮಹಿಳೆಯರು ಅದೇ ಸಂಖ್ಯೆಯ ಗಂಟೆಗಳ ಕಾಲ ನಿದ್ರೆ ಮಾಡಿದರೂ ಸಿರ್ಕಾಡಿಯನ್ ಅಸಮತೋಲನವನ್ನು ಎದುರಿಸಬಹುದು. ಇದರಿಂದ ಹಾರ್ಮೋನ್‌ ಗಳ ಸಂಕೇತ ವ್ಯವಸ್ಥೆಗೆ ಅಡ್ಡಿಯಾಗಬಹುದು. ರಾತ್ರಿ 11 ಗಂಟೆಗೆ ನಿದ್ರೆ ಮಾಡಲೇಬೇಕು ಎಂಬ ಕಡ್ಡಾಯವಿಲ್ಲ. ಆದರೆ ಸಹಜ ರಾತ್ರಿಯ ಸಮಯಕ್ಕೆ ಹೊಂದಿಕೆಯಾಗುವ ಸ್ಥಿರ ನಿದ್ರೆಯ ವೇಳಾಪಟ್ಟಿಯನ್ನು ಪಾಲಿಸುವುದು ಉತ್ತಮ ಹಾರ್ಮೋನ್ ಸಮತೋಲನಕ್ಕೆ ನೆರವಾಗುತ್ತದೆ.

ನಿದ್ರೆಯ ಕೊರತೆಯಿಂದ ಯಾವ ಹಾರ್ಮೋನ್‌ಗಳಿಗೆ ಸಮಸ್ಯೆ?

ತಜ್ಞರ ಪ್ರಕಾರ, ನಿದ್ರೆಯ ಗುಣಮಟ್ಟ ಮತ್ತು ಸಮಯವು ಫಲವತ್ತತೆ ಹಾಗೂ ಸಂತಾನೋತ್ಪತ್ತಿ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುವ ಹಲವು ಹಾರ್ಮೋನ್‌ ಗಳ ಮೇಲೆ ಪ್ರಭಾವ ಬೀರುತ್ತದೆ.

“ಕಳಪೆ ನಿದ್ರೆಯು ಅಂಡಾಣುವಿನ ಗುಣಮಟ್ಟವನ್ನು ರಕ್ಷಿಸುವ ಮತ್ತು ಸಂತಾನೋತ್ಪತ್ತಿಗೆ ಬೆಂಬಲ ನೀಡುವ ಮೆಲಟೋನಿನ್, ಒತ್ತಡದ ಹಾರ್ಮೋನ್ ಕಾರ್ಟಿಸೋಲ್, ಲ್ಯುಟೈನೈಸಿಂಗ್ ಹಾರ್ಮೋನ್ (LH), ಫಾಲಿಕಲ್-ಉತ್ತೇಜಕ ಹಾರ್ಮೋನ್ (FSH), ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟೆರಾನ್ ಸ್ರವಿಸುವಿಕೆಗೆ ಅಡ್ಡಿಯಾಗುತ್ತದೆ. ಕಾರ್ಟಿಸೋಲ್ ಮಟ್ಟದಲ್ಲಿ ಏರಿಳಿತ ಉಂಟಾದಾಗ ಮೆದುಳು, ಪಿಟ್ಯುಟರಿ ಗ್ರಂಥಿ ಮತ್ತು ಅಂಡಾಶಯಗಳ ನಡುವಿನ ಸಾಮಾನ್ಯ ಸಂವಹನಕ್ಕೆ ತೊಂದರೆಯಾಗುತ್ತದೆ” ಎಂದು ತಜ್ಞರು ಹೇಳಿದ್ದಾರೆ.

ಹೀಗಾಗಿ, ದೀರ್ಘಕಾಲೀನ ನಿದ್ರೆಯ ಅಡಚಣೆ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಹುದು. ಫಲವತ್ತತೆಯಾಚೆಯೂ ಕಳಪೆ ನಿದ್ರೆಯು ಚಯಾಪಚಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇನ್ಸುಲಿನ್ ಪ್ರತಿರೋಧ, ತೂಕ ಹೆಚ್ಚಳ ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಲಕ್ಷಣಗಳ ತೀವ್ರತೆ ಹೆಚ್ಚುವಂತಹ ಸಮಸ್ಯೆಗಳಿಗೆ ಇದು ಕಾರಣವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News