ಜೀವನದಲ್ಲಿ ಒಮ್ಮೆಯಾದರೂ ಪ್ರಯಾಣಿಸಲೇಬೇಕಾದ ಭಾರತದ 3 ಅದ್ಭುತ ಪಾರಂಪರಿಕ ರೈಲುಗಳ ಬಗ್ಗೆ ಗೊತ್ತೆ?
Photo Credit : realhimachal.in
ಹಿಮಾಲಯದ ಮೂಲಕ ಅಂಕುಡೊಂಕಾದ ಹಳಿಗಳಿಂದ ಹಿಡಿದು ನೀಲಗಿರಿಯಲ್ಲಿ ಸಂಚರಿಸುವ ವಿಂಟೇಜ್ ಲೋಕೋಮೋಟಿವ್ ಗಳವರೆಗೆ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ರೈಲುಗಳು ಪ್ರಯಾಣಿಕರನ್ನು ಹೊತ್ತೊಯ್ಯುವಾಗ ಭೂತಕಾಲದ ನೆನಪುಗಳ ಜೊತೆಗೆ ಸಾಗುತ್ತವೆ.
ಭಾರತದ ರೈಲ್ವೆ ಮಾರ್ಗಗಳ ಕೆಲವು ಹಳೆಯ ಮಾರ್ಗಗಳು ದೇಶದ ಇತಿಹಾಸ, ಇಂಜಿನಿಯರಿಂಗ್ ಮತ್ತು ಬದಲಾಗುತ್ತಿರುವ ಭೂದೃಶ್ಯಗಳ ಮೂಲಕ ಪ್ರಯಾಣದ ಅನುಭವ ನೀಡುತ್ತವೆ. ಹಿಮಾಲಯದ ಮೂಲಕ ಅಂಕುಡೊಂಕಾದ ಹಳಿಗಳಿಂದ ಹಿಡಿದು ನೀಲಗಿರಿಯಲ್ಲಿ ಸಂಚರಿಸುವ ವಿಂಟೇಜ್ ಲೋಕೋಮೋಟಿವ್ ಗಳವರೆಗೆ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ರೈಲುಗಳು ಪ್ರಯಾಣಿಕರನ್ನು ಹೊತ್ತೊಯ್ಯುವಾಗ ಭೂತಕಾಲದ ನೆನಪುಗಳ ಜೊತೆಗೆ ಸಾಗುತ್ತವೆ.
►ನೀಲಗಿರಿ ಪರ್ವತ ರೈಲ್ವೆ, ತಮಿಳುನಾಡು
ಜನಪ್ರಿಯವಾಗಿ ಊಟಿ ಟಾಯ್ ಟ್ರೈನ್ ಎಂದೇ ಕರೆಯಲಾಗುವ ನೀಲಗಿರಿ ಪರ್ವತ ರೈಲ್ವೆ, ತಮಿಳುನಾಡಿನ ಮೆಟ್ಟುಪಾಳ್ಯಂನಿಂದ ಉದಕಮಂಡಲ (ಊಟಿ)ವರೆಗೆ ಸಂಚರಿಸುವ ಐತಿಹಾಸಿಕ ಮೀಟರ್ ಗೇಜ್ ಪರ್ವತ ರೈಲ್ವೆಯಾಗಿದೆ. ಇದು ಭಾರತದ ಏಕೈಕ ರ್ಯಾ ಕ್ ಮತ್ತು ಪಿನಿಯನ್ ರೈಲು ಮಾರ್ಗವಾಗಿದೆ.
1854ರಲ್ಲಿ ಮೊದಲಿಗೆ ಪ್ರಸ್ತಾಪಿಸಲಾದ ಈ ರೈಲ್ವೆ ಮಾರ್ಗದ ನಿರ್ಮಾಣ ಕಾರ್ಯ 1891ರಲ್ಲಿ ಪ್ರಾರಂಭವಾಯಿತು ಮತ್ತು 1908ರಲ್ಲಿ ಪೂರ್ಣಗೊಂಡಿತು. 2005ರಲ್ಲಿ ಯುನೆಸ್ಕೋ ಈ ರೈಲ್ವೆಯನ್ನು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಯ ಜೊತೆಗೆ ‘ಭಾರತದ ಪರ್ವತ ರೈಲ್ವೆಗಳ’ ಭಾಗವಾಗಿ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿತು.
ರ್ಯಾ ಕ್ ಮತ್ತು ಪಿನಿಯನ್ ವ್ಯವಸ್ಥೆಯೆಂದರೆ ಕಲ್ಲಾರ್ ನಿಂದ ಕೂನೂರುವರೆಗಿನ ಅತ್ಯಂತ ಕಡಿದಾದ ಬೆಟ್ಟವನ್ನು ಏರಲು ಎರಡು ಹಳಿಗಳ ಮಧ್ಯೆ ಹಲ್ಲುಗಳಿರುವ ಹೆಚ್ಚುವರಿ ರ್ಯಾ ಕ್ ಹಳಿಯನ್ನು ಅಳವಡಿಸಲಾಗಿದೆ. ಇಂಜಿನ್ ನ ಕೆಳಭಾಗದಲ್ಲಿರುವ ಪಿನಿಯನ್ ಗಳು ಈ ಹಳಿಗೆ ಸಿಕ್ಕಿಕೊಂಡು ರೈಲನ್ನು ಜಾರದಂತೆ ಮೇಲಕ್ಕೆ ತಳ್ಳುತ್ತವೆ. ಇದು ಏಷ್ಯಾದ ಅತ್ಯಂತ ಕಡಿದಾದ ರೈಲ್ವೆ ಮಾರ್ಗಗಳಲ್ಲಿ ಒಂದಾಗಿದೆ. ಮೆಟ್ಟುಪಾಳ್ಯಂನಿಂದ ಕೂನೂರುವರೆಗೆ ಪಾರಂಪರಿಕ ಸ್ಟೀಮ್ ಇಂಜಿನ್ ಗಳು ರೈಲನ್ನು ಹಿಂದಿನಿಂದ ತಳ್ಳುತ್ತವೆ. ಕೂನೂರಿನಿಂದ ಊಟಿಯವರೆಗೆ ಡೀಸೆಲ್ ಇಂಜಿನ್ ಗಳನ್ನು ಬಳಸಲಾಗುತ್ತದೆ.
ಸಮುದ್ರ ಮಟ್ಟದಿಂದ 326 ಮೀಟರ್ ಎತ್ತರದಲ್ಲಿರುವ ಈ ರೈಲ್ವೆ ಮಾರ್ಗದಲ್ಲಿ 16 ಸುರಂಗಗಳು, 250 ಸೇತುವೆಗಳು ಮತ್ತು 208 ತಿರುವುಗಳಿವೆ. ಚಹಾ ತೋಟಗಳು ಮತ್ತು ಸುಂದರ ವಸತಿ ಪ್ರದೇಶಗಳ ನಡುವೆ ಈ ರೈಲು ಸಾಗುತ್ತದೆ.
►ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ, ಪಶ್ಚಿಮ ಬಂಗಾಳ
ಡಾರ್ಜಿಲಿಂಗ್ ಟಾಯ್ ಟ್ರೈನ್ ಎಂದೇ ಜನಪ್ರಿಯವಾಗಿರುವ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ಭಾರತದ ಅತ್ಯಂತ ಗುರುತಿಸಬಹುದಾದ ಪಾರಂಪರಿಕ ರೈಲು ಮಾರ್ಗಗಳಲ್ಲಿ ಒಂದಾಗಿದೆ. 1881ರಲ್ಲಿ ಆರಂಭವಾದ ಈ ಟಾಯ್ ಟ್ರೈನ್, ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿಯನ್ನು ಡಾರ್ಜಿಲಿಂಗ್ನೊಂದಿಗೆ ಸಂಪರ್ಕಿಸುವ ಐತಿಹಾಸಿಕ ನ್ಯಾರೋ ಗೇಜ್ ಪರ್ವತ ರೈಲ್ವೆಯಾಗಿದೆ.
ಈ ಪ್ರಯಾಣವು ನ್ಯಾರೋ ಗೇಜ್ ಹಳಿಗಳು, ತೀಕ್ಷ್ಣವಾದ ತಿರುವುಗಳು, ಅಂಕುಡೊಂಕಾದ ಹಿಮ್ಮುಖಗಳು ಮತ್ತು ಲೂಪ್ ಗಳಿಗೆ ಹೆಸರುವಾಸಿಯಾಗಿದೆ. ಈ ರೈಲು ಕಡಿದಾದ ಇಳಿಜಾರುಗಳನ್ನು ದಾಟಲು ಇವು ನೆರವಾಗುತ್ತವೆ. ಕಡಿದಾದ ಪರ್ವತಗಳನ್ನು ಏರಲು ಇಂಜಿನಿಯರ್ ಗಳು ಜಿಗ್ ಜಾಗ್ ಮತ್ತು ಲೂಪ್ ತಂತ್ರಜ್ಞಾನವನ್ನು ಬಳಸಿದ್ದಾರೆ. ರೈಲು ಸುರುಳಿಯಾಕಾರದಲ್ಲಿ ಸುತ್ತುತ್ತಾ ಎತ್ತರವನ್ನು ಏರುತ್ತದೆ. ಈ ಮಾರ್ಗದ ಪ್ರಮುಖ ಆಕರ್ಷಣೆಗಳಲ್ಲಿ ಬಟಾಸಿಯಾ ಲೂಪ್ ಕೂಡ ಒಂದು. ಈ ಮಾರ್ಗದ ಅತ್ಯಂತ ಪ್ರಸಿದ್ಧ ಸುರುಳಿ ಹಳಿಯಾದ ಇಲ್ಲಿಂದ ಆಕಾಶ ಸ್ಪಷ್ಟವಾಗಿದ್ದರೆ ಹಿಮಾಲಯದ ಕಾಂಚನಜುಂಗಾ ಶಿಖರದ ಸುಂದರ ದೃಶ್ಯ ಕಾಣಿಸುತ್ತದೆ.
ಸಮುದ್ರ ಮಟ್ಟದಿಂದ ಸುಮಾರು 2,258 ಮೀಟರ್ ಎತ್ತರದಲ್ಲಿರುವ ಘೂಮ್ ಭಾರತದ ಅತ್ಯಂತ ಎತ್ತರದ ರೈಲ್ವೆ ನಿಲ್ದಾಣವಾಗಿದ್ದು, ಇಲ್ಲಿ DHR ವಸ್ತುಸಂಗ್ರಹಾಲಯವೂ ಇದೆ. ಪ್ರಯಾಣಿಕರು ಚಹಾ ತೋಟಗಳು, ಬೆಟ್ಟದ ಇಳಿಜಾರಿನಲ್ಲಿರುವ ವಸತಿಗಳು ಮತ್ತು ಸುತ್ತಮುತ್ತಲಿನ ಪರ್ವತ ಭೂದೃಶ್ಯವನ್ನು ಸವಿಯುತ್ತಾ ಸಾಗಬಹುದು. 1999ರಲ್ಲಿ ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು. ಇದು ವಸಾಹತುಶಾಹಿ ಯುಗದ ರೈಲ್ವೆ ಇಂಜಿನಿಯರಿಂಗ್ ಗೆ ಪ್ರಮುಖ ಉದಾಹರಣೆಯಾಗಿದೆ.
ಇಂದಿಗೂ ಈ ಮಾರ್ಗದಲ್ಲಿ ಹಳೆಯ ಕಾಲದ ಬಿ-ಕ್ಲಾಸ್ ಸ್ಟೀಮ್ ಇಂಜಿನ್ ಗಳು ಮತ್ತು ಡೀಸೆಲ್ ಇಂಜಿನ್ ಗಳೆರಡೂ ಕಾರ್ಯನಿರ್ವಹಿಸುತ್ತವೆ. ಪ್ರವಾಸಿಗರಿಗಾಗಿ ಡಾರ್ಜಿಲಿಂಗ್ನಿಂದ ಘೂಮ್ವರೆಗೆ ವಿಶೇಷ ‘ಜಾಯ್ ರೈಡ್’ ಸೌಲಭ್ಯವಿದೆ. ಟಿಕೆಟ್ ಗಳನ್ನು IRCTC ವೆಬ್ಸೈಟ್ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು.
► ಕಲ್ಕಾ-ಶಿಮ್ಲಾ ರೈಲ್ವೆ, ಹಿಮಾಚಲ ಪ್ರದೇಶ
ಕಲ್ಕಾ-ಶಿಮ್ಲಾ ರೈಲ್ವೆಯು ಹರಿಯಾಣದ ಕಲ್ಕಾ ಮತ್ತು ಹಿಮಾಚಲ ಪ್ರದೇಶದ ಶಿಮ್ಲಾ ನಡುವೆ 96.6 ಕಿ.ಮೀ. ದೂರದವರೆಗೆ ಸಂಚರಿಸುತ್ತದೆ. ಇದನ್ನು ಉತ್ತರ ರೈಲ್ವೆಯ ಅಂಬಾಲಾ ವಿಭಾಗವು ನಿರ್ವಹಿಸುತ್ತದೆ. ಈ ರೈಲ್ವೆ ಮಾರ್ಗವು 2 ಅಡಿ 6 ಇಂಚು ಅಗಲದ ನ್ಯಾರೋ ಗೇಜ್ ಹಳಿಯ ಮೇಲೆ ಸಾಗುತ್ತದೆ.
ಬ್ರಿಟಿಷರ ಕಾಲದಲ್ಲಿ ಭಾರತದ ಬೇಸಿಗೆ ರಾಜಧಾನಿಯಾಗಿದ್ದ ಶಿಮ್ಲಾವನ್ನು ದೇಶದ ಇತರ ರೈಲು ಮಾರ್ಗಗಳೊಂದಿಗೆ ಸಂಪರ್ಕಿಸಲು 1898ರಿಂದ 1903ರ ನಡುವೆ ಮುಖ್ಯ ಇಂಜಿನಿಯರ್ ಹರ್ಬರ್ಟ್ ಸೆಪ್ಟಿಮಸ್ ಹ್ಯಾರಿಂಗ್ಟನ್ ಅವರ ನೇತೃತ್ವದಲ್ಲಿ ಈ ರೈಲ್ವೆ ಮಾರ್ಗವನ್ನು ನಿರ್ಮಿಸಲಾಯಿತು. ವಿಶೇಷವಾಗಿ ಪರ್ವತ ಭೂಪ್ರದೇಶದಲ್ಲಿ ಸಂಚರಿಸುವ ಹಲವಾರು ಸುರಂಗಗಳು, ಸೇತುವೆಗಳು ಮತ್ತು ಅಂಕುಡೊಂಕಾದ ಹಳಿಗಳಿಗೆ ಇದು ಹೆಸರುವಾಸಿಯಾಗಿದೆ.
ಈ ಮಾರ್ಗದಲ್ಲಿ 102 ಸುರಂಗಗಳು, 850ಕ್ಕೂ ಹೆಚ್ಚು ಸೇತುವೆಗಳು ಮತ್ತು ಸುಮಾರು 919 ತಿರುವುಗಳಿವೆ. ಬರೋಗ್ ನಿಲ್ದಾಣದ ಬಳಿಯಿರುವ ಬರೋಗ್ ಸುರಂಗವು 1,143.6 ಮೀಟರ್ ಉದ್ದದ ಅತ್ಯಂತ ಉದ್ದವಾದ ಮತ್ತು ನೇರವಾದ ಸುರಂಗವಾಗಿದೆ. ರೋಮನ್ ಕಾಲದ ನೀರಿನ ಕಾಲುವೆಗಳಂತೆ ಕಾಣಿಸುವ ಬಹು ಕಮಾನುಗಳ ಕಲ್ಲಿನ ಸೇತುವೆಗಳು ಈ ಮಾರ್ಗದ ವಿಶೇಷತೆ. ಕನೋಹ್ ಸೇತುವೆಯು 34 ಕಮಾನುಗಳನ್ನು ಹೊಂದಿದ್ದು, ಅತ್ಯಂತ ಎತ್ತರವಾಗಿದೆ.
ಈ ಪ್ರಯಾಣದಲ್ಲಿ ಪೈನ್ ಕಾಡುಗಳು, ಕಣಿವೆಗಳು, ಬೆಟ್ಟದ ಹಳ್ಳಿಗಳು, ವಸಾಹತುಶಾಹಿ ಯುಗದ ವಸತಿ ಪ್ರದೇಶಗಳು ಮತ್ತು ರೈಲ್ವೆ ನಿಲ್ದಾಣಗಳ ಮೂಲಕ ಸಾಗಬಹುದು. 2008ರ ಜುಲೈ 8ರಂದು ಯುನೆಸ್ಕೋ ಈ ರೈಲ್ವೆಯನ್ನು ಡಾರ್ಜಿಲಿಂಗ್ ಮತ್ತು ನೀಲಗಿರಿ ಪರ್ವತ ರೈಲ್ವೆಗಳ ಜೊತೆಗೆ ‘ಭಾರತದ ಪರ್ವತ ರೈಲ್ವೆಗಳ’ ಭಾಗವಾಗಿ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿತು.