ಘನತ್ಯಾಜ್ಯ ನಿರ್ವಹಣೆ ಶುಲ್ಕದ ಪರಿಷ್ಕೃತ ಪ್ರಸ್ತಾವ: ಹಳೆಯ ಲೋಪದೋಷಗಳಿಗೆ ಹೊಸ ತೇಪೆ?
ಸಾಂದರ್ಭಿಕ ಚಿತ್ರ (AI)
ಬೆಂಗಳೂರು : ಘನ ತ್ಯಾಜ್ಯವನ್ನು ಸಾಗಣೆ ಕೇಂದ್ರಗಳಿಂದ ನಿಗದಿತ ಸಂಸ್ಕರಣೆ ಕೇಂದ್ರಗಳಿಗೆ ಎಂಎಸ್ಡಬ್ಲ್ಯು (MSW) ದ್ವಿತೀಯ ಸಾಗಣೆ, ಸಂಸ್ಕರಣೆ ಮತ್ತು ವಿಲೇವಾರಿ ಕಾರ್ಯಗಳಿಗೆ 30 ವರ್ಷದ ಅವಧಿಗೆ ವಾರ್ಷಿಕ ಶೇ.5ರಷ್ಟು ಏರಿಕೆಯಂತೆ 39,437.37 ಕೋಟಿ ರೂ. ಮೊತ್ತವನ್ನು ಮತ್ತೊಮ್ಮೆ ಪರಿಷ್ಕರಿಸಿರುವ ಬಿಎಸ್ಡಬ್ಲ್ಯುಎಂಎಲ್, ಅದನ್ನೀಗ 25 ವರ್ಷಗಳ ರಿಯಾಯಿತಿ ಅವಧಿಯಲ್ಲಿ ಟಿಪ್ಪಿಂಗ್ ಶುಲ್ಕದಲ್ಲಿ ಒಟ್ಟು 23,682 ಕೋಟಿ ರೂ.ಗಳನ್ನು ಸರಕಾರವು ವೆಚ್ಚ ಮಾಡಬೇಕಾಗಿದೆ ಎಂದು ನಗರಾಭಿವೃದ್ದಿ ಇಲಾಖೆಗೆ ಕಡತ ಸಲ್ಲಿಸಿದೆ.
ಮರುಬಳಕೆ ಮಾಡಬಹುದಾದ ವಸ್ತುಗಳ ಮಾರಾಟದಿಂದ ಬರುವ ಆದಾಯವನ್ನು ತೆಗೆದುಹಾಕಿರುವುದರಿಂದ, ತ್ಯಾಜ್ಯ ವಿಲೇವಾರಿ ಶುಲ್ಕದಲ್ಲಿ (Tipping Fee) ಅಂದಾಜು 300 ರೂ.ಯಷ್ಟು ಹೆಚ್ಚುವರಿ ವೆಚ್ಚದ ಪರಿಣಾಮ ಉಂಟಾಗಲಿದೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ (ಡಬ್ಲ್ಯುಟಿಇ) ಘಟಕದಿಂದ ಬರುವ ಆದಾಯ ಕಡಿಮೆಯಾಗುವುದರಿಂದ ಟಿಪ್ಪಿಂಗ್ ಶುಲ್ಕದಲ್ಲಿ ಅಂದಾಜು 150 ರೂ.ಯಷ್ಟು ಹೆಚ್ಚುವರಿ ವೆಚ್ಚದ ಪರಿಣಾಮ ಉಂಟಾಗಲಿದೆ.
ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಮರು ಟೆಂಡರ್ ಆಹ್ವಾನಿಸುವ ಕುರಿತು ವಿಸ್ಕೃತ ಯೋಜನೆಯು ಸರಕಾರಕ್ಕೆ ಸಲ್ಲಿಕೆಯಾಗಿದೆ. ಈ ವಿಸ್ತೃತ ಯೋಜನೆ ವರದಿಯು ತಿದ್ದುಪಡಿಗಳೊಂದಿಗೆ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಹಾಗೂ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದು ಮರು ಟೆಂಡರ್ ಆಹ್ವಾನಿಸಲು ಬಿಎಸ್ಡಬ್ಲ್ಯುಎಂಎಲ್ ತನ್ನ ಪ್ರಸ್ತಾವನ್ನು ಸಲ್ಲಿಸಿದೆ.
ಟಿಪ್ಪಿಂಗ್ ಶುಲ್ಕ ನಿಗದಿಯಲ್ಲಿಯೇ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಮತ್ತು ಇದೊಂದು ಬಹುದೊಡ್ಡ ಹಗರಣ ಎಂದು ಹೇಳಲಾಗಿತ್ತು. ಮೊದಲು ನಿಗದಿಪಡಿಸಿದ್ದ ಟಿಪ್ಪಿಂಗ್ ಶುಲ್ಕದ ಮೊತ್ತದಲ್ಲಿ ಒಂದಷ್ಟು ಕಡಿಮೆ ಮಾಡುವ ಮೂಲಕ ಈ ಹಗರಣಕ್ಕೆ ಮತ್ತೊಂದು ತೇಪೆ ಹಚ್ಚುವ ಯತ್ನ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಪ್ರಸ್ತಾವದ ಪ್ರತೀ ಮತ್ತು ಇದಕ್ಕೆ ಸಂಬಂಧಿಸಿದಂತೆ ಸಮಗ್ರ ಕಡತವು ‘the-file.in’ಗೆ ಲಭ್ಯವಾಗಿದೆ.
ವಾರ್ಷಿಕ ಶೇ.5ರಷ್ಟು ಏರಿಕೆಯಂತೆ 30 ವರ್ಷದ ಅವಧಿಗೆ ಗುತ್ತಿಗೆ ಮತ್ತು ಒಬ್ಬರೇ ವೆಂಡರ್ಗೆ ಎರಡೂ ಪ್ಯಾಕೇಜ್ಗಳನ್ನು ನೀಡಿದರೆ ಅವರೊಬ್ಬರನ್ನೇ ಅವಲಂಬಿಸುವ ಅನಿವಾರ್ಯತೆ, 30 ವರ್ಷಗಳ ಅಂತ್ಯಕ್ಕೆ ಮೂಲ ದರವು ಪ್ರಸ್ತುತ ದರಕ್ಕಿಂತ ಸುಮಾರು ನಾಲ್ಕೂವರೆ ಪಟ್ಟು ಹೆಚ್ಚಳ ಅಂದರೆ ಇದು 430% ಹೆಚ್ಚಳವಾಗಲಿದೆ, ವಾರ್ಷಿಕ ಏರಿಕೆಯನ್ನು ಕೂಡ ವರ್ಷಕ್ಕೆ ಶೇ.2.5ಕ್ಕೆ ಮಿತಿಗೊಳಿಸಬೇಕು. ಇದರಿಂದ ದೀರ್ಘಾವಧಿಯ ಒಪ್ಪಂದದಲ್ಲಿ ವರ್ಷದಿಂದ ವರ್ಷಕ್ಕೆ ಆಗುವ ಹೆಚ್ಚಳ ನಿಯಂತ್ರಿತವಾಗಿರುತ್ತದೆ ಎಂದು ಆರ್ಥಿಕ ಇಲಾಖೆಯು ಎಚ್ಚರಿಸಿತ್ತು.
ಆದರೂ ಅದನ್ನು ಬದಿಗೊತ್ತಿ 30 ವರ್ಷಗಳ ಅವಧಿಗೆ ವಾರ್ಷಿಕ ಶೇ.5ರಷ್ಟು ಏರಿಕೆಯಂತೆ 39,437.37 ಕೋಟಿ ರೂ. ಪರಿಷ್ಕೃತ ಅಂದಾಜು ಮೊತ್ತಕ್ಕೆ ಸದ್ದಿಲ್ಲದೇ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇದನ್ನು ಸಚಿವ ಸಂಪುಟವು ಸದ್ದಿಲ್ಲದೇ ಅನುಮೋದಿಸಿತ್ತು. ಈ ಅನುಮೋದನೆ ಹಿಂದೆ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿದ್ದವು.
ಬಿಸಿಜಿ ಸಂಸ್ಥೆಯು ನೀಡಿದ್ದ ವರದಿ ಆಧರಿಸಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಂಡಿದೆ. ಎರಡು ಪ್ಯಾಕೇಜ್ಗಳನ್ನಾಗಿ ವಿಂಗಡಿಸಿದೆಯಲ್ಲದೇ ಪ್ರಾಥಮಿಕ ಹಂತದ ಸಂಗ್ರಹಣೆ ಮತ್ತು ಪ್ರಾಥಮಿಕ ಹಂತದ ಸಾಗಣೆಯನ್ನು ಪ್ರತ್ಯೇಕಿಸಿದೆ. ಅಲ್ಲದೇ ಪ್ರಸ್ತುತ ದ್ವಿತೀಯ ಹಂತದ ಸಾಗಣೆ ಹಾಗೂ ಸಂಸ್ಕರಣೆ, ವಿಲೇವಾರಿಗಾಗಿ ಗುತ್ತಿಗೆದಾರರನ್ನು ನಾಲ್ಕು ಪ್ಯಾಕೇಜ್ಗಳ ಬದಲಾಗಿ ಎರಡು ಪ್ಯಾಕೇಜ್ಗಳಲ್ಲಿ ನೇಮಿಸುವ ಕಾಮಗಾರಿಯ ವಿಸ್ತೃತ ವರದಿ ಸಲ್ಲಿಸಿದೆ. ಇಲ್ಲಿ ಮಾಡಿರುವ ಬದಲಾವಣೆಗಳಿಗೆ ಹಣಕಾಸು ಇಲಾಖೆ, ಪಿಪಿಪಿ ಯೋಜನೆಗಳ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯ ಒಪ್ಪಿಗೆ ಪಡೆಯುವ ಸಂಬಂಧ ಪ್ರಸ್ತಾವ ಸಲ್ಲಿಸಿರುವುದು ತಿಳಿದು ಬಂದಿದೆ.
ಟಿಪ್ಪಿಂಗ್ ಶುಲ್ಕ ನಿಗದಿ ಕುರಿತು ಪರಿಶೀಲಿಸಲು ಈ ಮೊದಲು ಅರಣ್ಯ ಜೀವಿ ಪರಿಸರ ಶಾಸ್ತ್ರ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಝ್ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಹಲವು ಸಲಹೆಗಳನ್ನು ನೀಡಿತ್ತು. ಈ ಎಲ್ಲಾ ಸಲಹೆಗಳನ್ನು ಆಧರಿಸಿ ಈ ಮೊದಲು ನಿಗದಿಪಡಿಸಿದ್ದ ಮೊತ್ತವನ್ನು ಬಿಎಸ್ಡಬ್ಲ್ಯುಎಂಎಲ್ ಪರಿಷ್ಕರಿಸಿದೆ.
ಅಂದಾಜು 23,682 ಕೋಟಿ ರೂ.ವೆಚ್ಚ: 30 ವರ್ಷದ ಅವಧಿಗೆ ವಾರ್ಷಿಕ ಶೇ.5ರಷ್ಟು ಏರಿಕೆಯಂತೆ 39,437.37 ಕೋಟಿ ರೂ. ಕೋಟಿ ರೂ. ಆಗಲಿದೆ ಎಂದು ಬಿಎಸ್ಡಬ್ಲ್ಯುಎಂಎಲ್ ಅಂದಾಜಿಸಿತ್ತು. ಈಗ ಪರಿಷ್ಕೃತ ದರಗಳು ಮತ್ತು ಅಂದಾಜು ಮಾಡಲಾದ ಶೇ.3.8ರಷ್ಟು ವಾರ್ಷಿಕ ವೆಚ್ಚ ಹೆಚ್ಚಳವನ್ನು ಆಧರಿಸಿ, 25 ವರ್ಷಗಳ ರಿಯಾಯಿತಿ ಅವಧಿ ಎಂದು ಹೇಳಿದೆ. ಮೊದಲಿನ ಪ್ರಸ್ತಾವಕ್ಕೆ ಹೋಲಿಸಿದರೆ ಈಗ 5 ವರ್ಷ ಕಡಿಮೆ ಆಗಿದೆ. ಅಲ್ಲದೇ ಟಿಪ್ಪಿಂಗ್ ಶುಲ್ಕಕ್ಕಾಗಿ ಸರಕಾರವು ಒಟ್ಟು 23,682 ಕೋಟಿ ರೂ. ವೆಚ್ಚ ಮಾಡಬೇಕಾಗುವುದು ಎಂದು ಅಂದಾಜಿಸಿರುವುದು ಪ್ರಸ್ತಾವದಿಂದ ತಿಳಿದು ಬಂದಿದೆ.
ಮರುಬಳಕೆ ಮಾಡಬಹುದಾದ ವಸ್ತುಗಳಿಂದ ಬರುವ ಆದಾಯವೆಷ್ಟು?: ಆರಂಭಿಕ ಅಂದಾಜಿನ ಪ್ರಕಾರ, ಒಣ ತ್ಯಾಜ್ಯದ ಶೇ. 15ರಷ್ಟು ಭಾಗವನ್ನು ಮರುಬಳಕೆ ಮಾಡಬಹುದಾದ ವಸ್ತುಗಳ ಮಾರಾಟದ ಮೂಲಕ ಆದಾಯ ಗಳಿಸಬಹುದು ಎಂದು ಪರಿಗಣಿಸಲಾಗಿತ್ತು. ಇಂದೋರ್ನಂತಹ ನಗರಗಳಲ್ಲಿನ ಪರಿಸ್ಥಿತಿಯನ್ನು ಆಧರಿಸಿ ಈ ಅಂದಾಜು ಮಾಡಲಾಗಿತ್ತು. ಅಲ್ಲಿ ಒಟ್ಟು ತ್ಯಾಜ್ಯದ ಸುಮಾರು ಶೇ. 8ರಷ್ಟು ಭಾಗವನ್ನು ಮರುಪಡೆಯಲಾಗುತ್ತದೆ. ಇದು ಒಣ ತ್ಯಾಜ್ಯದ ಶೇ. 15ಕ್ಕೆ ಸಮನಾಗಿರುತ್ತದೆ ಎಂದು ವಿವರಿಸಿದೆ.
ಆದರೆ, ತಜ್ಞರೊಂದಿಗಿನ ಚರ್ಚೆಯಲ್ಲಿ ಬೆಂಗಳೂರಿನಲ್ಲಿ ಮಾರಾಟಯೋಗ್ಯವಾದ ಮರುಪಡೆಯಬಹುದಾದ ವಸ್ತುಗಳ ಗಣನೀಯ ಪ್ರಮಾಣವನ್ನು ಈಗಾಗಲೇ ಕಸ ಸಂಗ್ರಹಿಸುವ ಅನೌಪಚಾರಿಕ ಕಾರ್ಮಿಕರು (Ragpickers) ಸಂಗ್ರಹಿಸುತ್ತಿದ್ದಾರೆ ಎಂಬ ಅಂಶ ಗಮನಕ್ಕೆ ಬಂದಿದೆ. ಈ ತ್ಯಾಜ್ಯ ಆರ್ಥಿಕತೆಯು ಮಹತ್ವದ್ದಾಗಿರುವುದರ ಜೊತೆಗೆ ಸಾಮಾಜಿಕವಾಗಿ ಸೂಕ್ಷ್ಮವಾದ ವಿಷಯವೂ ಆಗಿದೆ. ಈ ಹಿನ್ನೆಲೆಯಲ್ಲಿ, ಪರಿಷ್ಕೃತ ಮಾದರಿಯು ರಿಯಾಯಿತಿದಾರರ (Concessionaire) ಮೂಲಕ ಕೇವಲ ಶೇ.3ರಷ್ಟು ಒಣ ತ್ಯಾಜ್ಯವನ್ನಷ್ಟೇ ಮಾರಾಟಯೋಗ್ಯವೆಂದು ಪರಿಗಣಿಸುತ್ತದೆ.
ಇದು ಅನೌಪಚಾರಿಕ ವಲಯದ ಜೀವನೋಪಾಯವನ್ನು ರಕ್ಷಿಸುವ ಮಹತ್ವವನ್ನು ಗುರುತಿಸುವುದರ ಜೊತೆಗೆ, ನೆಲಮಟ್ಟದ ವಾಸ್ತವಿಕ ಪರಿಸ್ಥಿತಿಗಳಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳ (Dry Waste Collection Centres-DWCCs) ಮೂಲಕ ಅನೌಪಚಾರಿಕ ವಲಯದ ಜೀವನೋಪಾಯವನ್ನು ಸಂರಕ್ಷಿಸುವ ಉದ್ದೇಶವೂ ಇದರಲ್ಲಿದೆ. ಮರುಬಳಕೆ ಮಾಡಬಹುದಾದ ವಸ್ತುಗಳ ಮಾರಾಟದಿಂದ ಬರುವ ಆದಾಯವನ್ನು ತೆಗೆದುಹಾಕಿರುವುದರಿಂದ, ಟಿಪ್ಪಿಂಗ್ ಶುಲ್ಕದಲ್ಲಿ (ಅಂದಾಜು 300 ರೂ.ಯಷ್ಟು ಹೆಚ್ಚುವರಿ ವೆಚ್ಚದ ಪರಿಣಾಮ ಉಂಟಾಗಲಿದೆ.