100ನೇ ವರ್ಷಕ್ಕೆ ಕಾಲಿಟ್ಟ ಎಲ್.ಕೆ. ಅಡ್ವಾಣಿ: ಕರಾಳ ನೆನಪುಗಳೇನು ?
2 ಲೋಕಸಭಾ ಸ್ಥಾನಗಳಿಂದ ಬಿಜೆಪಿಯನ್ನು ಅಧಿಕಾರದ ಶಿಖರಕ್ಕೇರಿಸಿದ ನಾಯಕ
ಎಲ್.ಕೆ. ಅಡಾ್ವಣಿ (Photo: PTI)
ಭಾರತೀಯ ಜನತಾ ಪಕ್ಷವನ್ನು ಕೇವಲ ಎರಡು ಲೋಕಸಭಾ ಸ್ಥಾನಗಳಿಂದ ದೇಶದ ರಾಜಕೀಯದಲ್ಲಿ ಪ್ರಬಲ ಶಕ್ತಿಯಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಲಾಲ್ ಕೃಷ್ಣ ಅಡ್ವಾಣಿ ಅವರು ಇಂದು 99 ವರ್ಷಗಳನ್ನು ಪೂರೈಸಿ, ಜೀವನದ ನೂರನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
1927ರ ನವೆಂಬರ್ 8ರಂದು ಅವಿಭಜಿತ ಭಾರತದ ಸಿಂಧ್ ಪ್ರಾಂತ್ಯದ ಕರಾಚಿಯಲ್ಲಿ ಜನಿಸಿದ ಅಡ್ವಾಣಿ ಅವರ ರಾಜಕೀಯ ಬದುಕು ಹಲವು ಮಹತ್ವದ ತಿರುವುಗಳಿಗೆ ಸಾಕ್ಷಿಯಾಗಿದೆ. ಆದರೆ, ಅವರನ್ನು ಕೇವಲ ಬಿಜೆಪಿಯ ಸಂಘಟನಾ ಚತುರ ನಾಯಕನಾಗಿ ಅಥವಾ ಪಕ್ಷವನ್ನು ಅಧಿಕಾರದ ಹಾದಿಗೆ ಕೊಂಡೊಯ್ದ ರಾಜಕಾರಣಿಯಾಗಿ ಮಾತ್ರ ಇತಿಹಾಸ ನೆನಪಿಸಿಕೊಳ್ಳಲಾರದು.
ಸ್ವತಂತ್ರ ಭಾರತವು ದಶಕಗಳ ಕಾಲ ಜತನದಿಂದ ಕಾಪಾಡಿಕೊಂಡು ಬಂದಿದ್ದ ಜಾತ್ಯತೀತ ಬುನಾದಿ, ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಸಂರಚನೆಯನ್ನು ದುರ್ಬಲಗೊಳಿಸಿದ ರಾಜಕೀಯ ಬೆಳವಣಿಗೆಗಳ ಪ್ರಮುಖ ರೂವಾರಿಗಳಲ್ಲಿ ಅಡ್ವಾಣಿಯವರೂ ಒಬ್ಬರು ಎಂಬುದು ಅವರ ರಾಜಕೀಯ ಬದುಕಿನ ಮತ್ತೊಂದು ಮುಖ.
1980ರ ದಶಕದ ಕೊನೆಯವರೆಗೂ ಭಾರತದ ರಾಜಕಾರಣದಲ್ಲಿ ಜಾತ್ಯತೀತತೆ ಸಂವಿಧಾನದ ಪವಿತ್ರ ಮೌಲ್ಯವಾಗಿತ್ತು. ಆದರೆ, ಆ ಮೌಲ್ಯವನ್ನೇ ರಾಜಕೀಯ ಚರ್ಚೆಯ ಕಟಕಟೆಯಲ್ಲಿ ನಿಲ್ಲಿಸಿ, ಅದಕ್ಕೆ 'ಹುಸಿ ಜಾತ್ಯತೀತತೆ' ಮತ್ತು 'ಅಲ್ಪಸಂಖ್ಯಾತರ ಓಲೈಕೆ' ಎಂಬ ಹಣೆಪಟ್ಟಿ ಕಟ್ಟಿದ ರಾಜಕೀಯ ಬೆಳವಣಿಗೆಯಲ್ಲಿ ಅಡ್ವಾಣಿ ಪ್ರಮುಖ ಪಾತ್ರ ವಹಿಸಿದರು.
ರಾಜಕೀಯವಾಗಿ ಅಂಚಿನಲ್ಲಿದ್ದ ಬಿಜೆಪಿಗೆ ಅಧಿಕಾರದ ಬಾಗಿಲು ತೆರೆಯಲು ಧಾರ್ಮಿಕ ಭಾವನೆಗಳನ್ನು ಆಧರಿಸಿದ ಪ್ರಬಲ ರಾಜಕೀಯ ಅಸ್ತ್ರದ ಅಗತ್ಯವಿತ್ತು. ಅದಕ್ಕಾಗಿ ಅಡ್ವಾಣಿ ಆಯ್ದುಕೊಂಡಿದ್ದು ಅಯೋಧ್ಯೆಯ ರಾಮಜನ್ಮಭೂಮಿ ಚಳವಳಿಯನ್ನು.
►ರಾಮ ರಥಯಾತ್ರೆ: ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿದ ಬೆಳವಣಿಗೆ
1990ರ ಸೆಪ್ಟೆಂಬರ್ 25ರಂದು ಗುಜರಾತ್ನ ಸೋಮನಾಥದಿಂದ ಅಯೋಧ್ಯೆಯವರೆಗೆ ಅಡ್ವಾಣಿ ಆರಂಭಿಸಿದ 'ರಾಮ ರಥಯಾತ್ರೆ' ಸ್ವತಂತ್ರ ಭಾರತದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ಗುರುತಿಸಿಕೊಂಡಿತು.
ಟೊಯೋಟಾ ವ್ಯಾನ್ವೊಂದನ್ನು ಪೌರಾಣಿಕ ರಥದಂತೆ ಸಿಂಗರಿಸಿ, ಧಾರ್ಮಿಕ ಚಿಹ್ನೆಗಳು, ತ್ರಿಶೂಲಗಳು ಮತ್ತು ಪ್ರಚೋದನಕಾರಿ ಘೋಷಣೆಗಳೊಂದಿಗೆ ಆರಂಭವಾದ ಈ ಯಾತ್ರೆ ದೇಶದ ಹಲವು ನಗರಗಳು ಮತ್ತು ಹಳ್ಳಿಗಳಲ್ಲಿ ಕೋಮು ಧ್ರುವೀಕರಣಕ್ಕೆ ಕಾರಣವಾಯಿತು.
'ಮಂದಿರ್ ವಹೀಂ ಬನಾಯೇಂಗೆ' ಎಂಬ ಘೋಷಣೆಗಳ ನಡುವೆ, ಶತಮಾನಗಳಿಂದ ನೆರೆಹೊರೆಯವರಾಗಿ ಬದುಕುತ್ತಿದ್ದ ಹಿಂದೂ ಮತ್ತು ಮುಸ್ಲಿಮರ ನಡುವಿನ ಬಾಂಧವ್ಯದಲ್ಲಿ ಅಪನಂಬಿಕೆಯ ವಿಷಬೀಜ ಬಿತ್ತಲಾಯಿತು. ಯಾತ್ರೆಯ ಹಾದಿಯುದ್ದಕ್ಕೂ ಭುಗಿಲೆದ್ದ ಕೋಮುಗಲಭೆಗಳಲ್ಲಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡರು.
ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ಬೀದಿಗೆ ತಂದು, ಅವುಗಳನ್ನು ಸಂಘರ್ಷದ ರಾಜಕಾರಣವಾಗಿ ಪರಿವರ್ತಿಸಿದ ಈ ಬೆಳವಣಿಗೆ ಭಾರತದ ಜಾತ್ಯತೀತ ಪರಿಕಲ್ಪನೆಗೆ ಮಾರಕ ಹೊಡೆತ ನೀಡಿತು.
►ಬಾಬರಿ ಮಸೀದಿ ಧ್ವಂಸ: ಸಂವಿಧಾನಕ್ಕೆ ಬಿದ್ದ ಕೊಡಲಿಪೆಟ್ಟು
ರಾಮ ರಥಯಾತ್ರೆಯ ರಾಜಕೀಯ ಪರಿಣಾಮದ ಪರಾಕಾಷ್ಠೆ ಕಂಡಿದ್ದು 1992ರ ಡಿಸೆಂಬರ್ 6ರಂದು.
ಅಂದು ಅಯೋಧ್ಯೆಯ 16ನೇ ಶತಮಾನದ ಬಾಬರಿ ಮಸೀದಿಯ ಮುಂದೆ ಲಕ್ಷಾಂತರ ಕರಸೇವಕರು ಜಮಾಯಿಸಿದ್ದರು. ಸಮೀಪದಲ್ಲೇ ಸಿದ್ಧಪಡಿಸಲಾಗಿದ್ದ ವೇದಿಕೆಯ ಮೇಲೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತು ಉಮಾಭಾರತಿ ಸೇರಿದಂತೆ ಹಲವು ನಾಯಕರು ಕುಳಿತಿದ್ದರು.
ಕರಸೇವಕರು ಮಸೀದಿಯ ಗುಮ್ಮಟಗಳ ಮೇಲೆ ಹತ್ತಿ ಹಾರೆ ಮತ್ತು ಗುದ್ದಲಿಗಳಿಂದ ಹೊಡೆದು ಧ್ವಂಸಗೊಳಿಸುತ್ತಿದ್ದಾಗ ವೇದಿಕೆಯಿಂದ ಘೋಷಣೆಗಳು ಮೊಳಗುತ್ತಿದ್ದವು. ಸುಪ್ರೀಂ ಕೋರ್ಟ್ಗೆ ನೀಡಿದ್ದ ಪ್ರಮಾಣಪತ್ರಗಳು, ಭರವಸೆಗಳು, ಸಾಂವಿಧಾನಿಕ ಬದ್ಧತೆಗಳು ಮತ್ತು ಕಾನೂನಿನ ಆಡಳಿತ ಎಲ್ಲವೂ ಜನರ ಕಣ್ಣೆದುರೇ ಧೂಳಿಪಟವಾದವು.
ಬಾಬರಿ ಮಸೀದಿ ಧ್ವಂಸ ಕೇವಲ ಒಂದು ಕಟ್ಟಡದ ಪತನವಾಗಿರಲಿಲ್ಲ. ಅದು ದೇಶದ ಸಂವಿಧಾನ, ನ್ಯಾಯಾಂಗ ಮತ್ತು ಜಾತ್ಯತೀತ ವ್ಯವಸ್ಥೆಯ ಮೇಲಿನ ನೇರ ದಾಳಿಯಾಗಿತ್ತು.
ಮಸೀದಿ ಧ್ವಂಸದ ಬಳಿಕ ದೇಶಾದ್ಯಂತ, ವಿಶೇಷವಾಗಿ ಮುಂಬೈ, ಸೂರತ್ ಮತ್ತು ಭೋಪಾಲ್ಗಳಲ್ಲಿ ಭೀಕರ ಕೋಮುಗಲಭೆಗಳು ನಡೆದವು. ಈ ಗಲಭೆಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮುಗ್ಧ ನಾಗರಿಕರು ಕೊಲ್ಲಲ್ಪಟ್ಟರು. ಮುಂಬೈ ಸರಣಿ ಸ್ಫೋಟಗಳಿಗೆ ಈ ಧ್ರುವೀಕರಣ ಮತ್ತು ಗಲಭೆಗಳೇ ನಾಂದಿ ಹಾಡಿದವು.
ನ್ಯಾಯಮೂರ್ತಿ ಲಿಬರ್ಹಾನ್ ಆಯೋಗವು ತನ್ನ ಸುದೀರ್ಘ ತನಿಖಾ ವರದಿಯಲ್ಲಿ ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಅನಾಹುತಗಳಿಗೆ ಅಡ್ವಾಣಿ ಸೇರಿದಂತೆ ಸಂಘ ಪರಿವಾರದ ನಾಯಕರ ನೈತಿಕ ಹಾಗೂ ಪ್ರಮುಖ ಹೊಣೆಗಾರಿಕೆಯನ್ನು ಬೆಟ್ಟುಮಾಡಿತ್ತು.
►ಮಂದಿರ ರಾಜಕಾರಣ: ಬದಲಾದ ಭಾರತದ ಸಾಮಾಜಿಕ ನಡವಳಿಕೆ
ಅಡ್ವಾಣಿ ಮುನ್ನೆಲೆಗೆ ತಂದ ಮಂದಿರ ರಾಜಕಾರಣ ಭಾರತದ ಸಾಮಾಜಿಕ ಮತ್ತು ರಾಜಕೀಯ ನಡವಳಿಕೆಯನ್ನೇ ಆಮೂಲಾಗ್ರವಾಗಿ ಬದಲಿಸಿತು.
ಶಿಕ್ಷಣ, ಆರೋಗ್ಯ, ಆರ್ಥಿಕತೆ ಮತ್ತು ಉದ್ಯೋಗದಂತಹ ಜನಜೀವನದ ಪ್ರಮುಖ ವಿಚಾರಗಳ ಸುತ್ತ ನಡೆಯಬೇಕಿದ್ದ ಪ್ರಜಾಪ್ರಭುತ್ವದ ಸಂವಾದಗಳು ಮಂದಿರ-ಮಸೀದಿ, ಐತಿಹಾಸಿಕ ಸೇಡು ಮತ್ತು ಅಲ್ಪಸಂಖ್ಯಾತರ ವಿರುದ್ಧದ ಧ್ರುವೀಕರಣದ ಸುತ್ತ ಗಿರಕಿ ಹೊಡೆಯುವಂತಾದವು.
ಬಹುಸಂಖ್ಯಾತರ ಮತಬ್ಯಾಂಕ್ ಕ್ರೋಢೀಕರಿಸಲು ಅಲ್ಪಸಂಖ್ಯಾತರನ್ನು ನಿರಂತರವಾಗಿ ಶತ್ರುಗಳಂತೆ ಬಿಂಬಿಸುವ ಇಂದಿನ ರಾಜಕೀಯ ಸಂಸ್ಕೃತಿಗೆ ರಾಜಮಾರ್ಗ ನಿರ್ಮಿಸಿಕೊಟ್ಟ ಕುಖ್ಯಾತಿ ಅಡ್ವಾಣಿಯವರ ರಾಜಕಾರಣಕ್ಕೆ ಸಲ್ಲುತ್ತದೆ.
►ತಾವು ಬೆಳೆಸಿದ ಹಿಂದುತ್ವದ ಅಲೆಯಲ್ಲೇ ಅಪ್ರಸ್ತುತರಾದ ಅಡ್ವಾಣಿ
ಇತಿಹಾಸದ ಅತ್ಯಂತ ದೊಡ್ಡ ವಿಪರ್ಯಾಸವೆಂದರೆ, ಅಡ್ವಾಣಿ ಜೀವ ತುಂಬಿದ ಕಟು ಹಿಂದುತ್ವದ ರಾಜಕೀಯ ಅಲೆಯೇ ಕಾಲಕ್ರಮೇಣ ಅವರನ್ನು ಅಪ್ರಸ್ತುತಗೊಳಿಸಿ ಬದಿಗೆ ಸರಿಸಿತು.
2005ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುಹಮ್ಮದ್ ಅಲಿ ಜಿನ್ನಾ ಅವರನ್ನು 'ಜಾತ್ಯತೀತ ನಾಯಕ' ಎಂದು ಹೊಗಳುವ ಮೂಲಕ ತಮ್ಮ ಕಟು ಹಿಂದುತ್ವದ ರಾಜಕೀಯ ಇಮೇಜ್ ನಿಂದ ಹೊರಬರಲು ಅಡ್ವಾಣಿ ಪ್ರಯತ್ನಿಸಿದ್ದರು. ಆದರೆ, ಈ ಹೇಳಿಕೆ ಅವರದ್ದೇ ಪರಿವಾರದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ತಾವು ಪೋಷಿಸಿದ್ದ ತೀವ್ರಗಾಮಿ ರಾಜಕಾರಣದ ಪರಿಣಾಮವಾಗಿ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ ಅವರು, ಕೊನೆಗೆ ಅಧಿಕಾರದ ಗದ್ದುಗೆಯಿಂದ ದೂರ ಉಳಿಯಬೇಕಾಯಿತು.
ಇಂದು ಅಡ್ವಾಣಿ 99 ವರ್ಷಗಳನ್ನು ಪೂರೈಸಿ ಜೀವನದ ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ಅವರು ಕಟ್ಟಿದ ಬಿಜೆಪಿ ಇಡೀ ದೇಶವನ್ನು ಆಳುತ್ತಿದೆ. ಆದರೆ, ಅವರು ಮುನ್ನಡೆಸಿದ ರಥಯಾತ್ರೆಯ ಚಕ್ರಗಳು ಭಾರತದ ಜಾತ್ಯತೀತ ಆತ್ಮದ ಮೇಲೆ ಉಳಿಸಿಹೋದ ಆಳವಾದ ಗಾಯಗಳು ಇಂದಿಗೂ ಮಾಸಿಲ್ಲ.
ಗಣರಾಜ್ಯದ ಆತ್ಮವಾಗಿದ್ದ 'ವಿವಿಧತೆಯಲ್ಲಿ ಏಕತೆ'ಯನ್ನು ದುರ್ಬಲಗೊಳಿಸಿ, ಧಾರ್ಮಿಕ ಬಹುಸಂಖ್ಯಾತವಾದವನ್ನು ಭಾರತದ ರಾಜಕೀಯ ಮುಖ್ಯವಾಹಿನಿಗೆ ತಂದ ಐತಿಹಾಸಿಕ ಹೊಣೆಯಿಂದ ಅಡ್ವಾಣಿಯವರನ್ನು ಇತಿಹಾಸ ಎಂದಿಗೂ ಮುಕ್ತಗೊಳಿಸಲಾರದು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರದಾನ ಮಾಡಿರುವ ಭಾರತ ರತ್ನವೂ ಅಡ್ವಾಣಿಯವರ ರಾಜಕೀಯ ಬದುಕಿನ ಈ ಕಳಂಕವನ್ನು ಅಳಿಸಲಾರದು.