ಸಾಂದರ್ಭಿಕ ಚಿತ್ರ | Photo Credit : magnific.com

ದೈನಂದಿನ ಒತ್ತಡಗಳನ್ನು ಎದುರಿಸಲು ಮತ್ತು ಚರ್ಮವನ್ನು ರಕ್ಷಿಸಲು ಆರೈಕೆಯ ದಿನಚರಿಯನ್ನು ಹೇಗೆ ರೂಪಿಸಿಕೊಳ್ಳಬಹುದು?

ವಿವಿಧ ಚರ್ಮದ ಪ್ರಕಾರಗಳಲ್ಲಿ ಸೂಕ್ಷ್ಮ ಚರ್ಮವು ಹೆಚ್ಚು ಕಿರಿಕಿರಿಗೆ ಒಳಗಾಗುತ್ತದೆ. ಆದರೆ ಕೆಂಪಾಗುವಿಕೆ, ಒಣಗುವಿಕೆ ಮತ್ತು ಅಹಿತಕರ ಅನುಭವಗಳು ಕೇವಲ ಸೂಕ್ಷ್ಮ ಚರ್ಮಕ್ಕೆ ಸೀಮಿತವಲ್ಲ. ಮಾಲಿನ್ಯ, ಸೂರ್ಯನ ಬೆಳಕು ಮತ್ತು ಇತರ ಪರಿಸರದ ಒತ್ತಡಗಳಿಗೆ ಒಡ್ಡಿಕೊಳ್ಳುವುದರಿಂದ ಚರ್ಮವು ಮಂದವಾಗಬಹುದು ಹಾಗೂ ಕಿರಿಕಿರಿಗೆ ಒಳಗಾಗಬಹುದು. ಇಂತಹ ದೈನಂದಿನ ಒತ್ತಡಗಳನ್ನು ಎದುರಿಸಲು ಮತ್ತು ಚರ್ಮವನ್ನು ರಕ್ಷಿಸಲು ಆರೈಕೆಯ ದಿನಚರಿಯನ್ನು ಹೇಗೆ ರೂಪಿಸಿಕೊಳ್ಳಬಹುದು?

ಬೆಂಗಳೂರಿನ ಸಕ್ರಾ ವರ್ಲ್ಡ್ ಆಸ್ಪತ್ರೆಯ ಸಂದರ್ಶಕ ಸಲಹೆಗಾರರು, ಕ್ಲಿನಿಕಲ್ ಮತ್ತು ಸೌಂದರ್ಯ ಚರ್ಮರೋಗ ತಜ್ಞೆ ಹಾಗೂ ಟ್ರೈಕಾಲಜಿಸ್ಟ್ ಡಾ. ಕಾಂಚನ್ ಎಸ್. ಟೋಪ್ಗಿ ಅವರು ದೈನಂದಿನ ಚರ್ಮದ ಆರೈಕೆಯ ಪ್ರಾಮುಖ್ಯವನ್ನು ವಿವರಿಸಿದ್ದಾರೆ. ಚರ್ಮದಲ್ಲಿ ಕಿರಿಕಿರಿ ಉಂಟಾದಾಗ ಮಾತ್ರ ಅದರ ಅಗತ್ಯಗಳಿಗೆ ಸ್ಪಂದಿಸುವ ಬದಲು, ಹಗಲಿನಲ್ಲಿ ಚರ್ಮವನ್ನು ರಕ್ಷಿಸುವ ಮತ್ತು ರಾತ್ರಿ ಅದರ ಚೇತರಿಕೆಗೆ ನೆರವಾಗುವ ಆರೈಕೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ಕಳಪೆ ಜೀವನಶೈಲಿಯ ಪರಿಣಾಮ ಚರ್ಮದ ಮೇಲೂ ಉಂಟಾಗಬಹುದು. “ಸ್ಕ್ರೀನ್‌ ಗಳಿಂದ ಹೊರಸೂಸುವ UV ಕಿರಣಗಳು ಮತ್ತು ನೀಲಿ ಬೆಳಕಿನಂತಹ ದೈನಂದಿನ ಒತ್ತಡಗಳು ಸ್ವತಂತ್ರ ಕಣಗಳ (free radicals) ರಚನೆಯನ್ನು ಪ್ರಚೋದಿಸುತ್ತವೆ. ಇವು ಚರ್ಮದ ಕೋಶಗಳನ್ನು ಹಾನಿಗೊಳಿಸುವ, ಕಾಲಜನ್ ಅನ್ನು ಒಡೆಯುವ ಮತ್ತು ವಯಸ್ಸಾಗುವಿಕೆಯ ಗೋಚರ ಲಕ್ಷಣಗಳನ್ನು ವೇಗಗೊಳಿಸುವ ಅಸ್ಥಿರ ಅಣುಗಳು (unstable molecules)” ಎಂದು ಅವರು ವಿವರಿಸಿದ್ದಾರೆ.

ಕಳಪೆ ಜೀವನಶೈಲಿಯ ಪರಿಣಾಮ ಎಲ್ಲರಲ್ಲೂ ಒಂದೇ ವೇಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. “ಹೆಚ್ಚಿನ ಜನರಲ್ಲಿ ಈ ಬದಲಾವಣೆಗಳು ಕ್ರಮೇಣ ಕಾಣಿಸಿಕೊಳ್ಳುತ್ತವೆ. ಚರ್ಮ ಸ್ವಲ್ಪ ಹೆಚ್ಚು ಮಂದವಾಗುವುದು, ಸೂಕ್ಷ್ಮ ರೇಖೆಗಳು ಹೆಚ್ಚಾಗುವುದು ಹಾಗೂ ಚರ್ಮವು ಸುಲಭವಾಗಿ ಪ್ರತಿಕ್ರಿಯಿಸುವ ಅಥವಾ ಕಿರಿಕಿರಿಗೆ ಒಳಗಾಗುವ ಸ್ವರೂಪವನ್ನು ಪಡೆಯುವುದು ಇವುಗಳ ಲಕ್ಷಣಗಳಾಗಿವೆ. ಸೂಕ್ಷ್ಮ ಚರ್ಮ ಹೊಂದಿರುವವರಲ್ಲಿ ಚರ್ಮದ ರಕ್ಷಣಾತ್ಮಕ ತಡೆಗೋಡೆ ಈಗಾಗಲೇ ದುರ್ಬಲವಾಗಿರುವುದರಿಂದ ಮತ್ತು ಚೇತರಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಇರುವುದರಿಂದ ಪರಿಣಾಮಗಳು ಇನ್ನಷ್ಟು ಸ್ಪಷ್ಟವಾಗಿ ಕಾಣಿಸಿಕೊಳ್ಳಬಹುದು” ಎಂದು ಚರ್ಮರೋಗ ತಜ್ಞೆ ಹೇಳಿದ್ದಾರೆ.

ಹೀಗಾಗಿ, ಸೂಕ್ಷ್ಮ ಚರ್ಮ ಹೊಂದಿರುವವರು ಅಕಾಲಿಕ ವಯಸ್ಸಾಗುವಿಕೆಗೆ ಹೆಚ್ಚು ಒಳಗಾಗಬಹುದು. ಇದಕ್ಕೆ ಅವರ ಚರ್ಮದ ರಕ್ಷಣಾತ್ಮಕ ತಡೆಗೋಡೆ ಈಗಾಗಲೇ ದುರ್ಬಲವಾಗಿರುವುದು ಅಥವಾ ಹಾನಿಗೊಳಗಾಗಿರುವುದು ಕಾರಣವಾಗಿರಬಹುದು. ಹಾಗಾದರೆ ಇದಕ್ಕೆ ಪರಿಹಾರವೇನು?

ಬೆಳಿಗ್ಗೆ ಮತ್ತು ರಾತ್ರಿ ಚರ್ಮದ ಆರೈಕೆಯ ದಿನಚರಿಯನ್ನು ರೂಪಿಸಿಕೊಳ್ಳುವುದು ನೀವು ಅಂದುಕೊಂಡಿರುವುದಕ್ಕಿಂತ ಸರಳವಾಗಿದೆ. ಹಗಲಿನಲ್ಲಿ ರಕ್ಷಣೆ ಮತ್ತು ರಾತ್ರಿ ಚೇತರಿಕೆ ಎಂಬ ಎರಡು ಹಂತಗಳಲ್ಲಿ ಆರೈಕೆಯನ್ನು ವಿಂಗಡಿಸಿಕೊಳ್ಳಬಹುದು.

1. ದೈನಂದಿನ ರಕ್ಷಣೆ

ನಿಮ್ಮ ಚರ್ಮದ ಪ್ರಸ್ತುತ ಸ್ಥಿತಿ, ವಯಸ್ಸು, ಹವಾಮಾನ ಮತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಅನುಗುಣವಾಗಿ ರೂಪಿಸಲಾದ ಆರೈಕೆಗೆ ಆದ್ಯತೆ ನೀಡಬೇಕು. ಇಂತಹ ಸಮತೋಲಿತ ಆರೈಕೆಯು ಮಾಲಿನ್ಯ ಮತ್ತು ನೀಲಿ ಬೆಳಕಿನಿಂದ ಉಂಟಾಗುವ ಆಕ್ಸಿಡೇಟಿವ್ ಹಾನಿಯಿಂದ ಒತ್ತಡಕ್ಕೆ ಒಳಗಾದ ಹಾಗೂ ಸೂಕ್ಷ್ಮ ಚರ್ಮವನ್ನು ರಕ್ಷಿಸಲು ನೆರವಾಗುತ್ತದೆ. ನಿರಂತರ ಬಳಕೆಯಿಂದ ಚರ್ಮದ ನೈಸರ್ಗಿಕ ಚೇತರಿಕೆಯ ಸಾಮರ್ಥ್ಯವನ್ನೂ ಬೆಂಬಲಿಸಬಹುದು. ಆಕ್ಸಿಡೇಟಿವ್ ಒತ್ತಡಕ್ಕೆ ಒಳಗಾಗುವ ಸೂಕ್ಷ್ಮ ಚರ್ಮದ ಆರೈಕೆಗೆ ಗ್ಯಾಲಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕ (ಆ್ಯಂಟಿಆಕ್ಸಿಡೆಂಟ್) ಗುಣ ಹೊಂದಿರುವ ಪದಾರ್ಥಗಳನ್ನು ಬಳಸಬಹುದು.

ಆದರೆ, ಆ್ಯಂಟಿಆಕ್ಸಿಡೆಂಟ್‌ಯುಕ್ತ ಸೀರಮ್ ಬಳಸಿದರೂ ಅದನ್ನು ಸನ್‌ಸ್ಕ್ರೀನ್‌ಗೆ ಪರ್ಯಾಯವಾಗಿ ಪರಿಗಣಿಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸೌಮ್ಯವಾದ ಮಾಯಿಶ್ಚರೈಸರ್ ಜೊತೆಗೆ SPF 30 ಅಥವಾ ಅದಕ್ಕಿಂತ ಹೆಚ್ಚಿನ ರಕ್ಷಣಾ ಸಾಮರ್ಥ್ಯ ಹೊಂದಿರುವ, ವಿಶಾಲ ವ್ಯಾಪ್ತಿಯ UVA ಮತ್ತು UVB ಕಿರಣಗಳಿಂದ ರಕ್ಷಿಸುವ, ನೀರು-ನಿರೋಧಕ ಸನ್‌ಸ್ಕ್ರೀನ್ ಬಳಸಬೇಕು. ಸೂಕ್ಷ್ಮ ಚರ್ಮ ಹೊಂದಿರುವವರು ಸುಗಂಧ ರಹಿತ ಸನ್‌ಸ್ಕ್ರೀನ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ನಿರಂತರ ಬಳಕೆಯಿಂದ ಯಾವ ರೀತಿಯ ಫಲಿತಾಂಶ ನಿರೀಕ್ಷಿಸಬಹುದು? “ಕ್ರಮೇಣ ಮತ್ತು ದೀರ್ಘಾವಧಿಯ ಬಳಕೆಯಿಂದ ಚರ್ಮವು ಹೆಚ್ಚು ಶಾಂತವಾಗಿ ಮತ್ತು ಕಾಂತಿಯುತವಾಗಿ ಕಾಣುವುದನ್ನು ಜನರು ಗಮನಿಸಬಹುದು. ಕೆಲವರು ಕಾಲಾನಂತರದಲ್ಲಿ ಚರ್ಮದ ರಂಧ್ರಗಳು ಮತ್ತು ಸೂಕ್ಷ್ಮ ರೇಖೆಗಳು ಕಡಿಮೆ ಗೋಚರಿಸುವುದನ್ನೂ ಗಮನಿಸಬಹುದು” ಎಂದು ಅವರು ಹೇಳಿದ್ದಾರೆ.

2. ರಾತ್ರಿ ಚರ್ಮದ ಚೇತರಿಕೆ

ಹಗಲಿನಲ್ಲಿ ಚರ್ಮವು ಮಾಲಿನ್ಯ ಸೇರಿದಂತೆ ಹಲವು ಪರಿಸರದ ಒತ್ತಡಗಳಿಗೆ ಒಡ್ಡಿಕೊಳ್ಳುತ್ತದೆ. ಆದ್ದರಿಂದ ರಾತ್ರಿ ಸೌಮ್ಯವಾಗಿ ಸ್ವಚ್ಛಗೊಳಿಸುವುದು ಮತ್ತು ತೇವಾಂಶವನ್ನು ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಮೇಕಪ್, ಸನ್‌ಸ್ಕ್ರೀನ್ ಮತ್ತು ದಿನವಿಡೀ ಚರ್ಮದ ಮೇಲೆ ಸಂಗ್ರಹವಾಗಿರುವ ಕೊಳೆಯನ್ನು ತೆಗೆದುಹಾಕಬೇಕು. ಅಗತ್ಯವಿದ್ದರೆ ಎರಡು ಹಂತಗಳಲ್ಲಿ ಮುಖವನ್ನು ಸ್ವಚ್ಛಗೊಳಿಸುವ (ಡಬಲ್ ಕ್ಲೆನ್ಸಿಂಗ್) ವಿಧಾನ ಅನುಸರಿಸಬಹುದು.

ಚರ್ಮದ ರಕ್ಷಣಾತ್ಮಕ ತಡೆಗೋಡೆಯನ್ನು ಬಲಪಡಿಸಲು ನೆರವಾಗುವ, ಹಿತವಾದ ಸೆರಾಮೈಡ್‌ಗಳನ್ನು ಒಳಗೊಂಡ ಮಾಯಿಶ್ಚರೈಸರ್ ಆಯ್ಕೆ ಮಾಡಿಕೊಳ್ಳಬೇಕು. ಹೈಲುರಾನಿಕ್ ಆಮ್ಲದಂತಹ ಪದಾರ್ಥಗಳು ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor