ಭಾರತದಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದು ಮತ್ತು ಅದರಿಂದ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ಇಂದು ಗಂಭೀರ ಸಮಸ್ಯೆಯಾಗಿವೆ. ಪೋಷಕರ ಸಣ್ಣ ನಿರ್ಲಕ್ಷ್ಯದಿಂದ ಆರಂಭವಾಗುವ ಈ ಪ್ರವೃತ್ತಿ, ಇಂದು ಪ್ರಾಣಾಪಾಯ ಉಂಟುಮಾಡುವ ಮಟ್ಟಕ್ಕೆ ತಲುಪಿದೆ. ಅಕ್ಟೋಬರ್ 16ರಂದು ದಾವಣಗೆರೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತವು ಪೋಷಕರ ಮೇಲ್ವಿಚಾರಣೆಯಿಲ್ಲದೆ ಅಪ್ರಾಪ್ತರು ವಾಹನ ಚಲಾಯಿಸುವುದರ ಅಪಾಯವನ್ನು ತೋರಿಸಿಕೊಟ್ಟಿದೆ.

ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವಾಗ ಸಂಭವಿಸುವ ಅಪಘಾತಗಳನ್ನು ಕೇವಲ 'ಆಕಸ್ಮಿಕ' ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಅದು ಸಂಸ್ಥೆಗಳ ಉದಾಸೀನತೆ, ಪೋಷಕರ ನಿರ್ಲಕ್ಷ್ಯ ಹಾಗೂ ಈ ಘಟನೆಗಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲು ಹೆಣಗಾಡುತ್ತಿರುವ ಕಾನೂನು ವ್ಯವಸ್ಥೆಯ ಕೊರತೆಯನ್ನು ತೋರಿಸುತ್ತದೆ.

►ದಾವಣಗೆರೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ

ದಾವಣಗೆರೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತವು ಅಪ್ರಾಪ್ತರ ಚಾಲನೆಯ ಅಪಾಯವನ್ನು ಕಣ್ಮುಂದೆ ತಂದಿಟ್ಟಿತು. ಪೋಷಕರ ಅತಿಯಾದ ವಾತ್ಸಲ್ಯ ಅಥವಾ ಮೇಲ್ವಿಚಾರಣೆಯಿಲ್ಲದೆ ಅಪ್ರಾಪ್ತರು ಅತಿ ಹೆಚ್ಚು ಸಾಮರ್ಥ್ಯದ ಬೈಕ್ ಮತ್ತು ಕಾರುಗಳನ್ನು ಎಷ್ಟು ಸುಲಭವಾಗಿ ಪಡೆಯುತ್ತಿದ್ದಾರೆ ಎಂಬುದನ್ನು ಈ ಘಟನೆ ಬಯಲು ಮಾಡಿತು. ದಾವಣಗೆರೆ ದುರಂತವು ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ. ಪ್ರಾಣಹಾನಿ ಸಂಭವಿಸುವವರೆಗೆ ಹದಿಹರೆಯದವರು ಸಾರ್ವಜನಿಕ ರಸ್ತೆಗಳನ್ನು ರೇಸಿಂಗ್ ಟ್ರ್ಯಾಕ್ ಗಳಂತೆ ಬಳಸುವುದನ್ನು ನಿರ್ಲಕ್ಷಿಸುವ ಅಪಾಯಕಾರಿ ಪ್ರವೃತ್ತಿಯನ್ನು ಇದು ತೋರಿಸುತ್ತದೆ.

ಇಂತಹ ಅಪಘಾತಗಳು ಚರ್ಚೆಯನ್ನು ಹುಟ್ಟುಹಾಕಿದರೆ, ಪೊಲೀಸರ ಕಾರ್ಯಾಚರಣೆಗಳು ಈ ಸಮಸ್ಯೆಯ ನೈಜ ಪ್ರಮಾಣವನ್ನು ತೋರಿಸುತ್ತವೆ. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕೇರಳದ ಕಣ್ಣೂರು ವಲಯದಲ್ಲಿ ಪೊಲೀಸರು ಒಂದೇ ಹಂತದ ತಪಾಸಣಾ ಕಾರ್ಯಾಚರಣೆಯಲ್ಲಿ ಅಪ್ರಾಪ್ತರ ಚಾಲನೆಗೆ ಸಂಬಂಧಿಸಿದಂತೆ 51 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದು ಪೊಲೀಸರಿಗೆ ಸಿಕ್ಕಿಬಿದ್ದವರ ಸಂಖ್ಯೆ ಮಾತ್ರವಾಗಿದ್ದು, ಇನ್ನೂ ಸಾವಿರಾರು ಅಪ್ರಾಪ್ತರು ಪ್ರತಿದಿನ ಯಾವುದೇ ಭಯವಿಲ್ಲದೆ ವಾಹನ ಚಲಾಯಿಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ.

►ಕೊಚ್ಚಿಯಲ್ಲಿ ಸಂಭವಿಸಿದ ಮಿನಿ ಕೂಪರ್ ಅಪಘಾತ

ಕೊಚ್ಚಿಯ ನೆಡುಂಬಶ್ಶೇರಿ ವಿಮಾನ ನಿಲ್ದಾಣದ ರಸ್ತೆಯಲ್ಲಿ ನಡೆದ ಮತ್ತೊಂದು ಗಂಭೀರ ಘಟನೆಯು ಅಪ್ರಾಪ್ತರು ಹಾಗೂ ಹದಿಹರೆಯದವರ ಬೇಜವಾಬ್ದಾರಿ ಚಾಲನೆಯ ಭೀಕರತೆಯನ್ನು ಮತ್ತೊಮ್ಮೆ ತೆರೆದಿಟ್ಟಿದೆ. 19 ವರ್ಷದ ಯುವಕನೊಬ್ಬ ಅತಿವೇಗವಾಗಿ ಚಲಾಯಿಸಿಕೊಂಡು ಬಂದ ಮಿನಿ ಕೂಪರ್ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಅಪಘಾತದ ಬಳಿಕ ಯಾವುದೇ ಪಶ್ಚಾತ್ತಾಪವಿಲ್ಲದೆ, "ರಸ್ತೆಗಳು ಇರುವುದು ವಾಹನ ಓಡಿಸಲಿಕ್ಕಲ್ಲವೇ?" ಎಂದು ಉಡಾಫೆಯಿಂದ ಮಾತನಾಡಿದ ಆ ಯುವಕ, ತಾನು ತಪ್ಪು ಮಾಡಿದ್ದರೂ "ಅದನ್ನು ನಮ್ಮ ಅಪ್ಪ ನೋಡಿಕೊಳ್ಳುತ್ತಾರೆ" ಎಂದು ಹೇಳಿರುವುದು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಕಾನೂನಿನ ಭಯವಿಲ್ಲದೆ ಬೆಳೆಯುತ್ತಿರುವ ಇಂತಹ ಯುವ ಪಡೆಗೆ ಪೋಷಕರ ಅತಿಯಾದ ಬೆಂಬಲ ಮತ್ತು ಅಹಂಕಾರವು ಯಾವ ಮಟ್ಟದ ದುರಂತಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಈ ಘಟನೆ ಕನ್ನಡಿಯಾಗಿದೆ.

►ಕೊಚ್ಚಿಯಲ್ಲಿ ಸಂಭವಿಸಿದ ರಸ್ತೆ ಅಪಘಾತ

ಅಕ್ಟೋಬರ್ 25ರ (ರವಿವಾರ) ಮುಂಜಾನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ 17 ವರ್ಷದ ಅಪ್ರಾಪ್ತನೊಬ್ಬ ಚಲಾಯಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 57 ವರ್ಷದ ಸವಾರ ಮೃತಪಟ್ಟರು. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮಗನಾಗಿರುವ ಈ ಅಪ್ರಾಪ್ತನಿಗೆ ಸಂಬಂಧಿಸಿದ ರಸ್ತೆ ಅಪಘಾತ ಪ್ರಕರಣವು, ಅಪ್ರಾಪ್ತ ಚಾಲನೆಯ ಪ್ರಕರಣಗಳಲ್ಲಿ ಪೋಷಕರು ಅಥವಾ ವಾಹನದ ಮಾಲೀಕರ ಹೊಣೆಗಾರಿಕೆಯನ್ನು ನಿರ್ಧರಿಸುವ ವಿಷಯವನ್ನು ಮುನ್ನೆಲೆಗೆ ತಂದಿದೆ.

ವಾಹನದ ಮಾಲೀಕರಾಗಿರುವ ನ್ಯಾಯಾಧೀಶರ ವಿರುದ್ಧ ಮೋಟಾರು ವಾಹನ ಕಾಯ್ದೆ, 1988ರ ಸೆಕ್ಷನ್ 199ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರು ಕಾನೂನು ವಿಚಾರಣೆ ಎದುರಿಸಲಿದ್ದಾರೆ. ವಾಹನದ ಮಾಲೀಕರನ್ನೇ ಅಪರಾಧಿ ಎಂದು ನಿರ್ಧರಿಸುವಾಗ ಕಾನೂನು ಏನು ಹೇಳುತ್ತದೆ ಎಂಬ ವಿವರ ಇಲ್ಲಿದೆ.

ಅಪ್ರಾಪ್ತರು ವಾಹನ ಚಲಾಯಿಸುವ ಪ್ರಕರಣಗಳಲ್ಲಿ ಪೋಷಕರು ಅಥವಾ ವಾಹನದ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲು ಕೇಂದ್ರ ಸರ್ಕಾರವು ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ, 2019ರ ಮೂಲಕ ಸೆಕ್ಷನ್ 199ಎ ಅನ್ನು ಸೇರ್ಪಡೆಗೊಳಿಸಿತು. ಇದರ ಪ್ರಕಾರ, ಅಪ್ರಾಪ್ತರ ಚಾಲನೆಗೆ ಅವಕಾಶ ನೀಡಿದ ಪೋಷಕರು ಅಥವಾ ವಾಹನದ ಮಾಲೀಕರೇ ಅಪರಾಧಿಗಳಾಗಿದ್ದು, ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 25,000 ರೂ. ದಂಡವನ್ನು ಎದುರಿಸಬೇಕಾಗುತ್ತದೆ. ಇದರ ಜೊತೆಗೆ, ಅಪ್ರಾಪ್ತನ ವಿಚಾರಣೆಯನ್ನು ಜುವೆನೈಲ್ ಜಸ್ಟಿಸ್ ಕಾಯ್ದೆ (JJ Act), 2015ರ ಅಡಿಯಲ್ಲಿ ನಡೆಸಲಾಗುತ್ತದೆ ಮತ್ತು ಘಟನೆಯಲ್ಲಿ ಭಾಗಿಯಾದ ವಾಹನದ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ.

ಈ ಕಾಯ್ದೆಯಡಿ ವಾಹನದ ಮಾಲೀಕರ ಮೇಲೆ ಪ್ರಕರಣ ದಾಖಲಾಗಬೇಕಾದರೆ, ಅಪ್ರಾಪ್ತ ಚಾಲಕನು ಮೋಟಾರು ವಾಹನ ಕಾಯ್ದೆಯ ನಿರ್ದಿಷ್ಟ ನಿಯಮಗಳನ್ನು ಉಲ್ಲಂಘಿಸಿರುವುದು ಕಡ್ಡಾಯ. ಅಂದರೆ:

• ಸೆಕ್ಷನ್ 181(3)ರ ಅಡಿಯಲ್ಲಿ ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು;

• ಸೆಕ್ಷನ್ 181(4)ರ ಅಡಿಯಲ್ಲಿ ವಯಸ್ಸಿನ ಮಿತಿಯನ್ನು ಉಲ್ಲಂಘಿಸಿ ವಾಹನ ಚಲಾಯಿಸುವುದು; ಅಥವಾ

• ಸೆಕ್ಷನ್ 184ರ ಅಡಿಯಲ್ಲಿ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸುವುದು.

ಅಪ್ರಾಪ್ತನ ವಿರುದ್ಧ ಈ ನಿಯಮಗಳಡಿ ಪ್ರಕರಣ ದಾಖಲಾಗದಿದ್ದರೆ, ವಾಹನದ ಮಾಲೀಕರ ವಿರುದ್ಧದ ಕಾನೂನು ಪ್ರಕ್ರಿಯೆಯು ಮಾನ್ಯತೆ ಪಡೆಯುವುದಿಲ್ಲ.

ಪೊಲೀಸರು ಅಪ್ರಾಪ್ತ ಎಸಗಿದ ಅಪರಾಧದ ವಿವರಗಳನ್ನು ಠಾಣೆಯ ಜನರಲ್ ಡೈರಿಯಲ್ಲಿ ನಮೂದಿಸಬೇಕು. ಇದರೊಂದಿಗೆ, ಮೋಟಾರು ವಾಹನ ಕಾಯ್ದೆಯಡಿ ಅಪ್ರಾಪ್ತನ ಅಪರಾಧದ ಕುರಿತು ಸಾಮಾಜಿಕ ಹಿನ್ನೆಲೆ ವರದಿಯನ್ನು ಬಾಲ ನ್ಯಾಯ ಮಂಡಳಿ (JJB) ಮುಂದೆ ಸಲ್ಲಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಪೋಷಕರು ಅಥವಾ ವಾಹನದ ಮಾಲೀಕರ ವಿರುದ್ಧ ಸೆಕ್ಷನ್ 199ಎ ಅಡಿಯಲ್ಲಿ ವಿಚಾರಣೆ ಆರಂಭಿಸಲು ಸಾಧ್ಯ.

ಜುವೆನೈಲ್ ಜಸ್ಟಿಸ್ ಕಾಯ್ದೆಯ ಸೆಕ್ಷನ್ 17ರ ಪ್ರಕಾರ, ಅಪ್ರಾಪ್ತ ಮಗು ಅಪರಾಧ ಎಸಗಿಲ್ಲ ಎಂದು ಬಾಲ ನ್ಯಾಯ ಮಂಡಳಿ ತೀರ್ಮಾನಕ್ಕೆ ಬಂದರೆ, ಪೋಷಕರು ಅಥವಾ ವಾಹನದ ಮಾಲೀಕರ ವಿರುದ್ಧದ ಸೆಕ್ಷನ್ 199ಎ ಅಡಿಯ ವಿಚಾರಣೆಯನ್ನು ಮುಂದುವರಿಸಲು ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಬೇಕಾಗುತ್ತದೆ.

►ಸಾಮಾನ್ಯವಾಗಿ ಪ್ರಕರಣಗಳಲ್ಲಿ ಏನಾಗುತ್ತದೆ?

ಅಪ್ರಾಪ್ತರು ವಾಹನ ಚಲಾಯಿಸಿ ಸಿಕ್ಕಿಬಿದ್ದಾಗ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 199ಎ ಅಡಿಯಲ್ಲಿ ವಾಹನದ ಮಾಲೀಕರು ಅಥವಾ ಪೋಷಕರ ವಿರುದ್ಧ ಪೊಲೀಸರು ಸಲ್ಲಿಸಿದ್ದ ಹಲವು ದೋಷಾರೋಪ ಪಟ್ಟಿಗಳನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ ಎಂಬುದನ್ನು ದಾಖಲೆಗಳು ತೋರಿಸುತ್ತವೆ. ಅಪ್ರಾಪ್ತ ಚಾಲಕನು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 181ರ ಅಡಿಯಲ್ಲಿ ಅಪರಾಧ ಎಸಗಿದ್ದಾನೆ ಎಂಬುದನ್ನು ಪೊಲೀಸರು ಬಾಲ ನ್ಯಾಯ ಮಂಡಳಿ (JJB) ಮುಂದೆ ವರದಿ ಮಾಡಲು ವಿಫಲವಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಇದರೊಂದಿಗೆ, ನಿಗದಿತ ಸಮಯದೊಳಗೆ ಮಂಡಳಿಯ ಮುಂದೆ ಸಾಮಾಜಿಕ ಹಿನ್ನೆಲೆ ವರದಿಯನ್ನು (SBR) ಸಲ್ಲಿಸಲು ಪೊಲೀಸರು ವಿಫಲವಾಗಿರುವುದು ಮತ್ತೊಂದು ಪ್ರಮುಖ ಕಾರಣವಾಗಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಹೇಳಿದೆ.

2024ರ ಪ್ರಮುಖ ತೀರ್ಪಿನಲ್ಲಿ, ಸೆಕ್ಷನ್ 199ಎ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 64 ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್, ಸೆಕ್ಷನ್ 199ಎ ಎಂಬುದು ಪೋಷಕರು ಅಥವಾ ವಾಹನದ ಮಾಲೀಕರ ವಿರುದ್ಧ ಸ್ವತಂತ್ರ ಅಪರಾಧವನ್ನು ಸೃಷ್ಟಿಸುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಅಪ್ರಾಪ್ತ ಚಾಲಕನು ಮೋಟಾರು ವಾಹನ ಕಾಯ್ದೆಯಡಿ ಅಪರಾಧ ಎಸಗಿರುವುದು ಅತ್ಯಗತ್ಯ ಅಂಶವಾಗಿದ್ದರೂ, ಸೆಕ್ಷನ್ 199ಎ ಅಡಿಯಲ್ಲಿ ವಿಚಾರಣೆ ಆರಂಭಿಸಲು ಬಾಲ ನ್ಯಾಯ ಮಂಡಳಿಯ ಪೂರ್ವ ತೀರ್ಪು ಅಥವಾ ಆದೇಶ ಕಡ್ಡಾಯವೇನೂ ಅಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಅದೇ ಸಮಯದಲ್ಲಿ, ಪೋಷಕರ ಮೇಲಿನ ಹೊಣೆಗಾರಿಕೆಯು ಬಾಲ ನ್ಯಾಯ ಮಂಡಳಿಯಲ್ಲಿ ಅಪ್ರಾಪ್ತನ ಪ್ರಕರಣದ ಅಂತಿಮ ಫಲಿತಾಂಶವನ್ನು ಆಧರಿಸಿರುತ್ತದೆ ಎಂದೂ ಈ ತೀರ್ಪು ಹೇಳಿದೆ. ಅಂದರೆ, ವಿಚಾರಣೆ ಮುಕ್ತಾಯದ ನಿಯಮಗಳ ಅಡಿಯಲ್ಲಿ ಅಪ್ರಾಪ್ತನ ಮೇಲಿನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದರೆ ಅಥವಾ ಅಪ್ರಾಪ್ತ ಮಗು ಅಪರಾಧ ಎಸಗಿಲ್ಲ ಎಂದು ಮಂಡಳಿಯು ನಿರ್ಧರಿಸಿದರೆ, ಪೋಷಕರು ಅಥವಾ ವಾಹನದ ಮಾಲೀಕರ ವಿರುದ್ಧದ ಪ್ರಕರಣವನ್ನು ಮುಂದುವರಿಸಲು ಬರುವುದಿಲ್ಲ.

ಅಪ್ರಾಪ್ತರು ಭಾಗಿಯಾದ ಹೆಚ್ಚಿನ ಚಾಲನಾ ಪ್ರಕರಣಗಳು ಮುಖ್ಯವಾಗಿ ಸೂಕ್ತ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು, ನಿರ್ಲಕ್ಷ್ಯದ ಚಾಲನೆ ಅಥವಾ ನಿಗದಿತ ವಯಸ್ಸಿಗಿಂತ ಮುಂಚಿತವಾಗಿ ವಾಹನ ಓಡಿಸುವುದಕ್ಕೆ ಮಾತ್ರ ಸೀಮಿತವಾಗಿದ್ದವು. ಆದರೆ, ಕೊಚ್ಚಿ ಪ್ರಕರಣದ 17 ವರ್ಷದ ಅಪ್ರಾಪ್ತ ಚಾಲಕನು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 181 ಮತ್ತು 184ರ ಜೊತೆಗೆ, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 105ರ ಅಡಿಯಲ್ಲಿ 'ಕೊಲೆಯಲ್ಲದ ನರಹತ್ಯೆ' ಎಂಬ ಜಾಮೀನುರಹಿತ ಅಪರಾಧ ಪ್ರಕರಣವನ್ನೂ ಎದುರಿಸುತ್ತಿದ್ದಾನೆ.

►ಜುವೆನೈಲ್ ಜಸ್ಟಿಸ್ ಕಾಯ್ದೆಯ ಪ್ರಕಾರ ಮೂರು ರೀತಿಯ ಅಪರಾಧಗಳಿವೆ:

ಸಣ್ಣ ಅಪರಾಧಗಳು (ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ), ಗಂಭೀರ ಅಪರಾಧಗಳು (ಏಳು ವರ್ಷಗಳವರೆಗೆ ಜೈಲು ಶಿಕ್ಷೆ) ಮತ್ತು ಭೀಕರ ಅಪರಾಧಗಳು (ಕನಿಷ್ಠ ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ). 2020ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪೊಂದರಲ್ಲಿ, ರಸ್ತೆ ಅಪಘಾತ ಪ್ರಕರಣದಲ್ಲಿ ಹಿಂದಿನ ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ (ಈಗಿನ BNS ಸೆಕ್ಷನ್ 105ಕ್ಕೆ ಸಮಾನ) ಆರೋಪ ಎದುರಿಸುತ್ತಿರುವ ಅಪ್ರಾಪ್ತನನ್ನು ಭೀಕರ ಅಪರಾಧ ಎಸಗಿದವನೆಂದು ಪರಿಗಣಿಸಲು ಬರುವುದಿಲ್ಲ ಮತ್ತು ಆತನನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

►ಏನು ಬದಲಾಗಬೇಕಿದೆ?

ಸೆಕ್ಷನ್ 199ಎ ಅಡಿಯಲ್ಲಿ ಪೋಷಕರು ಅಥವಾ ವಾಹನದ ಮಾಲೀಕರ ಹೊಣೆಗಾರಿಕೆಯನ್ನು ಕಟ್ಟುನಿಟ್ಟಾದ 'ಖಚಿತ ಅಪರಾಧ' ಎಂದು ಮರುರೂಪಿಸಬೇಕಾಗಿದೆ. ಪ್ರಸ್ತುತ ನಿಯಮದಲ್ಲಿ (ಸೆಕ್ಷನ್ 199ಎ(1)), ಅಪಘಾತವು ತಮ್ಮ ಅರಿವಿಲ್ಲದೆ ನಡೆದಿದೆ ಅಥವಾ ತಾವು ಸೂಕ್ತ ಮುನ್ನೆಚ್ಚರಿಕೆ ವಹಿಸಿದ್ದೆವು ಎಂದು ಸಾಬೀತುಪಡಿಸಿ ಪೋಷಕರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇರುವ ವಿನಾಯಿತಿಯನ್ನು ರದ್ದುಗೊಳಿಸಬೇಕು. ಇದರೊಂದಿಗೆ, ಶ್ರೀಮಂತ ಆರೋಪಿಗಳಿಗೆ ಅವರ ಆದಾಯಕ್ಕೆ ತಕ್ಕಂತೆ ಹೆಚ್ಚಿನ ಪ್ರಮಾಣದ ದಂಡ ವಿಧಿಸುವ ವ್ಯವಸ್ಥೆಯೂ ಬರಬೇಕಾಗಿದೆ ಎಂದು 'ಕ್ರ್ಯಾಶ್ಫ್ರೀ ಇಂಡಿಯಾ' ಸಂಸ್ಥೆಯ ನೀತಿ ಸಲಹಾ ವಿಭಾಗದ ಸಹಾಯಕ ವ್ಯವಸ್ಥಾಪಕ ಶುಭಂ ಕುಮಾರ್ ಹೇಳುತ್ತಾರೆ.

Scrollನಲ್ಲಿ ಪ್ರಕಟವಾದ ಲೇಖನದಲ್ಲಿ ಶುಭಂ ಕುಮಾರ್ ಈ ರೀತಿ ಹೇಳುತ್ತಾರೆ:

"ಅಪ್ರಾಪ್ತ ಚಾಲಕರಿಗೆ ವಿಧಿಸುವ ಶಿಕ್ಷೆಯು ಸರಿಪಡಿಸುವ ಹಾಗೂ ಸುಧಾರಣೆ ತರುವಂತಿರಬೇಕು. ಪ್ರಸ್ತುತ ಇರುವ ಲೈಸೆನ್ಸ್ ತಡೆಹಿಡಿಯುವ ನಿಯಮದ ಜೊತೆಗೆ, ಅವರಿಗೆ ಸೂಕ್ತ ಉಸ್ತುವಾರಿ ಹಾಗೂ ರಸ್ತೆ ಸುರಕ್ಷತಾ ಶಿಕ್ಷಣ ನೀಡುವ ಅಧಿಕಾರವನ್ನು ಬಾಲ ನ್ಯಾಯ ಮಂಡಳಿಗೆ ನೀಡಬೇಕಾಗಿದೆ.

ಅದೇ ಸಮಯದಲ್ಲಿ, ಸಂತ್ರಸ್ತರ ಕುಟುಂಬಕ್ಕೆ 60 ದಿನಗಳ ಒಳಗೆ ಕನಿಷ್ಠ ಪರಿಹಾರ ತಲುಪಿಸುವುದನ್ನು ಖಾತರಿಪಡಿಸುವ ಶಾಸನಬದ್ಧ ಪರಿಹಾರ ವ್ಯವಸ್ಥೆಯ ಅಗತ್ಯವಿದೆ. ಈ ಹಣವನ್ನು ವಿಮಾ ಕಂಪೆನಿಗಳು, ವಾಹನದ ಮಾಲೀಕರು ಮತ್ತು ಸರ್ಕಾರದಿಂದ ಕ್ರೋಢೀಕರಿಸಬೇಕು. ಅಪ್ರಾಪ್ತ ಚಾಲಕರು ಭಾಗಿಯಾದ ಪ್ರಕರಣಗಳಲ್ಲಿ, ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣಗಳ (MACT) ಸಾಮಾನ್ಯ ವಿಮಾ ಪ್ರಕ್ರಿಯೆಗಳ ಮೂಲಕ ಪರಿಹಾರ ಪಡೆಯುವುದು ಸಂತ್ರಸ್ತರ ಕುಟುಂಬಕ್ಕೆ ಸವಾಲಿನ ಕೆಲಸವಾಗಿದೆ.

ಒಟ್ಟಾರೆಯಾಗಿ, ಹೊಣೆಗಾರಿಕೆಯು ಅಪ್ರಾಪ್ತ ಚಾಲನೆಗೆ ಕಾರಣರಾದ ಹಿರಿಯರಿಂದಲೇ ಆರಂಭವಾಗಬೇಕು ಹಾಗೂ ಸಂತ್ರಸ್ತರ ಕುಟುಂಬಕ್ಕೆ ಸಾಧ್ಯವಾದಷ್ಟು ಬೇಗ ಸೂಕ್ತ ಆರ್ಥಿಕ ಪರಿಹಾರ ತಲುಪಿಸುವಂತಾಗಬೇಕು."

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor