AI ಆರ್ಥಿಕತೆಯಲ್ಲಿನ ಭಾರೀ ನಿರುದ್ಯೋಗಕ್ಕೆ 'ಯುನಿವರ್ಸಲ್ ಬೇಸಿಕ್ ಇನ್ ಕಮ್' ಪರಿಹಾರವೇ?
ಯಾಸ್ಮೀನ್ ಎಲ್ತಹಾನ್ – Aljazeera. com ವರದಿ
Photo Credit : aljazeera.com
ಕೃತಕ ಬುದ್ಧಿಮತ್ತೆಯ (AI) ಕ್ಷಿಪ್ರ ಬೆಳವಣಿಗೆಯು ಭಾರೀ ಪ್ರಮಾಣದ ಉದ್ಯೋಗ ನಷ್ಟದ ಭೀತಿಯನ್ನು ಹುಟ್ಟುಹಾಕಿರುವ ಬೆನ್ನಲ್ಲೇ, 'ಯುನಿವರ್ಸಲ್ ಬೇಸಿಕ್ ಇನ್ ಕಮ್' (Universal Basic Income - UBI) ಜಾರಿಗೆ ತರಬೇಕೆಂಬ ಕೂಗು ಹೆಚ್ಚಾಗುತ್ತಿದೆ.
ಯುಬಿಐ ಎಂದರೆ ಉದ್ಯೋಗ, ಆದಾಯ ಅಥವಾ ಸಂಪತ್ತಿನ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದಿಂದ ನಿಯಮಿತವಾಗಿ ನೀಡಲಾಗುವ ನಿಶ್ಚಿತ ನಗದು ಪಾವತಿಯಾಗಿದೆ.
ಕಾರ್ಮಿಕ ಮಾರುಕಟ್ಟೆಯ ಮೇಲೆ AI ಬೀರಲಿರುವ ನಿರೀಕ್ಷಿತ ಪರಿಣಾಮವನ್ನು ಸರಿದೂಗಿಸಲು ಮತ್ತು ತೀವ್ರ ಬಡತನ ಹಾಗೂ ಆರ್ಥಿಕ ಅಸಮಾನತೆಯನ್ನು ತಡೆಯಲು ಸರ್ಕಾರಗಳು ಯುಬಿಐ ಮೊರೆ ಹೋಗಬೇಕು ಎಂದು ಅಮೆರಿಕದ ಯುಬಿಐ ಪ್ರತಿಪಾದಕರು ವಾದಿಸುತ್ತಿದ್ದಾರೆ.
►ಯುಬಿಐ ಪರಿಕಲ್ಪನೆ ಆರಂಭವಾಗಿದ್ದು ಯಾವಾಗ?
ಎಲ್ಲರಿಗೂ ಸಮಾನವಾಗಿ ಹಣ ನೀಡುವ ಈ ಆಲೋಚನೆ ಹೊಸದೇನಲ್ಲ.
1797ರಲ್ಲಿ, ಅಮೆರಿಕನ್ ಕ್ರಾಂತಿಯ ಪ್ರಮುಖ ಚಿಂತಕರಲ್ಲಿ ಒಬ್ಬರಾದ ಥಾಮಸ್ ಪೈನ್ ಅವರು 'ಅಗ್ರೇರಿಯನ್ ಜಸ್ಟೀಸ್' (Agrarian Justice) ಎಂಬ ಕಿರುಹೊತ್ತಿಗೆಯಲ್ಲಿ ಯುಬಿಐನ ಆರಂಭಿಕ ರೂಪವನ್ನು ಪ್ರಸ್ತಾಪಿಸಿದ್ದರು. ಭೂಮಿಯು ಮೂಲತಃ ಇಡೀ ಮನುಕುಲಕ್ಕೆ ಸೇರಿದ ಸಾಮಾನ್ಯ ಆಸ್ತಿಯಾಗಿದೆ ಎಂದು ಅವರು ವಾದಿಸಿದ್ದರು. ಭೂಮಿ ಇಲ್ಲದವರಿಗೆ ಮೂಲಭೂತ ಮಾನವ ಹಕ್ಕಿನ ರೂಪದಲ್ಲಿ ಪರಿಹಾರ ನೀಡಬೇಕು ಎಂದು ಅವರು ಹೇಳಿದ್ದರು.
ಪೈನ್ ಅವರ ಪ್ರಸ್ತಾವನೆಯ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಗೂ 21 ವರ್ಷ ತುಂಬಿದಾಗ ಒಟ್ಟು 15 ಪೌಂಡ್ ಗಳ ಹಣವನ್ನು ನೀಡಬೇಕು ಮತ್ತು 50 ವರ್ಷದ ನಂತರ ಪ್ರತಿ ವರ್ಷ 10 ಪೌಂಡ್ ಗಳನ್ನು ಪಾವತಿಸಬೇಕು. ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ವಿಧಿಸುವ ಮೂಲಕ ಈ ಹಣವನ್ನು ಭರಿಸಬೇಕು ಎಂದು ಅವರು ಸೂಚಿಸಿದ್ದರು.
1960ರ ದಶಕದಲ್ಲಿ ಭಿನ್ನ ಸಿದ್ಧಾಂತಗಳ ಎರಡು ಕಡೆಯಿಂದ ಈ ಆಲೋಚನೆ ಮತ್ತೆ ಮುನ್ನೆಲೆಗೆ ಬಂದಿತು.
ಅಮೆರಿಕದ ಅರ್ಥಶಾಸ್ತ್ರಜ್ಞ ಮಿಲ್ಟನ್ ಫ್ರೀಡ್ಮನ್ 'ಋಣಾತ್ಮಕ ಆದಾಯ ತೆರಿಗೆ' (negative income tax) ವ್ಯವಸ್ಥೆಯನ್ನು ಪ್ರಸ್ತಾಪಿಸಿದ್ದರು. ಇದರ ಅಡಿಯಲ್ಲಿ, ನಿಗದಿತ ಮಿತಿಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ಸರ್ಕಾರವೇ ಹೆಚ್ಚುವರಿ ಹಣವನ್ನು ನೀಡಬೇಕಿತ್ತು. ಮುಕ್ತ ಮಾರುಕಟ್ಟೆ ನೀತಿಗಳ ಪ್ರತಿಪಾದಕರಾಗಿದ್ದ ಫ್ರೀಡ್ಮನ್, ತಮ್ಮ ಈ ಪ್ರಸ್ತಾವನೆಯು ಅಸ್ತಿತ್ವದಲ್ಲಿರುವ ಕಲ್ಯಾಣ ಕಾರ್ಯಕ್ರಮಗಳಿಗಿಂತ ಕಡಿಮೆ ವೆಚ್ಚದಾಯಕವಾಗಲಿದೆ ಎಂದು ವಾದಿಸಿದ್ದರು.
ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು 1967ರಲ್ಲಿ ಪ್ರಕಟವಾದ ತಮ್ಮ 'ವೇರ್ ಡು ವಿ ಗೋ ಫ್ರಮ್ ಹಿಯರ್' (Where Do We Go from Here) ಪುಸ್ತಕದಲ್ಲಿ, ಬಡತನವನ್ನು ಕೊನೆಗಾಣಿಸಲು ಖಾತರಿಯಾದ ಆದಾಯದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
1969ರಲ್ಲಿ ಅಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಮಕ್ಕಳಿರುವ ಕುಟುಂಬಗಳಿಗೆ ಕನಿಷ್ಠ ಆದಾಯ ನೀಡುವ 'ಕುಟುಂಬ ನೆರವು ಯೋಜನೆ'ಯನ್ನು (Family Assistance Plan) ಪ್ರಸ್ತಾಪಿಸಿದಾಗ ಕಿಂಗ್ ಜೂನಿಯರ್ ಅವರ ಕನಸು ಕಾನೂನಾಗುವ ಹಂತಕ್ಕೆ ತಲುಪಿತ್ತು. ನಿಕ್ಸನ್ ಅವರ ಪ್ರಸ್ತಾವನೆಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಒಪ್ಪಿಗೆ ಸಿಕ್ಕಿತಾದರೂ, ಸೆನೆಟ್ ನಲ್ಲಿ ತಡೆ ಬಿದ್ದಿತು. ಅಂತಿಮವಾಗಿ ಆ ಯೋಜನೆಯನ್ನು ಕೈಬಿಡಲಾಯಿತು.
ನಂತರದ ದಶಕಗಳಲ್ಲಿ ಈ ಪರಿಕಲ್ಪನೆ ಜನಪ್ರಿಯತೆ ಕಳೆದುಕೊಂಡಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಟೋಮೇಷನ್ ಮತ್ತು AI ಬೆಳವಣಿಗೆಯ ನಡುವೆ ಎಲ್ಲರಿಗೂ ಸಮಾನ ನಗದು ಪಾವತಿಸುವ ಪ್ರಸ್ತಾವನೆಗಳು ಮತ್ತೆ ಮುಖ್ಯವಾಹಿನಿಗೆ ಬಂದಿವೆ.
►ಯುಬಿಐ ಬೆಂಬಲಿಸುತ್ತಿರುವವರು ಯಾರು?
ಯುಬಿಐ ಪರವಾಗಿ ಅತ್ಯಂತ ಗಟ್ಟಿಯಾಗಿ ಧ್ವನಿ ಎತ್ತುತ್ತಿರುವವರಲ್ಲಿ AI ಅಭಿವೃದ್ಧಿಪಡಿಸುತ್ತಿರುವ ತಂತ್ರಜ್ಞರೇ ಮುಂಚೂಣಿಯಲ್ಲಿದ್ದಾರೆ.
OpenAI ಸಿಇಒ ಸ್ಯಾಮ್ ಆಲ್ಟ್ಮನ್ ಹಲವು ವರ್ಷಗಳಿಂದ ಈ ಆಲೋಚನೆಯನ್ನು ಪ್ರತಿಪಾದಿಸುತ್ತಿದ್ದಾರೆ.
2024ರಲ್ಲಿ 'ಆಲ್-ಇನ್ ಪಾಡ್ಕ್ಯಾಸ್ಟ್'ಗೆ ನೀಡಿದ ಸಂದರ್ಶನದಲ್ಲಿ, AIನಿಂದ ಬರುವ ಉತ್ಪಾದಕ ಲಾಭದಲ್ಲಿ ಪ್ರತಿಯೊಬ್ಬರಿಗೂ ಪಾಲು ನೀಡುವ ಮೂಲಕ ಯುಬಿಐಗೆ ಹೊಸ ರೂಪ ನೀಡುವ ಪ್ರಸ್ತಾಪವನ್ನು ಆಲ್ಟ್ಮನ್ ಮುಂದಿಟ್ಟಿದ್ದರು.
"ಭವಿಷ್ಯದಲ್ಲಿ 'ಯುನಿವರ್ಸಲ್ ಬೇಸಿಕ್ ಇನ್ ಕಮ್'ಗಿಂತ 'ಯುನಿವರ್ಸಲ್ ಬೇಸಿಕ್ ಕಂಪ್ಯೂಟ್' (universal basic compute) ವ್ಯವಸ್ಥೆ ಬರಬಹುದು. ಇದರಲ್ಲಿ ಪ್ರತಿಯೊಬ್ಬರಿಗೂ GPT-7ರ ಕಂಪ್ಯೂಟಿಂಗ್ ಸಾಮರ್ಥ್ಯದ ಒಂದು ಪಾಲು ಸಿಗುತ್ತದೆ. ಅವರು ಅದನ್ನು ಬಳಸಬಹುದು, ಮರುಮಾರಾಟ ಮಾಡಬಹುದು ಅಥವಾ ಕ್ಯಾನ್ಸರ್ ಸಂಶೋಧನೆಗೆ ಬಳಸಲು ಯಾರಿಗಾದರೂ ದಾನ ಮಾಡಬಹುದು" ಎಂದು ಆಲ್ಟ್ಮನ್ ಹೇಳಿದ್ದರು. ನಗದು ಹಣ ಪಡೆಯುವ ಬದಲು, ನಾಗರಿಕರು AI ಸೃಷ್ಟಿಸುವ ಉತ್ಪಾದಕತೆಯ ಒಂದು ಭಾಗದ ಮಾಲೀಕರಾಗಬಹುದು ಎಂದು ಅವರು ಸಲಹೆ ನೀಡಿದ್ದರು.
ಎಪ್ರಿಲ್ ನಲ್ಲಿ, 'ಸ್ಪೇಸ್ ಎಕ್ಸ್' ಮತ್ತು 'ಟೆಸ್ಲಾ' ಸಿಇಒ ಎಲಾನ್ ಮಸ್ಕ್ ಅವರು 'ಎಕ್ಸ್' ಪೋಸ್ಟ್ ನಲ್ಲಿ, AIನಿಂದ ಉಂಟಾಗುವ ಭಾರೀ ನಿರುದ್ಯೋಗವನ್ನು ನಿಭಾಯಿಸಲು ಸರ್ಕಾರದಿಂದ ವಿತರಿಸಲಾಗುವ "ಯುನಿವರ್ಸಲ್ ಹೈ ಇನ್ ಕಮ್" (Universal High Income) ಅತ್ಯುತ್ತಮ ಮಾರ್ಗವಾಗಿದೆ ಎಂದು ಹೇಳಿದ್ದರು.
ಭವಿಷ್ಯದಲ್ಲಿ AI ಮತ್ತು ರೊಬೊಟಿಕ್ಸ್ಗಳು ಹಣದ ಪೂರೈಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕು ಮತ್ತು ಸೇವೆಗಳನ್ನು ಉತ್ಪಾದಿಸುತ್ತವೆ. ಇದರಿಂದ ಹಣದುಬ್ಬರ ಉಂಟಾಗುವುದಿಲ್ಲ ಎಂದು ಮಸ್ಕ್ ಅಭಿಪ್ರಾಯಪಟ್ಟಿದ್ದರು.
ಆದರೆ, ಬಿಲಿಯನೇರ್ ಆಗಿರುವ ಟೆಕ್ ಕಂಪೆನಿ ಮುಖ್ಯಸ್ಥರ ಇಂತಹ ಪ್ರಸ್ತಾವನೆಗಳ ಹಿಂದಿನ ಉದ್ದೇಶವನ್ನು ಕೆಲವು ವಿಶ್ಲೇಷಕರು ಪ್ರಶ್ನಿಸಿದ್ದಾರೆ.
ಲಂಡನ್ ನ ಕಿಂಗ್ಸ್ ಕಾಲೇಜಿನ ಅರ್ಥಶಾಸ್ತ್ರ ಮತ್ತು ಸಾರ್ವಜನಿಕ ನೀತಿ ಪ್ರಾಧ್ಯಾಪಕ ಜೊನಾಥನ್ ಪೋರ್ಟೆಸ್, ಯುಬಿಐ ಪ್ರಚಾರ ಮಾಡುತ್ತಿರುವ ಟೆಕ್ ನಾಯಕರು ತಮ್ಮ "ಸ್ವಹಿತಾಸಕ್ತಿಗಾಗಿ" ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ಜನರಿಗೆ ಮೂಲ ಆದಾಯ ಸಿಗುತ್ತಿದ್ದರೆ, AI ತಮ್ಮ ಕೆಲಸವನ್ನು ಕಸಿದುಕೊಳ್ಳುವುದನ್ನು ಅವರು ಸುಲಭವಾಗಿ ಸಹಿಸಿಕೊಳ್ಳುತ್ತಾರೆ ಮತ್ತು ಉದ್ಯೋಗ ನಷ್ಟವನ್ನು ಒಪ್ಪಿಕೊಳ್ಳುವುದು ಅವರಿಗೆ ಸುಲಭವಾಗುತ್ತದೆ.
Al Jazeera ಜೊತೆ ಮಾತನಾಡಿದ ಪೋರ್ಟೆಸ್, "ಇದು ಕೇಳಲು ಚೆನ್ನಾಗಿರುವ ಮತ್ತೊಂದು ಆಲೋಚನೆಯಷ್ಟೇ. ಸಾರ್ವಜನಿಕ ನೀತಿಯ ವಿಚಾರಗಳಲ್ಲಿ ನಾವು ಈ ವ್ಯಕ್ತಿಗಳನ್ನು ಗಂಭೀರವಾಗಿ ಪರಿಗಣಿಸಬಾರದು" ಎಂದಿದ್ದಾರೆ.
►ಯುಬಿಐ ವೆಚ್ಚವನ್ನು ಯಾರು ಭರಿಸುತ್ತಾರೆ, ಮತ್ತು ಇದು ಸಾಮಾಜಿಕ ಕಲ್ಯಾಣ ಯೋಜನೆಗಳಿಗಿಂತ ಹೇಗೆ ಭಿನ್ನವಾಗಿದೆ?
ಪ್ರಸ್ತುತ ಜಾರಿಯಲ್ಲಿರುವ ಕಲ್ಯಾಣ ಕಾರ್ಯಕ್ರಮಗಳಂತೆಯೇ, ಹೆಚ್ಚಿನ ಯುಬಿಐ ಪ್ರಸ್ತಾವನೆಗಳು ಕೂಡ ತೆರಿಗೆ ಹಣದಿಂದಲೇ ಈ ವ್ಯವಸ್ಥೆಯನ್ನು ನಡೆಸುವ ಯೋಜನೆಯನ್ನು ಹೊಂದಿವೆ. ಕೆಲವು ಪ್ರಾಯೋಗಿಕ ಯೋಜನೆಗಳಿಗೆ ಮಾತ್ರ ಖಾಸಗಿ ದೇಣಿಗೆಗಳಿಂದ ಹಣ ಒದಗಿಸಲಾಗಿದೆ.
ಸಾಂಪ್ರದಾಯಿಕ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಫಲಾನುಭವಿಗಳು ತಮ್ಮ ಆರ್ಥಿಕ ಸಂಕಷ್ಟವನ್ನು ಸಾಬೀತುಪಡಿಸಬೇಕಾಗುತ್ತದೆ. ಆದರೆ ಯುಬಿಐ ಇದಕ್ಕೆ ವಿರುದ್ಧವಾಗಿದ್ದು, ಯಾವುದೇ ಷರತ್ತುಗಳಿಲ್ಲದೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹಣವನ್ನು ಪಾವತಿಸಲಾಗುತ್ತದೆ.
ಉತ್ತಮ ಜೀವನಮಟ್ಟವನ್ನು ಕಾಯ್ದುಕೊಳ್ಳಲು ಸಾಕಾಗುವಷ್ಟು ದೊಡ್ಡ ಮೊತ್ತದ ಯುಬಿಐ ನೀಡುವುದು ಸದ್ಯದ ಭವಿಷ್ಯದಲ್ಲಿ ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಕಾರ್ಯಸಾಧುವಲ್ಲ ಎಂದು ಪ್ರಾಧ್ಯಾಪಕ ಪೋರ್ಟೆಸ್ ಅಭಿಪ್ರಾಯಪಟ್ಟಿದ್ದಾರೆ.
"ವಾಸ್ತವಿಕ ನೆಲೆಗಟ್ಟಿನ ಯುಬಿಐ ವ್ಯವಸ್ಥೆಯು ಜನರಿಗೆ ಉತ್ತಮ ರಕ್ಷಣೆ ನೀಡಬಹುದು, ವೈಯಕ್ತಿಕ ಸ್ವಾತಂತ್ರ್ಯವನ್ನು ಹೆಚ್ಚಿಸಬಹುದು ಮತ್ತು ಕಾರ್ಮಿಕ ಮಾರುಕಟ್ಟೆಯಲ್ಲಿ ಸುಧಾರಣೆ ತರಬಹುದು. ಆದರೆ ಆ ಹಂತವನ್ನು ತಲುಪುವುದು ಅಷ್ಟು ಸುಲಭವಲ್ಲ, ಅದು ಸಂಕೀರ್ಣವಾದ ಪ್ರಕ್ರಿಯೆ" ಎಂದು ಅವರು ಹೇಳಿದ್ದಾರೆ.
"ಯುಬಿಐ ಕುರಿತಾದ ಅನೇಕ ಭರವಸೆಗಳು ಮತ್ತು ಆತಂಕಗಳನ್ನು ತೀರಾ ಉತ್ಪ್ರೇಕ್ಷೆ ಮಾಡಿ ಹೇಳಲಾಗುತ್ತಿದೆ" ಎಂದೂ ಪೋರ್ಟೆಸ್ ತಿಳಿಸಿದ್ದಾರೆ.
►ಯುಬಿಐನಿಂದ ಯಾರಿಗೆ ಲಾಭವಾಗಲಿದೆ?
ಪ್ರತಿಯೊಬ್ಬರಿಗೂ ಇದರಿಂದ ಒಂದಷ್ಟು ಆರ್ಥಿಕ ಲಾಭ ಸಿಗುವುದಾದರೂ, ಇದರ ಅತಿ ದೊಡ್ಡ ಫಲಾನುಭವಿ ಇಡೀ 'ಆರ್ಥಿಕತೆ' ಆಗಿರಲಿದೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ಮತ್ತು ತಂತ್ರಜ್ಞರು ವಾದಿಸುತ್ತಾರೆ.
AI ಕಾರಣದಿಂದ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತವಾದರೆ, ಜನರ ಬಳಿ ಖರ್ಚು ಮಾಡಲು ಹಣ ಕಡಿಮೆಯಾಗುತ್ತದೆ. ಈ ದೃಷ್ಟಿಕೋನದಿಂದ ನೋಡಿದರೆ, ಯುಬಿಐ ಕೇವಲ ದಾನಧರ್ಮದ ರೂಪವಾಗಿರದೆ, ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಜೀವಂತವಾಗಿಡುವ ಮಾರ್ಗವಾಗಿ ಕೆಲಸ ಮಾಡುತ್ತದೆ.
ಫ್ಯೂಚರಿಸ್ಟ್ ಹಾಗೂ 'ರೈಸ್ ಆಫ್ ದಿ ರೋಬೋಟ್ಸ್' (Rise of the Robots) ಕೃತಿಯ ಲೇಖಕ ಮಾರ್ಟಿನ್ ಫೋರ್ಡ್ ಅವರ ವಾದವೂ ಇದೇ ಆಗಿದೆ.
ಉದ್ಯೋಗಗಳ ಮೂಲಕವೇ ಸಾಮಾನ್ಯ ಗ್ರಾಹಕರಿಗೆ ಖರೀದಿ ಸಾಮರ್ಥ್ಯ ಸಿಗುತ್ತದೆ ಎಂದು ಫೋರ್ಡ್ ಹೇಳುತ್ತಾರೆ. ಕೇವಲ ಸಂಪತ್ತನ್ನು ಮರುಹಂಚಿಕೆ ಮಾಡುವುದಕ್ಕಿಂತ ಹೆಚ್ಚಾಗಿ, ಉತ್ಪಾದನೆ ಮತ್ತು ಖರ್ಚಿನ ನಡುವಿನ ಕೊಂಡಿಯನ್ನು ಸರಿಪಡಿಸುವ ಮಾರ್ಗವಾಗಿ ಅವರು ಯುಬಿಐ ಅನ್ನು ನೋಡುತ್ತಾರೆ.
"ಗ್ರಾಹಕರಿಗೆ ಖರೀದಿ ಸಾಮರ್ಥ್ಯವನ್ನು ತಂದುಕೊಡುವ ಮತ್ತು ಆ ಮೂಲಕ ಆರ್ಥಿಕತೆಯನ್ನು ಮುನ್ನಡೆಸುವ ವ್ಯವಸ್ಥೆಯೇ ಉದ್ಯೋಗಗಳು" ಎಂದು 2017ರ 'ಟೆಡ್ ಟಾಕ್' ಕಾರ್ಯಕ್ರಮದಲ್ಲಿ ಫೋರ್ಡ್ ಹೇಳಿದ್ದರು.
"ಭವಿಷ್ಯದಲ್ಲಿ ಆ ವ್ಯವಸ್ಥೆಯೇ ಕುಸಿಯಲು ಆರಂಭಿಸಿದರೆ, ನಾವು ಅದಕ್ಕೆ ಬದಲಿಯಾಗಿ ಬೇರೊಂದನ್ನು ತರಬೇಕಾಗುತ್ತದೆ. ಇಲ್ಲದಿದ್ದರೆ, ನಮ್ಮ ಇಡೀ ಆರ್ಥಿಕ ವ್ಯವಸ್ಥೆಯೇ ಉಳಿಯದಂತಹ ಅಪಾಯವನ್ನು ಎದುರಿಸಬೇಕಾಗುತ್ತದೆ" ಎಂದು ಅವರು ಎಚ್ಚರಿಸಿದ್ದರು.
►ಯುಬಿಐ ವಿರುದ್ಧದ ವಾದಗಳೇನು?
ಯಾವುದೇ ಷರತ್ತುಗಳಿಲ್ಲದೆ ಕೈಗೆ ಹಣ ಸಿಗುವುದರಿಂದ ಜನರು ಕೆಲಸ ಮಾಡಲು ನಿರಾಸಕ್ತಿ ತೋರಿಸುತ್ತಾರೆ ಎಂಬುದು ಇದರ ವಿರುದ್ಧ ಕೇಳಿಬರುವ ಸಾಮಾನ್ಯ ಆಕ್ಷೇಪವಾಗಿದೆ. ಈ ಪರಿಣಾಮ ನಿಜವಾಗಿದ್ದರೂ ಅದು ತೀರಾ ಕಡಿಮೆ ಪ್ರಮಾಣದಲ್ಲಿದೆ ಎಂಬುದನ್ನು ಅಧ್ಯಯನಗಳು ತೋರಿಸಿವೆ.
ಅಮೆರಿಕದಲ್ಲಿ ನಡೆದ ಈ ರೀತಿಯ ಅತಿ ದೊಡ್ಡ ಪ್ರಯೋಗದಲ್ಲಿ, ಸುಮಾರು 1,000 ಕಡಿಮೆ ಆದಾಯದ ಜನರಿಗೆ ಮೂರು ವರ್ಷಗಳ ಕಾಲ ಪ್ರತಿ ತಿಂಗಳು 1,000 ಡಾಲರ್ ನೀಡಲಾಯಿತು.
OpenAI ಮುಖ್ಯಸ್ಥ ಸ್ಯಾಮ್ ಆಲ್ಟ್ಮನ್ ಬೆಂಬಲಿತ 'ಓಪನ್ ರಿಸರ್ಚ್' (OpenResearch) ಸಂಸ್ಥೆ ನಡೆಸಿದ ಈ ಅಧ್ಯಯನದ ಪ್ರಕಾರ, ಹಣ ಪಡೆದವರು ಇತರರಿಗಿಂತ ವಾರಕ್ಕೆ ಕೇವಲ 1.3ರಿಂದ 1.4 ಗಂಟೆಗಳಷ್ಟು ಮಾತ್ರ ಕಡಿಮೆ ಕೆಲಸ ಮಾಡಿದ್ದಾರೆ.
ಫಲಾನುಭವಿಗಳು ಹೆಚ್ಚುವರಿಯಾಗಿ ಖರ್ಚು ಮಾಡಿದ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗವು ಆಹಾರ, ವಸತಿ ಮತ್ತು ಸಾರಿಗೆಯಂತಹ ಮೂಲಭೂತ ಅಗತ್ಯಗಳಿಗೆ ಬಳಕೆಯಾಗಿದೆ.
ಆದರೆ, ಇದರಿಂದ ದೈಹಿಕ ಆರೋಗ್ಯದ ಮೇಲೆ ಯಾವುದೇ ಗಮನಾರ್ಹ ಪರಿಣಾಮ ಬೀರಿಲ್ಲ ಮತ್ತು ಮೊದಲ ವರ್ಷದ ನಂತರ ಯೋಗಕ್ಷೇಮದಲ್ಲಿ ಕಂಡುಬಂದ ಸುಧಾರಣೆಗಳು ಮಸುಕಾದವು ಎಂದು ಅಧ್ಯಯನ ಹೇಳಿದೆ.
ಮತ್ತೊಂದು ಪ್ರಮುಖ ಆಕ್ಷೇಪವೆಂದರೆ ಇದಕ್ಕೆ ತಗಲುವ ಭಾರೀ ವೆಚ್ಚ.
'ಟ್ಯಾಕ್ಸ್ ಪ್ರಾಜೆಕ್ಟ್ ಇನ್ಸ್ಟಿಟ್ಯೂಟ್' ಪ್ರಕಾರ, ಅಮೆರಿಕದಲ್ಲಿ ನಾಲ್ಕು ಸದಸ್ಯರ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 30,000 ಡಾಲರ್ (ಅಧಿಕೃತ ಬಡತನ ರೇಖೆಗಿಂತ ಸ್ವಲ್ಪ ಕಡಿಮೆ) ಸಾರ್ವತ್ರಿಕ ಪಾವತಿ ನೀಡಲು ಪ್ರತಿ ವರ್ಷ ಅಂದಾಜು 8.5 ಟ್ರಿಲಿಯನ್ ಡಾಲರ್ ವೆಚ್ಚವಾಗುತ್ತದೆ.
ಈ ಮೊತ್ತದ ಮುಂದೆ ಸದ್ಯ ಕಲ್ಯಾಣ ಯೋಜನೆಗಳಿಗೆ ಮಾಡುತ್ತಿರುವ ವೆಚ್ಚ ತೀರಾ ಚಿಕ್ಕದಾಗಿ ಕಾಣುತ್ತದೆ.
'ಹೆರಿಟೇಜ್ ಫೌಂಡೇಶನ್' ವರದಿಯ ಪ್ರಕಾರ, ಅಮೆರಿಕ ಸರ್ಕಾರವು 2025ರಲ್ಲಿ ಸುಮಾರು 90 ಕಲ್ಯಾಣ ಕಾರ್ಯಕ್ರಮಗಳಿಗೆ 1.7 ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ.
ಸೌಜನ್ಯ: Aljazeera.com