×
Ad

ನೆಮ್ಮದಿಯ ನಿದ್ರೆಗೆ ಭಂಗ ತರುತ್ತಿದೆಯೇ ಆತಂಕ; ಮನಶ್ಶಾಸ್ತ್ರಜ್ಞರ ಸಲಹೆ ಏನು?

Update: 2026-06-14 19:50 IST

ಸಾಂದರ್ಭಿಕ ಚಿತ್ರ | Photo Credit : magnific.com

ಏಕಾಂತದಲ್ಲಿರುವಾಗ ರಾತ್ರಿಯಲ್ಲಿ ಚಡಪಡಿಕೆ ಇರುತ್ತದೆಯೇ? ಹಾಗಿದ್ದರೆ ಅದರ ಹಿಂದೆ ಅನೇಕ ಕಾರಣಗಳು ಇರಬಹುದು.

ರಾತ್ರಿ ಸಮೀಪಿಸುತ್ತಿದ್ದಂತೆ ಚಡಪಡಿಕೆಯ, ಆತಂಕಕಾರಿ ಭಾವನೆ ಬರುತ್ತದೆ. ವಿಶ್ರಾಂತಿ ಪಡೆಯಲು ಬಯಸಿದರೂ ವಿಶ್ರಾಂತಿ ಸಾಧ್ಯವಾಗದೆ ಇರಬಹುದು. ಹಳೆಯ ನೆನಪುಗಳು ಮರುಕಳಿಸುವುದು, ಕೆಟ್ಟ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳುವುದು ಮೊದಲಾದ ಕಾರಣಗಳಿಂದ ಹೆಚ್ಚು ಸಂವೇದನಾಶೀಲವಾಗಿರುವಂತೆ ತೋರಿದಾಗ ರಾತ್ರಿಯ ಸಮಯ ಇನ್ನಷ್ಟು ಆತಂಕ ತರಬಹುದು. ಸಣ್ಣ ವಿಷಯಗಳೂ ಹೆಚ್ಚು ಯೋಚನೆಗೆ ಒಳಪಡಿಸುತ್ತವೆ. ಇದು ವೈಯಕ್ತಿಕ ಅನುಭವ ಅಥವಾ ಒಬ್ಬರಿಗೆ ಮಾತ್ರ ಸೀಮಿತವಾಗಿರುವ ವಿಷಯವಲ್ಲ. ವಾಸ್ತವದಲ್ಲಿ ರಾತ್ರಿಯ ಸಮಯ ನಮ್ಮನ್ನು ಭಾವನಾತ್ಮಕವಾಗಿ ಹೆಚ್ಚು ದುರ್ಬಲಗೊಳಿಸುತ್ತದೆ. ಇದು ಏಕೆ ಸಂಭವಿಸುತ್ತದೆ? ಗೇಟ್‌ವೇ ಆಫ್ ಹೀಲಿಂಗ್‌ ನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಡಾ. ಚಾಂದ್ನಿ ತುಗ್ನೈಟ್ ಅವರು ಏನು ಹೇಳುತ್ತಾರೆ?

“ಬಹಳಷ್ಟು ಮಂದಿಗೆ ರಾತ್ರಿಯ ಸಮಯವು ವಿಶ್ರಾಂತಿಯ ಅವಧಿಗಿಂತ, ಹಗಲಿನ ವೇಳೆ ಏನಾಯಿತು ಎನ್ನುವುದರ ಬಗ್ಗೆ ಆಲೋಚಿಸುವ ಸಮಯವಾಗಿರುತ್ತದೆ. ಇಂತಹ ಪರಿಸ್ಥಿತಿ ವೈಯಕ್ತಿಕ ವೈಫಲ್ಯ ಅಥವಾ ನಿದ್ರೆಯ ಅಸ್ವಸ್ಥತೆಯಲ್ಲ; ಬದಲಾಗಿ ನರಮಂಡಲವು ಗಂಟೆಗಳ ಕಾಲ ಓವರ್‌ಲೋಡ್ ಆದ ನಂತರ ಅಂತಿಮವಾಗಿ ಒಂದು ಕ್ಷಣದ ಮೌನವನ್ನು ಪಡೆಯುವುದಾಗಿದೆ. ಹೀಗಾಗಿ ದೊರೆತ ಆ ಕ್ಷಣವನ್ನು ಏನು ಮಾಡಬೇಕೆಂದು ಬಹಳಷ್ಟು ಮಂದಿಗೆ ತಿಳಿಯದ ಕಾರಣ, ಅವರು ಆಲೋಚನೆಗಳಲ್ಲಿ ಕಳೆದುಹೋಗುತ್ತಾರೆ” ಎನ್ನುತ್ತಾರೆ ಚಾಂದ್ನಿ.

ರಾತ್ರಿಯಲ್ಲಿ ಆತಂಕಕ್ಕೊಳಗಾಗಲು ಕಾರಣವೇನು?

ರಾತ್ರಿ ಆತಂಕಕ್ಕೊಳಗಾಗಲು ಮೂರು ಕಾರಣಗಳಿವೆ ಎಂದು ಮನೋಚಿಕಿತ್ಸಕರು ಹೇಳುತ್ತಾರೆ.

ಮೊದಲನೆಯ ಕಾರಣವೆಂದರೆ ಮೆದುಳಿಗೆ ಹಗಲಿನಲ್ಲಿ ವಿರಾಮ ಸಿಗದೇ ಇರುವುದು ಮೆದುಳನ್ನು ಇಡೀ ದಿನ ತೊಂದರೆಗೊಳಿಸುತ್ತಿರುತ್ತವೆ. ರಾತ್ರಿಯಲ್ಲಿ ಇವೆಲ್ಲ ಶಾಂತವಾದಾಗ, ಒತ್ತಡ ಮತ್ತು ಬಗೆಹರಿಯದ ಚಿಂತೆಗಳು ಹೊರಬರಲು ಪ್ರಾರಂಭಿಸುತ್ತವೆ.

ಎರಡನೆಯದಾಗಿ, ಒತ್ತಡದ ಹಾರ್ಮೋನ್‌ ಗಳು ಸಕ್ರಿಯವಾಗಿರಬಹುದು. ದೇಹದ ಸಹಜ ಲಯಕ್ಕೆ (Natural Rhythm) ಅನುಗುಣವಾಗಿ ರಾತ್ರಿಯಲ್ಲಿ ಶಾಂತಗೊಳ್ಳುವುದನ್ನು ನಿರೀಕ್ಷಿಸಲಾಗುತ್ತದೆ. ಆದರೆ ಹಗಲಿನ ವೇಳೆ ಅತಿಯಾದ ಪ್ರಚೋದನೆಯಿಂದ ಈ ಸಹಜ ಲಯದ ಚಕ್ರಕ್ಕೆ ಅಡ್ಡಿಯಾಗುತ್ತದೆ. ದೇಹದ ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ರಾತ್ರಿಯಲ್ಲೂ ಹೆಚ್ಚಾಗಿರುತ್ತದೆ ಮತ್ತು ಬೆದರಿಕೆ ಇಲ್ಲದಿದ್ದರೂ ನರಮಂಡಲವನ್ನು ಎಚ್ಚರದ ಸ್ಥಿತಿಯಲ್ಲಿರಿಸುತ್ತದೆ. ಹೀಗಾಗಿ ದೇಹ ಪ್ರಕ್ಷುಬ್ಧ, ಜಾಗರೂಕ ಸ್ಥಿತಿಯಲ್ಲಿದ್ದು, ವಿಶ್ರಾಂತಿ ಪಡೆಯಲು ಸಾಧ್ಯವಾಗದಂತೆ ಮಾಡುತ್ತದೆ.

ಮೂರನೆಯದಾಗಿ, ರಾತ್ರಿ ಆಲೋಚನೆಗಳ ಸದ್ದು ಹೆಚ್ಚಾಗುತ್ತದೆ. ಹಗಲಿನ ವೇಳೆ ಬೀದಿಯಲ್ಲಿ, ನೆರೆಹೊರೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲೂ ಸಾಕಷ್ಟು ಶಬ್ದವಿರುತ್ತದೆ. ಈ ಗೊಂದಲಗಳು ಆಲೋಚನೆಗಳನ್ನು ದೂರವಿರುವಂತೆ ಮಾಡುತ್ತವೆ. ರಾತ್ರಿಯಲ್ಲಿ ಯಾವುದೇ ಶಬ್ದ ಅಥವಾ ಚಟುವಟಿಕೆ ಇಲ್ಲದಿದ್ದಾಗ, ತಲೆಯಲ್ಲಿ ಆಲೋಚನೆಗಳೇ ಹಿಂತಿರುಗಿ ಬಂದು ಸದ್ದುಮಾಡುತ್ತವೆ.

ಆತಂಕವನ್ನು ಕಡಿಮೆ ಮಾಡುವುದು ಹೇಗೆ?

ಇದಕ್ಕೆ ಪರಿಹಾರವೆಂದರೆ ಆಲೋಚನೆಗಳನ್ನು ಮೀರಿಸುವ ಪ್ರಚೋದನೆಯಲ್ಲ. ಅದೇ ರೀತಿ, ಸಿದ್ಧವಿಲ್ಲದ ನಿಶ್ಚಲತೆಗೆ ಒತ್ತಾಯಿಸುವುದೂ ಅಲ್ಲ. ನಿದ್ರೆ ಬಾರದೆ ಇರುವಾಗ ಫೋನ್‌ ನಲ್ಲಿ ಸ್ಕ್ರೋಲ್ ಮಾಡುವುದು ಅಥವಾ ಟಿವಿಯಲ್ಲಿ ಏನನ್ನಾದರೂ ನೋಡುವುದು ಅಡ್ಡಿಯಾಗಿ ಮಾರ್ಪಡಬಹುದು.

ರಾತ್ರಿಯಲ್ಲಿ ಆತಂಕವನ್ನು ನಿಭಾಯಿಸುವ ನಿಜವಾದ ಮಾರ್ಗವೆಂದರೆ ಮನಸ್ಸು ಮತ್ತು ದೇಹವನ್ನು ನಿಧಾನಗೊಳಿಸುವುದು. ತಜ್ಞರು ಪರದೆಯಿಂದ ದೂರವಿರಬೇಕು ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ಬದಲಾಗಿ ಏನಾದರೂ ಬರೆಯುವುದು, ಓದುವುದು ಅಥವಾ ಮನಸ್ಸನ್ನು ಶಾಂತಗೊಳಿಸುವ ಸಂಗೀತವನ್ನು ಕೇಳುವುದು ಮುಂತಾದ ಸೌಮ್ಯವಾದ ಮಲಗುವ ದಿನಚರಿಯನ್ನು ಅನುಸರಿಸಬೇಕು. ಈ ಅಭ್ಯಾಸಗಳು ಮನಸ್ಸನ್ನು ನಿಧಾನಗೊಳಿಸಲು ಮತ್ತು ನರಮಂಡಲಕ್ಕೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತವೆ.

ದೀರ್ಘಾವಧಿಯವರೆಗೆ ಕೆಲಸದ ಒತ್ತಡ ಅಥವಾ ಅಡಚಣೆಗಳನ್ನು ಎದುರಿಸಿದಾಗ, ದೀರ್ಘವಾಗಿ ಉಸಿರು ತೆಗೆದುಕೊಳ್ಳುವುದು ಹಾಗೂ ಒತ್ತಡ ನಿರ್ವಹಣಾ ತಂತ್ರಗಳನ್ನು ಅಭ್ಯಾಸ ಮಾಡಬೇಕು. ರಾತ್ರಿಯಲ್ಲಿ ನರಮಂಡಲ ಅತಿಯಾಗಿ ಪ್ರಚೋದಿತವಾಗದಂತೆ ತಡೆಯಲು ಇದು ನೆರವಾಗುತ್ತದೆ. ಹಗಲಿನಲ್ಲಿ ಒತ್ತಡವನ್ನು ಉತ್ತಮವಾಗಿ ನಿರ್ವಹಿಸಿದಾಗ, ರಾತ್ರಿಗಳು ಹೆಚ್ಚು ಸುಲಭವಾಗುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News