ಸಾಂದರ್ಭಿಕ ಚಿತ್ರ | PTI

2022 ಅಕ್ಟೋಬರ್‌ನಿಂದಲೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲೇ ಸಂಗ್ರಹಿಸಿಡುವ ತನ್ನ ಚಿನ್ನದ ಪಾಲನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಚಿನ್ನವನ್ನು ಸ್ವದೇಶದಲ್ಲೇ ಇರಿಸಿಕೊಳ್ಳಲು ಹೆಚ್ಚಿನ ಒಲವು ತೋರುತ್ತಿರುವ ನಡುವೆಯೇ, 2026-27ರ ಮೊದಲ ಅರ್ಧವಾರ್ಷಿಕದಲ್ಲೂ ಆರ್‌ಬಿಐ ಇದೇ ನೀತಿಯನ್ನು ಮುಂದುವರಿಸಿದೆ ಎಂದು ಬುಧವಾರ ಬಿಡುಗಡೆಯಾದ ದತ್ತಾಂಶಗಳು ತಿಳಿಸಿವೆ.

ವಿದೇಶಿ ವಿನಿಮಯ ಮೀಸಲು ನಿರ್ವಹಣೆಯ ಕುರಿತು ಆರ್‌ಬಿಐ ಬಿಡುಗಡೆ ಮಾಡಿರುವ ಅರ್ಧವಾರ್ಷಿಕ ವರದಿಯ ಪ್ರಕಾರ, ಮಾರ್ಚ್ ಅಂತ್ಯಕ್ಕೆ ಭಾರತದಲ್ಲಿದ್ದ 680.05 ಮೆಟ್ರಿಕ್ ಟನ್ ಚಿನ್ನದ ಸಂಗ್ರಹವು, ಸೆಪ್ಟೆಂಬರ್ ಅಂತ್ಯದ ವೇಳೆಗೆ 740.13 ಮೆಟ್ರಿಕ್ ಟನ್‌ಗಳಿಗೆ ಏರಿಕೆಯಾಗಿದೆ.

ಇದರ ಪರಿಣಾಮವಾಗಿ, ಆರ್‌ಬಿಐ ತನ್ನ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನದ ಸಂಗ್ರಹದಲ್ಲಿ ಶೇ. 84ರಷ್ಟು ಚಿನ್ನವನ್ನು ಈಗ ಭಾರತದಲ್ಲೇ ಇರಿಸಿಕೊಂಡಿದೆ. ನಾಲ್ಕು ವರ್ಷಗಳ ಹಿಂದೆ ದೇಶದಲ್ಲಿದ್ದ ಶೇ. 39ರಷ್ಟು ಪ್ರಮಾಣಕ್ಕೆ ಹೋಲಿಸಿದರೆ ಇದು ದುಪ್ಪಟ್ಟಾಗಿದೆ.

2023-24ರಲ್ಲಿ 107.21 ಮೆಟ್ರಿಕ್ ಟನ್ ಮತ್ತು 2024-25ರಲ್ಲಿ 103.68 ಮೆಟ್ರಿಕ್ ಟನ್ ಚಿನ್ನವನ್ನು ಭಾರತಕ್ಕೆ ತಂದಿದ್ದ ಆರ್‌ಬಿಐ, 2025-26ರಲ್ಲಿ ಈ ಪ್ರಮಾಣವನ್ನು 168.06 ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಿದೆ.

ವಿದೇಶಿ ವಿನಿಮಯ ಮೀಸಲುಗಳನ್ನೇ ಅಸ್ತ್ರವಾಗಿ ಬಳಸುವುದು:

2022 ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದಾಗಿನಿಂದ, ಆರ್‌ಬಿಐ ತಪ್ಪದೇ ತನ್ನ ಹೆಚ್ಚಿನ ಚಿನ್ನದ ಸಂಗ್ರಹವನ್ನು ಭಾರತಕ್ಕೆ ಸ್ಥಳಾಂತರಿಸುತ್ತಿದೆ.

ರಷ್ಯಾದ ಆಕ್ರಮಣದ ಬೆನ್ನಲ್ಲೇ ಅಮೆರಿಕವು ರಷ್ಯಾದ ಡಾಲರ್ ಆಧಾರಿತ ವಿದೇಶಿ ವಿನಿಮಯ ಮೀಸಲುಗಳನ್ನು ಸ್ಥಗಿತಗೊಳಿಸಿತು. ಈ ಬೆಳವಣಿಗೆಯು ಪ್ರಪಂಚದಾದ್ಯಂತದ ಕೇಂದ್ರೀಯ ಬ್ಯಾಂಕ್‌ಗಳು ಡಾಲರ್ ಹೊರತಾದ ವಿದೇಶಿ ಕರೆನ್ಸಿ ಆಸ್ತಿಗಳನ್ನು ಹೆಚ್ಚಾಗಿ ಹೊಂದುವತ್ತ ಹೆಜ್ಜೆ ಹಾಕಲು ಪ್ರೇರೇಪಿಸಿತು.

ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ದತ್ತಾಂಶಗಳಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತದೆ. ಅಧಿಕೃತ ವಿದೇಶಿ ವಿನಿಮಯ ಮೀಸಲುಗಳಲ್ಲಿ ಅಮೆರಿಕನ್ ಡಾಲರ್ ಆಸ್ತಿಗಳ ಪಾಲು 2026ರ ಮೊದಲ ಮೂರು ತಿಂಗಳಲ್ಲಿ ಶೇ. 57.18ರಷ್ಟಿದ್ದು, ಏಪ್ರಿಲ್-ಜೂನ್ ಅವಧಿಯಲ್ಲಿ ಶೇ. 56.7ಕ್ಕೆ ಇಳಿಕೆಯಾಗಿದೆ. 2022ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಈ ಪ್ರಮಾಣ ಶೇ. 60.43ರಷ್ಟಿತ್ತು.

ವಿದೇಶಿ ವಿನಿಮಯ ಮೀಸಲುಗಳು ಬೇರೊಂದು ದೇಶದ ಹಿಡಿತಕ್ಕೆ ಸಿಲುಕದಂತೆ ನೋಡಿಕೊಳ್ಳಲು ಡಾಲರ್ ಹೊರತಾದ ಆಸ್ತಿಗಳನ್ನು ಖರೀದಿಸುವುದು ಒಂದು ಮಾರ್ಗವಷ್ಟೇ. ಚಿನ್ನದಂತಹ ಇಂತಹ ಆಸ್ತಿಗಳನ್ನು ಸ್ವದೇಶದಲ್ಲೇ ಇರಿಸಿಕೊಳ್ಳುವುದರಿಂದ ಅವುಗಳ ಮೇಲೆ ಹೆಚ್ಚಿನ ನಿಯಂತ್ರಣವೂ ಸಿಗುತ್ತದೆ.

ವಿದೇಶಿ ವಿನಿಮಯ ಮೀಸಲಿನಲ್ಲಿ ಚಿನ್ನದ ಪಾಲು ಹೆಚ್ಚಳ

ಕೇಂದ್ರೀಯ ಬ್ಯಾಂಕ್‌ಗಳ ವಿದೇಶಿ ವಿನಿಮಯ ಮೀಸಲಿನಲ್ಲಿ ಚಿನ್ನವು ಅತ್ಯಂತ ಪ್ರಮುಖ ಹಾಗೂ ದೊಡ್ಡ ಪಾಲನ್ನು ಹೊಂದಿದೆ. ಆರ್‌ಬಿಐ ವಿಚಾರಕ್ಕೆ ಬಂದರೆ, ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನ ಒಟ್ಟು ಮೀಸಲಿನಲ್ಲಿ ಶೇ. 6ರಷ್ಟಿದ್ದ ಚಿನ್ನದ ಪಾಲು, ಚಿನ್ನದ ಬೆಲೆ ಗಗನಕ್ಕೇರಿದ ಕಾರಣ 2026ರ ಜನವರಿ ಅಂತ್ಯದ ವೇಳೆಗೆ ಶೇ. 19.02ರ ಗರಿಷ್ಠ ಮಟ್ಟಕ್ಕೆ ಏರಿತು.

ಅಂದಿನಿಂದ ಚಿನ್ನದ ಬೆಲೆ ತೀವ್ರವಾಗಿ ಕುಸಿದಿದ್ದರಿಂದ, ಮಾರ್ಚ್ ಅಂತ್ಯಕ್ಕೆ ಈ ಪ್ರಮಾಣ ಶೇ. 16.7ಕ್ಕೆ ಮತ್ತು ಸೆಪ್ಟೆಂಬರ್ ವೇಳೆಗೆ ಶೇ. 14.38ಕ್ಕೆ ಇಳಿಕೆಯಾಯಿತು. ವಿಶೇಷವೆಂದರೆ, ಈ ಅವಧಿಯಲ್ಲಿ ಆರ್‌ಬಿಐ ಹೊಂದಿದ್ದ ಚಿನ್ನದ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.

ನವೆಂಬರ್ 13ರ ಇತ್ತೀಚಿನ ದತ್ತಾಂಶಗಳ ಪ್ರಕಾರ, ಆರ್‌ಬಿಐ ಬಳಿಯಿರುವ ಚಿನ್ನದ ಮೌಲ್ಯ 98.61 ಶತಕೋಟಿ ಡಾಲರ್ ಆಗಿದ್ದು, ಒಟ್ಟು 705.34 ಶತಕೋಟಿ ಡಾಲರ್ ವಿದೇಶಿ ವಿನಿಮಯ ಮೀಸಲಿನಲ್ಲಿ ಶೇ. 13.98ರಷ್ಟು ಪಾಲನ್ನು ಹೊಂದಿದೆ.

ಸ್ವದೇಶಿ ಸಂಗ್ರಹಣೆಗೆ ಹೆಚ್ಚುತ್ತಿರುವ ಒಲವು:

ಪ್ರಪಂಚದಾದ್ಯಂತದ ಕೇಂದ್ರೀಯ ಬ್ಯಾಂಕ್‌ಗಳಿಗೆ ಚಿನ್ನವನ್ನು ಇರಿಸಲು 'ಬ್ಯಾಂಕ್ ಆಫ್ ಇಂಗ್ಲೆಂಡ್' ಅತ್ಯಂತ ನೆಚ್ಚಿನ ತಾಣವಾಗಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಜೂನ್ ಆವೃತ್ತಿಯ ಸಮೀಕ್ಷೆಯ ಪ್ರಕಾರ, ಸಮೀಕ್ಷೆಗೊಳಗಾದ ಕೇಂದ್ರೀಯ ಬ್ಯಾಂಕ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು (ಶೇ. 57) ಬ್ಯಾಂಕ್‌ಗಳು ತಮ್ಮ ಒಂದಷ್ಟು ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಇರಿಸಿವೆ.

ಆದರೆ, ಚಿನ್ನ ಸಂಗ್ರಹಿಸುವ ಸ್ಥಳಗಳ ವಿಚಾರದಲ್ಲಿ ಗಮನಾರ್ಹ ಬದಲಾವಣೆಯಾಗಿರುವುದನ್ನು ವರ್ಲ್ಡ್ ಗೋಲ್ಡ್ ಕೌನ್ಸಿಲ್ ನ ಇತ್ತೀಚಿನ ಸಮೀಕ್ಷೆ ತೋರಿಸಿದೆ. ಕಳೆದ 12 ತಿಂಗಳಲ್ಲಿ ಶೇ. 9ರಷ್ಟು ಬ್ಯಾಂಕ್‌ಗಳು ಸ್ವದೇಶಿ ಸಂಗ್ರಹಣೆಯನ್ನು ಹೆಚ್ಚಿಸಿಕೊಂಡಿದ್ದರೆ, ಶೇ. 10ರಷ್ಟು ಬ್ಯಾಂಕ್‌ಗಳು ವಿದೇಶಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಚಿನ್ನ ಇರಿಸಲು ಮುಂದಾಗಿವೆ ಎಂದು ತಿಳಿಸಿವೆ. ಕಳೆದ ವರ್ಷ ಈ ಪ್ರಮಾಣ ಕ್ರಮವಾಗಿ ಶೇ. 5 ಮತ್ತು ಶೇ. 2ರಷ್ಟಿತ್ತು.

"ಭವಿಷ್ಯದ ಚಿನ್ನ ಸಂಗ್ರಹಣಾ ಯೋಜನೆಗಳಲ್ಲೂ ಇದೇ ಪ್ರವೃತ್ತಿ ಕಂಡುಬರುತ್ತಿದೆ. ಮುಂದಿನ 12 ತಿಂಗಳಲ್ಲಿ ಶೇ. 7ರಷ್ಟು ಬ್ಯಾಂಕ್‌ಗಳು ಸ್ವದೇಶಿ ಸಂಗ್ರಹಣೆಯನ್ನು ಹೆಚ್ಚಿಸಲು ಮತ್ತು ಶೇ. 9ರಷ್ಟು ಬ್ಯಾಂಕ್‌ಗಳು ವಿದೇಶಿ ಸಂಗ್ರಹಣಾ ಸ್ಥಳಗಳನ್ನು ವಿಸ್ತರಿಸಲು ಯೋಜಿಸಿವೆ" ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿದೆ.

ಹೊಸದಾಗಿ ಚಿನ್ನ ಖರೀದಿಸದ ಆರ್‌ಬಿಐ

ಜಗತ್ತಿನ ಇತರ ಕೆಲವು ಕೇಂದ್ರೀಯ ಬ್ಯಾಂಕ್‌ಗಳಂತೆ ಆರ್‌ಬಿಐ ಅಷ್ಟೊಂದು ವೇಗವಾಗಿ ಚಿನ್ನವನ್ನು ಖರೀದಿಸುತ್ತಿಲ್ಲ. ವಾಸ್ತವವಾಗಿ, 2025ರ ಮಾರ್ಚ್‌ನಿಂದ ಇಲ್ಲಿಯವರೆಗೆ ಆರ್‌ಬಿಐ ಖರೀದಿಸಿರುವ ಚಿನ್ನದ ಪ್ರಮಾಣ 1 ಮೆಟ್ರಿಕ್ ಟನ್‌ಗಿಂತಲೂ ಕಡಿಮೆಯಿದೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಇತ್ತೀಚಿನ ದತ್ತಾಂಶಗಳ ಪ್ರಕಾರ, ಜಾಗತಿಕ ಕೇಂದ್ರೀಯ ಬ್ಯಾಂಕ್‌ಗಳು ಸೆಪ್ಟೆಂಬರ್‌ನಲ್ಲಿ 61 ಟನ್ ಚಿನ್ನವನ್ನು ಖರೀದಿಸಿವೆ. ಇದು 2026ರ ಅತ್ಯಧಿಕ ಮಾಸಿಕ ಖರೀದಿಯಾಗಿದ್ದು, ಪೋಲೆಂಡ್ ಮತ್ತು ಚೀನಾ ಈ ಖರೀದಿಯಲ್ಲಿ ಮುಂಚೂಣಿಯಲ್ಲಿವೆ.

2026ರಲ್ಲಿ ಇದುವರೆಗೆ ಜಾಗತಿಕ ಕೇಂದ್ರೀಯ ಬ್ಯಾಂಕ್‌ಗಳು ಒಟ್ಟು 228 ಟನ್ ಚಿನ್ನವನ್ನು ನಿವ್ವಳವಾಗಿ ಖರೀದಿಸಿವೆ. ಆದರೆ, ಈ ಅವಧಿಯಲ್ಲಿ ಆರ್‌ಬಿಐ ಒಂದೇ ಒಂದು ಗ್ರಾಂ ಚಿನ್ನವನ್ನೂ ಖರೀದಿಸಿಲ್ಲ. ಮತ್ತೊಂದೆಡೆ, ನ್ಯಾಷನಲ್ ಬ್ಯಾಂಕ್ ಆಫ್ ಪೋಲೆಂಡ್ ಮತ್ತು ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಈ ಕ್ಯಾಲೆಂಡರ್ ವರ್ಷದಲ್ಲಿ ತಲಾ 100 ಟನ್‌ಗಳಿಗಿಂತ ಹೆಚ್ಚು ಚಿನ್ನವನ್ನು ಖರೀದಿಸಿವೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

ರಶ್ಮಿ ಕಾಸರಗೋಡು ಅವರು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 17 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರು. ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಇಮೇಲ್ id :kasaragod10rashmi@gmail.com